ಶಿವದೂತೆ ಗುಳಿಗೆ ಚಾರಿತ್ರಿಕ ಸಾಧನೆ: ಶ್ರೀ ವಿನಯ ಗುರೂಜಿ
Team Udayavani, Jan 12, 2024, 1:27 AM IST
ಮಂಗಳೂರು: ನಾಟಕ ಚಲನಚಿತ್ರಗಳಿಗೆ ಜನರ ಮನ ಪರಿವರ್ತನೆ ಮಾಡುವ ಅದ್ಭುತ ಶಕ್ತಿ ಇದೆ. ವಿಜಯಕುಮಾರ್ ಕೊಡಿಯಾಲಬೈಲ್ ಅವರು ಶಿವದೂತೆ ಗುಳಿಗೆ ನಾಟಕದ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ್ದು ಇನ್ನಷ್ಟು ಹೊಸ ಪ್ರಯೋಗ ಮಾಡಿ ಭಾಷೆ ನುಡಿಯ ಪ್ರಾತಿನಿಧ್ಯವನ್ನು ಜಗತ್ತಿಗೆ ತೋರಿಸುವಂತಾಗಲಿ ಎಂದು ಕೊಪ್ಪ ಹರಿಹರಪುರ ದತ್ತಾಶ್ರಮ ಸ್ವರ್ಣ ಪೀಠಿಕಾಪುರ ಗೌರಿಗದ್ದೆಯ ಅವಧೂತರಾದ ಶ್ರೀ ವಿನಯ ಗುರೂಜಿ ಹೇಳಿದರು.
ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರ ಅಭಿನಯದ “ಶಿವದೂತೆ ಗುಳಿಗೆ’ ನಾಟಕದ 555ನೇ ಪ್ರದರ್ಶನದ ಸಂಗಮ ಕಾರ್ಯಕ್ರಮವನ್ನು ಅಡ್ಯಾರ್ ಗಾರ್ಡನ್‌ನಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕ ಬರೆಯುವುದು ನಿಲ್ಲಿಸುತ್ತೇನೆ ಎಂದವರಿಗೆ ಗುರುಗಳ ಪ್ರೇರಣೆಯಂತೆ ಎರಡು ಪೆನ್ನು ನೀಡಿದ್ದೆ. ಅದರಿಂದ ಬರೆದ “ಶಿವದೂತೆ ಗುಳಿಗೆ’ ಇಂದು ಲೋಕ ಪ್ರಸಿದ್ಧವಾಗಿದೆ. ದ.ಕ. ಜಿಲ್ಲೆ ದಿವ್ಯ ಕ್ಷೇತ್ರ. ತುಳುನಾಡಿನ ಮಣ್ಣು ಕಾಶಿಯ ಮಣ್ಣು. ಕೋಟಿ – ಚೆನ್ನಯ, ಗುಳಿಗ ಕೊಡಮಣಿತ್ತಾಯ, ಅಣ್ಣಪ್ಪ, ಶಿವ, ದುರ್ಗಾ ಕ್ಷೇತ್ರಗಳು ಈ ನಾಡನ್ನು ಶ್ರೇಷ್ಠ ವಾಗಿಸಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, “ಶಿವದೂತೆ ಗುಳಿಗೆ’ ನಾಟಕವಾಗಿ ಮಾತ್ರ ಇರಬಾರದು. ಚಲನಚಿತ್ರವಾಗಿ ದೇಶದ ಜನರು ನೋಡಬೇಕು ಎಂದು ತೀರ್ಮಾನಿಸಲಾಗಿದೆ. ಅದಕ್ಕಾಗಿ ತುಳು, ಕನ್ನಡ, ಮಲಯಾಳ, ತಮಿಳು, ಹಿಂದಿ ಭಾಷೆಗಳಲ್ಲಿ ಹೊರತರಲಾಗುವುದು ಎಂದರು.
ಸಮ್ಮಾನ- ಗೌರವಾರ್ಪಣೆ
ಪತ್ರಕರ್ತ, ರಂಗಕರ್ಮಿ ಪರಮಾನಂದ ವಿ. ಸಾಲಿಯಾನ್ ಅವರಿಗೆ 2024ನೇ ವರ್ಷದ ದಿ| ವನಿತಾ ಆನಂದ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ನಿ ಲೋಲಾಕ್ಷಿ ಜತೆಗಿದ್ದರು. ಶಿವದೂತೆ ಗುಳಿಗೆ ನಾಟಕದ ಕಲಾವಿದರು, ತಂತ್ರಜ್ಞರನ್ನು, ಸಹಕಾರ ನೀಡಿದವರನ್ನು, ಪ್ರಾಯೋಜಕರನ್ನು ಗೌರವಿಸಲಾಯಿತು.
ಗ್ರೀನ್ ಹೀರೋ ಆಫ್ ಇಂಡಿಯಾ ಆರ್.ಕೆ. ನಾರ್ಯ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆkಈ., ಮುಂಬಯಿ ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಕುಮಾರ್‌ಎನ್.ಬಂಗೈರ, ಉದ್ಯಮಿ ಶಶಿಧರರ ಶೆಟ್ಟಿ ಬರೋಡ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ನಟ, ನಿರ್ದೇಶಕ ಕಾಸರಗೋಡು ಚಿನ್ನಾ, ಪ್ರಕಾಶ್ ಪಾಂಡೇಶ್ವರ, ದುಬಾೖ ಉದ್ಯಮಿ ಹರೀಶ್ ಬಂಗೇರ ಮುಖ್ಯ ಅತಿಥಿಗಳಾಗಿದ್ದರು.
ಚಿತ್ರರಂಗದ ಪ್ರಮುಖರಾದ ಹಿರಿಯ ಚಲನಚಿತ್ರ ನಿರ್ದೇಶಕ ನಿರ್ಮಾಪಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ನಿರೂಪಕಿ ಅನುಶ್ರೀ ಭಾಗವಹಿಸಿದ್ದರು. ರೂಪಾ ಕೊಡಿಯಾಲಬೈಲ್ ಉಪಸ್ಥಿತರಿದ್ದರು.
ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲಬೈಲ್ ಪ್ರಸ್ತಾವನೆಗೈದು, ಮೊದಲ ಪ್ರದರ್ಶನದಿಂದಲೇ “ಶಿವದೂತೆ ಗುಳಿಗೆ’ ನಾಟಕ ಚಾರಿತ್ರಿಕ ದಾಖಲೆಗೆ ನಾಟಕ ಮುನ್ನುಡಿ ಬರೆಯಿತು. ದೇಶ, ವಿದೇಶದಲ್ಲಿ ಯಶಸ್ವಿ ಪ್ರದರ್ಶನ ನಡೆಯುತ್ತಿದೆ. ಸದ್ಯ ತುಳು ಹಾಗೂ ಕನ್ನಡ ಪ್ರದರ್ಶನ ನಡೆಯುತ್ತಿದ್ದು, ಸದ್ಯದಲ್ಲಿ ಮಲಯಾಳ ಹಾಗೂ ಇತರ ಭಾಷೆಗಳಲ್ಲಿಯೂ ನಾಟಕ ಪ್ರದರ್ಶನವಾಗಲಿದೆ ಎಂದರು.
ಡಾ| ಪ್ರಿಯಾ ಹರೀಶ್, ಸಾಹಿಲ್ ರೈ ನಿರೂಪಿಸಿದರು. ರಮೇಶ್ ಕಲ್ಲಡ್ಕ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಿವದೂತೆ ಗುಳಿಗೆ 555ನೇ ಪ್ರದರ್ಶನ ನಡೆಯಿತು.
ಚಲನಚಿತ್ರವಾಗಲಿದೆ “ಶಿವದೂತೆ ಗುಳಿಗೆ’
ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ ಎಂಎನ್‌ಆರ್ ಪ್ರೊಡಕ್ಷನ್ ನಡಿ “ಶಿವದೂತೆ ಗುಳಿಗೆ’ ಚಲನಚಿತ್ರವಾಗಿ ಶೀಘ್ರದಲ್ಲೇ ತೆರೆಯ ಮೇಲೆ ಮೂಡಿ ಬರಲಿದೆ. ಎಂಎನ್‌ಆರ್ ಪ್ರೊಡಕ್ಷನ್‌ನಡಿ ನಿರ್ಮಾಣವಾಗಲಿರುವ “ಡಾಕ್ಟ್ರಾ ಭಟ್ರಾ? ಮತ್ತು “ಶಿವದೂತೆ ಗುಳಿಗೆ’ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಇದೇ ವೇಳೆ “ಗಬ್ಬರ್‌ಸಿಂಗ್’ ಚಲನಚಿತ್ರದ ಪೋಸ್ಟರನ್ನು ಕೂಡ ಬಿಡುಗಡೆಗೊಳಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.