Telangana: `ಕಾರು’ಬಾರು ಬಂದ್ ಮಾಡಿದ ಕೈ
ಆಡಳಿತ ವಿರೋಧಿ ಅಲೆಯಲ್ಲಿ ಕಾಂಗ್ರೆಸ್‌ಗೆ ಗೆಲುವಿನ ಗ್ಯಾರಂಟಿಯ ನಗೆ
Team Udayavani, Dec 4, 2023, 12:55 AM IST
ಹೈದರಾಬಾದ್ : ಕರುನಾಡಿನೊಂದಿಗೆ ಕರುಳಬಳ್ಳಿ ಸಂಬಂಧ ಹೊಂದಿರುವ ತೆಲಂಗಾಣದ ರಣರೋಚಕ ಕದನದಲ್ಲಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಸಾರಥ್ಯದ ಕಾರು (ಬಿಆರ್‌ಎಸ್ ಚಿಹ್ನೆ) ರಣರಂಗದಲ್ಲಿ ಪಂಕ್ಚರ್ ಆಗಿದೆ. ಹ್ಯಾಟ್ರಿಕ್ ಗೆಲುವಿನ ಓಟದ ರಭಸದಲ್ಲಿ ಅಡ್ಡ “ಕೈ’ಗೆ ಸಿಲುಕಿ ಸೋಲಿಗೆ ಶರಣಾಗಿದೆ. ಆಡಳಿತ ವಿರೋಧಿ ಅಲೆಯಲ್ಲಿ ಗೆಲುವಿನ “ಗ್ಯಾರಂಟಿ’ಯ ನಗೆ ಬೀರಿರುವ ಕಾಂಗ್ರೆಸ್ ಅಧಿಕಾರದ ಗದ್ದುಗೆ ಮೇಲೆ ವಿರಾಜಮಾನವಾಗಲು ಸಜ್ಜಾಗಿದೆ. ಬಿಜೆಪಿ ಮತ ಪ್ರಮಾಣ ಹೆಚ್ಚಿಸಿಕೊಂಡ ಖುಷಿಗೆ ಸೀಮಿತವಾಗಿದೆ.
ಆಕ್ರಮಣಕಾರಿ ಹೋರಾಟದಿಂದ ಅಖಂಡ ಆಂಧ್ರ ಪ್ರದೇಶದಿಂದ ಪ್ರತ್ಯೇಕಗೊಂಡು ಅಸ್ತಿತ್ವಕ್ಕೆ ಬಂದ ತೆಲಂಗಾಣ ನೂತನ ರಾಜ್ಯದ ಚುಕ್ಕಾಣಿ ಹಿಡಿದ ಕೆಸಿಆರ್ ನೇತೃತ್ವದ ಭಾರತ(ತೆಲಂಗಾಣ)ರಾಷ್ಟ್ರ ಸಮಿತಿ (ಬಿಆರ್‌ಎಸ್) ಸುದೀರ್ಘ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿತ್ತು. ಹಲವು ಅಭಿವೃದ್ಧಿ ಯೋಜನೆಗಳನ್ನೂ ಜಾರಿಗೊಳಿಸಿತ್ತು. ಆದರೆ, ಆಡಳಿತ ವಿರೋಧಿ ಅಲೆಯ ಬಲೆಗೆ ಸಿಲುಕಿ ಅಕ್ಷರಶಃ ಮಖಾಡೆ ಮಲಗಿದೆ. ಕಾಂಗ್ರೆಸ್‌ನ ಸಂಘಟಿತ ಹೋರಾಟ, ಗ್ಯಾರಂಟಿ ಘೋಷಣೆಗಳಿಂದ 40 ಸ್ಥಾನಗಳಿಗೆ ಕುಸಿದು ಹೋಗಿದೆ. ಅಲ್ಲದೇ ಸ್ವತಃ ಕೆ.ಚಂದ್ರಶೇಖರ್ ರಾವ್ ಸೋಲನುಭವಿಸಿದ್ದು ಹೀನಾಯ ಸ್ಥಿತಿಗೆ ಹಿಡಿದ ಕೈಗನ್ನಡಿ.
ದುಸ್ಥಿತಿಗೆ ಕಾರಣ ಏನು?: ಕೆ.ಚಂದ್ರಶೇಖರ್ ರಾವ್ ಪ್ರತ್ಯೇಕ ರಾಜ್ಯ ಹೋರಾಟದಿಂದ ತೆಲಂಗಾಣದಲ್ಲಿ ಮೊದಲ ಬಾರಿ ನಡೆದ ಚುನಾವಣೆಯಲ್ಲಿ 63 ಸ್ಥಾನಗಳಲ್ಲಿ ಭರ್ಜರಿ ಜಯ ಗಳಿಸಿದ್ದರು. ಐದು ವರ್ಷಗಳ ಅವಧಿಯಲ್ಲಿ ರೈತರು, ಹಿಂದುಳಿದವರು, ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅದೇ ಗುಂಗಿನಲ್ಲಿ ಎರಡನೇ ಅವಧಿಗೂ 88 ಸ್ಥಾನ ಗೆಲ್ಲುವ ಮೂಲಕ “ಡಬಲ್ ನಗೆ’ ಬೀರಿದ್ದರು. ಆದರೆ, ಎರಡನೇ ಅವಧಿ ಸುಲಭವಾಗಿರಲಿಲ್ಲ. ಅಧಿಕಾರದ ಅಬ್ಬರದಲ್ಲಿ ವಿರೋಧಿ ಅಲೆ ಸೃಷ್ಟಿಯಾಗುತ್ತ ಸಾಗಿತು. “ಡೋಂಟ್ ಕೇರ್’ ಸ್ವಭಾವದ ಕೆಸಿಆರ್ ನನ್ನನ್ನು ತಡೆಯುವವರು ಯಾರೂ ಇಲ್ಲ’ ಎನ್ನುವ ಮಟ್ಟಕ್ಕೆ ಬೆಳೆದರು. ಇದಕ್ಕೆ ಪುತ್ರ ಕೆ.ಟಿ.ರಾಮರಾವ್ ಕೈ ಜೋಡಿಸಿದ್ದು ಹೀನಾಯ ಫಲಿತಾಂಶದ ಫಲ ನೀಡಿದೆ. ಹಳ್ಳಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಿ ನಗರ ಕೇಂದ್ರಿತ ರಾಜ್ಯಭಾರ ನಡೆಸತೊಡಗಿದರು. ತೋಟದ ಮನೆಯೇ ಆಡಳಿತ ಕಚೇರಿಯಾಯಿತು. ಅತಿಯಾದ ಆತ್ಮವಿಶ್ವಾಸ, ಎದುರಾಳಿಗಳ ರಣತಂತ್ರಕ್ಕೆ ಸಿಲುಕಿ 10 ವರ್ಷಗಳ ಆಡಳಿತಕ್ಕೆ ಪೂರ್ಣವಿರಾಮ ನೀಡಿದ್ದಾರೆ.
ಕಾಂಗ್ರೆಸ್ ಗೆಲುವು ಸುಲಭವಾಗಿರಲಿಲ್ಲ!: ಅಖಂಡ ಆಂಧ್ರಪ್ರದೇಶ ಕಾಂಗ್ರೆಸ್‌ನ ಗಟ್ಟಿ ನೆಲೆ. ದಿ|ರಾಜಶೇಖರ್ ರೆಡ್ಡಿ ಪಾದಯಾತ್ರೆ, ಹೋರಾಟಗಳ ಮೂಲಕ ಕಾಂಗ್ರೆಸ್ ಬೇರು ಸದೃಢಗೊಳಿಸಿದ್ದರು. ಅವರ ಅಕಾಲಿಕ ನಿಧನದ ಬಳಿಕ ಕೇಂದ್ರದಲ್ಲಿದ್ದ ಯುಪಿಎ ಸರಕಾರ ಆಂಧ್ರ, ತೆಲಂಗಾಣ ಇಬ್ಭಾಗ ಮಾಡಿತು. ಹೀಗಾಗಿ ಕಳೆದ 10 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಿಂದ ದೂರವೇ ಉಳಿದಿತ್ತು. ಈ ಬಾರಿ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆ’ ಪ್ರಭಾವ ಬೀರಿತು. ಆಡಳಿತ ವಿರೋಧಿ ಅಲೆ, ಬಿಜೆಪಿಯ ಆಂತರಿಕ ಕಿತ್ತಾಟದ ಜತೆಗೆ ಆರು ಗ್ಯಾರಂಟಿ’ಗಳ ಘೋಷಣೆಯಿಂದ ಬಹುಮತ ಪಡೆಯು ವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ದಿ|ರಾಜಶೇಖರ ರೆಡ್ಡಿ ಪುತ್ರಿ ಶರ್ಮಿಳಾ ನೇತೃತ್ವದ ವೈಎಸ್‌ಆರ್ ತೆಲಂಗಾಣ ಪಾರ್ಟಿ ಹಾಗೂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಈ ಬಾರಿ ತೆಲಂಗಾಣ ಅಖಾಡದಿಂದ ಹಿಂದೆ ಸರಿದಿದ್ದವು. ಒಂದು ವೇಳೆ ಇವೆರಡೂ ಪಕ್ಷಗಳು ಸ್ಪರ್ಧಿಸಿದ್ದರೆ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಿತ್ತು. ಕೆಸಿಆರ್ ಮೇಲಿನ ಸಿಟ್ಟು ಕಾಂಗ್ರೆಸ್‌ಗೆ ಮತಗಳಾಗಿ ಪರಿವರ್ತಿತವಾಗಿ ದಂಡಿಯಾಗಿ ಹರಿದುಬಂದಿದೆ. ಒಬಿಸಿ, ಅಲ್ಪಸಂಖ್ಯಾತರ ಮತಗಳು ಕೈ’ ಹಿಡಿದಿದ್ದು ನಿಚ್ಚಳವಾಗಿದೆ.
ಕಾಂಗ್ರೆಸ್ ಗೆಲುವಿಗೆ ಕಾರಣ
-ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ 6 ಗ್ಯಾರಂಟಿಗಳು, ಕರ್ನಾಟಕದಲ್ಲಿ ಗ್ಯಾರಂಟಿಗಳ ಪ್ರಭಾವ
-ಅಲ್ಪಸಂಖ್ಯಾತರ ಮತಗಳ ಸೆಳೆಯುವಲ್ಲಿ ಯಶಸ್ವಿಯಾದ “ಮೈನಾರಿಟಿ ಡಿಕ್ಲೆರೇಷನ್’ ಹಾಗೂ ಬಿಜೆಪಿ, ಬಿಆರ್‌ಎಸ್, ಎಂಐಎಂ ಒಂದೇ ಎಂದು ಪ್ರತಿಪಾದಿಸಿದ ನೀತಿ
-ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಹೈಕಮಾಂಡ್ ನಾಯಕರ ಪ್ರಚಾರ, ರೇವಂತ್ ರೆಡ್ಡಿ ನಾಯಕತ್ವ ಮತ್ತು ಕಾರ್ಯತಂತ್ರ
-ಬಿಆರ್‌ಎಸ್ ವಿರುದ್ಧದ ಆಡಳಿತ ವಿರೋಧಿ ಅಲೆಯ ಸಮರ್ಪಕ ಬಳಕೆ, ಕೆಸಿಆರ್ ಕುಟುಂಬ ರಾಜಕಾರಣದ ವಿರುದ್ಧ ಕಾಂಗ್ರೆಸ್ ಗಟ್ಟಿ ಧ್ವನಿ
-ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ಹಾಗೂ ಪಡಿತರಚೀಟಿ ಹಂಚಿಕೆ ಮಾಡದ ಸರಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾದದ್ದು
ಬಿಆರ್‌ಎಸ್ ಸೋಲಿಗೆ ಕಾರಣ
-ವಿವಾದಿತ ನಾಯಕರಿಗೇ ಪಕ್ಷದ ಟಿಕೆಟ್ ಹಂಚಿಕೆ ಹಾಗೂ ವಿಪಕ್ಷಗಳ ವಾಗ್ಧಾಳಿಯಿಂದ ಕಡಿಮೆಯಾದ ಕೆ.ಸಿ.ಚಂದ್ರಶೇಖರ್ ರಾವ್ ವರ್ಚಸ್ಸು
– ದಲಿತ ಬಂಧು ಹಾಗೂ ಡಬಲ್ ಬೆಡ್ರೂಮ್ ನಿವಾಸಗಳ ಹಂಚಿಕೆ ಯೋಜನೆಗಳು ಜಾರಿಯಾಗದೇ ಹೋದದ್ದು ಮತ್ತು ಕೆಸಿಆರ್ ತೋಟದ ಮನೆಯಲ್ಲಿ ಆಡಳಿತ ನಡೆಸುತ್ತಿದ್ದಾರೆಂಬ ಕಾಂಗ್ರೆಸ್ ಆರೋಪ
-ಮಗನನ್ನು ಸಿಎಂ ಆಗಿಸಲು ಕೆಸಿಆರ್ ಸಹಾಯ ಕೋರಿದ್ದರೆಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ವೇಳೆ ನೀಡಿದ ಹೇಳಿಕೆಯ ಪ್ರಭಾವ,ಮುಸ್ಲಿಂ ಮತಗಳು ಬಿಆರ್‌ಎಸ್‌ನಿಂದ ದೂರ ಸರಿದವು.
-ಪಕ್ಷದ ನಾಯಕರ ಹೆಸರಿನಲ್ಲಿ ಕೇಳಿ ಬರುತ್ತಿದ್ದ ಆರೋಪಗಳು, ಕೆಸಿಆರ್ ಕುಟುಂಬ ರಾಜಕಾರಣದ ವಿರುದ್ಧ ಜನರ ಆಕ್ರೋಶ
-ಕಾಂಗ್ರೆಸ್ ಗ್ಯಾರಂಟಿ ಈಡೇರುವುದಿಲ್ಲವೆಂದು ನಿರ್ಲಕ್ಷ್ಯ
ಕಾರ್ಯತಂತ್ರದ ಕಿಂಗ್ ಕನುಗೋಳು
2014ರಲ್ಲಿ ತೆಲಂಗಾಣ ರಾಜ್ಯ ಸೃಷ್ಟಿಯಾದಾಗಿನಿಂದ ಇದೇ ಮೊದಲ ಬಾರಿಗೆ ಕೆಸಿಆರ್ ಅವರ ಪಕ್ಷ ನೆಲಕಚ್ಚಿದೆ. ದಶಕಗಳ ಬಳಿಕ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿದೆ . ಈ ಗೆಲುವಿನ ಪ್ರಮುಖ ಕಾರಣೀಕರ್ತರಲ್ಲೊಬ್ಬರು ಚುನಾವಣೆ ಕಾರ್ಯತಂತ್ರದ ಕಿಂಗ್! ಸುನಿಲ್ ಕನುಗೋಳು. ಕರ್ನಾಟಕದವರಾದ ಸುನಿಲ್ ಭಾರತದ ಅತ್ಯುನ್ನತ ಚುನಾವಣಾ ತಂತ್ರಗಾರರಲ್ಲಿ ಒಬ್ಬರು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರುವುದರಲ್ಲೂ ಇವರ ಅನನ್ಯ ಪಾತ್ರವಿದೆ. 2 ವರ್ಷಗಳ ಹಿಂದೆ ಬಿಆರ್‌ಎಸ್ ನಾಯಕ ಕೆಸಿಆರ್ ಹೈದರಾಬಾದ್‌ನಲ್ಲಿರುವ ತಮ್ಮ ಫಾರ್ಮ್ ಹೌಸ್‌ಗೆ ಸುನಿಲ್ ಅವರನ್ನು ಕರೆಸಿಕೊಂಡು ಪಕ್ಷದ ಕಾರ್ಯತಂತ್ರ ರೂಪಿಸುವ ಆಫರ್ ನೀಡಿದ್ದರು. ಆದರೆ ಸುನಿಲ್ ಅದನ್ನು ನಿರಾಕರಿಸಿದ್ದರಲ್ಲದೇ, ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರದಿಂದ ಹಿಡಿದು ಸಂಪೂರ್ಣ ಕಾರ್ಯತಂತ್ರವನ್ನು ವಹಿಸಿಕೊಂಡಿದ್ದರು. ಅವರ ಸಲಹೆ, ಕಾಯತಂತ್ರಗಳ ಜತೆಗೆ ಈ ಕಾರ್ಯಕ್ಕೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇ ಕಾಂಗ್ರೆಸ್‌ನ ಗೆಲುವಿಗೆ ಪ್ರಮುಖ ಕಾರಣ ಎಂದರೂ ಅತಿಶಯೋಕ್ತಿ ಏನಲ್ಲ.
ನೆಲೆ ಇಲ್ಲದೆಡೆಯೂ ಬಲಗೊಂಡ ಬಿಜೆಪಿ
ದಕ್ಷಿಣ ಭಾರತದ ಪೈಕಿ ತೆಲಂಗಾಣದಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲ, ಕಟ್ಟಾ ಮತದಾರರೂ ಇಲ್ಲ. ಆದರೆ ಕಳೆದ ಕೆಲ ವರ್ಷಗಳಿಂದ ಹೊಸ ಹೊಸ ತಂತ್ರ ಮಾಡುತ್ತಲೇ ಇತ್ತು. ಕೆಸಿಆರ್ ವಿರುದ್ಧ ತೊಡೆ ತಟ್ಟಿ ನಿಲ್ಲುತ್ತಿದ್ದ ಬಂಡಿ ಸಂಜಯ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಹೋರಾಟಕ್ಕೆ ಅಣಿಗೊಳಿಸಿತ್ತು. ಚುನಾವಣೆ ಕಾಲಬುಡದಲ್ಲೇ ಇರುವಾಗ ರಾಜ್ಯಾಧ್ಯಕ್ಷರನ್ನು ಬದಲಾಯಿಸಿ ಕಿಶನ್ ರೆಡ್ಡಿಗೆ ಅಧಿಕಾರ ವಹಿಸಿ ಎಡವಟ್ಟು ಮಾಡಿಕೊಂಡಿತು. 6 ತಿಂಗಳ ಹಿಂದೆ ನಡೆದ ಪಾಲಿಕೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಹಕಾರಿ ಯಾಯಿತು. ಕಳೆದ ಬಾರಿ 1 ಕ್ಷೇತ್ರದಲ್ಲಿ ಗೆದ್ದಿತ್ತು. ಅಭ್ಯರ್ಥಿಗಳ ಆಯ್ಕೆಯಲ್ಲಿ ಮುತುವರ್ಜಿ ವಹಿಸಿದ್ದರೆ ಇನ್ನೂ ಹೆಚ್ಚಿನ ಸ್ಥಾನ ನಿರೀಕ್ಷಿಸಬಹುದಿತ್ತು. ಆದರೆ, ಲೋಕಸಭೆ ಚುನಾವಣೆಗೆ ಇದು ಫಲ ನೀಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಜತೆಗೆ ತೆಲಂಗಾಣ ಚುನಾವಣೆ ಅಖಾಡದಲ್ಲಿ ಪ್ರಧಾನಿ ಮೋದಿ ನೀಡಿದ ಹೇಳಿಕೆ ಫಲಿತಾಂಶದ ಚಿತ್ರಣವನ್ನೇ ಬದಲಿಸಿದೆ. ಪ್ರಚಾರ ಭಾಷಣ ವೇಳೆ ಮೋದಿ, “ಕೆಸಿಆರ್ ಬಿಜೆಪಿ ಜತೆ ಒಪ್ಪಂದ ಮಾಡಿಕೊಳ್ಳಲು ಬಂದಿದ್ದರು ಎಂದಿದ್ದರು.
ಸಿಎಂ, ಸಿಎಂ ಅಭ್ಯರ್ಥಿಗೆ ಸೋಲುಣಿಸಿದ ಸರದಾರ!
ತೆಲಂಗಾಣದಲ್ಲಿ ಬಹು ನಿರೀಕ್ಷೆ ಹುಟ್ಟಿಸಿದ್ದ ಕ್ಷೇತ್ರ ಕಾಮರೆಡ್ಡಿ!. ಮಾಜಿ ಮುಖ್ಯಮಂತ್ರಿ ಕೆ.ಚಂದ್ರ ಶೇಖರ್ ರಾವ್ ಹಾಗೂ ಕಾಂಗ್ರೆಸ್ ಪಕ್ಷದ ಪ್ರಬಲ ಸ್ಪರ್ಧಿ, ಸಿಎಂ ಅಭ್ಯರ್ಥಿ ರೇವಂತ್ ರೆಡ್ಡಿ ಇಬ್ಬರೂ ಮುಖಾಮುಖೀಯಾಗಿದ್ದ ಈ ಕ್ಷೇತ್ರದ ಬಗ್ಗೆ ರಾಜ್ಯದ ಚಿತ್ತ ನೆಟ್ಟಿತ್ತು. ಆದರೆ ಬಿಜೆಪಿಯ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಈ ಇಬ್ಬರನ್ನೂ ಸೋಲಿಸುವ ಮೂಲಕ ಇಡೀ ಚಿತ್ರಣವನ್ನೇ ಬದಲಿಸಿ ಅಚ್ಚರಿಯ ರೀತಿಯಲ್ಲಿ ಗೆಲುವು ಸಾಧಿಸಿ ದ್ದಾರೆ. ಮೊದಲಿಗೆ ಕಾಮರೆಡ್ಡಿಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು ಬಳಿಕ ಕೆಸಿಆರ್ ಮುಂಚೂಣಿ ಯಲ್ಲಿದ್ದರಾದರೂ ನೋಡ ನೋಡುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ವೆಂಕಟರಮಣ ಹಾವು ಏಣಿ ಆಟದಂತೆ ನೇರ ಏಣಿ ಹಿಡಿದು ಗೆಲುವಿನ ಗದ್ದುಗೆ ತಲುಪಿದ್ದಾರೆ. 6,741 ಮತಗಳ ಅಂತರದಲ್ಲಿ 66,652 ಮತಗಳನ್ನು ಪಡೆದು ವೆಂಕಟ ರಮಣ ರೆಡ್ಡಿ ಗೆದ್ದಿದ್ದರೆ.
ಕೆಸಿಆರ್‌ಗೆ 59,911 ಮತಗಳು ಹಾಗೂ ರೇವಂತ್ ರೆಡ್ಡಿಗೆ 54,916 ಮತಗಳು ಬಂದಿವೆ. ಕೆಸಿಆರ್ ರಿಜ್ವನ್‌ನಲ್ಲಿ ರೇವಂತ್ ರೆಡ್ಡಿ, ಕೊಡಂಗಲ್‌ನಲ್ಲಿ ಗೆಲವು ಸಾಧಿಸಿದ್ದಾರೆ.
ಡಿ.9ರ ಸೋನಿಯಾ ಜನ್ಮದಿಂದೇ ಪ್ರಮಾಣ ವಚನ ಸ್ವೀಕಾರ- ದಶಕಗಳ ಬಳಿಕ ಕೈ ಹಿಡಿದ ಜನ
ನಾಲ್ಕು ಕೋಟಿ ಜನಸಂಖ್ಯೆ ಹೊಂದಿ ರುವ ಪುಟ್ಟ ರಾಜ್ಯ ತೆಲಂ ಗಾಣ “ಧಾಡಸಿ ರಾಜಕೀಯ’ಕ್ಕೆ ಹೆಸರುವಾಸಿ. ಮಾಡು ಇಲ್ಲವೇ ಮಡಿ ಹೋರಾಟದ ಮೂಲಕ ಅಸ್ತಿತ್ವಕ್ಕೆ ಬಂದಿದೆ. 2014ರಲ್ಲಿ ಕೇಂದ್ರದ ಯುಪಿಎ ಸರಕಾರ ಅಖಂಡ ಆಂಧ್ರ ಇಬ್ಭಾಗ ಮಾಡಿತು. ಈ ಸಿಟ್ಟು ಕಾಂಗ್ರೆಸ್ ಅಧಿಕಾರದಿಂದ ದೂರ ಉಳಿಯುವಂತೆ ಮಾಡಿತು. ಆದರೆ, ದಶಕಗಳ ಕಾಲ ತಪಸ್ಸಿನಂತೆ ತಳಮಟ್ಟದಿಂದ ಪಕ್ಷ ಕಟ್ಟುವ ಕೆಲಸ ಮಾಡಿದ ಕಾಂಗ್ರೆಸ್ ನಾಯಕರು, ರಾಜ ಶೇಖರ್ ರೆಡ್ಡಿ ನಿಧನದ ನಿರ್ವಾತ, ಇಬ್ಭಾಗದ ಕಹಿ ನಿರ್ಧಾರವನ್ನು ಮರೆಮಾಚುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂಡಿ ಹಿಪ್ಪೆ ಯಾಗಿದ್ದ ಪಕ್ಷಕ್ಕೆ ಮರುಜೀವ ತುಂಬಿದ್ದಾರೆ.
ಕಳೆಗುಂದಿದ ಕಾಂಗ್ರೆಸ್‌ನ ಕೆಲವು ನಾಯಕರು, ಕಾರ್ಯಕರ್ತರು ಕೆಸಿಆರ್ ಜತೆ ಹೋಗಿದ್ದು ಕೂಡ ಭಾರೀ ಹಿನ್ನಡೆಯಾಗಿತ್ತು. ಆದರೆ, ಹೊಸ ನಾಯಕರ ಸೃಷ್ಟಿ, ತಳಮಟ್ಟದಲ್ಲಿ ಕಾರ್ಯಕರ್ತರ ಜತೆ ಸಂಪರ್ಕ ಸಾಧಿಸಿ ಹುರಿದುಂಬಿಸಿ ಹೋರಾಟಕ್ಕೆ ಅಣಿಗೊಳಿ ಸುವುದು ಸುಲಭದ ಮಾತಾಗಿರಲಿಲ್ಲ. ಕೇಂದ್ರ ನಾಯಕರ ಮಾರ್ಗದರ್ಶನ, ರೇವಂತ ರೆಡ್ಡಿ ಉತ್ಸಾಹ ದೊಂದಿಗೆ ಹೊಸ ಹುಮ್ಮಸ್ಸಿನೊಂದಿಗೆ ಮುನ್ನುಗ್ಗಿದ್ದರಿಂದ ಸೊರಗಿದ್ದ ಪಕ್ಷಕ್ಕೆ ಚೈತನ್ಯ ಮೂಡಿಸಿದರು. ಅಭ್ಯರ್ಥಿಗಳ ಆಯ್ಕೆಯಲ್ಲಿ ಮುತುವರ್ಜಿ ವಹಿಸಿ ಜನಮನ್ನಣೆಯ ವ್ಯಕ್ತಿಗೆ ಆದ್ಯತೆ ನೀಡಿ ದ್ದಲ್ಲದೇ, ಎಲ್ಲರನ್ನೂ ಒಗ್ಗೂಡಿಸಿದ್ದು ಫಲ ನೀಡಿದೆ.
ಕೆಸಿಆರ್ ಕೆಳಗಿಳಿಯಲು ಕಾರಣ?: ತೆಲಂಗಾಣ ರಾಜ್ಯ ರಚನೆಯಲ್ಲಿ ಕೆಸಿಆರ್ ಅವರ ಪಾತ್ರ ಅವಿಸ್ಮರಣೀಯ. ರಾಜ್ಯ ರಚನೆಯಲ್ಲಿ ಅವರ ಹೋರಾ ಟದ ಫಲವಾಗಿ ರಾಜ್ಯ ನಿರ್ಮಾಣ ವಾಗುತ್ತಿದ್ದಂತೆಯೇ ರಾಜ್ಯದ ಮೊದಲ ಮುಖ್ಯಮಂತ್ರಿ ಆಗುವ ಅವಕಾಶವನ್ನೂ ಜನರು ಒದಗಿಸಿಕೊಟ್ಟಿದ್ದರು. ಬಿಆರ್‌ಎಸ್ ಪಕ್ಷ ಕೆಸಿಆರ್ ಹಾಗೂ ಪುತ್ರ ಕೆ.ಟಿ.ರಾಮರಾವ್ ಹಿಡಿತದಲ್ಲಿದೆ. 10 ವರ್ಷ ಗಳಲ್ಲಿ ಉತ್ತಮ ಯೋಜನೆಗಳನ್ನು ನೀಡಿದ್ದರೂ ಭ್ರಷ್ಟಾಚಾರ ಆರೋಪ ಭಾರೀ ಪರಿಣಾಮ ಬೀರಿದೆ. ಕೆವು ನಿಷ್ಕ್ರಿಯ ಸಚಿವರನ್ನು ಸಂಪುಟದಲ್ಲಿ ಮುಂದುವರೆ ಸಿದ್ದು ಕೂಡ ಹಿನ್ನಡೆಗೆ ಕಾರಣವಾಗಿದೆ. ಅಪ್ಪ-ಮಗ ಮನೆಯಿಂದಲೇ ರಾಜ್ಯಭಾರ ಮಾಡುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿತ್ತು. ಆದರೂ ಇದನ್ನು ಸರಿ ಪಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಪುತ್ರ ಕೆ.ಟಿ.ರಾಮರಾವ್ ಐಟಿ ಬಿಟಿಗೆ ಕೊಟ್ಟಷ್ಟು ಮಹತ್ವ ಸಾಮಾನ್ಯ ಜನರಿಗೆ ನೀಡಲಿಲ್ಲ ಇದೆಲ್ಲವೂ ಅಧಿಕಾರ ಬಲಿ ಪಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.