Eshwar Malpe ;ಸಮ್ಮಾನ ಸ್ವೀಕರಿಸುವಾಗಲೇ ಮುಳುಗುತಜ್ಞಗೆ ಕರ್ತವ್ಯದ ತುರ್ತು ಕರೆ..!
ಬೆಣ್ಣೆಕುದ್ರು ಜಾತ್ರೆಯಲ್ಲಿ ಘಟನೆ.. ಸಮಾಜ ಸೇವಕನ ತುರ್ತು ನಿರ್ಗಮನ..
Team Udayavani, Dec 17, 2023, 9:26 PM IST
ಬ್ರಹ್ಮಾವರ: ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಭೆಯಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಸಮ್ಮಾನ ಸ್ವೀಕರಿಸುವಾಗಲೇ ಶಿರಸಿಯಲ್ಲಿ ನೀರಿನಲ್ಲಿ ಮುಳುಗಿದ ಒಂದೇ ಕುಟುಂಬದ ಐವರ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ತುರ್ತು ಕರೆ ಬಂದ ವಿಲಕ್ಷಣ ಘಟನೆ ನಡೆಯಿತು.
ರವಿವಾರ ಸಂಜೆ ಜಾತ್ರೆ ಸಂದರ್ಭ ಮೊಗವೀರ ಯುವಕ ಸಂಘದ 40ರ ಸಂಭ್ರಮ ಪ್ರಯುಕ್ತ ಆಪದ್ಭಾಂಧವ ಈಶ್ವರ್ ಮಲ್ಪೆ ಅವರನ್ನು ಸಮ್ಮಾನಿಸಲಾಯಿತು. ವಿಷಯ ತಿಳಿಯುತ್ತಲೇ ತನ್ನ ಕಾರ್ಯಕ್ಕೆ ಸರ್ವರ ಆಶೀರ್ವಾದ ಕೋರಿ ಅವರು ನಿರ್ಗಮಿಸಿದರು.
ಇದನ್ನೂ ಓದಿ: Sirsi: ಹೊಳೆಯಲ್ಲಿ ಈಜಲು ತೆರಳಿದ್ದ ಐವರು ನಾಪತ್ತೆ
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಡೋಜ ಡಾ| ಜಿ. ಶಂಕರ್ ಅಧ್ಯಕ್ಷತೆ ವಹಿಸಿ, ನೀರಿನ ಆಳದಲ್ಲಿ ಮುಳುಗಿದವರನ್ನು ರಕ್ಷಿಸುವ, ಮೃತ ದೇಹವನ್ನು ಹೊರ ತೆಗೆಯುವ ಅತ್ಯಂತ ಅಪಾಯಕಾರಿ ಕಾರ್ಯದಲ್ಲಿ ತೊಡಗಿದ ಈಶ್ವರ್ ಅವರ ಸೇವೆ ಅನನ್ಯವಾದುದು ಎಂದರು. ಯುವಕ ಸಂಘ ಹಾಗೂ ಮಹಿಳಾ ಸಂಘಗಳು ಸಮಾಜದ ಕಣ್ಣುಗಳು ಎಂದರು.
ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಅವರು ಮಾತನಾಡಿ, ಈಶ್ವರ್ ಅವರು ಮೂವರು ವಿಕಲ ಚೇತನ ಮಕ್ಕಳೊಂದಿಗೆ ಸಂಕಷ್ಟದಿಂದ ಇದ್ದರೂ ಎಲ್ಲರ ಕಷ್ಟಕ್ಕೂ ಸ್ಪಂದಿಸುವವರು. ಅವರ ಬದ್ಧತೆ, ಸಾಹಸ ಶ್ಲಾಘನೀಯ ಎಂದರು. ನಿವೃತ್ತ ಪ್ರಾಧ್ಯಾಪಕ ಶ್ರೀನಿವಾಸ ಶೆಟ್ಟಿ ಅವರು ಯುವ ಶಕ್ತಿ ಜಡತ್ವ ಬಿಟ್ಟು ಸಂಘಟಿತರಾಗಿ ಮುನ್ನಡೆದರೆ ಸಮಾಜ, ದೇಶ ಸರ್ವಾಂಗೀಣ ಶ್ರೀಮಂತವಾಗುತ್ತದೆ ಎಂದರು.
ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಸಂದೀಪ್ ಕುಂದರ್, ನಿಖೀಲ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.ಶಂಕರ ಸಾಲ್ಯಾನ್ ಸ್ವಾಗತಿಸಿ, ಸತೀಶ್ ಎಸ್. ಅಮೀನ್ ನಿರೂಪಿಸಿ, ಭಾಸ್ಕರ ಅಮೀನ್ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.