Kannada: ಕನ್ನಡ ಸಂಘಟನೆಗಳಿಂದ “ಬೆಂಗಳೂರು ಬಂದ್” ಎಚ್ಚರಿಕೆ
Team Udayavani, Dec 29, 2023, 10:59 PM IST
ಬೆಂಗಳೂರು: ಶೇ.60:40ರ ಅನುಪಾತದಲ್ಲಿ ಕನ್ನಡ ನಾಮಫಲಕಕ್ಕೆ ಆಗ್ರಹಿಸಿ ಪ್ರತಿಭಟಿಸಿ ಬಂಧನಕ್ಕೊಳಗಾಗಿರುವ ಕರ್ನಾಟಕ ರಕ್ಷಣ ವೇದಿಕೆ (ನಾರಾಯಣ ಗೌಡ ಬಣ) ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದರೆ ಬೆಂಗಳೂರು ಬಂದ್‌ಗೆ ಕರೆ ಕೊಡುವುದಾಗಿ ಕನ್ನಡಪರ ಸಂಘಟನೆಗಳು ಒಕ್ಕೊರಲಿನಿಂದ ಸರಕಾರಕ್ಕೆ ಎಚ್ಚರಿಕೆ ನೀಡಿವೆ. ಮತ್ತೂಂದೆಡೆ ವಾಟಾಳ್ ನಾಗರಾಜ್ ಅವರು, ಬಂಧಿತರ ಬಿಡುಗಡೆಗೆ 24 ಗಂಟೆಗಳ ಗಡುವು ನೀಡಿದ್ದಾರೆ.
ವಸಂತನಗರದ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ 80ಕ್ಕೂ ಹೆಚ್ಚು ಕನ್ನಡಪರ ಸಂಘಟನೆ ಮುಖಂಡರು ಪಾಲ್ಗೊಂಡಿದ್ದು, ಅದರಲ್ಲಿ ಈ ನಿರ್ಧಾರವಾಗಿದೆ. ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಸಹಿತ ಎಲ್ಲ ಹೋರಾಟಗಾರರ ಸಭೆ ಕರೆದು ಬೆಂಗಳೂರು ಬಂದ್‌ಗೆ ಕರೆ ಕೊಡುವ ಕಾಲ ಸನ್ನಿಹಿತ ಆಗುತ್ತದೆ ಎಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಪ್ರವೀಣ್ ಶೆಟ್ಟಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಬಂಧಿತ ಎಲ್ಲರನ್ನೂ ಬೇಷರತ್ ಆಗಿ ಬಿಡುಗಡೆ ಮಾಡಬೇಕು, ಕನ್ನಡಪರ ಹೋರಾಟಗಾರರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಸರಕಾರ ಹಿಂಪಡೆದುಕೊಳ್ಳಬೇಕು ಎಂದು ಸಭೆಯಲ್ಲಿ ಒಕ್ಕೊರಲಿನಿಂದ ಮನವಿ ಮಾಡಲಾಯಿತು.
ಫೆ.28ರ ಒಳಗೆ ವಾಣಿಜ್ಯ ಮಳಿಗೆಗಳ ನಾಮಫಲಕಗಳು ಕನ್ನಡದಲ್ಲಿ ಇರದಿದ್ದರೆ ಬೆಂಗಳೂರಿನಲ್ಲಿ ಎಲ್ಲ ಕನ್ನಡ ಸಂಘಟನೆಗಳೂ ಮತ್ತೆ ಬೀದಿಗೆ ಇಳಿಯಲಿವೆ. ಡಾ| ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ ಇಲ್ಲಿನ ಎಲ್ಲ ಕಾರ್ಖಾನೆ, ಐಟಿ-ಬಿಟಿ ಕಂಪೆನಿಗಳಲ್ಲಿ ಈ ನೆಲದ ಮಕ್ಕಳಿಗೆ ಉದ್ಯೋಗ ಕೊಡಬೇಕೆಂದು ಕರ್ನಾಟಕ ರಕ್ಷಣ ವೇದಿಕೆ ಮೂಲಕ ಆಗ್ರಹಿಸುತ್ತಿರುವುದಾಗಿ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
80ಕ್ಕೂ ಹೆಚ್ಚು ಸಂಘಟನೆ ಮುಖಂಡರು ಭಾಗಿ
ಕನ್ನಡ ಸಾಹಿತ್ಯ ಪರಿಷತ್ತು, ನಮ್ಮ ಕರ್ನಾಟಕ ರಕ್ಷಣ ವೇದಿಕೆ, ಕಸ್ತೂರಿ ಕನ್ನಡ ಪರ ವೇದಿಕೆ, ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘ, ವಿಷ್ಣು ಸೇನಾ ಸಮಿತಿ, ಕುವೆಂಪು ಪ್ರತಿಷ್ಠಾನ ಸಂಸ್ಥೆ, ಒಕ್ಕಲಿಗರ ಸಂಘದ ಮುಖ್ಯ ಸಂಸ್ಥೆ, ಜೈ ಕನ್ನಡ ವೇದಿಕೆ, ರಾಜ್ಯ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಯೂನಿಯನ್, ಸಂಪೂರ್ಣ ಕರ್ನಾಟಕ ಕನ್ನಡಿಗರ ವೇದಿಕೆ ಸಹಿತ 80ಕ್ಕೂ ಅಧಿಕ ಕನ್ನಡಪರ ಸಂಘಟನೆಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದು, ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಹೇಶ್ ಜೋಶಿ, ಸಾಹಿತಿಗಳಾದ ದೊಡ್ಡರಂಗೇಗೌಡ, ಹಂಪ ನಾಗರಾಜಯ್ಯ, ಕರವೇ ಪ್ರವೀಣ್ ಶೆಟ್ಟಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.