2023 Recap; ಸಿಹಿ-ಕಹಿ ನೆನಪುಗಳ ಆಗರ


Team Udayavani, Dec 30, 2023, 11:31 PM IST

2023 Recap; ಸಿಹಿ-ಕಹಿ ನೆನಪುಗಳ ಆಗರ

ಹಲವು ಸಂಭ್ರಮ, ಹಲವು ನೋವುಗಳನ್ನು ಮನದಾಳದಲ್ಲಿ ಹಾಗೆಯೇ ಬಿಟ್ಟು 2023 ತನ್ನ ಪಯಣ ಮುಗಿಸಿದೆ. ಹೊಸ ವರ್ಷ ಬರಮಾಡಿಕೊಳ್ಳುವ ಭರದಲ್ಲಿ ಈ ವರ್ಷ ನಮಗೆ ಬಿಟ್ಟುಕೊಟ್ಟ ನೆನಪುಗಳನ್ನು ಮರೆಯುವ ಹಾಗಿಲ್ಲ. ನೆನಪುಗಳು ಸದಾ ನಮ್ಮ ಭವಿಷ್ಯಕ್ಕೆ ಮೆಟ್ಟಿಲಾಗಿ ನಿಲ್ಲುವಂಥದ್ದು. ಅಂಥ ನೆನಪುಗಳ ಮೆರವಣಿಗೆ ಇಲ್ಲಿದೆ…

ಸದ್ದು ಮಾಡಿದ ಸ್ಥಳಗಳು

1. ಇಸ್ರೇಲ್‌

ಅಂದು ಅಕ್ಟೋಬರ್‌ 7, ಮುಂಜಾನೆ 6.30ರ ಸಮಯ. ಹಮಾಸ್‌ ಉಗ್ರರು ಆಪರೇಶನ್‌ ಅಲ್‌- ಅಕ್ಸಾಫ್ಲಡ್‌ ಎಂಬ ಹೆಸರಿನಲ್ಲಿ ಏಕಾಏಕಿ ಇಸ್ರೇಲ್‌ ಮೇಲೆ ದಾಳಿ ಆರಂಭಿಸಿದರು. ಕೇವಲ 20 ನಿಮಿಷಗಳ ಅವಧಿಯಲ್ಲಿ ಸುಮಾರು 5 ಸಾವಿರ ರಾಕೆಟ್‌ ಗಳು ಇಸ್ರೇಲ್‌ ಮೇಲೆರಗಿದವು. ವೈಮಾನಿಕ ದಾಳಿಯ ನಡುವೆಯೇ ಸಾವಿರಾರು ಶಸ್ತ್ರಸಜ್ಜಿತ ಉಗ್ರರು ಭದ್ರತಾ ಬೇಲಿಯನ್ನು ದಾಟಿ ಬಂದು, ದಕ್ಷಿಣ ಇಸ್ರೇಲ್‌ ಗೆ ನುಗ್ಗಿದರು. ನಗರಗಳ ಒಳಗೆ ಹೊಕ್ಕು ಸಿಕ್ಕಸಿಕ್ಕವರ ಮೇಲೆ ಗುಂಡಿನ ಮಳೆಗರೆದರು, ಸ್ಫೋಟಕಗಳು, ಗ್ರೆನೇಡ್‌ಗಳು ಸಿಡಿದವು, ಸಂಗೀತೋತ್ಸವವೊಂದರಲ್ಲಿ ರಕ್ತಪಾತವೇ ನಡೆಯಿತು. ಈ ದಾಳಿಗೆ 1,300ರಷ್ಟು ನಾಗರಿಕರು ಹತರಾದರೆ, 200ಕ್ಕೂ ಅಧಿಕ ಮಂದಿ ಉಗ್ರರ ಒತ್ತೆಯಾಳಾದರು. ಹಿಂದೆಂದೂ ಕಂಡು ಕೇಳರಿಯದ ಈ ಅನಿರೀಕ್ಷಿತ ದಾಳಿಯಿಂದ ಇಸ್ರೇಲ್‌ ವಿಶ್ವಾದ್ಯಂತ ಸುದ್ದಿಯಾಯಿತು.

2.ಗಾಜಾ

ಹಮಾಸ್‌ ಉಗ್ರರು ಅ.7ರಂದು ನಡೆಸಿದ ದಿಢೀರ್‌ ದಾಳಿಯು ಇಸ್ರೇಲ್‌ ಅನ್ನು ಕೆರಳಿಸಿತು. ಮಾರನೇ ದಿನವೇ ಅಂದರೆ ಅ.8ರಂದು ಹಮಾಸ್‌ ವಿರುದ್ಧ ಇಸ್ರೇಲ್‌ ಸರಕಾರ ಯುದ್ಧ ಘೋಷಿಸಿತು. ಇದಾದ ಎರಡೇ ಗಂಟೆಯಲ್ಲಿ ಗಾಜಾಪಟ್ಟಿಯ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ ಆರಂಭವಾಯಿತು. ಗಾಜಾಗೆ ನೀರು, ಆಹಾರ, ವಿದ್ಯುತ್ಛಕ್ತಿ, ಇಂಧನ ಸೇರಿದಂತೆ ಯಾವ ಮೂಲಸೌಕರ್ಯಗಳೂ ಪೂರೈಕೆಯಾಗದಂತೆ ಇಸ್ರೇಲ್‌ ನಿರ್ಬಂಧ ವಿಧಿಸಿತು. ಗಾಜಾ ನಾಗರಿಕರು ಅಕ್ಷರಶಃ ನರಕ ಅನುಭವಿಸಿದರು. ಅನಂತರದಲ್ಲಿ ಇಸ್ರೇಲ್‌ ಸೇನೆ ಭೂ ಆಕ್ರಮಣವನ್ನೂ ಆರಂಭಿಸಿ, ಆಸ್ಪತ್ರೆಗಳು, ನಿರಾಶ್ರಿತರ ಶಿಬಿರಗಳನ್ನೂ ಬಿಡದಂತೆ ದಾಳಿ ನಡೆಸಿತು. ಗಾಜಾ ಪಟ್ಟಿಯ ಒಂದು ಭಾಗ ಸಂಪೂರ್ಣ ನಿರ್ನಾಮವಾಯಿತು. 20 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ಲಕ್ಷಾಂತರ ಮಂದಿ ನಿರ್ವಸಿತರಾದರು. ಏತನ್ಮಧ್ಯೆ, ಹಲವು ಉಗ್ರರು, ಅವರ ತಾಣಗಳು ನಾಶವಾದವು, ಉಗ್ರರ ಸುರಂಗಗಳೂ ಪತ್ತೆಯಾದವು. ಸತತ 3 ತಿಂಗಳಿಂದೀಚೆಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಇಸ್ರೇಲ್‌-ಗಾಜಾ ಯುದ್ಧದ್ದೇ ಸುದ್ದಿ.

3. ಮಣಿಪುರ

ಭಾರತದ ಈಶಾನ್ಯ ರಾಜ್ಯವಾದ ಮಣಿಪುರವು ಈ ವರ್ಷ ಪೂರ್ತಿ ಹಿಂಸಾಚಾರದಿಂದಲೇ ಸುದ್ದಿಯಾಯಿತು. ಮೈತೇಯಿ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡುವ ವಿಚಾರ ಸಂಬಂಧ ಮೇ 23ರಂದು ಭುಗಿಲೆದ್ದ ಗಲಭೆಯು ಮಣಿಪುರವನ್ನು ಇಂದಿಗೂ ಸುಡುತ್ತಿದೆ. ಮೈತೇಯಿ ಮತ್ತು ಬುಡಕಟ್ಟು ಕುಕಿ ಸಮುದಾಯದ ನಡುವೆ ಚುರಾಚಾಂದ್‌ಪುರದಲ್ಲಿ ಉಂಟಾದ ಘರ್ಷಣೆಯು ಅನಂತರದಲ್ಲಿ ಇಡೀ ರಾಜ್ಯವನ್ನು ಆವರಿಸಿತು. 200ಕ್ಕೂ ಅಧಿಕ ಮಂದಿ ಸಾವಿಗೀಡಾದರು. ನೂರಾರು ಮನೆಗಳು, ಚರ್ಚ್‌ಗಳು, ಧಾರ್ಮಿಕ ಕೇಂದ್ರಗಳು, ವಾಹನಗಳಿಗೆ ಬೆಂಕಿ ಹಚ್ಚಲಾಯಿತು. 60 ಸಾವಿರಕ್ಕೂ ಅಧಿಕ ಮಂದಿ ಹಿಂಸಾಚಾರದಲ್ಲಿ ನಿರ್ವಸಿತರಾದರು. 12 ಸಾವಿರಕ್ಕೂ ಹೆಚ್ಚು ಮಂದಿ ನೆರೆಯ ಮಿಜೋರಾಂಗೆ ವಲಸೆ ಹೋದರು. ಸರಕಾರದ ಶಸ್ತ್ರಾಸ್ತ್ರಕೋಠಿಯಿಂದ ಸಾವಿರಾರು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಯಿತು. ಇಬ್ಬರು ಕುಕಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ವೀಡಿಯೋವೊಂದು ವೈರಲ್‌ ಆಗಿ, ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೂ ಕಾರಣವಾಯಿತು.

4. ಅಯೋಧ್ಯೆ

ಈ ವರ್ಷ ಅತೀ ಹೆಚ್ಚು ಸುದ್ದಿಯಾದ ಸ್ಥಳವೆಂದರೆ ಅಯೋಧ್ಯೆ. 2020ರಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿದರಾದರೂ, ಭವ್ಯ ರಾಮಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗಿ, ಮಂದಿರಕ್ಕೆ ಒಂದು ರೂಪ ಬಂದಿದ್ದು 2023ರಲ್ಲಿ. ಇದರ ಜತೆ ಜತೆಗೆ, ಅಯೋಧ್ಯಾ ನಗರಿಯೂ ಸಂಪೂರ್ಣ ಬದಲಾಯಿತು. ಅತ್ಯಾಧುನಿಕ ಸೌಲಭ್ಯಗಳು, ವಿಮಾನ ನಿಲ್ದಾಣಗಳು ಸೇರಿದಂತೆ ಹೊಸ ಅಭಿವೃದ್ಧಿ ಯೋಜನೆಗಳಿಗೆ ಸಾಕ್ಷಿಯಾಯಿತು. ದೀಪಾವಳಿಯಂದು ನಡೆದ ಅದ್ದೂರಿ ದೀಪೋತ್ಸವವು 22.23 ಲಕ್ಷ ಹಣತೆಗಳ ಬೆಳಕಿನೊಂದಿಗೆ ಹೊಸ ಜಾಗತಿಕ ದಾಖಲೆಯನ್ನೂ ಮಾಡಿತು. ಭಗವಾನ್‌ ರಾಮಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠೆಯ ದಿನಾಂಕವೂ ನಿಗದಿಯಾಯಿತು. 2024ರ ಜ.22ರಂದು ಪ್ರತಿಷ್ಠಾಪನ ಕಾರ್ಯಕ್ರಮ ನಡೆಯಲಿರುವ ಕಾರಣ, ಅದಕ್ಕೆ ನಡೆದ ಸಿದ್ಧತೆ, ಕಾರ್ಯಕ್ರಮಗಳ ವಿವರ, ಆಹ್ವಾನ… ಹೀಗೆ ವರ್ಷದ ಆರಂಭದಿಂದ ಅಂತ್ಯದವರೆಗೂ ಅಯೋಧ್ಯೆ ಒಂದಿಲ್ಲ ಒಂದು ಕಾರಣಕ್ಕಾಗಿ ಸುದ್ದಿಯಾಗುತ್ತಲೇ ಇತ್ತು.

ಸದ್ದು ಮಾಡಿದ ಸನ್ನಿವೇಶಗಳು

ಕಾಡಿದ ವಿಶ್ವಕಪ್‌ ಫೈನಲ್‌ ಸೋಲಿನ ನೋವು

ರೋಹಿತ್‌ ಶರ್ಮ ನೇತೃತ್ವದ ಭಾರತೀಯ ಕ್ರಿಕೆಟ್‌ ತಂಡ ಸತತ 10 ಜಯಗಳೊಂದಿಗೆ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್‌ ಫೈನಲ್‌ಗೇರಿತ್ತು. ನ.19ರಂದು ನಡೆದ ಫೈನಲ್‌ನಲ್ಲಿ ಮಾತ್ರ ಎಲ್ಲ ಭರವಸೆಗಳು ಹುಸಿಯಾದವು. ಆಸ್ಟ್ರೇಲಿಯ ವಿರುದ್ಧ 6 ವಿಕೆಟ್‌ಗಳಿಂದ ಸೋತ ಭಾರತ ಕಣ್ಣೀರಲ್ಲಿ ಮುಳುಗಿತು. ಆ ದಿನ ಇಡೀ ದೇಶವೇ ಶೋಕದಲ್ಲಿತ್ತು. ಸ್ವತಃ ಪ್ರಧಾನಿ ಮೋದಿ ಭಾರತೀಯ ಆಟಗಾರರ ಡ್ರೆಸ್ಸಿಂಗ್‌ ಕೊಠಡಿಗೆ ತೆರಳಿ ನಾಯಕ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ತರಬೇತುದಾರ ರಾಹುಲ್‌ ದ್ರಾವಿಡ್‌, ವೇಗಿ ಮೊಹಮ್ಮದ್‌ ಶಮಿಗೆ ಸಮಾಧಾನ ಮಾಡಿದರು.

ಭಾರತದ ವರ್ಚಸ್ಸು ಹೆಚ್ಚಿಸಿದ ಜಿ20 ಶೃಂಗಸಭೆ

2023ರಲ್ಲಿ ಭಾರತ ಜಿ20 ಶೃಂಗಸಭೆಯ ಆತಿಥ್ಯ ವಹಿಸಿತ್ತು. ಒಂದೆಡೆ ಉಕ್ರೇನ್‌- ರಷ್ಯಾ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲೇ ಭಾರತ ಆತಿಥ್ಯ ವಹಿಸಿಕೊಂಡ ಜಿ20 ತನ್ನ ರಾಜತಾಂತ್ರಿಕ ಚಾಣಾಕ್ಷತೆಯನ್ನು ಬಳಸಿಕೊಳ್ಳಲು ಈ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡಿತು. ಇಡೀ ವರ್ಷ ಅಮೆರಿಕ, ಚೀನಾ, ರಷ್ಯಾ, ಜಪಾನ್‌ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆಗಳನ್ನು ನಡೆಸಿದವು. ಸೆ.9,10ರಂದು ದಿಲ್ಲಿಯ ಭಾರತ ಮಂಟಪಂನಲ್ಲಿ ಮುಕ್ತಾಯ ಸಮಾರಂಭ ನಡೆಯಿತು.
ಕೆಲವು ನಿರ್ಣಯಗಳಿಗೆ ತಕರಾರು ಇದ್ದರೂ ಚೀನ, ರಷ್ಯಾಗಳು ಸೊಲ್ಲೆತ್ತದ ಪರಿಣಾಮ ಅವಿರೋಧ ನಿರ್ಣಯಗಳಾದವು. ಇದು ಜಾಗತಿಕವಾಗಿ ಭಾರತದ ವರ್ಚಸ್ಸು ಹೆಚ್ಚಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಯಿತು.

ಆದಿತ್ಯನ ಅಧ್ಯಯನಕ್ಕೆ
ಆದಿತ್ಯ-ಎಲ್‌1

ಚಂದ್ರಯಾನ ಯಶಸ್ವಿಯಾಗಿ 10 ದಿನಗಳಲ್ಲೇ, ಇಸ್ರೋ ಸೂರ್ಯನ ಅಧ್ಯಯನಕ್ಕೆ ಆದಿತ್ಯ-ಎಲ್‌1 ಉಪಗ್ರಹವನ್ನು ಉಡಾವಣೆ ಮಾಡಿತು. ಸೆ.2ರಂದು ಉಡಾವಣೆಯಾದ ಅದು ಯಶಸ್ವಿಯಾಗಿ ಕಕ್ಷೆಗೆ ಸೇರಿ ಇಸ್ರೋದ ಸಾಮರ್ಥ್ಯವನ್ನು ಮತ್ತೂಮ್ಮೆ ಜಗಜ್ಜಾಹೀರು ಮಾಡಿತು. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿ ಉಪಗ್ರಹ ಸುತ್ತುತ್ತ, ಸೂರ್ಯ ಮೇಲ್ಮೆ„ ಸ್ಥಿತಿಗತಿಗಳು, ಕಾಂತೀಯವಲಯವನ್ನು ಅಧ್ಯಯನ ಮಾಡುತ್ತದೆ. ಇದು ಸೂರ್ಯನ ಬಗ್ಗೆ ಮಹತ್ವದ ಮಾಹಿತಿಗಳನ್ನು ರವಾನಿಸುವ ನಿರೀಕ್ಷೆಯಿದೆ.

ಏಷ್ಯಾಡ್‌/ಪ್ಯಾರಾ ಏಷ್ಯಾಡ್‌ನ‌ಲ್ಲಿ
ಚಿನ್ನದ ಸೂರೆ

ಸೆ.19ರಿಂದ ಅ.8ರವರೆಗೆ ಚೀನದ ಹಾಂಗ್‌ಝೂನಲ್ಲಿ ಏಷ್ಯನ್‌ ಗೇಮ್ಸ್‌ ನಡೆಯಿತು. ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಈ ಕೂಟದಲ್ಲಿ 100 ಪದಕಗಳ ಗಡಿದಾಟಿ 107ಕ್ಕೆ ಮುಟ್ಟಿತು. ಇನ್ನು ಅ.22ರಿಂದ 28ರ ವರೆಗೆ ನಡೆದ ಪ್ಯಾರಾ ಏಷ್ಯಾಡ್‌ನ‌ಲ್ಲಿ ಭಾರತ 111 ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿತು. ಇಲ್ಲಿ ಭಾರತ 29 ಚಿನ್ನ, 31 ಬೆಳ್ಳಿ, 51 ಕಂಚು ಜೈಸಿತು.

ಚಂದ್ರನ ದಕ್ಷಿಣ ಭಾಗದಲ್ಲಿಳಿದ
ಇಸ್ರೋ ನೌಕೆ: ಐತಿಹಾಸಿಕ ಸಾಧನೆ

2023ರಲ್ಲಿ ಇಡೀ ಜಗತ್ತಿನಲ್ಲಿ ಸದ್ದು ಮಾಡಿದ ಸುದ್ದಿಯೆಂದರೆ ಭಾರತದ ಚಂದ್ರಯಾನ-3ರ ಯಶಸ್ಸು. ಜು.14ರಂದು ಪ್ರಜ್ಞಾನ್‌ ರೋವರ್‌, ವಿಕ್ರಮ್‌ ಲ್ಯಾಂಡರನ್ನು ಹೊತ್ತ ಚಂದ್ರಯಾನ-3 ನೌಕೆ ಆ.23ರಂದು ಚಂದ್ರನ ದಕ್ಷಿಣ ಭಾಗದಲ್ಲಿಳಿಯಿತು. ಇಂತಹದ್ದೊಂದು ಮಹಾನ್‌ ಸಾಧನೆ ಮಾಡಿದ ಜಗತ್ತಿನ ಮೊದಲ ಬಾಹ್ಯಾಕಾಶ ಸಂಸ್ಥೆ ಇಸ್ರೋ ಆಯಿತು. ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾದಿಂದ ನೇರವಾಗಿ ಬೆಂಗಳೂರಿಗೆ ಬಂದು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು.

ಕರ್ನಾಟಕ, ತೆಲಂಗಾಣ ಆಡಳಿತ ಕಾಂಗ್ರೆಸ್‌ಗೆ; ಮ.ಪ್ರ., ರಾಜಸ್ಥಾನ, ಛತ್ತೀಸ್‌ಗಢ ಗೆದ್ದ ಬಿಜೆಪಿ

2023ರಲ್ಲಿ ನಡೆದ ಚುನಾವಣೆಗಳು ದೇಶದ ರಾಜಕೀಯ ಪಕ್ಷಗಳ ಪಾಲಿಗೆ ದೊಡ್ಡ ಪರಿಣಾಮವನ್ನುಂಟು ಮಾಡಿದವು. ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಆಘಾತಕಾರಿ ಸೋಲನುಭವಿಸಿತು. ಕಾಂಗ್ರೆಸ್‌ ಅಧಿಕಾರಕ್ಕೇರಿತು. ಇಡೀ ದೇಶದಲ್ಲಿ ಕೆಲವು ತಿಂಗಳ ಮಟ್ಟಿಗೆ ಬಿಜೆಪಿ ವರ್ಚಸ್ಸು ತಗ್ಗಿತ್ತು. ಆದರೆ ವರ್ಷಾಂತ್ಯದ ಹೊತ್ತಿಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಅಧಿಕಾರ ಹಿಡಿದು ಮೆರೆದಾಡಿತು. ತೆಲಂಗಾಣದಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದರೆ, ಮಿಜೋರಾಂನಲ್ಲಿ ಸಮ್ಮಿಶ್ರ ಸರಕಾರ ಪಟ್ಟಕ್ಕೇರಿತು.

ಜಾಲತಾಣದ ವರ್ಷದ ಟ್ರೆಂಡ್‌

ಕಲ್ಪನೆಗೆ ಜೀವಂತಿಕೆ ತಂದ ಎಐ ಪಿಕ್ಚರ್‌

ರತನ್‌ ಟಾಟಾ ಜಿಮ್‌ನಲ್ಲಿ ಇದ್ದಿದ್ರೆ ಹೇಗಿರುತ್ತಿತ್ತು ? ನಾವೇನಾದರೂ ಪಶ್ಚಿಮ ಬಂಗಾಲದ ವಧು- ವರರಾಗಿದ್ದರೆ ಹೇಗೆ ಕಾಣುತ್ತಿದ್ದೆವು ? ವಿಜಯನಗರ ಮಹಾ ಸಾಮ್ರಾಜ್ಯದಲ್ಲಿ ಹಂಪಿ ಕಂಗೊಳಿಸಿದ್ದ ಪರಿ ಹೇಗಿತ್ತು ? ಇದೆಲ್ಲವನ್ನೂ ಜಾಲತಾಣದಲ್ಲೇ ಸೃಷ್ಟಿಸಿ ನೆಟ್ಟಿಗರ ಕಣ್ಮುಂದೆ ತಂದಿರಿಸಿದ್ದು ಎಐ ಫೋಟೋ ಲ್ಯಾಬ್‌ ! ಮನಸ್ಸಿನಲ್ಲಿ ಮೂಡಿದ ಚಿತ್ರಗಳಿಗೆ ಜೀವಂತಿಕೆ ಬಂದರೆ ಹೇಗಿರಬಲ್ಲದು ಎಂಬ ಕನಸಿಗೆ ಬಣ್ಣ ಹಚ್ಚಿದ ಈ ಫೋಟೋಗಳು ಜಾಲತಾಣದಲ್ಲಿ ಇನ್ನಿಲ್ಲದಂತೆ ವೈರಲ್‌ ಆಗಿವೆ. ದೇಶದ ಯಾವುದ್ಯಾವುದೋ ಭಾಗದ ತಿಂಡಿ-ತೀರ್ಥದಿಂದ ಹಿಡಿದು, ಎಲಾನ್‌ ಮಸ್ಕ್, ರತನ್‌ ಟಾಟಾ, ಅಂಬಾನಿ ಸೇರಿದಂತೆ ಉದ್ಯಮಿಗಳು ಹೇಗಿದ್ದರೆ ಹೇಗೆ ಕಾಣುತ್ತಿದ್ದರು ಎನ್ನುವಂತೆಲ್ಲ ಫೋಟೋಗಳನ್ನು ಸೃಷ್ಟಿಸಿ ಆ ಫೋಟೋಗಳು ವೈರಲ್‌ ಆಗಿದ್ದಷ್ಟೇ ಅಲ್ಲ, ಸುದ್ದಿಯೂ ಆಗಿದ್ದವು.

ಮೋದಿ ಹಾಡಿಗೆ ಭಾರೀ ಡಿಮ್ಯಾಂಡ್‌

ಕಾಲ ಮೇಲೆ ಕಾಲು ಏರಿಸಿ, ಕೈಯಲ್ಲಿ ಗಿಟಾರ್‌ ಹಿಡಿದು ಸ್ಟೈಲಿಶ್‌ ಲುಕ್‌ನಲ್ಲಿ ಪ್ರಧಾನಿ ಮೋದಿ ಹಾಡುತ್ತಿದ್ದರೆ, ನೆಟ್ಟಿಗರು ನಿಬ್ಬೆರಗಾಗಿದ್ದರು. ಅರೆ ವ್ಹಾ! ಇದೇನಿದು? ಪ್ರಧಾನಿ ಬಾಲಿವುಡ್‌ ಹಾಡುಗಳನ್ನು ಹಾಡುತ್ತಾ ಈ ಪರಿ ಸಂಭ್ರಮದಲ್ಲಿದ್ದಾರಲ್ಲ ಎಂದು ಹುಬ್ಬೇರಿಸಿ ದ್ದರು. ಜಾಲತಾಣದಲ್ಲಿ ಸೆನ್ಸೇಶನಲ್‌ ಆಗಿದ್ದ ಆ ವೀಡಿಯೋ ಅಸಲಿಗೆ ಮೋದಿ ಹಾಡಿದ್ದೇ ಅಲ್ಲ! ಎಐನ ವಾಯ್ಸ ಡಬ್‌..ರಾಜಕಾರಣಿಗಳ ಧ್ವನಿಯನ್ನೇ ಎಐ ಡಬ್‌ ಮಾಡಿ, ಅವರೇ ಹಾಡಿ ದಂತೆ ಹಾಡುಗಳನ್ನು ರೆಕಾರ್ಡ್‌ ಮಾಡುವುದು 2023 ರಲ್ಲಿನ ಭಾರೀ ಟ್ರೆಂಡ್‌ಗಳಲ್ಲಿ ಒಂದಾಗಿತ್ತಲ್ಲದೇ, ಯಾವುದು ನಿಜವೋ ? ಯಾವುದು ಅಲ್ಲವೋ ಎಂದು ತಿಳಿಯ ದಾಗದಷ್ಟು ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿತ್ತು. ಮೋದಿ ಅವರ ಅಂಥದ್ದೇ ಹಾಡಿನ ವೀಡಿಯೋ ವಾರದಲ್ಲೇ 3.4 ದಶಲಕ್ಷದಷ್ಟು ವೀಕ್ಷಣೆಯನ್ನೂ ಗಳಿಸಿತ್ತು.

ಜಸ್ಟ್‌ ಲುಕಿಂಗ್‌ ಲೈಕ್‌ ಎ ವಾವ್‌ !

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ, ಚಂದನವನದ ತಾರೆಯರಾದ ರುಕ್ಮಿಣಿ ವಸಂತ್‌, ಚೈತ್ರಾ ಆಚಾರ್‌, ರಕ್ಷಿತ್‌ ಶೆಟ್ಟಿ ಇತ್ತ ತೆಲುಗು ನಟ ನಾಗಾರ್ಜುನ ಸೇರಿದಂತೆ ಯಾವ ತಾರೆಯರನ್ನ ನೋಡಿದರೂ ಎಲ್ಲರ ರೀಲ್ಸ್‌ನಲ್ಲೂ ಅದೊಂದೆ! ಸೋ ಬ್ಯೂಟಿಫ‌ುಲ್‌, ಸೋ ಎಲಿಗೆಂಟ್‌, ಜಸ್ಟ್‌ ಲುಕ್ಕಿಂಗ್‌ ಲೈಕ್‌ ಎ ವಾವ್‌.. ಬಟ್ಟೆ ಅಂಗಡಿಯಲ್ಲಿ ಮಹಿಳೆಯೊಬ್ಬರು ತಮ್ಮ ಅಂಗಡಿಯಲ್ಲಿದ್ದ ಕಲೆಕ್ಷನ್‌ಗಳನ್ನು ಜನರಿಗೆ ತೋರಿಸುವಾಗ ಹೇಳಿದ್ದ ಈ ಸಾಲುಗಳು ರಿಮಿಕ್ಸ್‌ ಜತೆಗೆ ಸೇರಿ ರೀಲ್ಸ್‌ ನಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ದವು. ಹಲವು ತಾರೆಯರು ತಾವೂ ಇದಕ್ಕೆ ರೀಲ್ಸ್‌ ಮಾಡಿದ್ರೆ ಮತ್ತೂ ಕೆಲವರು ಲೈವ್‌ ಶೋಗಳಲ್ಲೂ ಇದೇ ಡೈಲಾಗ್‌ ಹೇಳುತ್ತಾ ಟ್ರೆಂಡ್‌ ಮಾಡಿದ್ದರು.

ಡಿಡಿಕ್ಕಾ…! ಡಿಡಿಕ್ಕಾ….!

ಪುಟ್ಟ ಕರುವೊಂದು ಅಮ್ಮನತ್ತ ಓಡಿದರೂ, ಯಾರೋ ಜಾರಿ ಬಿದ್ದರೂ, ಯಾವುದೋ ಮಗು ಪಕ್ಕನೆ ನಕ್ಕರೂ ಆ ವೀಡಿಯೋಗಳಲ್ಲೆಲ್ಲ ಬರುತ್ತಿದ್ದ ಹಾಡು ಮಾತ್ರ ಒಂದೇ ! ಓಡಿ, ಓಡಿ, ಓಡಿ ಬಂದು ಡಿಡಿಕ್ಕಾ, ಡಿಡಿಕ್ಕಾ, ಡಿಡಿಕ್ಕಾ ಎಂದು… ಹೌದು ಈ ಹಾಡನ್ನು ಕೇಳದವರೇ ಇಲ್ಲ. ಬೆಂಗಳೂರಿನ 4 ವರ್ಷದ ಕಂದಮ್ಮ ಶಾಲ್ಮಲಿ ಶ್ರೀನಿವಾಸ್‌ ಹಾಡಿದ್ದ ಈ ಹಾಡು ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಪುಟ್ಟ ಕಂದನ ಧ್ವನಿ ಮಾಧುರ್ಯಕ್ಕೆ ದೊಡ್ಡವರು ಮರುಳಾದರೆ, ಇತ್ತ ಬಿದ್ದವರಿಗೂ ಇದೇ ಹಾಡನ್ನು ಹೊಂದಿಸಿ ವೀಡಿಯೋ ಎಡಿಟ್‌ ಮಾಡಿದ್ದವರು ಜಾಲತಾಣದಲ್ಲಿ ನಗೆ ಬುಗ್ಗೆಯನ್ನೇ ಸೃಷ್ಟಿಸಿದ್ದರು.

ಹೇ ಪ್ರಭು, ಯೇ ಕ್ಯಾ ಹುವಾ?
ಇತ್ತೀಚೆಗಷ್ಟೇ ಐಪಿಎಲ್‌ ಬಿಡ್ಡಿಂಗ್‌ ನಡೆದಿದ್ದು, ಆರ್‌ಸಿಬಿ ಟೀಂಗೆ ಪ್ಲೇಯರ್‌ ಸೆಲೆಕ್ಷನ್‌ ಆದ ವಿಚಾರ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿಗೆ ವೈರಲ್‌ ಆಗಿದ್ದು ಮಾತ್ರ ಹೇ ಪ್ರಭು, ಹೇ ಕ್ಯಾ ಹುವಾ ಎನ್ನುವ ಡೈಲಾಗ್‌. ಹೌದು, ಪ್ಲೇಯರ್‌ಗಳ ಹೆಸರಿನಲ್ಲಿ ಡುಪ್ಲೆಸಿಸ್‌, ಕೊಹ್ಲಿ, ರಜತ್‌ ಪಟಿದಾರ್‌, ಮ್ಯಾಕ್ಸ್‌ವೆಲ್‌, ಗ್ರೀನ್‌, ಸಿರಾಜ್‌ ಆದ ಕೂಡಲೇ ಹೇ ಪ್ರಭು, ಹೇ ಹರಿ ರಾಮ್‌, ಕೃಷ್ಣ ಜಗನ್ನಾಥ‌, ಪ್ರೇಮಾನಂದ, ಏ ಕ್ಯಾ ಹುವಾ ಎನ್ನುವ ಡೈಲಾಗ್‌ಗಳನ್ನೇ ಬರೆಯಲಾಗಿತ್ತು. ಹಲವಾರು ರೀಲ್ಸ್‌ ಗಳಲ್ಲೂ ಜನ ಇದೇ ಡೈಲಾಗ್‌ ಹೇಳಿ ಫೇಮಸ್‌ ಮಾಡಿದ್ದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2024-Merge

Rewind 2024: ಸರಿದ 2024ರ ಪ್ರಮುಖ 24 ಹೆಜ್ಜೆ ಗುರುತು

Year Ender: 2024ರಲ್ಲಿ ಬಣ್ಣದ ಲೋಕದಿಂದ ದೂರ ಉಳಿದ ಬಿಟೌನ್‌ ಸ್ಟಾರ್ ಗಳಿವರು

Year Ender: 2024ರಲ್ಲಿ ಬಣ್ಣದ ಲೋಕದಿಂದ ದೂರ ಉಳಿದ ಬಿಟೌನ್‌ ಸ್ಟಾರ್ ಗಳಿವರು

 Yearender 2024: ಅಮೆರಿಕ To ಉಕ್ರೈನ್- ಪ್ರಧಾನಿ ಮೋದಿ ಅವರ ಟಾಪ್‌ ವಿದೇಶ ಪ್ರವಾಸ

 Yearender 2024: ಅಮೆರಿಕ To ಉಕ್ರೈನ್- ಪ್ರಧಾನಿ ಮೋದಿ ಅವರ ಟಾಪ್‌ 5 ವಿದೇಶ ಪ್ರವಾಸ

Yearender 2024: ಬಿಲ್ಕೀಸ್‌ To ಜೈಲುಗಳಲ್ಲಿ ಜಾತಿ ತಾರತಮ್ಯ: ಸುಪ್ರೀಂನ Top 10 ತೀರ್ಪುಗಳು

Yearender 2024: ಬಿಲ್ಕೀಸ್‌ To ಜೈಲುಗಳಲ್ಲಿ ಜಾತಿ ತಾರತಮ್ಯ: ಸುಪ್ರೀಂನ Top 10 ತೀರ್ಪುಗಳು

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.