Covid: ರಾಜ್ಯದಲ್ಲಿ ಮೂವರ ಸಾವು- 2 ತಿಂಗಳ ಬಳಿಕ ಮರುಕಳಿಸಿದ ಮರಣ
ರಾಜ್ಯದಲ್ಲಿ ಬುಧವಾರ 22 ಕೊರೊನಾ ಪ್ರಕರಣ ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ ಕಡ್ಡಾಯ
Team Udayavani, Dec 21, 2023, 12:54 AM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚುತ್ತಿದ್ದು, ಎರಡು ತಿಂಗಳ ಬಳಿಕ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ಪರೀಕ್ಷಾ ಪ್ರಮಾಣ ಹೆಚ್ಚಿಸಲು ನಿರ್ಧರಿಸಿರುವ ರಾಜ್ಯ ಸರಕಾರ, ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳ ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಿದೆ.
ಈಗಾಗಲೇ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಧರಿಸುವಂತೆ ಸಲಹೆ ನೀಡಿರುವ ಸರಕಾರ, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಮುಂದಿನ ನಿರ್ಣಯ ಪ್ರಕಟಿಸುವ ಸಾಧ್ಯತೆಗಳಿವೆ. ಈ ನಡುವೆ ರಾಜ್ಯದಲ್ಲಿ ಬುಧವಾರ ಹೊಸತಾಗಿ 22 ಕೇಸುಗಳು ದೃಢ ಪಟ್ಟಿವೆ. ಮಂಗಳವಾರಕ್ಕೆ ಹೋಲಿಸಿದರೆ ಕೊಂಚ ಇಳಿಕೆಯಾಗಿದೆ.
ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ನೇತೃತ್ವ ದಲ್ಲಿ ರಾಜ್ಯಗಳ ಆರೋಗ್ಯ ಸಚಿವರ ಜತೆಗೆ ಬುಧವಾರ ನಡೆದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂವಾದದ ವಿವರ ನೀಡಿದ್ದಾರೆ.
ಕೊರೊನಾದಿಂದ ಅಕ್ಟೋಬರ್‌ನಲ್ಲಿ ಸಾವು ಸಂಭವಿಸಿದ್ದು ಬಿಟ್ಟರೆ ಆ ಬಳಿಕ ರಾಜ್ಯದಲ್ಲಿ ಸಾವಿನ ಪ್ರಮಾಣ ಶೂನ್ಯಕ್ಕೆ ಇಳಿದಿತ್ತು.
ಬೆಂಗಳೂರಿನಲ್ಲಿ ಒಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಅವರಿಗೆ ಶ್ವಾಸಕೋಶದ ಸಮಸ್ಯೆ, ಅಸ್ತಮಾ, ಟಿಬಿ ಸೋಂಕು ಕೂಡ ಇತ್ತು. ಹೃದ್ರೋಗವೂ ಇದ್ದುದರಿಂದ ಹೃದಯ ಸ್ತಂಭನವಾಗಿದೆ. ತಪಾಸಣೆ ವೇಳೆ ಸೋಂಕು ಪತ್ತೆಯಾಗಿದ್ದು, ಅದು ಜೆಎನ್.1 ರೂಪಾಂತರಿ ತಳಿ ಹೌದೋ ಎಂಬುದು ದೃಢಪಟ್ಟಿಲ್ಲ. ಅವರ ಕುಟುಂಬದ ನಾಲ್ವರನ್ನು ತಪಾಸಣೆಗೆ ಒಳಪಡಿಸಿದ್ದು, ನೆಗೆಟಿವ್ ಬಂದಿದೆ ಎಂದು ಸಚಿವರು ತಿಳಿಸಿದರು.
ಆದರೆ ಬುಧವಾರ ಅರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಇಬ್ಬರು ಮೃತಪಟ್ಟಿದ್ದಾರೆ. ನ.23ರಿಂದ ಬೆಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 44 ವರ್ಷದ ವ್ಯಕ್ತಿ ಬಹು ಅಂಗಾಂಗ ವೈಫಲ್ಯದಿಂದ ಡಿ.16ರಂದು ಮೃತಪಟ್ಟಿದ್ದು, ಉಸಿ ರಾಟದ ಸಮಸ್ಯೆಯಿಂದ ಸೆ.12ರಂದು ಖಾಸಗಿ ಆಸ್ಪತ್ರೆಗೆ ಸೇರಿದ್ದ 76 ವರ್ಷದ ವ್ಯಕ್ತಿ ಡಿ.17ರಂದು ಸಾವನ್ನಪ್ಪಿದ್ದಾರೆ. ಇಬ್ಬರಲ್ಲೂ ಕೊರೊನಾ ಪತ್ತೆಯಾಗಿದೆ.
ಗಡಿ ಭಾಗದಲ್ಲಿ ಮುನ್ನಚ್ಚರಿಕೆ
ಕೇಂದ್ರ ಸರಕಾರದೊಂದಿಗೆ ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಪರಿಸ್ಥಿತಿ ಹಾಗೂ ದೇಶದ ಪರಿಸ್ಥಿತಿಯ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಅಮೆರಿಕ, ಯೂರೋಪ್ ಸಹಿತ ಇತರ 36 ರಾಷ್ಟ್ರಗಳಲ್ಲಿ ಮೂರು ತಿಂಗಳಿನಿಂದ ಜೆಎನ್.1 ಹೆಚ್ಚಿದ್ದು, ಆಗಸ್ಟ್‌ನಲ್ಲಿ ಭಾರತಕ್ಕೂ ಕಾಲಿಟ್ಟಿದೆ. ಒಮಿಕ್ರಾನ್ ಕುಟುಂಬದ ರೂಪಾಂ ತರಿ ಉಪತಳಿಯಾಗಿರುವ ಜೆಎನ್. 1 ವೈರಾಣುವಿನ ಬಗ್ಗೆ ಹೆಚ್ಚಿನ ಭಯ ಬೇಡ. ಇದರಿಂದ ಸಾವು ಸಂಭವಿಸುವ ಪ್ರಮಾಣ ಕಡಿಮೆ ಯಿದ್ದು, ಎಚ್ಚರಿಕೆಯಿಂದಂತೂ ಇರಬೇಕು ಎಂಬುದನ್ನು ಕೇಂದ್ರ ಸರಕಾರವೂ ತಿಳಿಸಿದೆ. ಹೀಗಾಗಿ ಗಡಿ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದರು.
ನಿತ್ಯ 5 ಸಾವಿರ ಪರೀಕ್ಷೆಯ ಗುರಿ
ಎಲ್ಲ ಎಸ್‌ಎಆರ್‌ಐ (ಸಾರಿ) ಪ್ರಕರಣಗಳನ್ನೂ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದ್ದು, 20ರಲ್ಲಿ 1 ಐಎಲ್‌ಐ ಪ್ರಕರಣಗಳನ್ನೂ ತಪಾಸಣೆ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಮಂಗಳವಾರ ಒಂದೇ ದಿನ 772 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಕಳೆದ 24 ಗಂಟೆಗಳಲ್ಲಿ 1,020 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ದಿನೇದಿನೆ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಿ, ಶನಿವಾರದ ವೇಳೆಗೆ ನಿತ್ಯ ಕನಿಷ್ಠ 5 ಸಾವಿರ ಪರೀಕ್ಷೆ ನಡೆಸಲು ಗುರಿ ಹೊಂದಲಾಗಿದೆ. ಕನಿಷ್ಠ 50 ಸ್ಯಾಂಪಲ್ ಇದ್ದರಷ್ಟೇ ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆ ಮಾಡಲು ಸಾಧ್ಯ. ಹೀಗೆ ಮಾಡಿದರೆ, ವೈರಾಣುವಿನ ವರ್ತನೆ ಬಗ್ಗೆ ಅರಿಯಬಹುದು ಎಂದು ವಿವರಿಸಿದರು.
ವೆಂಟಿಲೇಟರ್ ನಿರ್ವಹಣೆ ವೆಚ್ಚ ತಗ್ಗಿಸಲು ಮನವಿ
ಆರ್‌ಟಿಪಿಸಿಆರ್ ಕಿಟ್ ಹಾಗೂ ವಿಟಿಎಂ ಟ್ಯೂಬ್ (ವಯಲ್) ಕಡಿಮೆ ಇದ್ದು, ಶನಿವಾರದೊಳಗೆ ಸರಬರಾಜಾಗುವ ನಿರೀಕ್ಷೆ ಇದೆ. ಸದ್ಯಕ್ಕೆ ಪಿಪಿಇ ಕಿಟ್, ಮಾಸ್ಕ್ ಲಭ್ಯವಿದ್ದು, ಎರಡು ಹಂತಗಳಲ್ಲಿ ಮುಂದಿನ 1 ತಿಂಗಳು ಮತ್ತು 3 ತಿಂಗಳಿಗೆ ಬೇಕಾಗು ವಷ್ಟು ಪರಿಕರಗಳನ್ನು ದಾಸ್ತಾನು ಮಾಡಿಕೊಳ್ಳಲು ಸೂಚಿಸಿದೆ. ಪಿಎಂ ಕೇರ್ ಅಡಿ ನೀಡಿರುವ ವೆಂಟಿಲೇಟರ್‌ಗಳ ವಾರ್ಷಿಕ ನಿರ್ವಹಣೆಗೆ ಹೆಚ್ಚು ಖರ್ಚು ಬರುತ್ತಿದ್ದು, ನಿರ್ವಹಣೆ ವೆಚ್ಚ ಕಡಿಮೆ ಮಾಡಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಐಸಿಎಂಆರ್ ಪೋರ್ಟಲ್ ಕೆಲಸ ಮಾಡದೆ ಇರುವು ದರಿಂದ ಕೋವಿಡ್ ಪ್ರಕರಣಗಳ ನಿರ್ದಿಷ್ಟ ಅಂಕಿಅಂಶ ಸಿಗುತ್ತಿಲ್ಲ. ಹೀಗಾಗಿ ಪೋರ್ಟಲ್ ಸರಿಪಡಿಸಲು ಕೋರಿದೆ.
ಇತರ ಕಾಯಿಲೆ: ಎಚ್ಚರಿಕೆ
ಕೇರಳ ಸಚಿವರೂ ವೀಡಿಯೋ ಸಂವಾದದಲ್ಲಿ ಮಾತನಾಡಿದ್ದು, ಕೋವಿಡ್‌ನಿಂದ ಕೇರಳದಲ್ಲಿ ಸಾವು ಹೆಚ್ಚುತ್ತಿದೆ. ಆದರೆ ಬಹುತೇಕ ಪ್ರಕರಣ ಗಳಲ್ಲಿ ಅಸ್ತಮಾ, ಶ್ವಾಸಕೋಶದ ಕಾಯಿಲೆ, ಕ್ಯಾನ್ಸರ್, ಕಿಡ್ನಿ ವೈಫಲ್ಯ, ಹೃದ್ರೋಗಗಳಂತಹ ಇತರ ಕಾಯಿಲೆ ಗಳಿದ್ದು, ಕೋವಿಡ್ ಸೋಂಕು ತಗಲಿ ಬಹುಅಂಗಾಂಗ ವೈಫಲ್ಯಗೊಂಡವರೇ ಹೆಚ್ಚಿದ್ದಾರೆ. ಹೀಗಾಗಿ ಹಿರಿಯ ನಾಗರಿ ಕರು, ಮಕ್ಕಳು, ಗರ್ಭಿಣಿಯರು, ಆರೋಗ್ಯ ಕಾರ್ಯಕರ್ತರು, ಇತರ ಕಾಯಿಲೆಗಳು ಇರುವವರು ಎಚ್ಚರಿಕೆಯಿಂದ ಇರುವುದು ಒಳಿತು ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾಗಿವೆ.
ಇಂದು ಸಿಎಂ ಅಖಾಡಕ್ಕೆ
ಎರಡು ದಿನಗಳಿಂದ ದಿಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬೆಂಗಳೂರಿನಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ. ರಾಜ್ಯಕ್ಕೆ ಬರ ಪರಿಹಾರ ಒದಗಿಸುವಂತೆ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾರಿಗೆ ಮನವಿ ಮಾಡಿ ಬೆಂಗಳೂರಿಗೆ ಮರಳಿರುವ ಸಿಎಂ, ಕೋವಿಡ್ ನಿರ್ವಹಣೆಗೆ ಆದ್ಯತೆ ನೀಡಿದ್ದು, ಗುರುವಾರವೇ ಸಚಿವ ಸಂಪುಟ ಸಭೆಯೂ ಇರುವುದರಿಂದ ಹೊಸ ಮಾರ್ಗಸೂಚಿ ಹೊರಬೀಳಲಿದೆಯೇ ಎಂಬ ಕುತೂಹಲವೂ ಇದೆ.
ದೇಶದಲ್ಲಿ ಜೆಎನ್.1 ಪ್ರಕರಣ ದೃಢ
ಹೊಸದಿಲ್ಲಿ: ಕೇರಳ ಸಹಿತ 3 ರಾಜ್ಯಗಳಲ್ಲಿ ಜೆಎನ್.1 ಪ್ರಕರಣಗಳ ಸಂಖ್ಯೆ 21ಕ್ಕೆ ಏರಿದೆ. ಗೋವಾದಲ್ಲಿ 19, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ತಲಾ 1 ಕೇಸುಗಳು ದೃಢಪಟ್ಟಿವೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ತಿಳಿಸಿದ್ದಾರೆ. ಬುಧವಾರದ ಅವಧಿಯಲ್ಲಿ ದೇಶದಲ್ಲಿ ಹೊಸತಾಗಿ 614 ಕೊರೊನಾ ಪ್ರಕರಣಗಳು ದೃಢಪಟ್ಟಿವೆ.
92 ಮಂದಿಗೆ ಕೋವಿಡ್ ದೃಢ
ಬುಧವಾರ ಸೋಂಕು ಲಕ್ಷಣ ಕಂಡುಬಂದ 808 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ಆರ್‌ಟಿಪಿಸಿಆರ್ ತಪಾಸಣೆಗೆ ಒಳಗಾದ 407ರಲ್ಲಿ 19 ಹಾಗೂ ರ್ಯಾಟ್ ಪರೀಕ್ಷೆಗೆ ಒಳಗಾದ 401ರಲ್ಲಿ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮಂಗಳವಾರ 44 ಮಂದಿಯಲ್ಲಿ ಹಾಗೂ ಬುಧವಾರ 22 ಮಂದಿಯಲ್ಲಿ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಒಟ್ಟಾರೆ 92 ಮಂದಿ ಕೋವಿಡ್ ಸೋಂಕಿತ ರಿದ್ದು, ಪಾಸಿಟಿವಿಟಿ ದರವು ಶೇ.2.47ರಷ್ಟಿದೆ. ಈ ಪೈಕಿ 19 ಮಂದಿ ಬೆಂಗಳೂರಿಗರಿದ್ದರೆ, ಇಬ್ಬರು ಬಳ್ಳಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ 72 ಜನರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, 7 ಮಂದಿ ಐಸಿಯುನಲ್ಲಿ ಹಾಗೂ 13 ಜನರು ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
3 ತಿಂಗಳಿಗೊಮ್ಮೆ ಮಾಕ್ ಡ್ರಿಲ್
ಎಲ್ಲ ಆಸ್ಪತ್ರೆಗಳಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಮಾಕ್‌ಡ್ರಿಲ್ ನಡೆಸೋಣ. ಕೇಂದ್ರದಿಂದ ರಾಜ್ಯಗಳಿಗೆ ಈ ನಿಟ್ಟಿ ನಲ್ಲಿ ಬೆಂಬಲ ನೀಡುತ್ತೇವೆ. ಸೋಂಕಿನ ವಿಚಾರದಲ್ಲಿ ಎಚ್ಚರಿಕೆ ಯಿಂದ ಇರೋಣ. ಇದರಲ್ಲಿ ರಾಜಕೀಯ ಬೇಡ.
-ಮನಸುಖ್ ಮಾಂಡವಿಯಾ, ಕೇಂದ್ರ ಆರೋಗ್ಯ ಸಚಿವ
ಸದ್ಯ ಶಾಲೆಗಳಿಗಿಲ್ಲ ನಿರ್ಬಂಧ
ಬೆಂಗಳೂರು: ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿ ದ್ದರೂ ಶಾಲಾ ಚಟುವಟಿಕೆಗಳಿಗೆ ಸದ್ಯ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ. ಬಿ. ಕಾವೇರಿ ಹೇಳಿದ್ದಾರೆ. ಶಾಲಾ ವಾರ್ಷಿಕೋತ್ಸವ, ಮಕ್ಕಳ ಪ್ರವಾಸ, ಪರೀಕ್ಷೆ, ಪಾಠ ಪ್ರವಚನ ಸಹಿತ ಶೈಕ್ಷಣಿಕ ಚಟುವಟಿಕೆಗಳು ನಿಗದಿತ ರೀತಿಯಲ್ಲೇ ಮುಂದುವರಿಯಲಿದೆ. ಉಳಿದಂತೆ ರಾಜ್ಯ ಸರಕಾರ ಕೈಗೊಳ್ಳುವ ತೀರ್ಮಾನವನ್ನು ಇಲಾಖೆ ಪಾಲಿಸಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.