World Cup 2023: ಬ್ಯಾಟಿಂಗ್‌ ಸಾಹಸಗಳು,ಅಸಾಮಾನ್ಯ ಬೌಲಿಂಗ್‌, ವಿವಾದಗಳು.. ಇಲ್ಲಿದೆ ಮಾಹಿತಿ

ಮೊದಲ ಅವಕಾಶದಲ್ಲೇ ವಿಶ್ವ ಗೆದ್ದ ನಾಯಕರು ಇವರೇ...

Team Udayavani, Nov 20, 2023, 12:09 AM IST

WORLD CUP IN INDIA

ಐದು ಅದ್ಭುತ ಬ್ಯಾಟಿಂಗ್‌ ಸಾಹಸಗಳು

ಮ್ಯಾಕ್ಸ್‌ವೆಲ್‌ರ ಇತಿಹಾಸ ಶ್ರೇಷ್ಠ- 201
ನ.7ರಂದು ಮುಂಬಯಿಯಲ್ಲಿ ಆಸ್ಟ್ರೇಲಿಯ-ಅಫ್ಘಾನಿಸ್ಥಾನ ಪಾಲಿಗೆ ಒಂದು ನಿರ್ಣಾಯಕ ಪಂದ್ಯವಿತ್ತು. ಗೆದ್ದ ತಂಡಕ್ಕೆ ಸೆಮಿಫೈನಲ್‌ ಸ್ಥಾನ ಸಲೀಸಾಗುತ್ತಿತ್ತು. ಈ ಅಸಾಮಾನ್ಯ ಸಾಧನೆ ಮಾಡಿದ್ದು ಆಸ್ಟ್ರೇಲಿಯ ತಂಡ. ಹೀಗೆನ್ನಲು ಕಾರಣವೂ ಇದೆ. ಅಫ್ಘಾನಿಸ್ಥಾನ ನೀಡಿದ್ದ 293 ರನ್‌ಗಳ ಗುರಿಯನ್ನು ಹಿಂಬಾಲಿಸಿ ಹೊರಟಿದ್ದ ಆಸ್ಟ್ರೇಲಿಯ 97 ರನ್‌ಗಳಾಗುವಾಗ 7 ವಿಕೆಟ್‌ ಕಳೆದುಕೊಂಡು ಪೂರ್ಣ ಸೋತೇ ಹೋದ ಸ್ಥಿತಿಯಲ್ಲಿತ್ತು. ಅಲ್ಲಿಂದ ಮುಂದೆ ನಡೆದಿದ್ದು ಏಕದಿನ ಕ್ರಿಕೆಟ್‌ನ ಅತೀಶ್ರೇಷ್ಠ ಇನಿಂಗ್ಸ್‌ನ ಕಥನ. ಒಂದು ಕಡೆ ತೀವ್ರ ಮಂಡಿನೋವು, ಇನ್ನೊಂದು ಕಡೆ ಹೊಟ್ಟೆ ಸ್ನಾಯುಸೆಳೆತ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಹೆಜ್ಜೆಯಿಡಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದರು. ಆಗವರು ಒಂದು ಅಸಾಮಾನ್ಯ ಇನಿಂಗ್ಸ್‌ ಕಟ್ಟಿದರು. ಬರೀ ಸಿಕ್ಸರ್‌, ಬೌಂಡರಿಗಳೊಂದಿಗೆ ಅಜೇಯ 201 ರನ್‌ ಬಾರಿಸಿದರು (128 ಎಸೆತ, 21 ಬೌಂಡರಿ, 10 ಸಿಕ್ಸರ್‌). ಮತ್ತೂಂದು ಕಡೆ ಕ್ರೀಸ್‌ನಲ್ಲಿದ್ದ ಪ್ಯಾಟ್‌ ಕಮಿನ್ಸ್‌ 68 ಎಸೆತ ಎದುರಿಸಿದರೂ ಗಳಿಸಿದ್ದು ಬರೀ 12 ರನ್‌! ಮ್ಯಾಕ್ಸ್‌ವೆಲ್‌ ಸಾಹಸದಿಂದ ಆಸೀಸ್‌ ಗೆದ್ದಿದ್ದು ಮಾತ್ರವಲ್ಲ ವಿಶ್ವವನ್ನೇ ದಂಗುಬಡಿಸಿತು.

ಡೇವಿಡ್‌ ವಾರ್ನರ್‌- 163
ಅ.20ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯದ ಆರಂಭಿಕ ಬ್ಯಾಟರ್‌ ಡೇವಿಡ್‌ ವಾರ್ನರ್‌ ಶ್ರೇಷ್ಠ ಬ್ಯಾಟಿಂಗ್‌ ನಡೆಸಿದರು. ಪಾಕಿಸ್ಥಾನ ಪ್ರಬಲ ಬೌಲಿಂಗ್‌ಗೆ ಸಡ್ಡು ಹೊಡೆದ ಡೇವಿಡ್‌ ವಾರ್ನರ್‌ 124 ಎಸೆತಗಳಲ್ಲಿ 163 ರನ್‌ ಗಳಿಸಿದರು. ಇದರಲ್ಲಿ 14 ಬೌಂಡರಿ, 9 ಸಿಕ್ಸರ್‌ಗಳಿದ್ದವು. ಅದರ ಮೂಲಕ ತನ್ನ ತಾಕತ್ತು ಇನ್ನೂ ಹಾಗೆಯೇ ಇದೆ ಎಂದು ವಾರ್ನರ್‌ ಸಾಕ್ಷಿಸಮೇತ ಸಾಬೀತು ಮಾಡಿದರು. ಅವರ ಆ ಆಟದಿಂದ ಆಸೀಸ್‌ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 367 ರನ್‌ ಗಳಿಸಿತು. ಈ ಬೃಹತ್‌ ಮೊತ್ತವನ್ನು ಬೆನ್ನತ್ತಲು ಹೋದ ಪಾಕಿಸ್ಥಾನದ 305 ರನ್‌ಗಳಿಗೆ ಕುಸಿಯಿತು. ವಾರ್ನರ್‌ ಆಟವೂ ಆಸ್ಟ್ರೇಲಿಯದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿತು.

ಮಿಚೆಲ್‌ ಮಾರ್ಷ್‌- 177
ನ.11ರಂದು ಪುಣೆಯಲ್ಲಿ ಆಸ್ಟ್ರೇಲಿಯ-ಬಾಂಗ್ಲಾ ನಡುವೆ ಬೃಹತ್‌ ಮೊತ್ತದ ಪಂದ್ಯ ನಡೆಯಿತು. ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 306 ರನ್‌ ಗಳಿಸಿತು. ಈ ದೊಡ್ಡ ಮೊತ್ತವನ್ನು ಆಸ್ಟ್ರೇಲಿಯ ಸಲೀಸಾಗಿ ಬೆನ್ನತ್ತಿತು. ಇದಕ್ಕೆ ಮುಖ್ಯ ಕಾರಣ ಮಿಚೆಲ್‌ ಮಾರ್ಷ್‌. 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಅವರು 132 ಎಸೆತ ಎದುರಿಸಿ 177 ರನ್‌ ಗಳಿಸಿದರು. ಇದರಲ್ಲಿ 17 ಬೌಂಡರಿ, 9 ಸಿಕ್ಸರ್‌ಗಳಿದ್ದವು. ಆಸ್ಟ್ರೇಲಿಯದ ಪಾಲಿಗೆ ಈ ಬೃಹತ್‌ ಜಯ ಮಹತ್ವದ್ದಾಗಿತ್ತು. ಒಂದೊಂದು ಗೆಲುವು ಕೂಡ ಅದರ ಉಪಾಂತ್ಯ ಪ್ರವೇಶಕ್ಕೆ ನೆರವಾಗುತ್ತಿತ್ತು. ಅಂತಹ ಹೊತ್ತಿನಲ್ಲಿ ಮಾರ್ಷ್‌ ತಂಡದ ಕೈಹಿಡಿದರು.

ಫ‌ಖರ್‌ ಜಮಾನ್‌- 126
ನ.4ರಂದು ಬೆಂಗಳೂರಿನಲ್ಲಿ ಪಾಕಿಸ್ಥಾನ-ನ್ಯೂಜಿಲ್ಯಾಂಡ್‌ ಪಂದ್ಯ ನಡೆಯಿತು. ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲ್ಯಾಂಡ್‌ ರಚಿನ್‌ ರವೀಂದ್ರ (101)-ಕೇನ್‌ ವಿಲಿಯಮ್ಸನ್‌ (95) ಅದ್ಭುತ ಆಟದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 401 ರನ್‌ ಗಳಿಸಿತು. ಈ ಪಂದ್ಯ ಎರಡೂ ತಂಡಗಳ ಪಾಲಿಗೆ ನಿರ್ಣಾಯಕವಾಗಿತ್ತು. ಇಂತಹ ಹೊತ್ತಿನಲ್ಲಿ ಪಾಕಿಸ್ಥಾನದ ಆರಂಭಿಕ ಫ‌ಖರ್‌ ಜಮಾನ್‌ ಸವಾಲನ್ನು ಹೊತ್ತುಕೊಂಡರು. ಅವರು ಕೇವಲ 81 ಎಸೆತಗಳಲ್ಲಿ 126 ರನ್‌ ಚಚ್ಚಿದರು. ಇದರಲ್ಲಿ 8 ಬೌಂಡರಿ, 11 ಸಿಕ್ಸರ್‌ಗಳಿದ್ದವು. ಈ ಅಸಾಮಾನ್ಯ ಆಟದಿಂದ ಪಾಕಿಸ್ಥಾನ 25.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿತು. ಇದೇ ವೇಳೆ ಮಳೆ ಬಂದು ಪಂದ್ಯ ನಿಂತೇ ಹೋಯಿತು. ಡಕ್‌ವರ್ಥ್ ಪ್ರಕಾರ ಪಾಕ್‌ ಗೆಲುವು ಸಾಧಿಸಿತು. ಅಲ್ಲಿಂದಲೇ ಪಾಕ್‌ಗೆ ಸೆಮಿಫೈನಲ್‌ ಭರವಸೆ ಹುಟ್ಟಿದ್ದು. ಅದು ಸೆಮಿಫೈನಲ್‌ಗೇರಲಿಲ್ಲ ಎನ್ನುವುದು ಬೇರೆ ವಿಚಾರ. ಆದರೆ ಲೆಕ್ಕಾಚಾರಗಳು ಕ್ಲಿಷ್ಟವಾಗಲಂತೂ ಕಾರಣವಾಯಿತು.

ಕೆ.ಎಲ್‌.ರಾಹುಲ್‌- 97
ಅ.8ರಂದು ಚೆನ್ನೈಯಲ್ಲಿ ಭಾರತ ತನ್ನ ಮೊದಲ ಲೀಗ್‌ ಪಂದ್ಯವನ್ನಾಡಿತು. ಅದೂ ಪ್ರಬಲ ಆಸ್ಟ್ರೇಲಿಯದ ವಿರುದ್ಧ. ಭಾರತಕ್ಕಿದ್ದಿದ್ದು ಕೇವಲ 200 ರನ್‌ ಗಳಿಸುವ ಸಣ್ಣ ಗುರಿ. ಆದರೆ 2 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು. ತಂಡದ ಪರಿಸ್ಥಿತಿ ಬಹಳ ಇಕ್ಕಟ್ಟಿನಲ್ಲಿತ್ತು. ಆಸೀಸ್‌ ದಾಳಿಗೆ ಸಂಪೂರ್ಣ ಕುಸಿದು ಹೋಗುವ ಭೀತಿಯಿತ್ತು. ಆಗ 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಕೆ.ಎಲ್‌.ರಾಹುಲ್‌ ಅವರು ಕೊಹ್ಲಿಯೊಂದಿಗೆ 165 ರನ್‌
ಜತೆಯಾಟವಾಡಿದರು. ಈ ಹಂತದಲ್ಲಿ ಅದ್ಭುತವಾಗಿ ಆಡುತ್ತಿದ್ದ ಕೊಹ್ಲಿ 85 ರನ್‌ ಗಳಿಸಿ ಔಟಾದರು. ಅಷ್ಟರಲ್ಲಾಗಲೇ ತಂಡ ಉತ್ತಮ ಸ್ಥಿತಿಗೆ ತಲುಪಿತ್ತು. ರಾಹುಲ್‌ 115 ಎಸೆತಗಳಲ್ಲಿ 97 ರನ್‌ ಗಳಿಸಿ ಅಜೇಯರಾಗುಳಿದರು. ಅವರ ತಾಳ್ಮೆಯ ಆಟವೇ ಭಾರತದ ಜಯದಲ್ಲಿ ನಿರ್ಣಾಯಕವಾಯಿತು ಎನ್ನುವುದನ್ನು ಇಲ್ಲಿ ಗಮನಿಸಬಹುದು.

ಐದು ಅಸಾಮಾನ್ಯ ಬೌಲಿಂಗ್‌ ಪ್ರದರ್ಶನ

ಮೊಹಮ್ಮದ್‌ ಶಮಿ- 57/7
ನ.15ರಂದು ಮುಂಬಯಿಯ ವಾಂಖೇಡೆ ಮೈದಾನದಲ್ಲಿ 1ನೇ ಸೆಮಿಫೈನಲ್‌ ನಡೆಯಿತು. ಮೊದಲು ಬ್ಯಾಟ್‌ ಮಾಡಿದ ಭಾರತ 397 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನತ್ತಲು ಕಿವೀಸ್‌ ಅತ್ಯುತ್ತಮ ಯತ್ನವನ್ನೇ ಮಾಡಿತು. ಇಲ್ಲಿ ಅದರ ಓಟವನ್ನು ತಡೆದು ನಿಲ್ಲಿಸಿದ್ದು ವೇಗಿ ಮೊಹಮ್ಮದ್‌ ಶಮಿ. ಅದ್ಭುತವಾಗಿ ಆಡುತ್ತ ಶತಕ ಬಾರಿಸಿದ್ದ ಡೆರಿಲ್‌ ಮಿಚೆಲ್‌ (134), ಕೇನ್‌ ವಿಲಿಯಮ್ಸನ್‌ (69)ರನ್ನು ಶಮಿ ಔಟ್‌ ಮಾಡಿದರು. ಅವರ ಆರ್ಭಟ ಅಲ್ಲಿಗೇ ನಿಲ್ಲಲಿಲ್ಲ. ಒಬ್ಬರ ಹಿಂದೊಬ್ಬರಂತೆ ಮನೆಗೆ ಕಳುಹಿಸಿದ ಅವರು 57 ರನ್‌ ನೀಡಿ ಒಟ್ಟು 7 ವಿಕೆಟ್‌ ಕೆಡವಿದರು. ಈ ಶ್ರೇಷ್ಠ ಸಾಧನೆ ಭಾರತದ ಗೆಲುವಿನಲ್ಲಿ ನಿರ್ಣಾಯಕವಾಯಿತು.

22/4
ಅ.29ರಂದು ಭಾರತ ಲಕ್ನೋದಲ್ಲಿ ಇಂಗ್ಲೆಂಡನ್ನು ಎದುರಿಸಿತು. ವಾಸ್ತವದಲ್ಲಿ ಲೀಗ್‌ನಲ್ಲಿ ಭಾರತ ಕಡಿಮೆ ರನ್‌ ಗಳಿಸಿದ ಮೊದಲ ಉದಾಹರಣೆಯಿದು. ಭಾರತ 50 ಓವರ್‌ ಮುಗಿದಾಗ 9 ವಿಕೆಟ್‌ಗಳ ನಷ್ಟಕ್ಕೆ 229 ರನ್‌ ಮಾತ್ರ ಗಳಿಸಿತ್ತು. ಇದನ್ನು ಇಂಗ್ಲೆಂಡ್‌ ಹಿಂಬಾಲಿಸುವುದು ಕಷ್ಟವಲ್ಲ ಎಂದು ಭಾವಿಸಲಾಗಿತ್ತು. ಆದರೆ ಮೊಹಮ್ಮದ್‌ ಶಮಿ ಮತ್ತು ಜಸ್‌ಪ್ರೀತ್‌ ಬುಮ್ರಾ ಇಂಗ್ಲೆಂಡನ್ನು ಅಲ್ಲಾಡಿಸಿದರು. ಅದರಲ್ಲೂ ಶಮಿ ಕೇವಲ 22 ರನ್‌ ನೀಡಿ ಇಂಗ್ಲೆಂಡ್‌ನ‌ 4 ವಿಕೆಟ್‌ ಕಿತ್ತಿದ್ದು ಭಾರತದ ಜಯವನ್ನು ಸುಗಮಗೊಳಿಸಿತು.

18/5
ನ.2ರಂದು ಭಾರತ ಮುಂಬಯಿಯಲ್ಲಿ ಶ್ರೀಲಂಕಾವನ್ನು ಎದುರಿಸಿತು. ಮೊದಲು ಬ್ಯಾಟ್‌ ಮಾಡಿದ ಭಾರತ 357 ರನ್‌ಗಳ ಬೃಹತ್‌ ಮೊತ್ತ ಗಳಿಸಿತ್ತು. ಇದನ್ನು ಹಿಂಬಾಲಿಸುವಾಗ ಶ್ರೀಲಂಕಾ ತುಸುವಾದರೂ ಪೈಪೋಟಿ ನೀಡಬಹುದು ಎಂದು ಅಂದಾಜಿಸಲಾ­ಗಿತ್ತು. ಆದರೆ ವೇಗಿ ಶಮಿಯ ಭೀಕರ ದಾಳಿ ಹೇಗಿತ್ತೆಂದರೆ ಎದುರಾಳಿಗಳು ಉಸಿರೆತ್ತಲು ಆಗಲಿಲ್ಲ. ಅವರು ಕೇವಲ 18 ರನ್‌ ನೀಡಿ 5 ವಿಕೆಟ್‌ ಕಿತ್ತರು. ಶ್ರೀಲಂಕಾ ಕೇವಲ 55 ರನ್‌ಗಳಿಗೆ ಆಲೌಟಾಯಿತು.

ಆ್ಯಡಮ್‌ ಝಂಪ- 53/4
ಅ.20ರಂದು ಬೆಂಗಳೂರಿನಲ್ಲಿ ಪಾಕಿಸ್ಥಾನ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ಗೆಲ್ಲುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದು ಸ್ಪಿನ್ನರ್‌ ಆ್ಯಡಮ್‌ ಝಂಪ. ಆಸ್ಟ್ರೇಲಿಯ ನೀಡಿದ 368 ರನ್‌ಗಳ ಗುರಿಯನ್ನು ಬೆನ್ನತ್ತಲು ಪಾಕಿಸ್ಥಾನ ಬಲವಾದ ಯತ್ನವನ್ನೇ ಹಾಕಿತ್ತು. ಇದನ್ನು ವಿಫ‌ಲಗೊಳಿಸಿದ್ದು ಝಂಪ. ಬಾಬರ್‌ ಆಜಮ್‌, ಮೊಹಮ್ಮದ್‌ ರಿಜ್ವಾನ್‌ರನ್ನು ಮನೆಗೆ ಕಳುಹಿಸಿದ ಝಂಪ 53 ರನ್‌ ನೀಡಿ 4 ವಿಕೆಟ್‌ ಪಡೆದರು. ಹಂತಹಂತವಾಗಿ ಝಂಪ ಹೊಡೆತ ನೀಡಿದ್ದು ಪಾಕ್‌ ಸೋಲಿಗೆ ಕಾರಣವಾಯಿತು.

ರವೀಂದ್ರ ಜಡೇಜ- 33/5
ನ.5ರಂದು ಕೋಲ್ಕತಾದಲ್ಲಿ ಪ್ರಬಲ ದ.ಆಫ್ರಿಕಾವನ್ನು ಭಾರತ ಎದುರಿಸಿತು. ಭಾರತ ಮೊದಲು ಬ್ಯಾಟ್‌ ಮಾಡಿ 326 ರನ್‌ ಗಳಿಸಿತು. ಇದು ಬೃಹತ್‌ ಮೊತ್ತವೇ ಆದರೂ ದ.ಆಫ್ರಿಕಾದ ಆಗಿನ ಬ್ಯಾಟಿಂಗ್‌ ಸಾಮರ್ಥ್ಯ ಗೊತ್ತಿದ್ದವರಿಗೆ, ಗುರಿಯನ್ನು ಮೀರುವುದು ಅಸಾಧ್ಯವಲ್ಲ ಎಂದು ಖಚಿತವಾಗಿ ಗೊತ್ತಿತ್ತು. ಆದರೆ ಎಲ್ಲ ಲೆಕ್ಕಾಚಾರಗಳನ್ನು ರವೀಂದ್ರ ಜಡೇಜ ಸಂಪೂರ್ಣ ಸುಳ್ಳಾಗಿಸಿದರು. ಅವರು 33 ರನ್‌ ನೀಡಿ 5 ವಿಕೆಟ್‌ ಉಡಾಯಿಸಿದ್ದರಿಂದ ಆಫ್ರಿಕಾ 83 ರನ್‌ಗಳಿಗೆ ಆಲೌಟಾಯಿತು!

ಚರ್ಚೆಗೆ ಕಾರಣವಾದ ವಿವಾದಗಳು

ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಮಾನತು
ಒಟ್ಟು ಮೂರು ಬಾರಿ ವಿಶ್ವಕಪ್‌ ಫೈನಲ್‌ಗೇರಿ ಒಮ್ಮೆ ವಿಶ್ವಕಪ್‌ ಗೆದ್ದು, ಒಂದು ಕಾಲದಲ್ಲಿ ವಿಶ್ವವನ್ನಾಳಿದ್ದ ಶ್ರೀಲಂಕಾ, ಈ ಬಾರಿ ಅರ್ಹತಾ ಸುತ್ತಿನಿಂದ ಮೇಲೇರಿ ಬಂದ ತಂಡ! ಅದಕ್ಕೆ ಸರಿಯಾಗಿ ಅತ್ಯಂತ ಕಳಪೆಯಾಗಿ ಆಡಿದ ಅದು ಕೂಟದಿಂದ ಹೊರಬೀಳುವುದನ್ನು ಬೇಗನೇ ಖಚಿತ ಮಾಡಿಕೊಂಡಿತ್ತು. ಇದರಿಂದ ಸಿಟ್ಟಾದ ಶ್ರೀಲಂಕಾ ಕ್ರೀಡಾ ಸಚಿವಾಲಯ ಇಡೀ ಮಂಡಳಿಯನ್ನು ವಿಸರ್ಜನೆ ಮಾಡಿತ್ತು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ ಸಿಟ್ಟು ತರಿಸಿತು. ತನ್ನ ಅಧೀನದ ಸಂಸ್ಥೆಯೊಂದರಲ್ಲಿ ಸರಕಾರದ ಹಸ್ತಕ್ಷೇಪವಿರಬಾರದು ಎನ್ನುವುದು ಐಸಿಸಿ ನಿಯಮ. ಹೀಗಾಗಿ ಶ್ರೀಲಂಕಾ ಮಂಡಳಿಯನ್ನು ಐಸಿಸಿ ಅಮಾನತು ಮಾಡಿತು.

ಏಂಜೆಲೊ ಮ್ಯಾಥ್ಯೂಸ್‌ ಟೈಮ್ಡ್ ಔಟ್‌
ಭಾರತದಲ್ಲಿ ನಡೆದ ವಿಶ್ವಕಪ್‌ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಔಟಾದ 2 ನಿಮಿಷದೊಳಕ್ಕೆ ಇನ್ನೊಬ್ಬ ಬ್ಯಾಟರ್‌ ಚೆಂಡು ಎದುರಿಸಲು ಸಿದ್ಧನಾಗಬೇಕು. ಅದೇ ಪ್ರಕಾರ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್‌ ಬಾಂಗ್ಲಾ ವಿರುದ್ಧ ಕ್ರೀಸ್‌ಗೆàನೋ ಬಂದರು. ಆದರೆ ಹೆಲ್ಮೆಟ್‌ ಕೈಕೊಟ್ಟಿದ್ದರಿಂದ ಹೊಸ ಹೆಲ್ಮೆಟ್‌ ಕಳಿಸಲು ಮನವಿ ಮಾಡಿದರು. ಈ ವೇಳೆ ಬಾಂಗ್ಲಾ ನಾಯಕ ಶಕಿಬ್‌ ಹಸನ್‌ ಔಟ್‌ಗೆ ಮನವಿ ಮಾಡಿದರು. ಮ್ಯಾಥ್ಯೂಸ್‌ ತಮ್ಮ ಪರಿಸ್ಥಿತಿ ವಿವರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಇದು ದೊಡ್ಡ ವಿವಾದ ಕೆರಳಿಸಿತು. ಕ್ರೀಡಾಸ್ಫೂರ್ತಿ ತೋರದ ಶಕಿಬ್‌ಗ ಎಲ್ಲ ಕಡೆಯಿಂದ ಟೀಕೆಗಳು ಕೇಳಿ ಬಂದವು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೈಮ್ಡ್ ಔಟಾದ ಮೊದಲಿಗ ಎಂಬ ಬೇಡದ ದಾಖಲೆ ಮ್ಯಾಥ್ಯೂಸ್‌ ಹೆಸರಿಗೆ ಬಂತು.

ಧರ್ಮಶಾಲಾ ಪಿಚ್‌ ಬಗ್ಗೆ ಅಸಮಾಧಾನ

ಕೆಲವೇ ತಿಂಗಳ ಹಿಂದೆ ವಿಪರೀತ ಮಳೆಯಿಂದ ಭೂಕುಸಿತ ಎದುರಿಸಿದ್ದ ಹಿಮಾಚಲಪ್ರದೇಶದಲ್ಲಿ ಈ ಬಾರಿ ಪ್ರಮುಖ ಪಂದ್ಯಗಳು ಆಯೋಜಿಸಲ್ಪಟ್ಟಿದ್ದವು. ಇದರ ವಿರುದ್ಧ ಆರಂಭದಲ್ಲೇ ಇಂಗ್ಲೆಂಡ್‌ ತಂಡ ತೀವ್ರವಾಗಿ ತಕರಾರು ತೆಗೆದಿತ್ತು. ಆ ಅಂಕಣದಲ್ಲಿ ಭಾರತೀಯ ಆಟಗಾರರೂ ಗಾಯಗೊಂಡಿದ್ದರು. ಮೈದಾನದಲ್ಲಿ ಜಾರಿಕೆ ಜಾಸ್ತಿಯಿದ್ದಿದ್ದೇ ಇದಕ್ಕೆ ಕಾರಣ. ಸ್ವತಃ ರೋಹಿತ್‌
ಶರ್ಮ ಕ್ಯಾಚ್‌ ಹಿಡಿಯಲು ಹೋಗಿ ಬಿದ್ದು, ಬೆರಳಿಗೆ ಪೆಟ್ಟು ಮಾಡಿಕೊಂಡು ಸಿಟ್ಟಾಗಿದ್ದರು.

ಭಾರತಕ್ಕೆ ತಕ್ಕಂತೆ ಪಿಚ್‌ ತಿರುಚಿದ ವದಂತಿ

ವಿಶ್ವಕಪ್‌ ಸೆಮಿಫೈನಲ್‌ ಪಂದ್ಯವನ್ನು ನ್ಯೂಜಿಲ್ಯಾಂಡ್‌ ವಿರುದ್ಧ ಆಡಲು ಭಾರತ ಸಜ್ಜಾಗುತ್ತಿದ್ದಂತೆ, ಭಾರತ ತನಗೆ ಬೇಕಾದಂತೆ ಪಿಚ್‌ ಅನ್ನು ಬದಲಾಯಿಸಿಕೊಂಡಿದೆ ಎಂದು ಡೈಲಿ ಮೈಲ್‌ನಲ್ಲಿ ವರದಿ ಬಂತು. ಸಾಮಾನ್ಯವಾಗಿ ಯಾವುದೇ ದೇಶ ಆತಿಥ್ಯ ವಹಿಸಿದರೂ ಆ ದೇಶ ತನಗೆ ಬೇಕಾದಂತೆ ಪಿಚ್‌ ಅನ್ನು ಬದಲಾಯಿಸಿಯೇ ಬದಲಾಯಿ­ಸುತ್ತದೆ. ಇದನ್ನು ಯಾರೂ ಪ್ರಶ್ನೆ ಮಾಡುವುದಕ್ಕೆ ಹೋಗುವುದಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಆ ರೀತಿ ಆಗಿದೆಯೋ, ಇಲ್ಲವೋ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲದಿದ್ದರೂ ಸೆಮಿಫೈನಲ್‌, ಫೈನಲ್‌ ಅಂಕಣಗಳನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಲಾಯಿತು!

ಮೊದಲ ಅವಕಾಶದಲ್ಲೇ ವಿಶ್ವ ಗೆದ್ದ ನಾಯಕರು
ವಿಶ್ವಕಪ್‌ ಗೆಲುವಿನಲ್ಲಿ ತಂಡದ ಸಾಧನೆ ಎಷ್ಟು ಮುಖ್ಯವೋ ನಾಯಕನ ಅದೃಷ್ಟ ಕೂಡ ಅಷ್ಟೇ ಮುಖ್ಯ. ಇಲ್ಲಿ ಹೇಳಹೊರಟಿರುವುದು ಮೊದಲ ನಾಯಕತ್ವದಲ್ಲೇ ವಿಶ್ವಕಪ್‌ ಗೆದ್ದು ಮೆರೆದ ನಾಯಕರ ಬಗ್ಗೆ. ಸ್ವಾರಸ್ಯವೆಂದರೆ, ಈವರೆಗೆ ವಿಶ್ವಕಪ್‌ ಗೆದ್ದ ಬಹುತೇಕ ನಾಯಕರೆಲ್ಲರೂ ತಮ್ಮ ಮೊದಲ ನಾಯಕತ್ವದ ಅವಧಿಯಲ್ಲೇ ಇತಿಹಾಸ ನಿರ್ಮಿಸಿದವರು. ಇದಕ್ಕೆ ಇಮ್ರಾನ್‌ ಖಾನ್‌ ಮತ್ತು ಇಯಾನ್‌ ಮಾರ್ಗನ್‌ ಮಾತ್ರ ಅಪವಾದ. ಈ ಇಬ್ಬರು ಎರಡನೇ ಅವಕಾಶದಲ್ಲಿ ಕಪ್‌ ಗೆದ್ದರು.

ಕ್ಲೈವ್‌ ಲಾಯ್ಡ
1975ರ ಚೊಚ್ಚಲ ವಿಶ್ವಕಪ್‌ ಬಿಡಿ, ಇಲ್ಲಿ ಯಾರೇ ಗೆದ್ದರೂ ಅದು ಆ ತಂಡದ ನಾಯಕನ ಮೊದಲ ವಿಶ್ವಕಪ್‌ ಕ್ಯಾಪ್ಟನ್ಸಿ ಆಗಿರುತ್ತದೆ. ವೆಸ್ಟ್‌ ಇಂಡೀಸ್‌ ನಾಯಕ ಕ್ಲೈವ್‌ ಲಾಯ್ಡಗೆ ಈ ಅದೃಷ್ಟ ಒಲಿಯಿತು. 1979ರಲ್ಲೂ ಅವರು ಲಾರ್ಡ್ಸ್‌ ಬಾಲ್ಕನಿಯಲ್ಲಿ ನಿಂತು ಕಪ್‌ ಎತ್ತಿದರು.

ಕಪಿಲ್‌ದೇವ್‌
1983ರಲ್ಲಿ ಕಪಿಲ್‌ದೇವ್‌ ಸರದಿ. ಹಿಂದಿನೆರಡು ವಿಶ್ವಕಪ್‌ಗ್ಳಲ್ಲಿ ಎಸ್‌. ವೆಂಕಟರಾಘವನ್‌ ನಾಯಕತ್ವದಲ್ಲಿ ಕಣಕ್ಕಿಳಿದ ಭಾರತ ಆಟಕ್ಕುಂಟು, ಲೆಕ್ಕಕ್ಕಿಲ್ಲದ ತಂಡವಾಗಿತ್ತು. ಕಪಿಲ್‌ ಆಗಮನದೊಂದಿಗೆ ಅಲ್ಲೊಂದು ಚರಿತ್ರೆಯೇ ನಿರ್ಮಾಣಗೊಂಡಿತು.

ಅಲನ್‌ ಬಾರ್ಡರ್‌
1987ರಲ್ಲಿ ಆಸ್ಟ್ರೇಲಿಯವನ್ನು ಮೊದಲ ಸಲ ಪಟ್ಟಕ್ಕೇರಿಸಿದ ಅಲನ್‌ ಬಾರ್ಡರ್‌ ಅವರಿಗೂ ಈ ಹೆಗ್ಗಳಿಕೆ ಸಲ್ಲುತ್ತದೆ. ಅವರು ಕಿಂ ಹ್ಯೂಸ್‌ ಸ್ಥಾನವನ್ನು ಆಕ್ರಮಿಸಿಕೊಂಡಿದ್ದರು.

ಅರ್ಜುನ ರಣತುಂಗ
1996ರಲ್ಲಿ ಪುಟ್ಟ ದ್ವೀಪ ರಾಷ್ಟ್ರ ಶ್ರೀಲಂಕಾದ್ದು ದೊಡ್ಡ ಸಾಧನೆಯಾಗಿ ದಾಖಲಾಗಿತ್ತು. ಇದರ ಸಾರಥಿಯಾಗಿ­ದ್ದವರು ಅರ್ಜುನ ರಣತುಂಗ. ಅವರು ವಿಶ್ವಕಪ್‌ನಲ್ಲಿ ಮೊದಲ ಸಲ ತಂಡವನ್ನು ಮುನ್ನಡೆಸಿದ್ದರು. ಹಿಂದಿನ ಸಲ ಅರವಿಂದ ಡಿ ಸಿಲ್ವ ನಾಯಕರಾಗಿದ್ದರು.

ಸ್ಟೀವ್‌ ವಾ, ಪಾಂಟಿಂಗ್‌
1999 ಮತ್ತು 2003ರಲ್ಲಿ ಆಸ್ಟ್ರೇಲಿಯದ ಮೆರೆದಾಟಕ್ಕೆ ಕಾರಣರಾದ ಸ್ಟೀವ್‌ ವಾ ಮತ್ತು ರಿಕಿ ಪಾಂಟಿಂಗ್‌ ಅವರಿಗೂ ಮೊದಲ ವಿಶ್ವಕಪ್‌ ನಾಯಕತ್ವದಲ್ಲೇ ಕಪ್‌ ಎತ್ತುವ ಲಕ್‌ ಒಲಿಯಿತು. 1996ರಲ್ಲಿ ಮಾರ್ಕ್‌ ಟೇಲರ್‌ ನಾಯಕರಾಗಿದ್ದರು.

ಎಂ.ಎಸ್‌. ಧೋನಿ
2011ರಲ್ಲಿ ಮಹೇಂದ್ರ ಸಿಂಗ್‌ ಧೋನಿ ಪ್ರಥಮ ಬಾರಿಗೆ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಿ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾದರು. 2007ರಲ್ಲಿ ಕ್ಯಾಪ್ಟನ್‌ ಆಗಿದ್ದವರು ರಾಹುಲ್‌ ದ್ರಾವಿಡ್‌.

ಮೈಕೆಲ್‌ ಕ್ಲಾರ್ಕ್‌
ಆಸ್ಟ್ರೇಲಿಯಕ್ಕೆ 5ನೇ ವಿಶ್ವಕಪ್‌ ತಂದಿತ್ತ ನಾಯಕ ಮೈಕೆಲ್‌ ಕ್ಲಾರ್ಕ್‌. 2015ರಲ್ಲಿ ಅವರು ರಿಕಿ ಪಾಂಟಿಂಗ್‌ ಅವರ ಉತ್ತರಾಧಿಕಾರಿ­ಯಾಗಿ ಆಸೀಸ್‌ ತಂಡದ ಚುಕ್ಕಾಣಿ ಹಿಡಿದಿದ್ದರು.

 

2ನೇ ಅವಕಾಶದಲ್ಲಿ ಗೆದ್ದವರು

ಇಮ್ರಾನ್‌ ಖಾನ್‌
1992ರ ಚಾಂಪಿಯನ್‌ ಪಾಕಿಸ್ಥಾನ ತಂಡದ ನಾಯಕ ಇಮ್ರಾನ್‌ ಖಾನ್‌ಗೆ ಇದು 2ನೇ ವಿಶ್ವಕಪ್‌ ಆಗಿತ್ತು. 1987ರಲ್ಲೂ ಅವರು ಪಾಕ್‌ ತಂಡವನ್ನು ಮುನ್ನಡೆಸಿದ್ದರು. ಆದರೆ ಪಾಕ್‌ ಸೆಮಿಫೈನಲ್‌ನಲ್ಲಿ ಎಡವಿತ್ತು.

ಇಯಾನ್‌ ಮಾರ್ಗನ್‌
ಇಂಗ್ಲೆಂಡ್‌ ಪ್ರಪ್ರಥಮ ಬಾರಿಗೆ ವಿಶ್ವ ಚಾಂಪಿಯನ್‌ ಆದದ್ದು ಇಯಾನ್‌ ಮಾರ್ಗನ್‌ ನೇತೃತ್ವದಲ್ಲಿ (2019). ಆದರೆ ಮಾರ್ಗನ್‌ 2015 ರಲ್ಲೂ ತಂಡದ ನಾಯಕ­ರಾಗಿ­­ದ್ದರು. ಆದರೆ ಇಂಗ್ಲೆಂಡ್‌ ಲೀಗ್‌ ಹಂತದಲ್ಲೇ ಹೊರಬಿದ್ದಿತ್ತು.

ಟಾಪ್ ನ್ಯೂಸ್

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.