Transportation: ದುಡ್ಡು ಕೊಟ್ಟರೂ ಮನೆಗೆ ಬಾರದ ಹೊಸ ವಾಹನ!
ಸಾರಿಗೆ ಇಲಾಖೆಯ ಎಡವಟ್ಟು ; ಜನರ ಸಂಭ್ರಮಕ್ಕೆ ತಣ್ಣೀರು ಡಿಜಿಟಲ್ ಸಹಿ ಪ್ರಮಾಣಪತ್ರ ನವೀಕರಣ ಆಗದೆ ಸಮಸ್ಯೆ
Team Udayavani, Nov 17, 2023, 1:51 AM IST
ಬೆಂಗಳೂರು: ಬೆಳಕಿನ ಹಬ್ಬದಂದು ವಾಹನ ಮನೆಗೆ ತರಲು ಸಾವಿರಾರು ಜನ ಬುಕಿಂಗ್ ಮಾಡಿ ಬಂದಿದ್ದರು. ಹಣ ಪಾವತಿಯೂ ಆಗಿದೆ. ಅಗತ್ಯ ದಾಖಲೆಗಳನ್ನೂ ಕೊಟ್ಟಾಗಿದೆ. ಆದರೆ ಹಬ್ಬ ಅಲ್ಲ; ಅದು ಮುಗಿದು ದಿನಗಳಾದರೂ ವಾಹನಗಳು ಶೋರೂಂನಿಂದ ಹೊರಬರುತ್ತಿಲ್ಲ!
ಯಾಕೆಂದರೆ, ಆನ್‌ಲೈನ್ ಪಾವತಿಯನ್ನು ಖಾತ್ರಿಗೊಳಿಸಿ ನೋಂದಣಿ ಸಂಖ್ಯೆ ಸೃಜಿಸಲು ಇರುವ ಡಿಜಿಟಲ್ ಸಹಿ ಪ್ರಮಾಣಪತ್ರ (ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್)ದ ನವೀಕರಣ ಮಾಡುವುದನ್ನೇ ಸಾರಿಗೆ ಇಲಾಖೆ ಅಧಿಕಾರಿಗಳು ಮರೆತಿದ್ದಾರೆ. ಪರಿಣಾಮವಾಗಿ ಸಾರಿಗೆ ಇಲಾಖೆಯ ಯಾವುದೇ ಡಿಜಿಟಲ್ ಪಾವತಿ ಆಗುತ್ತಿಲ್ಲ.
ಈ ಎಡವಟ್ಟಿನಿಂದ 3-4 ದಿನಗಳಿಂದ ಹೊಸ ವಾಹನಗಳ ನೋಂದಣಿ ಸಹಿತ ಆನ್‌ಲೈನ್ ಪಾವತಿಗೆ ಸಂಬಂಧಿಸಿದ ಸಾರಿಗೆ ಸೇವೆಗಳೇ ಸ್ಥಗಿತಗೊಂಡಿವೆ. ಇದರಿಂದ ಹೊಸ ವಾಹನಗಳ ಡೆಲಿವರಿ ಸಮರ್ಪಕವಾಗಿ ಆಗುತ್ತಿಲ್ಲ. ಹಣ ಪಾವತಿಸಿ, ದೀಪಾವಳಿಯಂದೇ ವಾಹನ ತೆಗೆದುಕೊಂಡು ಬರಲು ಹೋದ ಬಹುತೇಕರಿಗೆ ನಿರಾಸೆಯಾಗಿದ್ದು, ಹಬ್ಬ ಕಳೆದು ಎರಡು ದಿನಗಳಾದರೂ ಈ ಸಮಸ್ಯೆ ಬಗೆಹರಿಯದೆ ವಾಹನ ಡೆಲಿವರಿಗಾಗಿ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ.
ಅಷ್ಟೇ ಅಲ್ಲ, ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ವಿಶೇಷವಾಗಿ ದೀಪಾವಳಿ ಸಂದರ್ಭ ದಲ್ಲಿ ವಾಹನಗಳ ನೋಂದಣಿ ಪ್ರಮಾಣ ದುಪ್ಪಟ್ಟು ಆಗುತ್ತದೆ. ಆದರೆ ಈ ಬಾರಿ ಆನ್‌ಲೈನ್ ಪಾವತಿಗೆ ಸಂಬಂಧಿಸಿದ ಸೇವೆಗಳು ಸ್ಥಗಿತಗೊಂಡಿದ್ದು, ಸರಕಾರದ ಬೊಕ್ಕಸಕ್ಕೆ ಬರುವ ಆದಾಯಕ್ಕೂ ತಾತ್ಕಾಲಿಕ ಹೊಡೆತ ಬಿದ್ದಂತಾಗಿದೆ.
ಸಮಸ್ಯೆ ಏನು?
“ಕೆ-2′ ಮತ್ತು “ವಾಹನ್’ ಸಾಫ್ಟ್ ವೇರ್ ಗಳ ನಡುವೆ ಸಂವಹನ ಸಾಧಿಸಲು ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (ಡಿಎಸ್‌ಸಿ) ಸಂಪರ್ಕ ಸೇತುವೆ ಆಗಿರುತ್ತದೆ. ಇದನ್ನು ಕೇಂದ್ರ ಸರಕಾರದ ನೋಡಲ್ ಏಜೆನ್ಸಿಯಾದ CERT-In ಮೂಲಕ ನೇಮಕಗೊಂಡ ಖಾಸಗಿ ವೆಂಡರ್ ಸಾರಿಗೆ ಇಲಾಖೆಗೆ ನೀಡಿರುತ್ತದೆ. ಪ್ರತೀ ಎರಡು ವರ್ಷಗಳಿಗೊಮ್ಮೆ ಇದರ ನವೀಕರಣ ಮಾಡಬೇಕು. ನ. 11ರಂದು ಇದರ ಅವಧಿ ಪೂರ್ಣಗೊಂಡಿದ್ದು, ನವೀಕರಿಸುವುದನ್ನು ಇಲಾಖೆ ಅಧಿಕಾರಿಗಳು ಮರೆತಿದ್ದಾರೆ. ಪರಿಣಾಮವಾಗಿ ಎಲ್ಲ ಆನ್‌ಲೈನ್ ಪಾವತಿಗಳಲ್ಲೂ ವ್ಯತ್ಯಯ ಉಂಟಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೆ-2 ಮತ್ತು ವಾಹನ್ ಸಾಫ್ಟ್ ವೇರ್ ನಡುವೆ ಸಂವಹನ ಸಾಧಿಸುವ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ಅಧಿಕೃತಗೊಳಿಸುವ ಪ್ರಮಾಣಪತ್ರ ಇರುತ್ತದೆ. ಅದು ನವೀಕರಣಗೊಳ್ಳದಿರುವುದರಿಂದ ಸಮಸ್ಯೆ ಆದದ್ದು ನಿಜ. ಈಗ ಅದನ್ನು ಸರಿಪಡಿಸಲಾಗಿದ್ದು, ಶುಕ್ರವಾರದಿಂದ ನೋಂದಣಿ ಪ್ರಕ್ರಿಯೆ ಎಂದಿನಂತೆ ನಡೆಯುವ ನಿರೀಕ್ಷೆ ಇದೆ.
ಎ.ಎಂ. ಯೋಗೇಶ್, ಸಾರಿಗೆ ಇಲಾಖೆ ಆಯುಕ್ತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.