ಹಿಂದೂ ಮತ ಬೇಕಿದ್ದರೆ ಸೋನಿಯಾ ಬರುತ್ತಾರೆ: ಯತ್ನಾಳ್
Team Udayavani, Dec 23, 2023, 12:41 AM IST
ವಿಜಯಪುರ: ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂ ಧಿ ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಹಿಂದೂಗಳ ಬಗ್ಗೆ ನೈಜ ಕಾಳಜಿ ಹಾಗೂ ಹಿಂದೂಗಳ ಮತಗಳು ಬೇಕಿದ್ದರೆ ಆಗಮಿಸುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ವೈರಿಗಳನ್ನು ಸ್ವಾಗತಿಸಿ, ಗೌರವಿಸುವ ಗುಣಧರ್ಮವಿದೆ. ಹೀಗಾಗಿ ಸೋನಿಯಾ ಅವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಅಯೋಧ್ಯಾ ಶ್ರೀರಾಮಮಂದಿರ ಟ್ರಸ್ಟ್ ಪ್ರಮುಖರು ಅ ಧಿಕೃತವಾಗಿ ಆಮಂತ್ರಣ ನೀಡಿ ಆಹ್ವಾನಿಸಿದ್ದಾರೆ. ಬರುವುದು, ಬಿಡುವುದು ಅವರಿಗೆ ಸೇರಿದ್ದು. ಕೇವಲ ಮುಸ್ಲಿಮರ ಮತ ಸಾಕಿದ್ದರೆ ಮೆಕ್ಕಾ-ಮದೀನಾಕ್ಕೆ ಹೋಗಲಿ ಎಂದು ಕುಟುಕಿದರು.
ಇದೇ ರಾಮ ಮಂದಿರ ವಿಷಯದಲ್ಲಿ ಕಾಂಗ್ರೆಸ್ ಕಪಿಲ್ ಸಿಬಲ್ ಸಹಿತ 27 ವಕೀಲರನ್ನು ಇರಿಸಿ ಸುಪ್ರೀಂಕೋರ್ಟ್‌ನಲ್ಲಿ, ಅಯೋಧ್ಯೆಯ ಶ್ರೀರಾಮ ಕಲ್ಪಿತ ದೇವರು. ಅವನ ಅಸ್ತಿತ್ವಕ್ಕೆ ದಾಖಲೆಗಳೇ ಇಲ್ಲ ಎಂದು ವಾದ ಮಂಡಿಸಿದ್ದರು. ಹಾಗಿದ್ದರೂ ಕಾಂಗ್ರೆಸ್ ಮುಖಂಡರನ್ನು ಶ್ರೀರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದರು.
ಭವಿಷ್ಯದಲ್ಲಿ ಕಾಶಿ, ಮಥುರಾಕ್ಕೂ ಮುಕ್ತಿ
ಹಿಂದೂಗಳ ಭಾವನೆಯಂತೆ ಕಾಶಿ ಮತ್ತು ಮಥುರಾದಲ್ಲಿ ಸಮೀûಾ ಕಾರ್ಯದಲ್ಲಿ ಹಿಂದೂ ದೇವಾಲಯಗಳು ಅಸ್ತಿತ್ವದಲ್ಲಿದ್ದ ಕುರುಹುಗಳು ಸಿಕ್ಕಿವೆ. ಈ ಸಾಕ್ಷಿಗಳ ಅಧಾರದಲ್ಲಿ ಭವಿಷ್ಯದ ದಿನಗಳಲ್ಲಿ ಕಾಶಿ-ಮಥುರಾ ದೇವಸ್ಥಾನಗಳೂ ಹಿಂದೂಗಳ ಸ್ವಾಧೀನಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೈಯಕ್ತಿಕ ಕೆಲಸಕ್ಕಾಗಿ ದಿಲ್ಲಿಗೆ ಹೋಗಿದ್ದೆ
ಕಾರ್ಖಾನೆ ಸ್ಥಾಪನೆ ವಿಷಯಕ್ಕೆ ಸಂಬಂಧಿಸಿ ವೈಯಕ್ತಿಕ ಕೆಲಸದ ಮೇಲೆ ದಿಲ್ಲಿಗೆ ಹೋಗಿದ್ದೆ. ಆಗ ನಮ್ಮ ರಾಜ್ಯದ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ ಸಹಿತ ಕೆಲವು ಸಂಸದರನ್ನು ಭೇಟಿ ಮಾಡಿದ್ದೆ. ಯಾರ ಭೇಟಿಗೂ ಸಮಯ ಕೇಳಿರಲಿಲ್ಲ, ಯಾರಲ್ಲೂ ಸಮಯ ಕೇಳಿ ಹೋಗುವ ಅವಶ್ಯಕತೆಯೂ ನನಗಿಲ್ಲ ಎಂದರು.
ಹೋರಾಟ ಮುಂದುವರಿಯಲಿದೆ
ಭ್ರಷ್ಟಾಚಾರ, ಹೊಂದಾಣಿಕೆ ರಾಜಕೀಯ ಹಾಗೂ ವಂಶ ಪಾರಂಪರ್ಯ ರಾಜಕಾರಣ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ಈ ವಿಷಯದಲ್ಲಿ ನನ್ನನ್ನು ಪಕ್ಷದ ಯಾವ ನಾಯಕರೂ ಬೈದಿಲ್ಲ, ಎಚ್ಚರಿಕೆಯನ್ನೂ ನೀಡಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ಹರಿಹಾಯ್ದ ಅವರು, ಹಾದಿ ಬೀದಿಯಲ್ಲಿರುವವರ ಹೇಳಿಕೆಗೆ ಉತ್ತರಿಸುವಷ್ಟು ಕೆಳಹಂತದ ರಾಜಕೀಯ ನಾಯಕ ನಾನಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.