Amrita Someshwara; ಆ ಕಡಲ ಒಂದು ಬೊಗಸೆ
Team Udayavani, Jan 7, 2024, 6:10 AM IST
ಪ್ರೊ. ಅಮೃತ ಸೋಮೇಶ್ವರ ಅವರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲ, ಅಧ್ಯಯನ ಮಾಡಿರದ ಕ್ಷೇತ್ರವೇ ಇಲ್ಲ. ಅವರ ಪಾಂಡಿತ್ಯವನ್ನು ಪ್ರಶ್ನೆ ಕೇಳಿ ಅಕ್ಷರಗಳಲ್ಲಿ ಸೆರೆ ಹಿಡಿಯುವುದು ಸಮುದ್ರದಲ್ಲಿ ಒಂದು ಬೊಗಸೆ ನೀರನ್ನು ಎತ್ತಿಕೊಂಡಂತಾಗುತ್ತದೆ ಎನ್ನುವ ವಾಸ್ತವದ ಕಲ್ಪನೆಯೂ ನನಗೆ ಇದ್ದಿತ್ತು. ಹಾಗಾಗಿ ಸಂದರ್ಶನ ಎಂದುಕೊಳ್ಳದೇ ಈ ಹಿಂದೆ ಮುಕ್ತ ಮಾತುಕತೆ ನಡೆಸಿದ್ದೆ. ಆ ಮಾತುಗಳಲ್ಲೇ ಪ್ರಶ್ನೆಗಳಿದ್ದವು, ಅವರ ಉತ್ತರವೂ ಇತ್ತು.
ಈಗಿನ ಸೃಜನಶೀಲತೆಯ ಗುಣಮಟ್ಟವನ್ನು ಅಳೆಯು ವಾಗ ಏನೇನೂ ಸಾಲದು ಎಂದು ಸಾರಾಸಗಟಾಗಿ ತಿರಸ್ಕರಿಸುವಂತೆಯೂ ಇಲ್ಲ, ಎಲ್ಲವೂ ಸರಿಯಿದೆ ಎಂದು ಒಪ್ಪಿಕೊಳ್ಳುವಂತೆಯೂ ಇಲ್ಲ.
ಮೌಲ್ಯಯುತವಾದ ಕೆಲವು ಬರೆಹಗಳೂ ಕಾಣುತ್ತೇವೆ, ಆದರೆ ಈಗೀಗ ಉಡಾಫೆ ಬರೆವಣಿಗೆಗಳೇ ಹೆಚ್ಚಾಗಿ ಕಾಣಿಸುತ್ತಿರುವುದು ವಿಷಾದನೀಯ ಎಂದು ನಸು ನಕ್ಕಿದ್ದರು. ಅದನ್ನು ಮತ್ತಷ್ಟು ಬೆಳೆಸಲು ಬಯಸಲಿಲ್ಲ. ಅದು ಪ್ರೊ|ಅಮೃತ ಸೋಮೇಶ್ವರ ಅವರ ಹುಟ್ಟುಗುಣ.
ಹಿಂದೆ ದುಡ್ಡು ಮಾಡುವ ಹಂಬಲದಿಂದ ಬರೆಯುತ್ತಿರಲಿಲ್ಲ, ಅಂಥ ಕಲ್ಪನೆಯೂ ಆಗಿನವರಿಗೆ ಇರಲಿಲ್ಲ. ಈಗ ಸುಲಭವಾಗಿ ಸಂಪಾದನೆ ಮಾಡಬಹುದು ಎನ್ನುವ ದಾರಿ ಗೋಚರಿಸಿದೆ. ಹಾಗೇ ಬರೆಹಗಳಿಗೆ ಸಂಭಾವನೆಯನ್ನೂ ಕೊಡುತ್ತಾರೆ. ಅವರಿಗೆ ಬರೆಹ ಬೇಕು, ಇವರಿಗೆ ಹಣ ಬೇಕು, ಇಬ್ಬರೂ ಸಂತೃಪ್ತರು. ಓದುಗ ಆ ಬರೆಹಗಳನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು. ಬರೆಹದ ಮೂಲಕ ಸಾಧಿಸುವ ಹಂಬಲ, ಹಣ ಸಂಪಾದಿಸುವ ಬಯಕೆ ಜತೆಗೆ ನಿಸ್ಪೃಹತೆಯೂ ಇರಬೇಕು, ಅದು ಈಗಿನ ಬರೆಹಗಳಲ್ಲಿ, ಬರೆಹಗಾರರಲ್ಲಿ ಬಹಳಷ್ಟು ಕಡಿಮೆಯೆನಿಸುತ್ತಿದೆ ಎನ್ನುವುದು ಅವರ ಮಾತಿನ ನಿಗೂಢ ಅರ್ಥವಾಗಿತ್ತು.
ಪ್ರೊ|ಅಮೃತ ಸೋಮೇಶ್ವರ ಅವರ ಮಾತುಗಳಲ್ಲಿ ಅದೆಂಥಾ ಮೊನಚಿರುತ್ತದೆ ಎನ್ನುವುದಕ್ಕೆ ಅವರೇ ಹೇಳಿದ ಈ ಮಾತೇ ನಿದರ್ಶನ. ಹಿಂದಿನ ಬರೆಹಗಾರರಿಗೆ ಹಳೆಗನ್ನಡ ಸಾಹಿತ್ಯದ ಓದಿನ ಅನುಭವವಿತ್ತು. ಈಗಿ ನವರು ಹಿಂದಿನದು ಯಾವುದೂ ಬೇಡ ಎನ್ನುವ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೇನೋ ಎನ್ನಿಸುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಈಗ ಎಂ.ಎ. ಮಾಡಿದವರಿಂದ ಪಂಪ ಭಾರತದ ಒಂದು ವಾಕ್ಯ ವೃಂದ ವನ್ನು ತಪ್ಪಿಲ್ಲದೆ, ನಿರರ್ಗಳವಾಗಿ ಓದಿಸಿ. ಅಷ್ಟೇ ಸಾಕು. ಈ ಮಾತಿನ ಹಿಂದಿರುವ ಈಗಿನ ಕಲಿಕೆ, ಗ್ರಹಿಕೆಯ ಗುಣ ಮಟ್ಟ ಎಷ್ಟು, ಹಾಗೆಯೇ ಕಲಿಸುವವರ ಗುಣಮಟ್ಟ ಎಂಥದ್ದು? ಎನ್ನುವುದನ್ನು ಅರ್ಥೈಸಿಕೊಳ್ಳಲು ಈ ಮಾತೇ ಸಾಕಲ್ಲವೇ?.
ಯಕ್ಷಗಾನದ ಮೌಲ್ಯ ಕುಸಿದಿದೆ. ಈಗ ಅದನ್ನು ಮತ್ತೆ ಮೊದಲಿನ ಹಂತಕ್ಕೆ ತರುವುದು ಸಾಧ್ಯವಿಲ್ಲ, ಅದು ಬಹುತೇಕ ಕಷ್ಟ ಸಾಧ್ಯ ಎನ್ನುವ ಮಾತು ಅವರದ್ದಾಗಿತ್ತು. ಇದಕ್ಕೆ ಬಲವಾದ ಕಾರಣಗಳಿವೆ. ಯಾರೋ ಸಾಮಾನ್ಯರು ಹೀಗೆ ಹೇಳಿದರೆ ಜೀರ್ಣಿಸಿಕೊಳ್ಳಬಹುದು. ಯಕ್ಷಗಾನ ಕ್ಷೇತ್ರದಲ್ಲಿ ಪ್ರಸಂಗ ರಚನೆಯನ್ನು ಓತಪ್ರೋತವಾಗಿ ಮಾಡಿದವರು, ಶಿಸ್ತಿಗೆ ಒಳಪಟ್ಟು ಎರಡು ದಶಕಗಳ ಕಾಲ ಪ್ರಸಂಗ ರಚನೆಯನ್ನು ತಪಸ್ಸು ಎಂದು ಭಾವಿಸಿ ದುಡಿದವರು ಕೊಟ್ಟ ವ್ಯಾಖ್ಯಾನವಿದು.
ಯಕ್ಷಗಾನ ನಿಂತ ನೀರಾಗಬಾರದು ಎನ್ನುತ್ತಲೇ ಹೊಸತನದ ಜತೆಗೆ ಅದರ ಮೂಲಕ್ಕೆ ಧಕ್ಕೆಯಾಗದಂತೆ ಪೌರಾಣಿಕ ಪ್ರಸಂಗ ರಚಿಸಿ ರಂಗಕ್ಕೆ ಅಳವಡಿಸಿದ್ದ ಅಮೃತರು ಹೇಳಿದ್ದು ಕಟುಸತ್ಯ. ಈಗ ಮಹಾತ್ಮೆಗಳು ಅತಿಯಾಗಿರುವುದರಿಂದ ಯಾರು ಬೇಕಾದರೂ ಯಕ್ಷಗಾನ ಪ್ರಸಂಗ ಬರೆಯಬಹುದು ಎನ್ನುವಂತಾಗಿದೆ. ಇದರಿಂದಾಗಿ ಅದರ ಮೌಲ್ಯ ಕುಸಿದಿದೆ. ಮಹಾತ್ಮೆಗಳನ್ನು ಹರಕೆ ಆಟಗಳೆಂದು ಆಡಲು ಸಾಧ್ಯವಿದ್ದರೆ ತುಳುವಿನಲ್ಲಿ ಯಾಕೆ ಹರಕೆ ಆಟ ಆಡಲು ಆಗದು ಎನ್ನುವ ಅವರ ಪ್ರಶ್ನೆಗೆ ಹೀಗೆ ಹೇಳುತ್ತಿರುವವರೇ ಉತ್ತರಿಸಬೇಕಿದೆ. ಯಕ್ಷಗಾನ ಅಥವಾ ಯಾವುದರಲ್ಲಾದರೂ ಸರಿ ಬದಲಾವಣೆ ಬೇಕು, ಆದರೆ ಆ ಬದಲಾವಣೆಗೆ ಸಕಾರಣವಿರಬೇಕು. ಸಕಾರಣವಿಲ್ಲದ್ದನ್ನು ಮಾನ್ಯ ಮಾಡುವುದು ಹೇಗೆ ಸಾಧ್ಯ? ಎನ್ನುವುದು ಅವರ ಪ್ರಶ್ನೆಯಾಗತ್ತು.
ಚಪಲಕ್ಕಾಗಿ ಆಗಲೀ, ಜನಪ್ರಿಯತೆಗೇ ಆಗಲಿ ಯಕ್ಷಗಾನ ಪ್ರಸಂಗ ಬರೆಯಲು ಮುಂದಾಗಬಾರದು. ಪ್ರಸಂಗ ಬರೆಯುವುದು ಸುಲಭವಲ್ಲ. ಕತೆಯಲ್ಲಿ ಆರೋಹಣ, ಅವರೋಹಣವಿರಬೇಕು, ಸಂದೇಶವಿರಬೇಕು, ಯಾವ ಪದ್ಯಕ್ಕೆ ಯಾವ ಛಂದಸ್ಸು ಇರಬೇಕು ಎನ್ನುವ ನಿಯಮವಿದೆ, ಅದನ್ನು ಪಾಲಿಸಬೇಕು. ಎಲ್ಲವನ್ನೂ ಗಾಳಿಗೆ ತೂರಿ ತಾನು ಬರೆದದ್ದೇ ಪ್ರಸಂಗ ಎನ್ನುವುದಾದರೆ ಅದೇ ಸರಿ ಎನ್ನುವುದಾದರೆ ಮೌಲ್ಯ ಕುಸಿದಿರಲು ಸಾಧ್ಯವೇ ? ಎನ್ನುವುದು ಅವರ ಮೂಲ ಪ್ರಶ್ನೆಯಾಗಿತ್ತು.
ಬೆರಳೆಣಿಕೆ ಸಂಖ್ಯೆಯ ಮಂದಿಯಷ್ಟೇ ಈಗ ಉತ್ತಮ ಪ್ರಸಂಗಗಳನ್ನು ಬರೆಯುತ್ತಿದ್ದಾರೆ. ಉಳಿದಂತೆ ಬಹುತೇಕ ಮಂದಿ “ಸಂತೆಗೆ ಮೂರು ಮೊಳ’ ಹೆಣೆದು ಚಪಲ ತೀರಿಸಿಕೊಳ್ಳುತ್ತಿರುವವರು. ರಾಗ, ತಾಳ, ಛಂದಸ್ಸು ಯಾವುದೂ ಗೊತ್ತಿಲ್ಲದೆ ಪ್ರಸಂಗ ಬರೆಯುವುದು ಯಾವುದೇ ಕಾರಣಕ್ಕೂ ಯಕ್ಷಗಾನದ ಮೌಲ್ಯವನ್ನು ಹೆಚ್ಚಿಸದು ಎನ್ನುವುದು ಅವರ ಖಚಿತ ಮಾತಾಗಿತ್ತು.
ಪ್ರೊ| ಅಮೃತ ಸೋಮೇಶ್ವರ ಅವರ ಸಾಹಿತ್ಯ, ಸಂಶೋಧನೆ, ಜನಪದ ಅಧ್ಯಯನ, ಯಕ್ಷಗಾನ ಪ್ರಸಂಗ ರಚನೆ ಹೀಗೆ ಎಲ್ಲ ಪ್ರಕಾರಗಳಲ್ಲಿ ಬಹುತೇಕರು ಸಾಧಿಸದ ಸಾಧನೆಯನ್ನು ಮಾಡಿದ್ದರೂ ಅವರನ್ನು ಸರಕಾರ, ಸಾರಸ್ವತ ಲೋಕ ಗುರುತಿಸಿಲ್ಲ ಮತ್ತು ಅವರಿಗೆ ಸಲ್ಲಬೇಕಾದ ಗೌರವ ಸಿಗಲಿಲ್ಲ. ಇದು ಮುಖಸ್ತುತಿಯೂ ಅಲ್ಲ, ತುಟಿ ಮೇಲಿನ ಮಾತೂ ಅಲ್ಲ. ಹೀಗಾಗಿ ನಾನು ಅವರಲ್ಲಿ “ನೀವು ಎಷ್ಟೇ ಸಾಧನೆ ಮಾಡಿದ್ದರೂ ಘಟ್ಟವನ್ನು ಏರಲಾಗದ, ವಿಮರ್ಶಕರು ಗುರುತಿಸಲಾಗದ ಸಾಹಿತಿಯಲ್ಲವೇ?’ ಎಂಬ ನನ್ನ ಅನಿವಾರ್ಯ ಪ್ರಶ್ನೆಯನ್ನು ಅವರ ಮುಂದಿಟ್ಟಿದ್ದೆ.
ಅಮೃತ ಸೋಮೇಶ್ವರರು, ಹಾಗೇ ಮೌನವಾಗಿದ್ದು ಸತ್ಯವನ್ನು ಒಪ್ಪಿಕೊಂಡರು. ನಾನು ಘಟ್ಟದ ಆಚೆಗೆ ತಲುಪಲಿಲ್ಲ, ಘಟ್ಟ ಏರಲಾಗಲಿಲ್ಲವೆಂದರು.ನಾನು ಯಾವ ವಿಮರ್ಶಕ ವಲಯವನ್ನೂ ತಲುಪಲು ಪ್ರಯತ್ನಿಸಲಿಲ್ಲ. ಹಾಗೆ ಮಾಡುವುದು ನನ್ನ ಜಾಯಮಾನವೂ ಅಲ್ಲ. ಸಾಹಿತ್ಯ ವಿಮರ್ಶಕರ ಗುಂಪು ಇರುವುದು ಗೊತ್ತಿತ್ತು. ನನ್ನ ಮಟ್ಟಿಗೆ ನಾನು ಕೆಲಸ ಮಾಡಿದ್ದೇನೆ. ತೃಪ್ತಿಯಿದೆ. ಪ್ರಶಸ್ತಿಗೆ ಹಾತೊರೆಯಲಿಲ್ಲ, ತಾವಾಗಿಯೇ ಬಂದ ಪ್ರಶಸ್ತಿಗಳನ್ನು ನಮ್ರತೆಯಿಂದ ಸ್ವೀಕರಿಸಿದ್ದೇನೆ ಎಂಬುದು ಪ್ರೊ| ಅಮೃತ ಸೋಮೇಶ್ವರ ನಿರ್ಲಿಪ್ತದ ನುಡಿಯಾಗಿತ್ತು.
ಸಾಹಿತ್ಯ ಚಳವಳಿಗಳನ್ನು ಬೇರೆ ಬೇರೆ ರೀತಿಯಲ್ಲಿ ಗುರುತಿಸುವ ಕಾಲವಿತ್ತು. ಹಳೆಗನ್ನಡ, ಹೊಸಗನ್ನಡ, ನವ್ಯ, ನವೋದಯ, ಪ್ರಗತಿಶೀಲ, ಬಂಡಾಯ, ದಲಿತ ಹೀಗೆ. ಕೊನೆಯದಾಗಿ ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳು ಮೌನವಾಗಲು ಅವರು ಕಂಡುಕೊಡಿರು ವುದೇನೆಂದರೆ ಯಾರಿಗೇ ಆದರೂ ಒಂದು ಹಂತಕ್ಕೆ ತಲುಪಿದ ಮೇಲೆ, ತನಗೆ ಅದರಿಂದ ಸಿಗಬೇಕಾದ ಸ್ಥಾನಮಾನ, ಸವಲತ್ತುಗಳು ಸಿಕ್ಕಿದ ಮೇಲೆ ಒಂಥರಾ ಸಂತೃಪ್ತಿ ಆವರಿಸಿಕೊಳ್ಳುತ್ತದೆ. ಈ ಹಂತ ತಲುಪಿದ ಮೇಲೆ ಎಲ್ಲವೂ ಸ್ತಬ್ಧ. ದಲಿತ, ಬಂಡಾಯ ಚಳವಳಿಯ ಮುಂಚೂಣಿಯಲ್ಲಿದ್ದವರು ಈಗ ತಾವು ಅನುಭವಿಸಿದ್ದು ಸಾಕು ಅಂದುಕೊಡಿರಬೇಕು, ಆದ್ದರಿಂದಲೇ ಆ ಚಳವಳಿಗಳು ನಿಂತಿವೆ ಎನ್ನುವಂತಾಗಿದೆ. ಆದರೆ ಆಂತರಿಕವಾಗಿ ಕೆಲವರ ಬರೆಹಗಳಲ್ಲಿ ಇನ್ನೂ ಅದರ ಮುಂದುವರಿಕೆ ಎನ್ನಬಹುದಾದ ಲಕ್ಷಣಗಳಿವೆ.
- ಚಿದಂಬರ ಬೈಕಂಪಾಡಿ, ಹಿರಿಯ ಪತ್ರಕರ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.