Dental: ದಂತ ವೈದ್ಯಕೀಯ ಚಿಕಿತ್ಸೆಯಲ್ಲಿ ವೈದ್ಯಕೀಯ ಚರಿತ್ರೆಯ ಪ್ರಾಮುಖ್ಯ
Team Udayavani, Jan 14, 2024, 2:20 PM IST
ನಾವು ದಂತ ವೈದ್ಯರು ಬಾಯಿಯನ್ನು ಇಡೀ ದೇಹದ ಕನ್ನಡಿಯಾಗಿ ಕಾಣುತ್ತೇವೆ. ಹಲ್ಲುಗಳು, ವಸಡು ಮತ್ತು ಬಾಯಿಯ ಇತರ ಅಂಗಗಳು ಇಡೀ ದೇಹಾರೋಗ್ಯವನ್ನು ಪ್ರತಿಫಲಿಸುತ್ತವೆ. ರಕ್ತಹೀನತೆ, ಮಧುಮೇಹ, ರಕ್ತದ ಕ್ಯಾನ್ಸರ್ ಇತ್ಯಾದಿ ದೇಹಾಂತರ್ಗತ ರೋಗಗಳನ್ನು ಅನೇಕ ಬಾರಿ ದಂತವೈದ್ಯರು ಮೊತ್ತಮೊದಲಾಗಿ ಗುರುತಿಸುತ್ತಾರೆ. ಆದ್ದರಿಂದ ಬಾಯಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ರೋಗಿಯ ಒಟ್ಟಾರೆ ಆರೋಗ್ಯ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳುವುದು ತೀರಾ ಮಹತ್ವದ್ದಾಗಿದೆ. ರೋಗಿಯ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಅತ್ಯುತ್ತಮ ಚಿಕಿತ್ಸೆ ನೀಡುವುದು ಇದರಿಂದ ಸಾಧ್ಯವಾಗುತ್ತದೆ.
ದಂತವೈದ್ಯರು ಕೇವಲ ಹಲ್ಲುಗಳು ಮತ್ತು ವಸಡುಗಳಿಗೆ ಮಾತ್ರ ಚಿಕಿತ್ಸೆ ನೀಡುವವರಾಗಿರುವುದರಿಂದ ಅವರಿಗೆ ನಾವು ತೆಗೆದುಕೊಳ್ಳುತ್ತಿರುವ ಇತರ ಔಷಧಗಳು, ದೇಹಾರೋಗ್ಯ ವಿವರಗಳನ್ನು ನೀಡುವ ಅಗತ್ಯವಿಲ್ಲ ಎಂಬುದಾಗಿ ಅನೇಕ ರೋಗಿಗಳು ಭಾವಿಸಿ ತಮ್ಮ ಪೂರ್ಣ ವೈದ್ಯಕೀಯ ಚರಿತ್ರೆಯನ್ನು ದಂತವೈದ್ಯರ ಜತೆಗೆ ಹಂಚಿಕೊಳ್ಳದೆ ಇರುವುದನ್ನು ನಾವು ಕಾಣುತ್ತೇವೆ.
ಬಾಯಿ ಒಂದು ಪ್ರತ್ಯೇಕ ಅಂಗವಾಗಿದ್ದು, ದೇಹದ ಒಟ್ಟು ಆರೋಗ್ಯದ ಜತೆಗೆ ಅದಕ್ಕೆ ಸಂಬಂಧ ಇಲ್ಲ ಎಂಬುದಾಗಿ ಅನೇಕ ಮಂದಿ ತಪ್ಪು ತಿಳಿವಳಿಕೆ ಹೊಂದಿರುತ್ತಾರೆ. ರೋಗಿಗಳು ತಮ್ಮ ಆರೋಗ್ಯ ಚರಿತ್ರೆಯನ್ನು ನೀಡದೆ ಇರುವುದರಿಂದ ರೂಢಿಗತ ದಂತ ವೈದ್ಯಕೀಯ ಚಿಕಿತ್ಸೆಯ ಸಂದರ್ಭಗಳಲ್ಲಿ ಪ್ರಮಾದಗಳು ಸಂಭವಿಸಿ ಗಂಭೀರ ಆರೋಗ್ಯ ಸಮಸ್ಯೆಗಳು ಉದ್ಭವಿಸಿದ ಬಗ್ಗೆ ನಾವು ಪತ್ರಿಕೆಗಳಲ್ಲಿ ಸುದ್ದಿಗಳನ್ನು ಓದಿರುತ್ತೇವೆ. ಈ ಲೇಖನದಲ್ಲಿ ದಂತವೈದ್ಯರ ಜತೆಗೆ ರೋಗಿಗಳು ಹಂಚಿಕೊಳ್ಳಲೇ ಬೇಕಾದ ತಮ್ಮ ದೇಹಾರೋಗ್ಯ ಚರಿತ್ರೆಯ ವಿವರಗಳನ್ನು ನೀಡಲಾಗಿದೆ.
- ಔಷಧ ಅಲರ್ಜಿ
ಔಷಧ ಅಲರ್ಜಿ ಎಂದರೆ ಎನ್‌ಎಸ್‌ಎಐಡಿಗಳು (ನೋವು ನಿವಾರಕಗಳು) ಅಥವಾ ಪೆನಿಸಿಲಿನ್, ಸಲ್ಫನಮೈಡ್‌ಗಳು, ಸೆಫಾಲೊನ್ಪೋರಿನ್ ಗಳು ಮತ್ತು ಕ್ವಿನೊಲೋನ್‌ಗಳಂತಹ ಆ್ಯಂಟಿಬಯಾಟಿಕ್‌ಗಳನ್ನು ಸೇವಿಸಿದ ತತ್‌ಕ್ಷಣ ಉಂಟಾಗುವ ಚರ್ಮದ ಮೇಲೆ ದದ್ದುಗಳು, ತುರಿಕೆ, ರಕ್ತದೊತ್ತಡ ಕುಸಿತ, ನಾಡಿಮಿಡಿತ ಕಡಿಮೆಯಾಗುವುದು ಮತ್ತು ಉಸಿರಾಟಕ್ಕೆ ಕಷ್ಟದಂತಹ ಲಕ್ಷಣಗಳು. ವ್ಯಕ್ತಿಯೊಬ್ಬರು ಈ ಹಿಂದೆ ಅಲರ್ಜಿ/ ಅನಾಫಿಲಾಕ್ಟಿಕ್ ಪ್ರತಿಕ್ರಿಯೆಯನ್ನು ಅನುಭವಿಸಿದ್ದರೆ ಅದು ಪುನರಾವರ್ತನೆಯಾಗುವ ಸಾಧ್ಯತೆಗಳು ಇರುತ್ತವೆ.
ದಂತವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಪೆನಿಸಿಲಿನ್ ಸಾಮಾನ್ಯವಾಗಿ ಶಿಫಾರಸು ಮಾಡಲಾಗುವ ಆ್ಯಂಟಿಬಯಾಟಿಕ್ ಆಗಿರುವುದರಿಂದ ರೋಗಿ ಈ ಔಷಧ ಅಲರ್ಜಿಯ ಹಿನ್ನೆಲೆಯನ್ನು ದಂತವೈದ್ಯರಿಗೆ ತಿಳಿಸುವುದು ತುಂಬಾ ಮುಖ್ಯವಾಗುತ್ತದೆ. ರೋಗಿಗಳು ತಮ್ಮ ವೈದ್ಯರಿಂದ ತಮ್ಮ ಔಷಧ ಅಲರ್ಜಿಯ ವಿವರಗಳನ್ನು ಹೊಂದಿರುವ ಮಾಹಿತಿಪತ್ರವನ್ನು ಪಡೆದು ಜತೆಗಿರಿಸಿಕೊಳ್ಳುವುದು ಉತ್ತಮ. ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ಅಂಶವೇನೆಂದರೆ, ಕೆಲವು ಔಷಧಗಳನ್ನು ತೆಗೆದುಕೊಂಡ ಸಂದರ್ಭಗಳಲ್ಲಿ ಉಂಟಾಗುವ ಆಮ್ಲೀಯತೆ, ಹೊಟ್ಟೆ ತೊಳೆಸುವಿಕೆ, ವಾಂತಿ ಅಥವಾ ಬೇಧಿಯಂತಹ ಅಡ್ಡ ಪರಿಣಾಮಗಳಿಗೂ ಔಷಧ ಅಲರ್ಜಿಗೂ ವ್ಯತ್ಯಾಸವಿದೆ.
- ಪ್ರಸ್ತುತ ತೆಗೆದುಕೊಳ್ಳುತ್ತಿರುವ ಔಷಧಗಳು
ರೋಗಿ ಪ್ರಸ್ತುತ ತೆಗೆದುಕೊಳ್ಳುತ್ತಿರುವ ಔಷಧಗಳು ಬಾಯಿಯ ಮೇಲೆ ಬಾಯಿ ಒಣಗುವಿಕೆ, ರುಚಿ ಗ್ರಹಿಸುವ ಶಕ್ತಿ ನಷ್ಟ, ಹಲ್ಲುಗಳು ಬಣ್ಣಗೆಡುವುದು ಇತ್ಯಾದಿ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದಾಗಿದೆ. ಜತೆಗೆ ಈ ಔಷಧಗಳು ದಂತವೈದ್ಯಕೀಯ ಚಿಕಿತ್ಸಾ ಪ್ರಕ್ರಿಯೆಯ ಫಲಿತಾಂಶದ ಮೇಲೆಯೂ ಪರಿಣಾಮ ಬೀರಬಹುದಾಗಿದೆ. ಇವುಗಳಲ್ಲಿ ಮುಖ್ಯವಾದವುಗಳು ಎಂದರೆ-
- ಆ್ಯಂಟಿಪ್ಲೇಟ್‌ಲೆಟ್/ ಆ್ಯಂಟಿಕೊಆಗ್ಯುಲೆಂಟ್ ಔಷಧಗಳು– ಈ ಔಷಧಗಳು ಹಲ್ಲು ಕೀಳುವುದು ಮತ್ತಿತರ ಶಸ್ತ್ರವೈದ್ಯಕೀಯ ಪ್ರಕ್ರಿಯೆ ನಡೆಸುವ ಸಂದರ್ಭಗಳಲ್ಲಿ ತೀವ್ರ ರಕ್ತಸ್ರಾವಕ್ಕೆ ಕಾರಣವಾಗುತ್ತವೆ. ಆದ್ದರಿಂದ ದಂತವೈದ್ಯಕೀಯ ಚಿಕಿತ್ಸೆಗೆ ಒಳಗಾಗುವುದಕ್ಕೆ 5ರಿಂದ 7 ದಿನಗಳ ಮುಂಚಿತವಾಗಿ ಈ ಔಷಧಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕಾಗುತ್ತದೆ. ಆ್ಯಂಟಿಪ್ಲೇಟ್‌ಲೆಟ್/ ರಕ್ತ ತೆಳುಗೊಳಿಸುವ ಇಕೊಸ್ಪಿರಿನ್, ಡೆಪ್ಲಾಟ್, ಕ್ಲಾಪಿವಾಸ್, ವಾಫ್ì ಇತ್ಯಾದಿಗಳನ್ನು ವೈದ್ಯರ ಸಲಹೆಯನ್ನು ಪಡೆದೇ ಸ್ಥಗಿತಗೊಳಿಸಬೇಕು; ರೋಗಿಗಳು ತಾವೇ ಆಗಿ ನಿಲ್ಲಿಸಬಾರದು. ಕೆಲವು ಪ್ರಕರಣಗಳಲ್ಲಿ ರಕ್ತ ತೆಳುಗೊಳಿಸುವ ಔಷಧಗಳನ್ನು ಆ್ಯಂಟಿ ಕೊಲೆಸ್ಟರಾಲ್ ಔಷಧಗಳ ಜತೆಗೆ ಸಂಯೋಜಿಸಿ ನೀಡಿರುತ್ತಾರೆ, ಉದಾಹರಣೆಗೆ, ರೋಸ್ ಡೇ. ದಂತ ವೈದ್ಯಕೀಯ ಚಿಕಿತ್ಸೆಯನ್ನು ಕೈಗೊಳ್ಳುವಾಗ ಈ ನಿರ್ದಿಷ್ಟ ವೈದ್ಯಕೀಯ ವಿವರವು ಅತ್ಯಂತ ಮುಖ್ಯವಾದುದಾಗಿರುತ್ತದೆ.
- ಇನ್ಸುಲಿನ್ ಇಂಜೆಕ್ಷನ್‌ಗಳು – ಇನ್ಸುಲಿನ್ ಔಷಧದ ಕಾರ್ಯಚಟುವಟಿಕೆಯ ಅತ್ಯುಚ್ಚ ಸ್ಥಿತಿಯ ಅವಧಿಯಲ್ಲಿ ದಂತವೈದ್ಯಕೀಯ ಚಿಕಿತ್ಸೆಗಳು ನಡೆದರೆ ಹೈಪೊಗ್ಲೈಸೇಮಿಕ್ ಆಘಾತ ಉಂಟಾಗುವ ಸಂಭವ ಇರುತ್ತದೆ. ಚಿಕಿತ್ಸೆ ಒದಗಿಸುತ್ತಿರುವ ದಂತ ವೈದ್ಯರಿಗೆ ಈ ವಿವರಗಳನ್ನು ನೀಡುವುದರಿಂದ ಚಿಕಿತ್ಸೆಯ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
- ಅತ್ಯುಚ್ಚ ಕ್ರಿಯಾಶೀಲತೆಯ ಆ್ಯಂಟಿ–ರಿಟ್ರೊವೈರಲ್ ಥೆರಪಿ (ಎಚ್ ಎಎಆರ್‌ಟಿ): ದಂತ ವೈದ್ಯಕೀಯ ಚಿಕಿತ್ಸೆಯನ್ನು ಆರಂಭಿಸುವುದಕ್ಕೆ ಮುನ್ನ ಅಗತ್ಯವಾದ ಸೋಂಕು ನಿಯಂತ್ರಣ ಕ್ರಮಗಳನ್ನು ಆರಂಭಿಸಬೇಕಾಗುತ್ತದೆ.
- ಆ್ಯಂಟಿಡಿಪ್ರಸೆಂಟ್‌ಗಳು: ಈ ಬಗ್ಗೆ ಮಾಹಿತಿ ನೀಡುವುದರಿಂದ ಔಷಧ ಪ್ರತಿವರ್ತನೆಯನ್ನು ತಡೆಗಟ್ಟಬಹುದಾಗಿದೆ. 5. ಝೊಲೆಡ್ರೊನಿಕ್ ಆ್ಯಸಿಡ್ ಡಿರೈವೇಟಿವ್ ಗಳ ಜತೆಗೆ ಕ್ಯಾಲ್ಸಿಯಂ ಸಪ್ಲಿಮೆಂಟ್ ಗಳನ್ನು ನೀಡಲಾಗುತ್ತದೆ: ಶಸ್ತ್ರಕ್ರಿಯಾತ್ಮಕ ದಂತ ವೈದ್ಯಕೀಯ ಚಿಕಿತ್ಸೆಗಳು ದವಡೆಯ ಎಲುಬುಗಳ ನೆಕ್ರೋಸಿಸ್‌ಗೆ ಕಾರಣವಾಗಬಲ್ಲವು. ಈ ಔಷಧಗಳನ್ನು ಆರಂಭಿಸುವುದಕ್ಕೆ ಮುನ್ನ ಎಲ್ಲ ದಂತ ವೈದ್ಯಕೀಯ ಚಿಕಿತ್ಸೆಗಳನ್ನು ಪೂರೈಸಬೇಕು.
- ಸಿಸ್ಟೆಮಿಕ್ ಸ್ಟಿರಾಯ್ಡ್ ಗಳು: ದಂತ ವೈದ್ಯಕೀಯ ಚಿಕಿತ್ಸೆಗೆ ಮುನ್ನ ಔಷಧ ಡೋಸೇಜ್‌ಗಳನ್ನು ಸರಿಹೊಂದಿಸಬೇಕಾಗಿರುತ್ತದೆ. ನಿಮ್ಮ ವೈದ್ಯಕೀಯ ದಾಖಲಾತಿಯಲ್ಲಿ ದಾಖಲು ಮಾಡಿಕೊಳ್ಳಲಾಗಿರುವ ಎಲ್ಲ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ
3. ದೇಹವ್ಯವಸ್ಥೆಯ ಅನಾರೋಗ್ಯಗಳು
ರೋಗಿಗಳು ತಾವು ಹೊಂದಿರುವ ದೇಹವ್ಯವಸ್ಥೆಗೆ ಸಂಬಂಧಿಸಿದ ಅನಾರೋಗ್ಯಗಳ ಎಲ್ಲ ಮಾಹಿತಿಗಳನ್ನು ದಂತವೈದ್ಯರ ಜತೆಗೆ ಹಂಚಿಕೊಳ್ಳಬೇಕು. ಅತೀ ಸಾಮಾನ್ಯವಾದ ಇಂತಹ ಅನಾರೋಗ್ಯಗಳು ಎಂದರೆ ಅಧಿಕ ರಕ್ತದೊತ್ತಡ, ಮಧುಮೇಹ, ಅಪಸ್ಮಾರ, ಅಸ್ತಮಾ, ಹೃದ್ರೋಗಗಳು, ಮಾನಸಿಕ ಉದ್ವಿಗ್ನತೆ, ಖನ್ನತೆ, ಮೂತ್ರಪಿಂಡ ಕಾಯಿಲೆಗಳು, ಆರ್ಥೈಟಿಸ್, ಮೂತ್ರಪಿಂಡ/ ಹೃದಯ/ ಯಕೃತ್ ಕಸಿ, ಅಪಘಾತ, ಕೋವಿಡ್-19 ಸೋಂಕು, ಹೆಪಟೈಟಿಸ್, ಎಚ್‌ಐವಿ ಸೋಂಕು. ಜತೆಗೆ ಇವುಗಳಿಗಾಗಿ ತೆಗೆದುಕೊಳ್ಳುತ್ತಿರುವ ಔಷಧಗಳ ವಿವರಗಳನ್ನು ಕೂಡ ಒದಗಿಸಬೇಕು. ಬಾಲ್ಯಕಾಲದ ಕಾಯಿಲೆಗಳಾದ ಕುಸುಮ ರೋಗ (ಹೀಮೊಫೀಲಿಯಾ) ಮತ್ತು ಇನ್‌ಫೆಕ್ಟಿವ್ ಎಂಡೊಕಾರ್ಡೈಟಿಸ್ ಬಗ್ಗೆಯೂ ಮಾಹಿತಿ ನೀಡಬೇಕು. ದಂತ ವೈದ್ಯರಿಗೆ ವಿಶೇಷ ಸ್ಥಿತಿಗತಿಗಳಾದ ಗರ್ಭಧಾರಣೆ, ಕ್ಯಾನ್ಸರ್ ಮತ್ತು ಕ್ಯಾನ್ಸರ್ ಬಳಿಕದ ಚಿಕಿತ್ಸೆ ಮತ್ತು ದೀರ್ಘಕಾಲೀನ ಸ್ಟೀರಾಯ್ಡ ಚಿಕಿತ್ಸೆಯ ವಿವರಗಳನ್ನು ಕೂಡ ತಿಳಿಸಬೇಕು.
- ಇತ್ತೀಚೆಗಿನ ಆಸ್ಪತ್ರೆ ದಾಖಲೀಕರಣ
ರೋಗಿ ಯಾವುದೇ ಕಾರಣಕ್ಕಾಗಿ ಕಳೆದ ಆರು ತಿಂಗಳುಗಳ ಅವಧಿಯಲ್ಲಿ ಯಾವುದೇ ಶಸ್ತ್ರಚಿಕಿತ್ಸೆ/ ಆಸ್ಪತ್ರೆ ವಾಸ ಹೊಂದಿದ್ದರೆ ಈ ಬಗ್ಗೆ ಕೂಡ ದಂತ ವೈದ್ಯರಿಗೆ ಮಾಹಿತಿ ಒದಗಿಸಬೇಕು.
ಎಲ್ಲರೂ ತಮ್ಮ ದೇಹಾರೋಗ್ಯದ ಬಗ್ಗೆ ಕಡತವೊಂದನ್ನು (ಪ್ರತೀ ವರ್ಷಕ್ಕೆ ಒಂದು ಕಡತ) ಇರಿಸಿಕೊಳ್ಳಬೇಕು ಮತ್ತು ಅದರಲ್ಲಿ ಈ ಕೆಳಗಿನ ವಿವರಗಳನ್ನು ದಾಖಲಿಸಿಕೊಂಡಿರಬೇಕು.
- ವೈಯಕ್ತಿಕ ವಿವರಗಳು – ಹೆಸರು, ವಯಸ್ಸು, ಲಿಂಗ, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ವೈದ್ಯಕೀಯ ವಿಮಾ ವಿವರಗಳು, ಮಣಿಪಾಲ ಆರೋಗ್ಯ ಕಾರ್ಡ್ ಅಥವಾ ಇಂತಹ ಯಾವುದೇ ಕಾರ್ಡ್ ವಿವರಗಳು.
- ತುರ್ತು ಸಂದರ್ಭಗಳಲ್ಲಿ – ಸಂಪರ್ಕಿಸಬೇಕಾದವರ ಹೆಸರು, ನಿಮ್ಮ ಜತೆಗೆ ಅವರ ಸಂಬಂಧ, ದೂರವಾಣಿ ಸಂಖ್ಯೆ, ಪರ್ಯಾಯ ಸಂಪರ್ಕ ವ್ಯಕ್ತಿಯ ಹೆಸರು, ದೂರವಾಣಿ ಸಂಖ್ಯೆ.
- ವೈದ್ಯಕೀಯ ಅಲರ್ಟ್- ಯಾವುದೇ ಔಷಧಕ್ಕೆ ಅಲರ್ಜಿ ಹೊಂದಿದ್ದರೆ ಅದರ ವಿವರ/ ಪೇಸ್‌ಮೇಕರ್/ಆ್ಯನುರಿಸ್ಮಲ್ ಕ್ಲಿಪ್/ ಸೊಂಟ ಅಥವಾ ಮೊಣಕಾಲಿನ ಸಂಧಿ ಕಸಿಯಾದ ವಿವರ.
- ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವಿಭಾಗ.
- ಡಿಸಾcರ್ಜ್ ಸಮ್ಮರಿ – ಇದ್ದರೆ
- ಬಯಾಪ್ಸಿ ವರದಿಗಳು – ಇದ್ದರೆ
- ಸ್ಕ್ಯಾನ್ ವರದಿಗಳು – ಇದ್ದರೆ
- ಇತ್ತೀಚೆಗಿನ ಪ್ರಯೋಗಾಲಯ ವರದಿಗಳು
- ವೈದ್ಯರ ಪ್ರಿಸ್ಕ್ರಿಪ್ಶನ್‌ಗಳು
- ನಡೆಸಲಾಗಿರುವ ಚಿಕಿತ್ಸೆಯ ಬಿಲ್‌ಗಳು
- ಮುಂದಿನ ಆಸ್ಪತ್ರೆ ಭೇಟಿಯ ವೇಳೆ ನಡೆಸಬೇಕಾಗಿರುವ ಪರೀಕ್ಷೆ/ತಪಾಸಣೆಗಳ ಫಾರ್ಮ್ಗಳು
ನಿಮ್ಮ, ನಿಮ್ಮ ಪತಿ/ಪತ್ನಿ/ ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರ ವೈದ್ಯಕೀಯ ದಾಖಲೆ ಕಡತಗಳನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಿ. ರೋಗಿಗೆ ಸಂಬಂಧಿಸಿದ ಎಲ್ಲ ಪರೀಕ್ಷೆ/ತಪಾಸಣೆ/ಬಯಾಪ್ಸಿ ವಿವರಗಳನ್ನು ಅದರಲ್ಲಿ ಇರಿಸಿಕೊಳ್ಳಬೇಕು. ಆದ್ದರಿಂದ ಸಂಬಂಧಿಸಿದ ವಿಭಾಗ/ಆಸ್ಪತ್ರೆಯಿಂದ ಈ ವರದಿಗಳನ್ನು ಕೇಳಿ ಪಡೆಯಿರಿ. ಈ ದಾಖಲೆಗಳು/ ವಿವರಗಳ ಸಹಿತವಾಗಿಯೇ ದಂತ ವೈದ್ಯರನ್ನು ಸಂಪರ್ಕಿಸಿ. ಇವುಗಳು ಇಲ್ಲದೆ ಹೋದರೆ ನಿಮಗೆ ಸಂಪೂರ್ಣವಾದ ಚಿಕಿತ್ಸೆಯನ್ನು ಒದಗಿಸುವುದಕ್ಕೆ ಅವರಿಗೆ ಸಾಧ್ಯವಾಗಲಾರದು. ನಿಮ್ಮ ಆರೋಗ್ಯ ಸ್ಥಿತಿಯನ್ನು ವಿಶ್ಲೇಷಿಸಿದ ಬಳಿಕ ದಂತವೈದ್ಯರು ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ನೀವು ದಂತ ಚಿಕಿತ್ಸೆಗೆ ಒಳಗಾಗಲು ಅರ್ಹರಿದ್ದೀರಿ ಎಂಬ ಬಗ್ಗೆ ಲಿಖೀತ ಸಮ್ಮತಿ ಪತ್ರಕ್ಕಾಗಿ ವಿನಂತಿಸಿಕೊಳ್ಳಬಹುದು.
ಹಾಗೆಯೇ ರೋಗಿಗಳು ದಂತ ಇಂಪ್ಲಾಂಟ್ ಗಳು, ಮೆಟಾಲಿಕ್ ಫಿಲ್ಲಿಂಗ್, ಆರ್ ಸಿಟಿ ಬಳಿಕ ಮೆಟಲ್ ಕ್ರೌನ್ ಅಳವಡಿಕೆ, ಬಿಜ್‌ಗಳು, ಮೆಟಾಲಿಕ್ ಬ್ರೇಸ್ ಇತ್ಯಾದಿ ದಂತ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರೆ ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಇರಿಸಿಕೊಳ್ಳಬೇಕು. ಭವಿಷ್ಯದಲ್ಲಿ ಎಂಆರ್‌ಐಯಂತಹ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕಾಗಿದ್ದಲ್ಲಿ ಈ ಮಾಹಿತಿಯನ್ನು ಒದಗಿಸಬೇಕು.
ತಮ್ಮ ದೈಹಿಕ ಸ್ಥಿತಿಗತಿಯ ವಿವರಗಳನ್ನು ಪದೇಪದೆ ವಿವರಿಸಬೇಕಾಗುವುದರಿಂದ ಕಿರಿಕಿರಿಗೊಂಡು ರೋಗಿಗಳು ಅದನ್ನು ತುಂಬ ಕಿರಿದಾಗಿ ತಿಳಿಸಬಹುದು/ ಕೆಲವು ಮಾಹಿತಿಗಳನ್ನು ಮುಚ್ಚಿಡಬಹುದು. ಆದರೆ ನಾವು ನಿಮಗೆ ಉತ್ತಮ ಚಿಕಿತ್ಸೆಯನ್ನು ಒದಗಿಸಬೇಕಾದರೆ ನಿಮ್ಮ ದೇಹಾರೋಗ್ಯ ಸ್ಥಿತಿಗತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವುದು ಅಗತ್ಯ. ಆದ್ದರಿಂದ ಈ ವಿಚಾರದಲ್ಲಿ ನಮಗೆ ನೆರವಾಗುವ ಮೂಲಕ ನೀವು ಉತ್ಕೃಷ್ಟ ದರ್ಜೆಯ ಚಿಕಿತ್ಸೆಯನ್ನು ಪಡೆಯುವಂತೆ ಮಾಡಬಹುದಾಗಿದೆ.
ಹಾಲಿ ತೆಗೆದುಕೊಳ್ಳುತ್ತಿರುವ ಔಷಧಗಳ ಬಗ್ಗೆ ಮಾಹಿತಿ ಒದಗಿಸುವುದು ಹೇಗೆ?
- ವೈದ್ಯರ ಪ್ರಿಸ್ಕ್ರಿಪ್ಶನ್‌ಗಳನ್ನು ನಿಮ್ಮ ಜತೆಗೆ ಇರಿಸಿಕೊಳ್ಳಿ.
- ಔಷಧಗಳ ಪೊಟ್ಟಣ/ ಸ್ಟ್ರಿಪ್‌ಗ್ಳನ್ನು ನಿಮ್ಮ ಜತೆಗೆ ಇರಿಸಿಕೊಳ್ಳಿ.
- ನಿಮ್ಮ ಔಷಧಗಳ ವಿವರಗಳು ಇರುವ ಬಿಲ್‌ಗಳನ್ನು ಇರಿಸಿಕೊಳ್ಳಿ.
- ಔಷಧಗಳ ಫೊಟೊ ತೆಗೆದಿರಿಸಿಕೊಳ್ಳಿ.
- ಮೌಖೀಕವಾಗಿ ಔಷಧಗಳು, ಡೋಸೇಜ್ ವಿವರಗಳನ್ನು ನಿಮ್ಮ ದಂತ ವೈದ್ಯರಿಗೆ ನೀಡಿ
-ಡಾ| ಶ್ರುತಿ ಆಚಾರ್ಯ.
ಅಸೋಸಿಯೇಟ್ ಪ್ರೊಫೆಸರ್,
ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗ,
ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ,
ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗ, ಕೆಎಂಸಿ , ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.