ಬಡವರಿಗೆ-ಮಧ್ಯಮ ಮರ್ಗದವರಿಗೆ ನೆರವಾಗುವಾಗ ವಿರೋಧಿಗಳ ಟೀಕೆಗೆ ಡೋಂಟ್ ಕೇರ್: ಸಿದ್ದರಾಮಯ್ಯ
Team Udayavani, Nov 23, 2023, 3:17 PM IST
ಬಾಗಲಕೋಟೆ: ಬಡವರಿಗೆ ಜಾತಿ-ಧರ್ಮ ಎನ್ನುವುದು ಇಲ್ಲ. ಎಲ್ಲಾ ಜಾತಿ ಧರ್ಮದ ಬಡವರ, ಮಧ್ಯಮವರ್ಗದವರ ಸಂಕಟಗಳೂ ಒಂದೇ ಆಗಿವೆ. ಹೀಗಾಗಿ ಎಲ್ಲಾ ಜಾತಿಯ ಬಡವರು ಮತ್ತು ಮಧ್ಯಮವರ್ಗದವರ ಸಂಕಷ್ಟಕ್ಕೆ ಸ್ಪಂದಿಸಲು ನಾವು ಗ್ಯಾರಂಟಿ ಯೋಜನೆಗಳ ಮೂಲಕ ಈ ವರ್ಷ 38 ಸಾವಿರ ಕೋಟಿ ರೂಪಾಯಿಯನ್ನು ಕನ್ನಡ ಜನತೆಯ ಜೇಬಿಗೆ ಹಾಕುವ ಕೆಲಸ ಮಾಡಿದ್ದೇವೆ. ಮುಂದಿನ ವರ್ಷ ಕನ್ನಡ ನಾಡಿನ ಜನತೆಯ ಜೇಬಿಗೆ 58 ಸಾವಿರ ಕೋಟಿ ರೂಪಾಯಿಯನ್ನು ಹಾಕುತ್ತೇವೆ. ವಿರೋಧಿಗಳ ಟೀಕೆಗೆ ಡೋಂಟ್ ಕೇರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾಗಲಕೋಟೆಯ ವೀಣಾ ವಿ ಕಾಶಪ್ಪನವರ್ ಫೌಂಡೇಶನ್ ಹಮ್ಮಿಕೊಂಡಿದ್ದ ಉಚಿತ ಕೆ.ಎ.ಎಸ್ ಮತ್ತು ಪಿ.ಎಸ್.ಐ ಪರೀಕ್ಷೆಯ ತರಬೇತಿ ಕೇಂದ್ರ ಮತ್ತು ಅಕಾಡೆಮಿಯನ್ನು ಉದ್ಘಾಟಿಸಿದರು.
ಗ್ರಾಮೀಣ ಮಕ್ಕಳೂ ಕೆಎಎಸ್-ಪಿಎಸ್ಐ ಪರೀಕ್ಷೆಯಲ್ಲಿ ಪಾಸಾಗಲು ವೀಣಾ ಕಾಶಪ್ಪನವರ್ ಫೌಂಡೇಶನ್ ನೆರವಾಗಲಿದೆ. ಈಗ 200 ಅಭ್ಯರ್ಥಿಗಳಿಂದ ಆರಂಭವಾಗಿ 1500 ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ವೀಣಾ ಕಾಶಪ್ಪನವರ್ ಫೌಂಡೇಷನ್ ನೆರಳಾಗಲಿದೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ಜಿಲ್ಲೆ ನೆನಪಿಡುವ ಕೆಲಸಗಳನ್ನು ವೀಣಾ ಅವರು ಮಾಡಿದ್ದಾರೆ. ಇವರ ಸಮಾಜಮುಖಿ ಕೆಲಸಗಳು ಈ KAS ಅಕಾಡೆಮಿ ಮೂಲಕ ಇನ್ನಷ್ಟು ವಿಸ್ತಾರವಾಗುತ್ತಿದೆ. ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಈ ಪ್ರತಿಭೆಗೆ ಅವಕಾಶಗಳು ಬೇಕು. ಆ ಅವಕಾಶವನ್ನು ಸೃಷ್ಟಿಸುವ ಕೆಲಸವನ್ನು ವೀಣಾ ಕಾಶಪ್ಪ ದಂಪತಿ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅವರಿಗೆ ರಾಜಕೀಯವಾಗಿ ಒಳ್ಳೆಯ ಭವಿಷ್ಯ ಇದೆ ಎಂದು ಅಭಯ ನೀಡಿದರು.
ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು, ಯಲ್ಲಾಲಿಂಗ ಶ್ರೀಮಠದ ಡಾ.ಮುರುಘರಾಜೇಂದ್ರ ಶ್ರೀಗಳು, ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು, ವಿಜಯಪುರ ಗಾಣಿಗರ ಗುರುಪೀಠದ ಡಾ.ಜಯಬಸವ ಶ್ರೀಗಳು, ಇಳಕಲ್ಲ ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು, ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಚಿತ್ತಾಪುರ ಉಪ್ಪಾರ ಮಠದ ಭಗೀರಥಾನಂದಪುರಿ ಮಹಾಸ್ವಾಮಿಗಳು, ಸಜ್ಜಾದೇ ನಶೀನ ಇಳಕಲ್ ನ ಹಜರತ್ ಸೈಯದ್ ಫೈಸಲ್ ಪಾಶಾ ಸಾಹೇಬರು, ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ನಿರಂತರ ದಾಸೋಹ ಮಠ ಸಿದ್ದನಕೊಳ್ಳದ ಶಿವಕುಮಾರ ಶ್ರೀಗಳು, ಬಂಜಾರ ಶಕ್ತಿಪೀಠದ ಕುಮಾರ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಎಚ್.ವೈ.ಮೇಟಿ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ, ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ, ಹುನಗುಂದ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ್ ಸೇರಿ ಹಲವಾರು ಸಚಿವರು ಮತ್ತು ಶಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.