Mobile ವೀಕ್ಷಣೆ ಹೆಚ್ಚುತ್ತಿರುವ ದೃಷ್ಟಿದೋಷ; ಶಾಲಾ ಮಕ್ಕಳಿಗೆ ಕನ್ನಡಕವೇ ಆಧಾರ !
Team Udayavani, Nov 16, 2023, 7:00 AM IST
ಮಂಗಳೂರು: ಹೆಚ್ಚು ಟಿವಿ ನೋಡಬೇಡಿ, ಮೊಬೈಲ್ ನೋಡಬೇಡಿ, ಆಡಬೇಡಿ. ಕಣ್ಣಿಗೆ ತೊಂದರೆಯಾಗುತ್ತದೆ ಎಂದು ಪೋಷಕರು, ವೈದ್ಯರು ಹೇಳು ತ್ತಿದ್ದುದು ಉಂಟು. ಅದು ಈಗ ನಿಜವೆಂದು ಬಹಿರಂಗ ಗೊಂಡಿರುವುದು ಆರೋಗ್ಯ ಇಲಾಖೆಯ ನೇತ್ರ ತಪಾಸಣೆ ಕಾರ್ಯಕ್ರಮದಡಿ.
ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಒಂದರಿಂದ ಹತ್ತನೇ ತರಗತಿವರೆಗಿನ ಒಟ್ಟು 63,75,014 ಮಕ್ಕಳನ್ನು 2022-23ರಲ್ಲಿ ಉಚಿತ ಕಣ್ಣಿನ ತಪಾಸಣೆಗೆ ಒಳಪಡಿಸಲಾಗಿತ್ತು. ಈ ಪೈಕಿ ಹಲವರಲ್ಲಿ ಕಣ್ಣಿನ ದೋಷ ಪತ್ತೆ ಹಚ್ಚಲಾಯಿತು. ಇವರಲ್ಲಿ ಶೇ. 50 ರಷ್ಟು ಮಕ್ಕಳಿಗೆ ದೃಷ್ಟಿ ದೋಷ ಎದುರಾಗಿರುವುದು ಅತಿಯಾದ ಟಿವಿ ವೀಕ್ಷಣೆ, ಮೊಬೈಲ್ ವೀಕ್ಷಣೆಯಿಂದ. ಉಳಿದಂತೆ ಸ್ವಲ್ಪ ಪ್ರಮಾಣ ಹುಟ್ಟಿದಾರಂಭದಿಂದಲೇ ದೃಷ್ಟಿ ದೋಷ ಹೊಂದಿದ್ದಾರೆ ಎಂಬ ಅಂಶ ಲಭ್ಯವಾಗಿದೆ.
ಒಟ್ಟಿನಲ್ಲಿ 1.73ಲಕ್ಷ ಮಕ್ಕಳಿಗೆ ವಿವಿಧ ಸ್ವರೂಪದ ದೃಷ್ಟಿದೋಷವನ್ನು ಆರೋಗ್ಯ ಇಲಾಖೆಯು ಪತ್ತೆ ಹಚ್ಚಿದೆ.
ಇದರಲ್ಲಿ ಗಂಭೀರವಾದ ಆಂಶವೆಂದರೆ ಮೊಬೈಲ್ ಇತ್ಯಾದಿ ವಸ್ತುಗಳ ಬಳಕೆಯಿಂದ ದೃಷ್ಟಿ ಸಮಸ್ಯೆ ಹೆಚ್ಚುತ್ತಿರುವುದು. ಇದರೊಂದಿಗೆ ಮೈದಾನದಲ್ಲಿ ಆಟೋಟ ಚಟುವಟಿಕೆ ಹಾಗೂ ಪ್ರಕೃತಿಯೊಂದಿಗೆ ಬೆರೆಯದಿರುವುದು ಹಾಗೂ ಮಕ್ಕಳ ಆಹಾರ ಪದ್ಧತಿಯೂ ಸಮಸ್ಯೆ ಹೆಚ್ಚಲು ಕಾರಣವಾಗುತ್ತಿದೆ. ಮೊಬೈಲ್, ಟಿವಿ ಬಳಕೆಯಿಂದ ಶೇ. 50ರಷ್ಟು ಮಕ್ಕಳಿಗೆ ದೃಷ್ಟಿ ದೋಷದ ಸಮಸ್ಯೆ ಉದ್ಭವಿಸಿದರೆ, ಉಳಿದ ಕಾರಣಗಳಿಂದ ಸಮಸ್ಯೆಗೆ ಒಳಗಾಗುತ್ತಿರುವವರ ಸಂಖ್ಯೆ ಶೇ. 10ರಿಂದ 20 ರಷ್ಟಿದೆ.
2 ದೃಷ್ಟಿ ದೋಷಗಳು
ಮಕ್ಕಳಲ್ಲೂ “ಸಮೀಪ ದೃಷ್ಟಿ’ ಅಥವಾ “ದೂರದೃಷ್ಟಿ’ ಸಮಸ್ಯೆ ಕಾಡುತ್ತದೆ. ಇವೆರಡೂ ಒಂದು ಹಂತವನ್ನು ಮೀರಿದ್ದರೆ ವೈದ್ಯರ ಸಲಹೆ ಪ್ರಕಾರ ಕನ್ನಡಕ ಧರಿಸಲೇಬೇಕು. ಇಲ್ಲವಾದರೆ ಕ್ರಮೇಣ ದೃಷ್ಟಿ ಸಮಸ್ಯೆ ಹೆಚ್ಚಲೂಬಹುದು. ಜತೆಗೆೆ ವಾಹನ ಚಾಲನೆ ಪರವಾನಿಗೆ ಪಡೆಯಲು, ರೈಲ್ವೇ, ಮಿಲಿಟರಿ ಸಹಿತ ವಿವಿಧ ಕಡೆಗಳಲ್ಲಿ ಉದ್ಯೋಗಕ್ಕೆ ಕಣ್ಣಿನ ಆರೋಗ್ಯವನ್ನು ಅಗತ್ಯವಾಗಿ ಪರಿಗಣಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2018-19ರಲ್ಲಿ 2326 ಮಕ್ಕಳು, 2019-20ರಲ್ಲಿ 2362, 2020-21ರಲ್ಲಿ 2437, 21-22ರಲ್ಲಿ 1934 ಹಾಗೂ 22-23ರಲ್ಲಿ 2142 (ಉಡುಪಿಯಲ್ಲಿ 2152) ಮಕ್ಕಳಿಗೆ ಕನ್ನಡಕ ನೀಡಲಾಗಿದೆ. ಒಟ್ಟು ರಾಜ್ಯಾದ್ಯಂತ 88,210 ಮಕ್ಕಳಿಗೆ ಉಚಿತವಾಗಿ ಕನ್ನಡಕಗಳ ವಿತರಿಸಿದೆ. ಇದು ಸರಕಾರಿ ಶಾಲೆಗಳ ಲೆಕ್ಕವಾದರೆ ರಾಜ್ಯದ ಖಾಸಗಿ ಶಾಲೆಗಳಲ್ಲೂ ಹೆಚ್ಚಿನ ಮಕ್ಕಳು “ಕನ್ನಡಕಧಾರಿ’ಗಳಂತೆ ! ಈ ವರ್ಷದ ಮಕ್ಕಳ ನೇತ್ರ ತಪಾಸಣೆ ಸದ್ಯ ಪ್ರಗತಿಯಲ್ಲಿದೆ.
ಕೆಲವು ಮಕ್ಕಳಿಗೆ ದೃಷ್ಟಿದೋಷ ಇರುವ ಕಾರಣದಿಂದ ಕನ್ನಡಕ ಬಳಸಲು ಆರೋಗ್ಯ ಇಲಾಖೆಯಿಂದ ಸೂಚಿಸುತ್ತಾರೆ. ಆದರೆ ಕೆಲವು ಮಕ್ಕಳು ಕನ್ನಡಕ ತುಂಡು ಮಾಡುತ್ತಾರೆ ಅಥವಾ ಸಣ್ಣ ವಯಸ್ಸಿನಲ್ಲೇ ಕನ್ನಡಕ ಬೇಡ ಎಂದೋ, ಮುಜುಗರವಾಗುತ್ತದೆ ಎಂದು ಕನ್ನಡಕ ಬಳಸುವುದಿಲ್ಲ. ಅಂಥವರಿಗೆ ಭವಿಷ್ಯದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಬಹುದು ಎಂಬುದು ಆರೋಗ್ಯ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ.
ದೃಷ್ಟಿದೋಷ ಇರುವ ಮಕ್ಕಳ ಸಂಖ್ಯೆ ಕೊಂಚ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಅತಿಯಾದ ಮೊಬೈಲ್ ಬಳಕೆ ಕಾರಣವೂ ಇದೆ. ಆರೋಗ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ಕನ್ನಡಕಗಳನ್ನು ವಿತರಿಸಲಾಗುತ್ತಿದೆ.
– ದಿನೇಶ್ ಗುಂಡೂರಾವ್
ಆರೋಗ್ಯ ಸಚಿವರು
ಕೆಲವೊಮ್ಮ ಮಗು ಹುಟ್ಟು ವಾಗಲೇ ದೃಷ್ಟಿದೋಷ ಇರುತ್ತದೆ. ಇನ್ನೂ ಹಲವು ಸಂದರ್ಭ ಜೀವನ ಶೈಲಿ ಕಾರಣವಾಗುತ್ತದೆ. ಅತಿಯಾದ ಮೊಬೈಲ್ ಬಳಕೆ, ಟಿ.ವಿ, ಲ್ಯಾಪ್‌ಟಾಪ್ ಇತ್ಯಾದಿಗಳ ಬಳಕೆ ಹೆಚ್ಚಾಗಿ, ಸೂರ್ಯನ ಬೆಳಕು/ಪ್ರಕೃತಿ ಆಸ್ವಾ ದಿಸುವ ಗುಣ ಕಡಿಮೆಯಾಗಿ ಜಂಕ್ ಫುಡ್ ಸೇವನೆಯೂ ಸಮಸ್ಯೆಗೆ ಕಾರಣ. ವಿರಾಮವೇ ಇಲ್ಲದೆ ನಿರಂತರ ಓದುವಾಗಲೂ ಎಚ್ಚರ ಅವಶ್ಯ.
-ಡಾ| ಅನಿತಾ, ನೇತ್ರ ತಜ್ಞರು-ಮಂಗಳೂರು
- ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.