Bagalkote: ಹಾಲಿ ಬಿಜೆಪಿ ಸಂಸದ ಗದ್ದಿಗೌಡರ್ ಕಡೆಯ ಬಾರಿಗೆ ಸ್ಪರ್ಧೆ?
ಸತತ 4 ಬಾರಿ ಗೆದ್ದಿರುವ ಬಿಜೆಪಿ ಹುರಿಯಾಳು 5ನೇ ಬಾರಿ ಕಣಕ್ಕಿಳಿಯುತ್ತಾರಾ?
Team Udayavani, Jan 12, 2024, 5:21 AM IST
ಬಾಗಲಕೋಟೆ: ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆ ಯಾಗಿರುವ ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಮತದಾರರು 1996ರಿಂದಲೂ ಕಾಂಗ್ರೆಸ್ ಕೈಹಿಡಿದಿಲ್ಲ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನೇ ಸೋಲಿಸಿದ ಖ್ಯಾತಿ ಹೊಂದಿರುವ ಈ ಕ್ಷೇತ್ರ ಈಗ ಹಿಂದುತ್ವದ ಗಟ್ಟಿನೆಲೆಯಾಗಿದೆ.
ಗದಗ ಜಿಲ್ಲೆಯ ನರಗುಂದ ಸಹಿತ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಈ ಲೋಕಸಭೆ ಕ್ಷೇತ್ರ ಐವರು ಕಾಂಗ್ರೆಸ್ ಹಾಗೂ ಮೂವರು ಬಿಜೆಪಿ ಶಾಸಕರನ್ನು ಹೊಂದಿದೆ. ಈವರೆ
ಗಿನ 16 ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 10 ಬಾರಿ ಗೆದ್ದಿದೆ. 2004ಕ್ಕೂ ಮುನ್ನ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಇಲ್ಲಿ 1996 (ಜನತಾದಳದಿಂದ ಮೇಟಿ) ಮತ್ತು 1998ರಲ್ಲಿ (ಲೋಕಶಕ್ತಿ ಪಕ್ಷದಿಂದ ಸರನಾಯಕ) ಮಾತ್ರ ಕಾಂಗ್ರೆಸ್ಸೇತರ ಸಂಸದರಾಗಿ ಆಯ್ಕೆಯಾಗಿದ್ದರು. ಇದನ್ನು ಹೊರತುಪಡಿಸಿದರೆ 2004ರಿಂದ ಸತತ ನಾಲ್ಕು ಬಾರಿ ಬಿಜೆಪಿ ಗೆದ್ದಿದೆ.
ಜನತಾ ಪರಿವಾರದಿಂದ ಬಿಜೆಪಿಗೆ ಬಂದ ಹಾಲಿ ಸಂಸದ ಪಿ.ಸಿ. ಗದ್ದಿ ಗೌಡರ ಅವರು, ವ್ಯಕ್ತಿಗತ ವರ್ಚಸ್ಸು ಹೊಂದಿರದಿದ್ದರೂ 2004ರಲ್ಲಿ ವಾಜಪೇಯಿ, 2009ರಲ್ಲಿ ಬಿಎಸ್‌ವೈ ಹಾಗೂ 2014 ಮತ್ತು 2019ರಲ್ಲಿ ಮೋದಿ ಅಲೆಯಲ್ಲಿ ಗೆದ್ದು ಬಂದವರು. 2009ರಿಂದ ನಾನು ಒಲ್ಲೆ ಎನ್ನುತ್ತಲೇ ಬಿಜೆಪಿಯ ಟಿಕೆಟ್ ಗಿಟ್ಟಿಸುತ್ತಾ ಪ್ರತಿ ಬಾರಿಯೂ ಗೆಲುವಿನ ಅಂತರ ಹೆಚ್ಚಿಸಿಕೊಂಡವರು.
ಬಿಜೆಪಿಯಲ್ಲಿ ಮಾಜಿ ಸಚಿವರಾದ ನಿರಾಣಿ ಮತ್ತು ಕಾರಜೋಳರ ಬಣಗಳಿದ್ದರೂ ಗದ್ದಿಗೌಡರ ಗೆಲುವಿಗೆ ಅಡ್ಡಿಯಾಗಿಲ್ಲ. ಹೀಗಾಗಿ ಕ್ಷೇತ್ರದ ಮಟ್ಟಿಗೆ ಅವರೇ ಸುರಕ್ಷಿತ ಅಭ್ಯರ್ಥಿ ಎಂಬ ಮಾತಿದೆ. ಹೀಗಾಗಿ ಈ ಬಾರಿಯೂ ಅವರೇ ಅಭ್ಯರ್ಥಿ ಹಾಗೂ ಇದು ಅವರ ಕೊನೆಯ ಚುನಾವಣೆ ಎನ್ನುವ ಟ್ರಂಪ್‌ಕಾರ್ಡ್ ಬಳಸಲು ಪಕ್ಷ ಮುಂದಾಗಲಿದೆ ಎನ್ನಲಾಗಿದೆ.
ಜತೆಗೆ ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿದೆ. ಗದ್ದಿಗೌಡರು ಒಲ್ಲೆ ಅಂದ್ರೆ ನಾನು ಅಭ್ಯರ್ಥಿ ಆಗುತ್ತೇನೆ ಎಂದು ಹುನಗುಂದದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದ್ದಾರೆ. ಹೊಸ ಮುಖಕ್ಕೆ ಅವಕಾಶ ಕೊಡುವುದಾದರೆ ಮಾಜಿ ಸಚಿವ ಮುರುಗೇಶ ನಿರಾಣಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ನಿವೃತ್ತ ಐಎಎಸ್ ಅಧಿಕಾರಿ ಡಾ|ಪ್ರಕಾಶ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವೀರಣ್ಣ ಹಳೇಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಅದೃಷ್ಟ ಪರೀಕ್ಷೆಯ ನಿರೀಕ್ಷೆಯಲ್ಲಿದ್ದಾರೆ.
ಕಾಂಗ್ರೆಸ್‌ನಲ್ಲಿ ಯಾರು?
ಇನ್ನು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಈವರೆಗೂ ಲಿಂಗಾಯತ ರಡ್ಡಿ, ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡುತ್ತಾ ಬಂದಿರುವ ಪಕ್ಷದಲ್ಲಿ ಈ ಬಾರಿ ಅಹಿಂದ ವರ್ಗಕ್ಕೆ ಟಿಕೆಟ್ ಕೊಡಿ ಎಂಬ ಕೂಗು ಕೇಳಿಬಂದಿದೆ. ಈ ಬೇಡಿಕೆ ಮುಂದಿಟ್ಟಿರುವ ಕಾಂಗ್ರೆಸ್ ಬಣ, ಈವರೆಗೂ ಈ ವರ್ಗಕ್ಕೆ ಟಿಕೆಟ್ ನೀಡದಿರುವುದೇ ಪಕ್ಷದ ಹಿನ್ನಡೆಗೆ ಕಾರಣ ಎಂದು ಹೈಕಮಾಂಡ್ ಎದುರು ದೊಡ್ಡ ಲೆಕ್ಕಾಚಾರದ ಪಟ್ಟಿ ಮುಂದಿಟ್ಟಿದೆ.
ಕಳೆದ ಬಾರಿ ಮೋದಿ ಅಲೆಯಲ್ಲೂ 4.96 ಲಕ್ಷ ಮತ ಪಡೆದಿದ್ದ ರಾಜ್ಯದಲ್ಲೇ ಕಾಂಗ್ರೆಸ್‌ನ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದ ವೀಣಾ ಕಾಶಪ್ಪನವರ ಸೋತರೂ ನಿರಂತರವಾಗಿ ಕ್ಷೇತ್ರ ಸುತ್ತಾಟ ಮುಂದುವರಿಸಿದ್ದಾರೆ. ಕ್ಷೇತ್ರದ ಮೇಲೆ ಗಟ್ಟಿ ಹಿಡಿತ ಹಾಗೂ ಯುವ ಸಮೂಹದ ಬೆಂಬಲ ಅವರಿಗಿದ್ದರೂ ಪಕ್ಷದ ಇತರ ನಾಯಕರು ಒಟ್ಟಾಗಿ ಚುನಾವಣೆ ನಡೆಸುತ್ತಾರಾ ಎಂಬ ಆತಂಕವೂ ಕಾಡುತ್ತಿದೆ.
ಮತ್ತೂಂದೆಡೆ ಕಾಂಗ್ರೆಸ್‌ನಿಂದ ಜಮಖಂಡಿಯ ಮಾಜಿ ಶಾಸಕ ಆನಂದ ನ್ಯಾಮಗೌಡ ಮತ್ತು ಬೀಳಗಿಯ ಧಣಿ ಬಸವಪ್ರಭು ಸರನಾಡಗೌಡ ಹೆಸರು ಮುಂಚೂಣಿಗೆ ಬಂದಿದೆ. ಗದ್ದಿಗೌಡರೇ ಬಿಜೆಪಿ ಅಭ್ಯರ್ಥಿಯಾದರೆ ಅವರದೇ ಜಾತಿಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ತಂತ್ರಗಾರಿಕೆ ನಡೆಯುತ್ತಿದೆ ಎನ್ನಲಾಗಿದೆ. ಕಳೆದ ಎರಡು ದಶಕಗಳಿಂದಲೂ ಈ ಕ್ಷೇತ್ರಕ್ಕೆ ಪ್ರತಿ ಬಾರಿ ಸಚಿವ ಶಿವಾನಂದ ಪಾಟೀಲ್ ಹೆಸರು ಕೇಳಿಬರುತ್ತಿದೆ. 2019ರ ಲೋಕ ಚುನಾವಣೆ ಉಸ್ತುವಾರಿ ನಿರ್ವಹಿಸಿದ ಬಳಿಕವಂತೂ ಇದು ಮತ್ತಷ್ಟು ಜೋರಾಗಿದೆ. ಹೀಗಾಗಿ ಈ ಬಾರಿ ಕೊನೆ ಘಳಿಗೆಯಲ್ಲಿ ಅವರೇ ಅಭ್ಯರ್ಥಿಯಾದರೂ ಅಚ್ಚರಿ ಇಲ್ಲ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿದೆ.
ಅಹಿಂದ ಕೋಟಾದಡಿ ಕೆಪಿಸಿಸಿ ಸದಸ್ಯೆ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ. ಅವರೊಂದಿಗೆ ಜಿ.ಪಂ. ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಡಿಸಿಸಿ ಬ್ಯಾಂಕ್ ನಿರ್ದೇಶಕ- ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಕೂಡ ಟಿಕೆಟ್ ಕೇಳಿದ್ದಾರೆ.
ಶ್ರೀಶೈಲ.ಕೆ.ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.