Belagavi session ಈ ಬಾರಿಯೂ ಬೆಳಗಾವಿ ಅಧಿವೇಶನ ಪ್ರತಿಭಟನೆಗಳಿಗೆ ಸೀಮಿತವೇ?
ಪ್ರತಿಭಟನೆ ತಗ್ಗಿಸುವ ಕಾಳಜಿ ಮರೆತ ಸರಕಾರ ; ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದರೂ ಸಿಕ್ಕಿಲ್ಲ ಸೂಕ್ತ ಸ್ಪಂದನೆ
Team Udayavani, Nov 27, 2023, 6:30 AM IST
ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನ ಪ್ರತಿಭಟನೆಗಳಿಗೆ ಸೀಮಿತ ಎಂಬ ಕಳಂಕವನ್ನು ತಪ್ಪಿಸಲು ಈ ಬಾರಿ ಹೊಸ ಪ್ರಯತ್ನಗಳು ಆರಂಭವಾಗಿವೆ.
ಸ್ವತಃ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೇ ಸಿಎಂ ಸಿದ್ದರಾಮಯ್ಯ, ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು, ಅಧಿವೇಶನದ ಅತ್ಯಮೂಲ್ಯ ಸಮಯ ಕೇವಲ ಪ್ರತಿಭಟನೆ, ಸತ್ಯಾಗ್ರಹ, ಧರಣಿಗಳಿಗೆ ವ್ಯರ್ಥವಾಗುತ್ತಿದೆ. ಆದ್ದರಿಂದ ಅಧಿವೇಶನ ಆರಂಭಗೊಳ್ಳುವ ಮುನ್ನವೇ ಸಂಬಂಧಪಟ್ಟ ಸಂಘಟನೆಗಳ ಪ್ರಮುಖರ ಸಭೆ ಕರೆದು ಅವರ ಬೇಡಿಕೆ ಕುರಿತು ಚರ್ಚಿಸಿ ಅವುಗಳ ಪರಿಹಾರಕ್ಕೆ ಮುಂದಾಗಬೇಕು. ಆ ಮೂಲಕ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಹೊರಗಡೆ ಧರಣಿ ಸತ್ಯಾಗ್ರಹ ನಡೆಯದಂತೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರತಿಭಟನೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸಭಾಪತಿ ಮತ್ತು ವಿಧಾನಸಭಾಧ್ಯಕ್ಷರು ತೋರಿಸಿರುವ ಕಳಕಳಿ ಮತ್ತು ಪ್ರಯತ್ನ ಪ್ರಮುಖ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳಲ್ಲಿ ಕಾಣುತ್ತಿಲ್ಲ. ಅಧಿವೇಶನದ ಸಮಯ ಸಮೀಪಿಸುತ್ತಿದ್ದರೂ ಇದುವರೆಗೆ ಕಂದಾಯ, ಕೃಷಿ, ಶಿಕ್ಷಣ ಸಚಿವರು ವಿವಿಧ ಸಂಘಟನೆಗಳ ಪ್ರಮುಖರ ಜತೆ ಸಭೆ ನಡೆಸಿಲ್ಲ. ಹಾಗೆ ನೋಡಿದರೆ ಪ್ರತಿಭಟನೆಗಳು ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನಗಳಿಂದ ಆರಂಭವಾಗಿದ್ದಲ್ಲ. 2006ರಲ್ಲಿ ಮೊದಲ ಅಧಿವೇಶನ ನಡೆದಾಗಲೇ ಪ್ರತಿಭಟನೆಗಳ ಬಿಸಿ ತಟ್ಟಿತ್ತು. ಅಂದಿನಿಂದ ಇವತ್ತಿನವರೆಗೆ ಬೆಳಗಾವಿ ಅಧಿವೇಶನ ಎಂದರೆ ಅದು ಪ್ರತಿಭಟನೆಗಳಿಗೆ ಮಾತ್ರ ಸೀಮಿತ ಎಂಬ ಕಳಂಕ ಅಂಟಿಕೊಂಡಿದೆ.
ವರ್ಷ ಕಳೆದಂತೆ ಪ್ರತಿಭಟನೆಗಳ ಸಂಖ್ಯೆ ಹೆಚ್ಚುತ್ತ ಹೋಗುತ್ತಿದೆಯೇ ಹೊರತು ಕಡಿಮೆ ಯಾಗುತ್ತಿಲ್ಲ. 2006ರಲ್ಲಿ 40ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ ಮಾಡಿದ್ದು, ಕಳೆದ ಅಧಿವೇಶನದ ಸಂದರ್ಭದಲ್ಲಿ 100ಕ್ಕೂ ಅಧಿಕ ಸಂಘಟನೆಗಳಿಂದ ಪ್ರತಿಭಟನೆ ನಡೆದಿತ್ತು.
ಉತ್ತರ ಕರ್ನಾಟಕದಲ್ಲಿ ಸಮಸ್ಯೆಗಳು ಬೆಟ್ಟದಷ್ಟಿವೆ. ಈ ಸಮಸ್ಯೆಗಳ ಚರ್ಚೆಗೆ ಒಂದೆರಡು ದಿನಗಳು ಸಾಕಾಗುವುದಿಲ್ಲ. ಇದು ಸರಕಾರ ಹಾಗೂ ವಿಪಕ್ಷಗಳಿಗೂ ಗೊತ್ತಿದೆ. ಆದರೂ ನಿರೀಕ್ಷಿಸದಂತೆ ಚರ್ಚೆಗಳು ನಡೆಯುತ್ತಲೇ ಇಲ್ಲ. ಇನ್ನೊಂದು ಕಡೆ ಹಲವಾರು ಪ್ರತಿಭಟನೆಗಳ ನಡುವೆ ಅಧಿವೇಶನವೇ ಮುಗಿದು ಹೋಗುತ್ತದೆ. ಪ್ರತಿಭಟನೆಯ ಮುಂದೆ ಅಧಿವೇಶನದ ಕಲಾಪ ಗೌಣವಾಗಿ ಕಾಣುತ್ತದೆ. ಅಧಿವೇಶನಕ್ಕೆ ಬರುವ ಶಾಸಕರು ಕಲಾಪದಲ್ಲಿ ಭಾಗವಹಿಸದೆ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ ಬೆಳಗಾವಿ ಅಧಿವೇಶನ ಪ್ರತಿಭಟನೆಗಳಿಗೆ ಸೀಮಿತವೇ ಎಂಬ ಅನುಮಾನ ಕಾಡುತ್ತಿದೆ.
ಮುಗಿಯದ ರೈತರ ಗೋಳು
ಬೆಳಗಾವಿಯಲ್ಲಿ ಇದುವರೆಗೆ ನಡೆದಿರುವ ಎಲ್ಲ ಅಧಿವೇಶನಗಳಲ್ಲಿ ರೈತರ ಪ್ರತಿಭಟನೆಗಳೇ ಹೆಚ್ಚು ಗಮನ ಸೆಳೆದಿವೆ. ಸರಕಾರಕ್ಕೆ ಸ್ವಲ್ಪ ಬಿಸಿ ಮುಟ್ಟಿಸಿವೆ. ಆದರೆ ಸಮಸ್ಯೆಗಳು ಮಾತ್ರ ಎಂದಿನಂತೆಯೇ ಮುಂದುವರಿದಿವೆ. 2006 ರಲ್ಲಿ ಆಗಿನ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಮೊದಲ ಅಧಿವೇಶನ ನಡೆದಾಗ ರೈತರು ಬೀದಿಗಿಳಿದಿದ್ದರು. ಕಬ್ಬಿನ ದರ ನಿಗದಿ, ಬಾಕಿ ಹಣ ಪಾವತಿ, ಎಲ್ಲ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಮತ್ತು ಸಾಲಮನ್ನಾ ಬೇಡಿಕೆಗಳ ಈಡೇರಿಕೆಗೆ ತೀವ್ರ ಸ್ವರೂಪದ ಹೋರಾಟ ಮಾಡಿದರು. ಆದರೆ ಬೇಡಿಕೆ ಈಡೇರಲಿಲ್ಲ. ಆಗ ಆರಂಭವಾದ ರೈತರ ಹೋರಾಟ ಇವತ್ತಿಗೂ ಮುಂದುವರಿದಿದೆ.
ಪ್ರತಿಭಟನೆಗಳಿಗೆ ಸರಕಾರದಿಂದಲೇ ವ್ಯವಸ್ಥೆ!
ಪ್ರತಿಭಟನೆ ನಡೆಸುವ ಸಂಘಟನೆಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವ ಸರಕಾರದ ನಡೆಯೂ ಚರ್ಚೆಗೆ ಕಾರಣವಾಗಿದೆ. ಇದಕ್ಕಾಗಿಯೇ ಜಿಲ್ಲಾಡಳಿತ ಕೋಟಿಗಟ್ಟಲೆ ರೂ. ಖರ್ಚು ಮಾಡುತ್ತಿದೆ. ಪ್ರತಿಭಟನೆ ಮಾಡುವವರಿಗೆ ಸುಸಜ್ಜಿತ ಹತ್ತರಿಂದ 12 ಬೃಹತ್ ಪೆಂಡಾಲ್‌ಗಳನ್ನು ನಿರ್ಮಿಸಿ ಕೊಡಲಾಗುತ್ತದೆ. ಇದಕ್ಕೆ ರೈತರ ಫಲವತ್ತಾದ ಜಮೀನುಗಳನ್ನು ಬಾಡಿಗೆ ಪಡೆದುಕೊಂಡರೆ ಭದ್ರತೆಗಾಗಿ 300ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಎಲ್ಲಕ್ಕಿಂತ ಅಚ್ಚರಿಯ ಸಂಗತಿ ಎಂದರೆ ಪ್ರತಿಭಟನಕಾರರನ್ನು ನಗರದ ಚನ್ನಮ್ಮ ವೃತ್ತದಿಂದ ಸುವರ್ಣ ವಿಧಾನಸೌಧದವರೆಗೆ ಸರಕಾರದ ಬಸ್‌ಗಳಲ್ಲಿ ಕರೆತಂದು ಪ್ರತಿಭಟನ ಸ್ಥಳಕ್ಕೆ ಬಿಡಲಾಗುತ್ತದೆ. ಇಷ್ಟೆಲ್ಲ ಸೌಲಭ್ಯಗಳಿರುವಾಗ ಪ್ರತಿಭಟನೆಗಳು ಹೇಗೆ ಕಡಿಮೆಯಾಗುತ್ತವೆ ಎಂಬುದು ಜನರ ಪ್ರಶ್ನೆ.
ಪ್ರತಿಭಟನೆ ಮಾಡುವವರಿಗೆ ಬೇಡ ಎನ್ನಲಾಗದು. ಪ್ರತಿಭಟನೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಸಂಬಂಧಪಟ್ಟ ಪ್ರಮುಖ ಇಲಾಖೆಗಳ ಸಚಿವರು ಮೊದಲೇ ಅವರ ಅಹವಾಲುಗಳನ್ನು ಸ್ವೀಕರಿಸಿ ಮಾತುಕತೆ ಮಾಡಿದರೆ ಪ್ರತಿಭಟನೆಗಳು ಸ್ವಲ್ಪ ಕಡಿಮೆ ಆಗಬಹುದು.
– ಸತೀಶ ಜಾರಕಿಹೊಳಿ,
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ
ನಾವು ಡಿ.7ರಂದು ಪ್ರತಿಭಟನೆ ಮಾಡುವುದು ನಿಶ್ಚಿತ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಕಡೆ ಸಭೆಗಳನ್ನು ಮಾಡಲಾಗಿದೆ. ಐದು ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಇದುವರೆಗೆ ಯಾವುದೇ ಇಲಾಖೆಯ ಸಚಿವರು ನಮ್ಮನ್ನು ಸಂಪರ್ಕಿಸಿಲ್ಲ.
– ಚೂನಪ್ಪ ಪೂಜೇರಿ,
ರಾಜ್ಯ ರೈತ ಸಂಘದ ಅಧ್ಯಕ್ಷ
-ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.