Belthangady: ಹಕ್ಕುಚ್ಯುತಿ ಪ್ರಕರಣ- ಸದನದಲ್ಲಿ ಗದ್ದಲ
ಬೆಳ್ತಂಗಡಿ ಶಾಸಕರ ಮೇಲಿನ ಎಫ್ಐಆರ್ ಪ್ರಕರಣ ಹಕ್ಕುಬಾಧ್ಯತಾ ಸಮಿತಿಗೆ
Team Udayavani, Dec 5, 2023, 10:52 PM IST
ಬೆಳಗಾವಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡು ಮುಚ್ಚಳಿಕೆ ಬರೆಯಿಸಿಕೊಂಡ ವಿಚಾರ ವಿಧಾನಸಭೆಯಲ್ಲಿ ಭಾರೀ ಗದ್ದಲ ಸೃಷ್ಟಿಸಿದ್ದು, ಬಿಜೆಪಿ ಶಾಸಕರ ಒತ್ತಡಕ್ಕೆ ಮಣಿದು ಸ್ಪೀಕರ್ ಯು.ಟಿ. ಖಾದರ್ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಿದ್ದಾರೆ.
ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರಾದ ವಿ. ಸುನಿಲ್ ಕುಮಾರ್, ಡಾ| ಭರತ್ ಶೆಟ್ಟಿ ವೈ., ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ವೇದವ್ಯಾಸ್ ಕಾಮತ್ ಅವರು ವಿಚಾರ ಪ್ರಸ್ತಾವಿಸಿ, ಹಕ್ಕುಚ್ಯುತಿ ವಿಚಾರ ಪ್ರಸ್ತಾವಿಸಲು ಹರೀಶ್ ಪೂಂಜಾ ಅವರಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಆದರೆ ಗಮನ ಸೆಳೆಯುವ ಸೂಚನೆ ಸಂದರ್ಭದಲ್ಲಿ ವಿಷಯ ತೆಗೆದುಕೊಳ್ಳೋಣ ಎಂದು ಸ್ಪೀಕರ್ ಮನವೊಲಿಸಲು ಪ್ರಯತ್ನ ನಡೆಸಿದರು. ಇದಕ್ಕೆ ಒಪ್ಪದ ಬಿಜೆಪಿ ಶಾಸಕರು ಸದನದ ಬಾವಿಗೆ ಧಾವಿಸಿ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.
ಅಧಿವೇಶನ ನಡೆಸಲು ಬಿಡೆವು
ಸ್ಪೀಕರ್ ನಿರ್ಣಯದಿಂದ ಕುಪಿತಗೊಂಡ ಸುನಿಲ್ ಕುಮಾರ್, ಡಿ.ಕೆ. ಶಿವಕುಮಾರ್ ಪ್ರಕರಣವನ್ನು ಸಂಪುಟ ಸಭೆಯಲ್ಲಿ ವಾಪಸ್ ಪಡೆದುಕೊಂಡಿದ್ದೀರಿ. ಆದರೆ ಒಬ್ಬ ಶಾಸಕನ ಮೇಲೆ ಪ್ರಕರಣ ದಾಖಲಿಸಿದರೆ ಹಕ್ಕುಚ್ಯುತಿ ಮಂಡನೆಗೂ ಅವಕಾಶ ನೀಡುತ್ತಿಲ್ಲ. ಈ ಕ್ಷಣವೇ ಚರ್ಚೆಗೆ ಅನುಮತಿ ನೀಡದೇ ಇದ್ದರೆ ಅಧಿವೇಶನ ನಡೆಸಲು ಸಾಧ್ಯವಾಗುವುದಿಲ್ಲ. ಶಾಸಕರ ರಕ್ಷಣೆಗೆ ನೀವಲ್ಲದೇ ಇನ್ಯಾರು ಬರುವುದಕ್ಕೆ ಸಾಧ್ಯ ಎಂದು ಎಚ್ಚರಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾವಿಸಲು ಸ್ಪೀಕರ್ ಹರೀಶ್ ಪೂಂಜಾ ಅವರಿಗೆ ಅವಕಾಶ ನೀಡಿದರು.
ಪೂಂಜಾ ವಾದವೇನು?
ಬೆಳ್ತಂಗಡಿಯ ಕಳಂಜಾ ಗ್ರಾಮದಲ್ಲಿ ದೇವಣ್ಣ ಗೌಡ ಅವರು ಹಲವು ವರ್ಷಗಳಿಂದ ವಾಸಿಸುತ್ತಿದ್ದು, 4-10-2023ರಂದು ಅವರಿದ್ದ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಹೊಸದಾಗಿ ಮನೆ ಕಟ್ಟಲು ಪಾಯ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿ ನಿರ್ಮಾಣದ ಪಾಯ ಕಿತ್ತು ಹಾಕಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ನಾನು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದೆ. ತತ್‌ಕ್ಷಣ ಅರಣ್ಯ ಸಚಿವರಿಗೆ ಕರೆ ಮಾಡಿದಾಗ ಅವರು ಜಂಟಿ ಸರ್ವೇ ಪ್ರಕ್ರಿಯೆ ನಡೆಸುವುದಾಗಿ ಭರವಸೆ ನೀಡಿದ್ದರು. ಇದಾದ ಮೂರು ದಿನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು 4 ಕೆಎಸ್‌ಆರ್‌ಪಿ ವಾಹನದೊಂದಿಗೆ ಸ್ಥಳಕ್ಕೆ ಬಂದು ಕಟ್ಟಡ ನಿರ್ಮಾಣ ತೆರವು ಮಾಡಲು ಮುಂದಾಗಿದ್ದಾರೆ. ಆಗ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಅಲ್ಲಿಗೆ ತೆರಳಿ ವಿರೋಧ ವ್ಯಕ್ತಪಡಿಸಿದಾಗ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕರನ್ನು ಅಧಿಕಾರಿಗಳು ಅಕ್ಷರಶಃ ತಳ್ಳಿದ್ದಾರೆ. ಮಾತ್ರವಲ್ಲ, ನನ್ನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಮುಚ್ಚಳಿಕೆ ಬರೆಯಿಸಿಕೊಂಡು ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳು ನನ್ನ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ನಿಯಮ ಪಾಲಿಸಿಲ್ಲ. ಉಡಾಫೆ ವರ್ತನೆ ಜತೆಗೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಬೇಕೆಂದು ಪಟ್ಟು ಹಿಡಿದರು.
ಅಮಾನತು ಸಾಧ್ಯವಿಲ್ಲ ಎಂದಾಗ ಗದ್ದಲ
ಕಾನೂನು-ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಮೀಸಲು ಅರಣ್ಯ ಪ್ರದೇಶದಲ್ಲಿ ಈ ರೀತಿ ಅತಿಕ್ರಮಣಕ್ಕೆ ಅವಕಾಶ ನೀಡಿದರೆ ಭವಿಷ್ಯದಲ್ಲಿ ಅರಣ್ಯ ಸಂಪೂರ್ಣ ನಾಶವಾಗುತ್ತದೆ. ದಿನನಿತ್ಯ ನಡೆಯುವ ಮಾನವ-ವನ್ಯಜೀವಿ ಸಂಘರ್ಷ ಮುಂದುವರಿಯುತ್ತದೆ. ಹೀಗಾಗಿ ಅಧಿಕಾರಿಗಳ ಅಮಾನತು ಸಾಧ್ಯವಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಶಾಸಕರು ಮತ್ತೆ ಪ್ರತಿಭಟನೆ ನಡೆಸಿದಾಗ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಲು ಸ್ಪೀಕರ್ ಖಾದರ್ ಒಪ್ಪಿಗೆ ಸೂಚಿಸಿದರು. ಪ್ರಕರಣವನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಖಂಡ್ರೆ ಭರವಸೆ ನೀಡಿದ ಬಳಿಕ ಬಿಜೆಪಿ ಪ್ರತಿಭಟನೆ ವಾಪಸ್ ಪಡೆದುಕೊಂಡಿತು.
ಜಾಲತಾಣದಲ್ಲಿ ಹಾಕಿದ್ದೇಕೆ? ಸಚಿವರ ಪ್ರಶ್ನೆ
ಸ್ಪಷ್ಟನೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಲೋಲಾಕ್ಷ ದೇವಣ್ಣ ಗೌಡ ಅವರು ಮನೆ ಕಟ್ಟಲು ಹೋದ ಜಾಗ ಮೀಸಲು ಅರಣ್ಯದ ಸರ್ವೇ ನಂಬರ್ 309/1ರಲ್ಲಿದೆ. ಇಲ್ಲಿದ್ದ ರಬ್ಬರ್ ಮರ ಕಡಿದು ಅವರು ಮನೆ ಕಟ್ಟಲು ಮುಂದಾದಾಗ ಅಧಿಕಾರಿಗಳು ವಿರೋಧಿಸಿದ್ದಾರೆ. ಇದು ಅತಿಕ್ರಮಣ ನಿರ್ಮಾಣವಾಗಿದೆ. ಈ ಬಗ್ಗೆ ಶಾಸಕರು ನನಗೆ ಕರೆ ಮಾಡಿದಾಗ ಜಂಟಿ ಸರ್ವೇ ಮಾಡಿ ಕ್ರಮ ತೆಗೆದುಕೊಳ್ಳೋಣ. ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳೋಣ ಎಂದು ತಿಳಿಸಿದ್ದೆ. ಆದರೆ ಶಾಸಕ ಪೂಂಜಾ ಅವರು ನಮ್ಮ ನಡುವಿನ ಮೊಬೈಲ್ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಸರಿಯಾದ ಕ್ರಮ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸುನಿಲ್ ಕುಮಾರ್ ನಿಯಮ ಪ್ರಕಾರ ಹಕ್ಕುಚ್ಯುತಿ ಮಂಡನೆ ಸಂದರ್ಭದಲ್ಲಿ ಸಚಿವರು ಉತ್ತರ ನೀಡುವುದಕ್ಕೆ ಅವಕಾಶವಿಲ್ಲ. ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಬೇಕೆಂದು ಕ್ರಿಯಾಲೋಪ ಎತ್ತಿದರು. ತಿರುಗೇಟು ನೀಡಿದ ಸಚಿವ ಕೃಷ್ಣ ಬೈರೇಗೌಡ ನಿಯಮ 195ರ ಪ್ರಕಾರ ಸದನ ಪರಿಶೀಲಿಸಿದ ಅನಂತರ ಹಕ್ಕುಚ್ಯುತಿ ಸಮಿತಿಗೆ ಪರಿಶೀಲನೆಗೆ ನೀಡಬಹುದು ಎಂಬ ಪ್ರಸ್ತಾವವಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಸಚಿವರು ಉತ್ತರ ನೀಡುವುದರಲ್ಲಿ ತಪ್ಪಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Director Guruprasad: ಖ್ಯಾತ ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ಆ*ತ್ಮಹತ್ಯೆ
Vijayapura: ವಕ್ಫ್ ವಿವಾದ… ನಾಳೆಯಿಂದ ಅಹೋರಾತ್ರಿ ಧರಣಿ ಆರಂಭ: ಶಾಸಕ ಯತ್ನಾಳ
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.