![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 13, 2024, 5:57 AM IST
ರಾಮನಗರ: ಯಾವತ್ತಿಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಕದನಕಣವಾಗಿಯೇ ರಾಜ್ಯದ ಗಮನಸೆಳೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಒಂದು. ಹಿಂದಿನ ಕನಕಪುರ ಕ್ಷೇತ್ರವಾಗಿದ್ದ ಇದು ಹಿಂದಿನಿಂದಲೂ ದೇವೇಗೌಡರ ಕುಟುಂಬದ ಅಖಾಡ ಎಂದೇ ಖ್ಯಾತ. ಇತ್ತೀಚೆಗಿನ ವರ್ಷಗಳಲ್ಲಿ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರತಿಷ್ಠೆಯ ಕಣವಾಗಿ ಇದು ಪರಿಣಮಿಸಿದೆ.
ಒಂದು ಅವಧಿಯಲ್ಲಿ ಬಿಜೆಪಿ ಗೆದ್ದಿದ್ದು ಬಿಟ್ಟರೆ ಉಳಿದೆಲ್ಲ ಸಂದರ್ಭಗಳಲ್ಲಿ ಇದು ಜನತಾ ಪರಿವಾರ ಮತ್ತು ಕಾಂಗ್ರೆಸ್‌ನ ಜಹಗೀರಾಗಿಯೇ ಉಳಿದುಕೊಂಡಿದೆ. 1996ರಲ್ಲಿ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದು ಇಲ್ಲಿಯೇ. 2002ರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇಲ್ಲಿ ಗೆದ್ದಿದ್ದರೆ, 2004ರಲ್ಲಿ ತೇಜಸ್ವಿನಿ ಶ್ರೀ ರಮೇಶ್ ವಿರುದ್ಧ ಸೋಲನ್ನಪ್ಪಿದ್ದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿ ಬದಲಾದ ನಂತರ 2009ರಲ್ಲಿ ಕುಮಾರಸ್ವಾಮಿ ಇಲ್ಲಿ ಗೆದ್ದಿದ್ದರು. ನಂತರ ಸತತ ಮೂರು ಸಲ ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಇಲ್ಲಿ ಗೆಲ್ಲುತ್ತಾ ಬಂದಿದ್ದಾರೆ. ಈ ಮೂಲಕ ಡಿ.ಕೆ.ಶಿವಕುಮಾರ್ ಈ ಕ್ಷೇತ್ರವನ್ನು ಪ್ರತಿಷ್ಠೆಯ ಪಣವಾಗಿಟ್ಟುಕೊಂಡಿದ್ದಾರೆ.
ಈ ಸಲವೂ ಹಾಗೆಯೇ ರಾಜ್ಯದ ಹಾಟ್‌ಕ್ಷೇತ್ರಗಳಲ್ಲಿ ಇದೂ ಒಂದಾಗಲಿದೆ. ಈ ಕ್ಷೇತ್ರವನ್ನು ಕಸಿಯಲು ಈಬಾರಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ತಂತ್ರ ರೂಪಿಸಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ.
ಮತ್ತೆ ಕಣಕ್ಕಿಳಿಯುತ್ತಾರಾ ಡಿ.ಕೆ. ಸುರೇಶ್: ಕೆಲ ತಿಂಗಳ ಹಿಂದೆ ನನಗೆ ರಾಜಕೀಯ ಬೇಸರವಾಗಿದೆ. ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ರಾಜಕೀಯ ನಿವೃತ್ತಿಯ ಮಾತು ಗಳನ್ನು ಸಂಸದ ಡಿ.ಕೆ.ಸುರೇಶ್ ಆಡಿದ್ದರು. ಆದರೆ, ಕಳೆದ ನವೆಂಬರ್‌ನಲ್ಲಿ ಬೆಂಗಳೂರು ಗ್ರಾಮಾಂ ತರ ಲೋಕಸಭಾ ಅಭ್ಯರ್ಥಿ ಆಯ್ಕೆಗೆ ಸಂಬಂ ಧಿಸಿದಂತೆ ನಡೆದ ಪಕ್ಷದ ಮುಖಂ ಡರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಡಿ.ಕೆ.ಸುರೇಶ್ ಒಬ್ಬರ ಹೆಸರೇ ಶಿಫಾರಸು ಮಾಡಲಾಗಿದೆ. ಕೆಲ ತಿಂಗಳಿಂದ ಡಿ.ಕೆ.ಸುರೇಶ್ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ಮಾಡುತ್ತಿದ್ದಾರೆ.
ಈ ಮಧ್ಯೆ ಡಿ.ಕೆ.ಸುರೇಶ್ ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡಲಿದ್ದಾರೆ, ಇಲ್ಲಿಗೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಕುಸುಮಾ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದು ಅವರ ತವರು ಕುಣಿಗಲ್‌ಸಹ ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದು ಇವರ ಹೆಸರು ಕೇಳಿಬರುವುದಕ್ಕೆ ಕಾರಣ.
ಮೈತ್ರಿ ಅಭ್ಯರ್ಥಿಯಾರು..?: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿರುವುದು ಕ್ಷೇತ್ರ ವ್ಯಾಪ್ತಿಯಲ್ಲಿ ಎರಡೂ ಪಕ್ಷದ ಮುಖಂಡರ ನಡುವೆ ಹುಮ್ಮಸ್ಸು ಮೂಡಿಸಿದೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬದ್ಧ ದ್ವೇಷಿಗಳಾಗಿದ್ದ ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಇದೀಗ ದೋಸ್ತಿಯಾಗಿದ್ದು, ಸಂಕ್ರಾಂತಿ ಬಳಿಕ ಇಬ್ಬರು ಮುಖಂಡರು ಒಟ್ಟಿಗೆ ಕಾಣಿಸಿಕೊಳ್ಳಲು ಸಿದ್ಧವಾಗುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಯಾರು ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ನಗರ ಪ್ರದೇಶವೂ ಸೇರುವ ಕಾರಣ ಬಿಜೆಪಿಗೆ ಈ ಕ್ಷೇತ್ರ ಬಿಟ್ಟುಕೊಡುವ ಚಿಂತನೆ ಮೈತ್ರಿ ಪಾಳಯದಲ್ಲಿದೆ. ಈ ರೀತಿ ಆದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ಮೈತ್ರಿ ಕೂಟದಿಂದ ಸ್ಪರ್ಧೆಮಾಡುವ ಸಾಧ್ಯತೆ ಇದೆ. ಆದರೆ, ನಾನು ಸ್ಪರ್ಧಿಸುವುದಿಲ್ಲ ಎಂದು ಯೋಗೇಶ್ವರ್ ಹೇಳಿರುವುದರಿಂದ ಇಲ್ಲಿ ಕುಮಾರಸ್ವಾಮಿಯವರೇ ಕಣಕ್ಕಿಳಿಯಬೇಕು ಎಂಬ ಒತ್ತಡ ಇಲ್ಲಿ ವ್ಯಕ್ತವಾಗುತ್ತಿದೆ. ಅವರ ಮುಂದೆ ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಆಯ್ಕೆ ಇದೆ. ಅವರ ಹೆಜ್ಜೆ ಮುಂದೇನು ಎನ್ನುವುದು ನಿಗೂಢ. ನ್ನು ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್ ಅವರ ಹೆಸರೂ ಲೋಕಸಭಾ ರೇಸಿನಲ್ಲಿ ಚಾಲ್ತಿಯಲ್ಲಿದೆ.
ಒಂದು ವೇಳೆ ಮೈತ್ರಿ ಲೆಕ್ಕಾಚಾರದಲ್ಲಿ ಕ್ಷೇತ್ರ ಬಿಜೆಪಿಗೆ ಒಲಿದರೆ, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಸಿ.ಎನ್. ಅಶ್ವತ್ಥ್ನಾರಾಯಣ್ ಅಥವಾ ಕಳೆದ ಬಾರಿ ಸ್ಪರ್ಧೆಮಾಡಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ್‌ಗೌಡ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರವೂ ಇದೆ.
ಸು.ನಾ.ನಂದಕುಮಾರ್
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.