Illiterate; ಅಕ್ಷರಸ್ಥನಿಗೆ ಅನಕ್ಷರಸ್ಥರ ಪಾಠ
Team Udayavani, Dec 9, 2023, 5:34 AM IST
ದಶಕಗಳ ಹಿಂದೆ ಬಸ್, ಕಾರುಗಳ ಬಿಸಿ ತಣಿಸಲು ದಾರಿ ಮಧ್ಯೆ ಮಧ್ಯೆ ನಿಲ್ಲಿಸಿ ಮುಂಭಾಗದ ಬಾಯಿ ತೆರೆದು ರೇಡಿಯೇಟರ್‌ಗೆ ನೀರು ಹಾಕುವುದು ಸಾಮಾನ್ಯವಾಗಿತ್ತು. ರೇಡಿಯೇಟರ್ ಉಗ್ರತನವನ್ನು ಮಣಿಸಲು ಈಗ ನೀರಿನ ಬದಲು ಕೂಲೆಂಟ್ ಆಯಿಲ್ ಬಂದಿದೆ.ಸ್ವಾತಂತ್ರ್ಯಪೂರ್ವದಲ್ಲಿ ಹಾಸನದಿಂದ ಹೊಳೆನರಸೀಪುರ ಮಾರ್ಗವಾಗಿ ಮೈಸೂರಿಗೆ ಹೋಗುವ ಮಧ್ಯೆ ಗೇರದಡವೆಂಬ ಗ್ರಾಮದಲ್ಲಿ ಕಾರೊಂದನ್ನು ನಿಲ್ಲಿಸಿದಾಗ ಆದ ಅನುಭವ ಮಾತ್ರ ದಾಖಲಿಸಲೇಬೇಕು. ಮನುಷ್ಯನಾದವ ಹೇಗೆ ಬದುಕಬೇಕು ಎಂಬ ಪಾಠವನ್ನು ನಿತ್ಯವಲ್ಲ, ಕ್ಷಣಕ್ಷಣವೂ ಜ್ಞಾಪಿಸಿಕೊಳ್ಳಲು ಇದು ಸಹಕಾರಿ. ಏಕೆಂದರೆ ಯೋಗ್ಯ ಮನುಷ್ಯ ಎಂದು ಜನರಿಂದ ಹೇಳಿಸಿಕೊಳ್ಳುವವನೂ ದಿನದ 24 ಗಂಟೆಯೂ ಉತ್ತಮವಾಗಿಯೇ ಇರುತ್ತಾನೆಂಬ ಖಾತ್ರಿ ಇರುವುದಿಲ್ಲ. ಅದಕ್ಕಾಗಿಯೇ “ಮನವ ಶೋಧಿಸಬೇಕು ನಿತ್ಯ…’ ಎಂದು ದಾಸರು ಹೇಳಿರಬಹುದು.
ಈಗ ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ಪೂರ್ವ ರೂಪ ಯಡತೊರೆ ತಾಲೂಕನ್ನು ಎಣಿಸಿ ಕೊಳ್ಳಬೇಕಾದರೆ 1940ರ ಆಸುಪಾಸಿಗೆ ಹಿಂದಿರು ಗಬೇಕು. ಸುಮಾರು 1900ರ ಹೊತ್ತಿಗೆ ಯಡತೊರೆ ತಾಲೂಕಿನ ಅಮಲ್ದಾರ್ (ತಹಶೀಲ್ದಾರ್) ಆಗಿದ್ದ ನವರತ್ನ ರಾಮರಾವ್ (1877-1960) ಅಲ್ಲಿಂದ ವರ್ಗವಾಗಿ 20 ವರ್ಷಗಳ ಅನಂತರ ಕಾರಿನಲ್ಲಿ ತೆರಳುವಾಗ ಇದೇ ತಾಲೂಕನ್ನು ಹಾದು ಹೋಗ ಬೇಕಾಯಿತು. ಆಗ ಕಾರಿನ ರೇಡಿಯೇಟರ್ ತಣಿಸ ಬೇಕಾಯಿತು. ಮಧ್ಯಾಹ್ನದ ಸಮಯ. ಬಾವಿಯ ಹತ್ತಿರ ಅನೇಕ ಮಹಿಳೆಯರು ಬಂದು ನೀರು ಸೇದುತ್ತಲಿದ್ದರು, ಸರತಿ ಸಾಲಿನಲ್ಲಿ ಕಾಯುತ್ತಲೂ ಇದ್ದರು. ಒಬ್ಬ ಮಹಿಳೆ ಬಳಿ ರಾಮರಾವ್ ನೀರು ಸೇದಲು ಕೊಡಪಾನ ಕೇಳಿದರು. “ಕೊನ್ನಿ ಬುದ್ಧಿ’ ಎಂದು ಆಗ ತಾನೆ ನೀರು ಸೇದಿದ ಕೊಡಪಾನವನ್ನು ಕೊಟ್ಟಳು. ಈ ಉಪಕಾರಕ್ಕೆ ಕೇವಲ ಥ್ಯಾಂಕ್ಸ್ ಹೇಳುವುದು ಸರಿಯಾಗುತ್ತದೆಯೆ? ಜೇಬಿನಿಂದ ಒಂದು ನಾಣ್ಯವನ್ನು ಕೊಡಲು ಹೋದರು. ಆಕೆ ಕೋಪಮಿಶ್ರಿತ ನಗುವಿನಿಂದ “ನಾವೇನು ಪೇಟೇ ಸ್ಥಳದೋರೇ ಬುದ್ಧಿ, ನೀರು ಮಾರಿಕೊಳ್ಳೋಕೆ? ನೋಡಕ್ಕ (ಇನ್ನೊಬ್ಬ ಮಹಿಳೆಯನ್ನು ಉದ್ದೇಶಿಸಿ) ಇವರು ಕಾಸು ಕಂಡೋರು, ನಾವು ಬಡವರು’ ಎಂದಳು.
ದೊಡ್ಡ ಹುದ್ದೆಯಲ್ಲಿದ್ದವರೆನ್ನುವುದಕ್ಕಿಂತ ದೊಡ್ಡ ಸಂಸ್ಕಾರ ಹೊಂದಿದವರಾದ ಕಾರಣ ಆ ಮಹಿಳೆಯ ಉತ್ತರ ರಾಮರಾಯರಿಗೆ ತುಸು ನಾಚಿಕೆಯನ್ನೂ ಬರಿಸಿತು. “ಕೋಪ ಮಾಡಬೇಡ ಕಣವ್ವ. ಆಳವಾದ ಬಾವಿ. ಕಷ್ಟದಿಂದ ಸೇದಿದ ನೀರು ಕೊಟ್ಟೆ ಅಂತ ನನ್ನ ಹತ್ತಿರ ಇನ್ನೇನೂ ಇಲ್ಲದೆ ದುಡ್ಡು ಕೊಡೋಕೆ ಬಂದೆ’ ಎಂದರು.
ರಾಮರಾಯರ ತಾಯಿ ವಯಸ್ಸಿನ ಮಹಿಳೆ ಮಾತನಾಡಲು ಶುರುವಿಟ್ಟಳು: “ಇದೇನು ಕಷ್ಟ ಅಂತ ಕಾಣಿ¤àರಿ? 15-20 ವರ್ಷಗಳ ಹಿಂದೆ ಏಳೆಂಟು ಮೈಲಿಗಳಿಂದ ಗುಳುವಿನ ಅತ್ತಿಕುಪ್ಪೆಯಿಂದ ನೀರು ತರಬೇಕಾಗಿತ್ತು. ಆಗ ಮಕ್ಕಳು ಅತ್ತರೆ, ಅಳಬೇಡ ಕಂದ, ಕುಡಿಯೋಕೆ ನೀರು ಕೊಡ್ತೀನಿ, ಸುಮ್ಮನಿರು- ಅಂದರೆ ಸುಮ್ಮನಾಗುತ್ತಿದ್ದವು. ಈ ಬಾವಿಯನ್ನು ಇಲ್ಲಿದ್ದ ಒಬ್ಬ ಹುಡುಗ ಸುಬೇದಾರ ನವರತ್ನ ರಾಮ ರಾಯ ಅನ್ನೋ ಮಹರಾಯ ತೋಡಿಸಿಕೊಟ್ಟರು. ಅವರ ಹೊಟ್ಟೆ ತಣ್ಣಗಿರಲಿ’ ಎಂದಳು.
ನೀರು ಕೊಟ್ಟ ಹುಡುಗಿ ನಗುತ್ತ “ಅವರೆಲ್ಲಿದಾರೋ ಈಗ? ನೀವು ತೆಗಿದರಲ್ಲ ಆ ದುಡ್ಡು ಅವರಿಗೆ ಕೊಡಿ’ ಎಂದು ನೀರು ಸೇದಲಿಕ್ಕೆ ಹೋದಳು. ಅಲ್ಲಿದ್ದವರ ನಗು, ಸಲ್ಲಾಪಗಳು – ನಾನೇ ಆ ಹಾಸ್ಯದ ಲಕ್ಷ್ಯವೆಂದು ತೋರಿತು ಎಂದು ರಾಮರಾವ್ ಕೃತಿಯಲ್ಲಿ ನೆನೆಸಿಕೊಂಡಿದ್ದಾರೆ.
ಆಗ ರಾಮರಾವ್ ದೀನಭಾವದಲ್ಲಿ ಹೀಗೆಂದು ತೋರಿತು- ಆ ಬಾವಿ ನಮ್ಮನ್ನು ಆಳುವ ಮಹಾರಾಜರ ಧರ್ಮಕಾರ್ಯ. ಅದೂ ಕೆರೆಯ ನೀರನು ಕೆರೆಗೆ ಚೆಲ್ಲಿದ ಕಾರ್ಯವೇ. ನಾನು ಅವರ ಸೇವಕನಾಗಿ ನೀರೆರೆದವನು. ನನ್ನ ಅಮಲ್ದಾರಿ ನಾನು ನ್ಯಾಯವಾಗಿ ಮಾಡಿದ್ದರೆ ಕೈಂಕರ್ಯವೇ ಸರಿ. ನನ್ನ ಸೇವೆಗೆ ಅದರ ಬೆಲೆಗೆ ಮೀರಿದ ಪ್ರತಿಫಲ ಈಗ ಬಂತು. ಸರಕಾರ ದವರು ಆಗ ಕೊಡುತ್ತಿದ್ದ 175 ರೂ. ವೇತನ ಕೇವಲ ಭಕ್ಷೀಸು. ನಾನು ಈಚೆಗೆ ತಲೆ ನೆರೆದ ಮೇಲೆ ಯೋಚನೆ ಮಾಡಿದರೆ ನಮಗೆ ಬರುವ ಆರ್ಥಿಕ ವರಮಾನವೆಲ್ಲ ಭಕ್ಷೀಸೇ. ನಮ್ಮ ಕರ್ತವ್ಯ, ನಮ್ಮ ಕೈಂಕರ್ಯಗಳನ್ನು ಮಾಡಿದ ತೃಪ್ತಿಯೇ ನಿಜವಾದ ವಸ್ತುವೆಂದು ಕಾಣುತ್ತೆ….
ಅನಕ್ಷರಸ್ಥರೆಂಬವರ ಹೃದಯ ಹೇಗಿರುತ್ತದೆ? ಯಾವುದೇ ನೌಕರರಿಗೆ ವೃತ್ತಿತೃಪ್ತಿ ಹೇಗೆ ಸಿಗಬೇಕು? ಹೇಗೆ ಸಿಗುತ್ತದೆ ಎಂಬ ವಿಮರ್ಶೆ ಜತೆಗೆ ಈ ವೃತ್ತಿತೃಪ್ತಿಯೇ ನಿಜವಾದ ಸಂಬಳ, ನಾವು ಸಂಬಳವೆಂದು ಕರೆಯುವುದು ನಿಜವಾದ ಸಂಬಳಕ್ಕೆ ಹೆಚ್ಚುವರಿಯಾದುದು ಎಂಬ ಭಾವ ಮಾತುಕತೆಗಳಲ್ಲಿ ವ್ಯಕ್ತವಾಗುತ್ತದೆ. “ನೀರು ಮಾರುವುದಕ್ಕೆ ನಾವು ನಗರವಾಸಿಗಳೆ?’ ಎಂದು ನೀರು ಕೊಟ್ಟ ಮಹಿಳೆ ಹೇಳಿದ್ದು ವ್ಯಂಗ್ಯವಾದರೂ ಸುಮಾರು ನೂರು ವರ್ಷಗಳ ಬಳಿಕ, ಆ ಮಹಿಳೆಯ ನಾಲ್ಕೈದು ತಲೆ ಮಾರಿನ ಅನಂತರದ ಈ ಕಾಲಘಟ್ಟದಲ್ಲಿ ಸತ್ಯವಾಗಿ ಗೋಚರವಾಗುತ್ತದೆ. ನೀರು ಮಾರಿದರೂ ಪರವಾಗಿಲ್ಲ, ನ್ಯಾಯವಾಗಿಯಾದರೂ (ವ್ಯಾಪಾರೀ ನ್ಯಾಯ) ಮಾರುತ್ತಾರಾ? ಈಗ ಕೋಟ್ಯಂತರ ರೂ. ವೆಚ್ಚದ ಯೋಜನೆಗಳ ಎದುರು ಬಾವಿಗಳೆಲ್ಲ ಯಾವ ಲೆಕ್ಕ? ಅಪಾರ ವೆಚ್ಚದ ಯೋಜನೆಗಳು ಸಕಾಲದಲ್ಲಿ, ಭ್ರಷ್ಟಾಚಾರದ ವಾಸನೆ ಇಲ್ಲದೆ, ಸಮರ್ಪಕವಾಗಿ ಜನರಿಗೆ ದೊರಕಿದ್ದೇ ಆದರೆ ಅಪಾರ ಸಂಖ್ಯೆಯ ಸಾರ್ವಜನಿಕರು ಎಷ್ಟು ನೌಕರರನ್ನು ಯಾವ ರೀತಿಯಲ್ಲಿ ಬಾಯ್ತುಂಬ ಅಭಿನಂದಿಸಬಹುದಿತ್ತು? ಈ ಅಭಿನಂದನೆಗಳೆಲ್ಲ ದೊರೆ ಸ್ಥಾನದಲ್ಲಿರುವ ಆಳುವ ವರ್ಗಕ್ಕೆ ಪ್ರವಾಹೋಪಾದಿಯಲ್ಲಿ ತಲುಪಲು ಸಾಧ್ಯವಿತ್ತು…
ಆದರೆ ಜನರ ತೆರಿಗೆ ಹಣದಿಂದಲೇ ರೂಪುಗೊಳ್ಳುವ ಯಾವ ಯೋಜನೆಯೂ ಸಕಾಲದಲ್ಲಿ ಮುಗಿಯು ವುದಿಲ್ಲ, ಭ್ರಷ್ಟಾಚಾರದ ವಾಸನೆ ಬಡಿಯದ ಯೋಜನೆಗಳೇ ಇಲ್ಲ, ಆದರೂ ಜನರಿಂದಲೇ ಚುನಾಯಿತರಾದವರು, ಜನರ ತೆರಿಗೆ ಹಣದಿಂದಲೇ ವೇತನ ಪಡೆಯುವ ಅಧಿಕಾರಿಗಳನ್ನೊಳಗೊಂಡ ಆಡಳಿತಾರೂಢರ ಅಹಂಕಾರ ಇಳಿಯುವುದೇ ಇಲ್ಲ… ಇಂತಹ ವಾತಾವರಣದಲ್ಲಿ ಯಾರಿಗೆ ವೃತ್ತಿತೃಪ್ತಿ ಎಷ್ಟರ ಮಟ್ಟಿಗೆ ಸಿಗಬಹುದು? ಇವೆಲ್ಲದರ ನಡುವೆ ಪ್ರಾಮಾ ಣಿಕ ಸೇವೆ ಸಲ್ಲಿಸಿದವರಿಗಾದರೂ ಜನರಲ್ಲಿ ಆ ಕಾಲದ ಅನಕ್ಷರಸ್ಥರು ಕೊಟ್ಟ ಹೃದಯಂಗಮವಾದ ಕೃತಜ್ಞತೆ ಸಲ್ಲಿಸುವ ಗುಣ ಉಳಿದುಬಂದಿದೆಯೆ? ವೇತನ ಮತ್ತು ಭಕ್ಷೀಸು ಕಲ್ಪನೆ ಸಂಪೂರ್ಣ ಉಲ್ಟಾ ಆಗಿದೆ. ವೃತ್ತಿತೃಪ್ತಿ ನಾಪತ್ತೆಯಾಗುತ್ತಿದೆ. ಆತ್ಮವಂಚನೆಯ ಬದುಕಿನಿಂದಾಗಿ ಬಹುತೇಕರು ಅಕಾಲದಲ್ಲಿ ವೃದ್ಧಾಪ್ಯವನ್ನೂ, ಕಾಯಿಲೆಗಳನ್ನೂ ಹೊತ್ತುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ ಇಲ್ಲವೆ ನಿವೃತ್ತಿ ಯಾಗುತ್ತಿದ್ದಾರೆ. ಹೀಗಾಗಿ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮನೋಪ್ರವೃತ್ತಿ ಹದಗೆಡುತ್ತಲೇ ಹೋಗುತ್ತದೆ, ಮನೋಪ್ರವೃತ್ತಿಗೂ ಆರೋಗ್ಯಕ್ಕೂ ಸಂಬಂಧವಿದೆ ಎಂಬುದನ್ನು ಕಳೆದ ಕಾಲವನ್ನು ಕಂಡಾಗ ಅನುಭವಕ್ಕೆ ಬರುತ್ತದೆ. ಮುಂದೆ ಎಂತಹ ಕಾಲವನ್ನು ಕಾಣಬಹುದು? ಮುಂದುವರಿದ ದೇಶಗಳಲ್ಲಿ ಜನಾಂಗೀಯ ದ್ವೇಷಕ್ಕಾಗಿ ಯುದ್ಧ ಕಂಡುಬಂದರೆ ನಮ್ಮಲ್ಲಿ ಆಡಳಿತಗಾರರ ತಪ್ಪು ನೀತಿಯಿಂದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ಇಳಿಮುಖವಾಗಿ ಅಂತರ್ಜಲ ಕುಸಿತದ ಪರಿಣಾಮ ಅಲ್ಲಲ್ಲಿ ನೀರಿಗಾಗಿ ಮಿನಿಯುದ್ಧ ನಡೆಯಬಹುದು. ಇನ್ನು ಕೆಲವೇ ದಿನಗಳಲ್ಲಿ ಬರುವ ಬೇಸಗೆಯೇ ದೊಡ್ಡ ಪಾಠ ಕಲಿಸಬಹುದು. ಹಾಗಾದರೆ ಪ್ರಜೆಗಳ ಗತಿ ಏನು?
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.