Bengalur Kambala; ಮೈನವಿರೇಳಿಸುವ ಕಂಬಳ ನೋಡಬನ್ನಿ; ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಸ್ಪರ್ಧೆ
Team Udayavani, Nov 23, 2023, 10:05 AM IST
ಬೆಂಗಳೂರು: ಇದೇ ಮೊದಲ ಬಾರಿಗೆ ನ.25 ಮತ್ತು ನ.26ರಂದು ಹಮ್ಮಿಕೊಂಡಿರುವ ಅದ್ಧೂರಿ ಕಂಬಳಕ್ಕೆ ಬೆಂಗಳೂರು ಅರಮನೆ ಮೈದಾನ ಸಜ್ಜಾಗಿದೆ.
ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಬುಧ ವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, ನ.25ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆ ಯಾದ ನಂತರ ನಿರಂತ ರವಾಗಿ ಮುಂದುವರಿದು ನ.26 ರಂದು ಸಂಜೆ 7 ಗಂಟೆಗೆ ಕಂಬಳಕ್ಕೆ ತೆರೆ ಬೀಳಲಿದೆ. ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಕೋಣಗಳನ್ನು ಓಡಿಸುವ ಕೆರೆಗೆ ರಾಜ-ಮಹಾರಾಜ ಎಂದು ಹೆಸರಿಡ ಲಾಗಿದೆ. ಮುಖ್ಯ ವೇದಿಕೆಗೆ ಪುನೀತ್ ರಾಜ್‌ಕುಮಾರ್ ಹೆಸರಿಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇದಿಕೆಗೆ ಕೃಷ್ಣರಾಜ ಒಡೆಯರ ಹೆಸರಿಡಲಾಗಿದೆ. ಕಂಬಳ ವೀಕ್ಷಣೆಗೆ ಸುಮಾರು 3 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ. ಇನ್ನು 180 ಮಳಿಗೆಗಳು ಇರಲಿದ್ದು, ಇಲ್ಲಿ ಕರಾವಳಿ ಭಾಗದ ಎಲ್ಲ ಬಗೆಯ ಖಾದ್ಯಗಳು ದೊರೆಯಲಿವೆ. ಹಳ್ಳಿಯ ಸೊಗಡು, ಕರಾವಳಿ ಭಾಗಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ನಮ್ಮ ಕಂಬಳ ಪಕ್ಷತೀತಾ ಕಂಬಳ. ನಮ್ಮ ಕಂಬಳ ಸಮಿತಿಯವರು ಈ ಕಂಬಳ ಮಾಡುತ್ತಿದ್ದೇವೆ. ಬೆಂಗಳೂರು ಎಲ್ಲಾ ಸಂಘ – ಸಂಸ್ಥೆಗಳ ಅಭಿ ಪ್ರಾಯ ತೆಗೆದುಕೊಂಡು ಕಂಬಳ ಆಯೋಜಿಸು ತ್ತಿದ್ದೇವೆ. ಅರ್ಜುನ್ ಜನ್ಯ ಹಾಗೂ ಗುರುಕಿರಣ್ ಅವರ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ವಿಶೇಷ ವಾಗಿ ಹುಲಿ ವೇಷ ಸೇರಿದಂತೆ ಕರಾವಳಿ ಭಾಗದ ವಿವಿಧ ನೃತ್ಯ ರೂಪಕಗಳ ಪ್ರದರ್ಶನವಿರಲಿದೆ ಎಂದರು.
ಶಾಸಕ ಕೆ.ಎಸ್.ಅಶೋಕ್ ಕುಮಾರ್ ರೈ ಮಾತನಾಡಿ, ಕಂಬಳ ಪ್ರಿಯರಿಗೆ ವೀಕ್ಷಿಸಲು ಬೇಕಾದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. 7 ಸಾವಿರ ಜನ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಬಹುದು. ಸಾಮಾನ್ಯ ಜನರಿಗೆ, ವಿಐಪಿ, ವಿವಿಐಪಿಗಳಿಗೆ ಕಂಬಳಕ್ಕೆ ಪ್ರವೇಶಿಸಲು ಹಾಗೂ ವೀಕ್ಷಿಸಲು ಪ್ರತ್ಯೇಕ ಆಸನದ ವ್ಯವಸ್ಥೆ ಇದೆ. 50 ಗಂಟೆಯಲ್ಲಿ ವಿವಿಧ ವೇದಿಕೆಗಳಲ್ಲಿ ಸುಮಾರು 8-10 ಲಕ್ಷ ಮಂದಿ ಕಂಬಳ ವೀಕ್ಷಿಸುವ ನಿರೀಕ್ಷೆ ಇದೆ. ಜತೆಗೆ ನ.24ರಂದು ತುಳುಕೂಟ ಬೆಂಗಳೂರು 50ನೇ ವರ್ಷದ ಸಂಭ್ರಮದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಯಡಿಯೂರಪ್ಪ ಉದ್ಘಾಟನೆ: ನ.25ರಂದು ಬೆಳಗ್ಗೆ 10.30ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಕಂಬಳ ಉದ್ಘಾಟಿಸಲಿದ್ದಾರೆ. ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಕಂಬಳ ಕೆರೆ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಲಿದ್ದಾರೆ. ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಅದೇ ದಿನ ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಜಿ. ಪರಮೇಶ್ವರ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಶಾಸಕ ಕೆ.ಎಸ್.ಅಶೋಕ್ ಕುಮಾರ್ ರೈ ತಿಳಿಸಿದರು.
ನಟಿ ಅನುಷ್ಕಾ ಶೆಟ್ಟಿ, ನಟರಾದ ಸುದೀಪ್, ದರ್ಶನ್, ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ನಟಿಯರಾದ ರಚಿತಾ ರಾಮ್, ಸಿನಿಮಾ ರಂಗದ ಶೇ.80ರಷ್ಟು ನಟ- ನಟಿಯರು ಪಾಲ್ಗೊಳ್ಳಲಿದ್ದಾರೆ ಎಂದರು. ಸಂಗೀತ ನಿರ್ದೇಶಕ ಗುರು ಕಿರಣ್, ಕಂಬಳ ಸಮಿತಿಯ ಉಪೇಂದ್ರ ಶೆಟ್ಟಿ, ಉಮೇಶ್ ಶೆಟ್ಟಿ, ಮಂಜುನಾಥ್ ಕನ್ಯಾಡಿ, ತುಳು ಕೂಟದ ಅಧ್ಯಕ್ಷ ರಾಜೇಂದ್ರ ಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಪ್ರಥಮ ಬಹುಮಾನ 16 ಗ್ರಾಂ ಚಿನ್ನ
ಕರಾವಳಿ ಭಾಗಗಳಲ್ಲಿ ನಡೆಯುವ ಕಂಬಳದಲ್ಲಿ ಪ್ರಥಮ ಬಹುಮಾನ ಪಡೆಯುವ ಕೋಣಗಳಿಗೆ 8 ಗ್ರಾಂ ಬಂಗಾರ ಕೊಡುತ್ತಾರೆ. ಆದರೆ, ಇಲ್ಲಿ 16 ಗ್ರಾಂ ಬಂಗಾರ ಕೊಡಲಾಗುತ್ತದೆ. ಜೊತೆಗೆ 1 ಲಕ್ಷ ರೂ. ನಗದು ಇರಲಿದೆ. ದ್ವಿತೀಯ ಬಹುಮಾನವಾಗಿ 8 ಗ್ರಾಂ ಬಂಗಾರ, 50 ರೂ. ನಗದು, ಮೂರನೇ ಬಹುಮಾನವಾಗಿ 4 ಗ್ರಾಂ ಚಿನ್ನ ಹಾಗೂ 25 ಸಾವಿರ ರೂ. ನೀಡಲಾಗುತ್ತದೆ.
8 ಕೋಟಿ ರೂ. ಖರ್ಚು
ಕಂಬಳಕ್ಕೆ 8 ಕೋಟಿ ರೂ. ಖರ್ಚು ಮಾಡಲಾಗಿದೆ. ಸರ್ಕಾರವು 1 ಕೋಟಿ ರೂ. ಅನುದಾನ ನೀಡಿದೆ. ಪ್ರತಿ ಕೋಣಗಳ ಮಾಲೀಕರಿಗೆ 50 ಸಾವಿರ ರೂ. ಲಾರಿ ಬಾಡಿಗೆ ರೂಪದಲ್ಲಿ ಕೊಡುತ್ತೇವೆ. ಹಲವಾರು ಸಂಘ ಸಂಸ್ಥೆಗಳು ಕಂಬಳಕ್ಕೆ ಅನುದಾನ ನೀಡಿವೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಗಿಫ್ಟ್ ಕೂಪನ್ ಮೂಲಕ ಕಾರು ಗೆಲ್ಲಿರಿ
ವೀಕ್ಷಕರಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಗೋಲ್ಡ್ ಫಿಂಚ್ ಸಂಸ್ಥೆಯು ಕಂಬಳಕ್ಕೆ ಬರುವ ಎಲ್ಲರಿಗೂ ಗಿಫ್ಟ್ ಕೂಪನ್ ಕೊಡಲಿದೆ. ಕಂಬಳ ನಡೆಯುವ ಜಾಗದಲ್ಲಿ 3 ಕಡೆಗಳಲ್ಲಿ ಇದಕ್ಕೆಂದೇ ಇರಿಸಲಾಗಿರುವ ಬಾಕ್ಸ್‌ಗಳಲ್ಲಿ ಕೂಪನ್ ಸ್ಲಿಪ್ ಹಾಗೂ ಮೊಬೈಲ್ ನಂಬರ್ ಬರೆದು ಹಾಕಬೇಕು. ವಿಜೇತರು 1 ಕಾರು, 1 ಬುಲೆಟ್ ಬೈಕ್, 1 ಎಲೆಕ್ಟ್ರಿಕ್ ಬೈಕ್ ಅನ್ನು ಬಹುಮಾನ ಪಡೆಯಲಿದ್ದಾರೆ.
ಕಂಬಳ ಉದ್ಯಮವಲ್ಲ, ಘನತೆ ಪ್ರತಿಷ್ಠೆ
ಇಷ್ಟು ಸಣ್ಣ ಬಹುಮಾನಕ್ಕೆ ದಕ್ಷಿಣ ಕನ್ನಡದಿಂದ ಇಲ್ಲಿಗೆ ಬರಬೇಕಾ ಎಂಬ ಪ್ರಶ್ನೆ ಮೂಡಬಹುದು. ಕಂಬಳ ನಡೆಯುವಂತದ್ದು ದುಡ್ಡಿಗೂ ಅಲ್ಲ, ಬಹುಮಾನಕ್ಕೆ ಅಲ್ಲ. ಇದು ಘನತೆ, ಪ್ರತಿಷ್ಠೆ, ಗೌರವಕ್ಕೋಸ್ಕರ ನಡೆಯುವಂತದ್ದಾಗಿದೆ. ಇದು ಉದ್ಯಮವಲ್ಲ. ಒಂದು ಜತೆ ಕೋಣಗಳೊಂದಿಗೆ ಸುಮಾರು 25 ಮಂದಿ ಇರುತ್ತಾರೆ. ಕೋಣಗಳ ಮಾಲೀಕರಿಗೆ 4-5 ಲಕ್ಷ ರೂ. ಖರ್ಚಿದೆ. ಆದರೆ, ನಾವು ಅವರಿಗೆ ಕೊಡುವ ಬಹುಮಾನ ಗಣನೆಗೆ ಇಲ್ಲ. ಕಂಬಳ ಓಟಗಾರರಿಗೆ ವರ್ಷಕ್ಕೆ 6 ರಿಂದ 7 ಲಕ್ಷ ರೂ. ನೀಡಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
200 ಜತೆ ಕೋಣಗಳು ಭಾಗಿ, ಇದೇ ದಾಖಲೆ
ಕಂಬಳಕ್ಕೆ ಸುಮಾರು 228 ಜತೆ ಕೋಣಗಳನ್ನು ನೋಂದಣಿ ಮಾಡಿ ಕೊಂಡಿಸಿಕೊಂಡಿದ್ದಾರೆ. ಈ ಪೈಕಿ ಆಯ್ದ 200 ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಲಿವೆ. ಕಂಬಳದಲ್ಲಿ ಎಲ್ಲ ಜಾತಿ ಧರ್ಮದ ಜನರು ಭಾಗಿಯಾಗಲಿದ್ದಾರೆ.
ಕರಾವಳಿಯ ಕಂಬಳಗಳಲ್ಲಿ ಗರಿಷ್ಠ 140 ರಿಂದ 160 ಜತೆ ಕೋಣಗಳ ಪಾಲ್ಗೊಳ್ಳುವಿಕೆ ಇಂದಿನವರೆಗಿನ ದಾಖಲೆಯಾಗಿದೆ ಎಂದು ಶಾಸಕ ಕೆ.ಎಸ್.ಅಶೋಕ್ ಕುಮಾರ್ ರೈ ತಿಳಿಸಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೋಣಗಳ ಓಟಕ್ಕೆ ನಿರ್ಮಿಸಿರುವ ಕೆರೆ (ಟ್ರ್ಯಾಕ್) ಉತ್ತಮವಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಮಾಣ ಪತ್ರವೂ ಸಿಕ್ಕಿದ್ದು, ಇದು ದಾಖಲೆಯಾಗಿದೆ. ಎಲ್ಲ ಕಂಬಳಗಳ ಕೆರೆ 147 ಮೀಟರ್ ಇದ್ದರೆ, ಇಲ್ಲಿ 155 ಮೀಟರ್ ಕೆರೆ ನಿರ್ಮಿಸಲಾಗಿದೆ. ಸುಮಾರು 24 ಎಕರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಜೋಡಣೆ ಮಾಡಿದ್ದೇವೆ. ವಿಐಪಿ, ಸಾಮಾನ್ಯರ 8 ಸಾವಿರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.