Yakshagana ಕಲಾವಿದ ಪೇತ್ರಿ ಬಾಲಕೃಷ್ಣ ನಾಯಕ್ ವಿಧಿವಶ
Team Udayavani, Dec 21, 2023, 7:59 PM IST
ಉಡುಪಿ: ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಜನಪ್ರಿಯ ಯಕ್ಷಗಾನ ಕಲಾವಿದ ಪೇತ್ರಿ ಬಾಲಕೃಷ್ಣ ನಾಯಕ್ ಅವರು ಗುರುವಾರ (ಡಿ. 21)ಸಂಜೆ ವಿಧಿವಶರಾಗಿದ್ದಾರೆ. ಅವರಿಗೆ 58 ವರ್ಷ ಪ್ರಾಯವಾಗಿತ್ತು.
ನಡುಬಡಗು ತಿಟ್ಟಿನ ದಿಗ್ಗಜ ಕಲಾವಿದರಿದ್ದ ಪರಿಸರ ಬ್ರಹ್ಮಾವರದ ಸಮೀಪದ ಕರ್ಜೆಯಲ್ಲಿ ವಿಟ್ಠಲ ನಾಯಕ್ ಮತ್ತು ಶಾಂತಾಬಾಯಿ ದಂಪತಿಯ ಪುತ್ರರಾಗಿ ಜನಿಸಿದ ಇವರು ”ಪೇತ್ರಿ ಬಾಲಣ್ಣ” ಎಂದೇ ಯಕ್ಷಗಾನ ರಂಗದಲ್ಲಿ ಪರಿಚಿತರು.
ದಶಾವತಾರಿ ಎಂಬ ಬಿರುದಾಂಕಿತ ಹೆರಂಜಾಲು ವೆಂಕಟರಮಣ ಗಾಣಿಗರವರಲ್ಲಿ ಹೆಜ್ಜೆ ಕಲಿತು ಮಾರಣಕಟ್ಟೆ ಮೇಳದಲ್ಲಿ ಕಲಾಸೇವೆ ಆರಂಭಿಸಿದ ಬಾಲಕೃಷ್ಣ ಅವರು ಮಂದಾರ್ತಿ, ಮೇಗರವಳ್ಳಿ, ಮಾಡಮಕ್ಕಿ, ಹಾಲಾಡಿ, ಕಳವಾಡಿ, ಹಿರಿಯಡ್ಕ ಮೇಳದಲ್ಲಿ ಮುಂಡಾಸು ವೇಷಧಾರಿಯಾಗಿ ಖ್ಯಾತನಾಮ ಕಲಾವಿದರೊಂದಿಗೆ ಒಡನಾಟ ಹೊಂದಿದ್ದರು.
ನಡುಬಡಗುತಿಟ್ಟು, ಮಟಪಾಡಿ ಶೈಲಿಯ ಪ್ರತಿನಿಧಿಯಾಗಿ ರಂಗದಲ್ಲಿ ಗುರುತಿಸಿಕೊಂಡಿದ್ದರು. ಬಣ್ಣದ ವೇಷಗಳನ್ನೂ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರು. ಹಿರಿಯಡಕ ಮೇಳದಲ್ಲಿ ವೀರಭದ್ರ ಪಾತ್ರ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಖಳ ಪಾತ್ರಗಳಿಗೂ ಸ್ವರ ಸಾಮರ್ಥ್ಯದ ಮೂಲಕ ಪಾತ್ರೋಚಿತ ನ್ಯಾಯ ಒದಗಿಸುತ್ತಿದ್ದರು. ಆಟೋ ಚಾಲಕರಾಗಿದ್ದ ಬಾಲಕೃಷ್ಣ ಕಳೆದ ಕೆಲವರ್ಷಗಳಿಂದ ಮೇಳದ ತಿರುಗಾಟಕ್ಕೆ ವಿದಾಯ ಹಾಡಿದ್ದರು. ಪ್ರಸಾದನ (ವೇಷಭೂಷಣ) ಕಲಾವಿದರಾಗಿಯೂ ಅನೇಕ ಸಂಘ ಸಂಸ್ಥೆಗಳ ಯಕ್ಷಗಾನ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.