Ayodhya ಶ್ರೀ ರಾಮಲಲ್ಲಾ ವಿಗ್ರಹ ಕೆತ್ತನೆ; ಯೋಗಿರಾಜ್ ತಂಡದಲ್ಲಿ ವಿಟ್ಲದ ಚಿದಾನಂದ ಆಚಾರ್ಯ
Team Udayavani, Jan 16, 2024, 7:40 AM IST
ವಿಟ್ಲ: ಶ್ರೀರಾಮಲಲ್ಲಾ ವಿಗ್ರಹವನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ತಂಡದಲ್ಲಿ ವಿಟ್ಲ ಸಮೀಪದ ಉಕ್ಕುಡ ಕಲ್ಲುರ್ಟಿ ಯಡ್ಕದ ಚಿದಾನಂದ ಆಚಾರ್ಯ ಅವರೂ ಭಾಗಿಯಾಗಿದ್ದಾರೆ. ಈ ವಿಗ್ರಹ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗಲಿದೆ.
ಯೋಗಿರಾಜ್ ತಂಡದಲ್ಲಿ 12 ಮಂದಿ ಇದ್ದು 8 ಮಂದಿ ಮೈಸೂರಿನವರು. ನಾಲ್ವರು ದ.ಕ. ಜಿಲ್ಲೆ ಮತ್ತು ಕೋಲಾರದವರು.
ಅಯೋಧ್ಯೆ ತೆರಳಿದರು
4 ತಿಂಗಳ ಹಿಂದೆ ಅರುಣ್ ಯೋಗಿರಾಜ್ ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಕಾರ್ಯದ ಸಹಾಯಕ ಕೆಲಸಕ್ಕೆ ಶಿಲ್ಪಿಗಳು ಬೇಕು ಎಂದು ಚಿದಾನಂದ ಆಚಾರ್ಯರಲ್ಲಿ ತಿಳಿಸಿದ್ದರು. ಇನ್ನೂ ನಾಲ್ವರ ಆವಶ್ಯಕತೆ ಇದ್ದುದರಿಂದ ಚಿದಾನಂದ ಅವರು ಪುತ್ತೂರಿನ ಸುಮಂತ್ ಆಚಾರ್ಯ, ಕೋಲಾರದ ಉಮಾಮಹೇಶ್ವರ ಹಾಗೂ ನಾರಾಯಣ ಆಚಾರ್ಯ ಅವರ ಜತೆಗೂಡಿ ಅಯೋಧ್ಯೆಗೆ ತೆರಳಿದ್ದರು.
ವಿಗ್ರಹ ಕೆತ್ತನೆ ಕಾರ್ಯಕ್ಕೆ ಸಮಿತಿಯು 3 ತಂಡಗಳನ್ನು ನಿಗದಿಪಡಿಸಿ ಪ್ರತ್ಯೇಕವಾಗಿ ವಿಗ್ರಹ ನಿರ್ಮಿಸುವಂತೆ ಸೂಚಿಸಿತ್ತು. ಅವು ಗಳಲ್ಲಿ ಅತ್ಯುತ್ತಮ ಎನಿಸುವ ವಿಗ್ರಹವನ್ನು ಆರಿಸಲಾಗುತ್ತದೆ ಎಂದೂ ತಿಳಿಸಿತ್ತು. ಒಂದು ತಂಡ ಅಮೃತಶಿಲೆಯನ್ನು ಆಯ್ಕೆ ಮಾಡಿಕೊಂಡಿ ದ್ದರೆ ಮೈಸೂರು ಮತ್ತು ಉತ್ತರ ಕನ್ನಡದ ತಂಡ ಕೃಷ್ಣಶಿಲೆಯನ್ನು ಆಯ್ಕೆ ಮಾಡಿಕೊಂಡಿದ್ದವು. ಮೂರೂ ತಂಡಗಳು ಪ್ರತ್ಯೇಕವಾಗಿ ಕೆಲಸ ಮಾಡಿದ್ದು, ಒಂದು ತಂಡವು ಇನ್ನೊಂದು ತಂಡದ ವಿಗ್ರಹವನ್ನು ನೋಡಿಲ್ಲ.
ಎರಡೂವರೆ ತಿಂಗಳ ಕಾಲ ಕೆತ್ತನೆ
ಸೆಪ್ಟಂಬರ್ 11ಕ್ಕೆ ತೆರಳಿದ ಮೈಸೂರಿನ ತಂಡ 72 ದಿನಗಳಲ್ಲಿ ವಿಗ್ರಹ ಕೆತ್ತನೆ ಕಾರ್ಯವನ್ನು ಮುಕ್ತಾಯ ಮಾಡಿತು.
ಈ ಅವಧಿಯಲ್ಲಿ ತಮಗೆ ಭದ್ರತೆ, ಉತ್ತಮ ಆಹಾರ, ವಸತಿ ವ್ಯವಸ್ಥೆ ಯನ್ನು ಮಾಡಲಾಗಿತ್ತು. ಯಾವುದೇ ಅಡ್ಡಿ ಆತಂಕಗಳಿಲ್ಲದೇ ಈ ಕಾರ್ಯ ಸಾಗಿತ್ತು ಎನ್ನುತ್ತಾರೆ ಚಿದಾನಂದ.
ಶಿಲ್ಪಕಲಾ ಗುರುಗಳು
ಚಿದಾನಂದ ಆಚಾರ್ಯರು ಅಳಿಕೆ ಗ್ರಾಮದ ಮೂವಾಜೆಯ ಗೋಪಾಲ ಆಚಾರ್ಯ ಹಾಗೂ ಪುಷ್ಪಾವತಿ ದಂಪತಿಯ ಪುತ್ರ. ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿ, ಕಾರ್ಕಳದ ಕೆನರಾ ಬ್ಯಾಂಕ್ ಸಿ.ಇ. ಕಾಮತ್ ಇನ್‌ಸ್ಟಿಟ್ಯೂಟ್‌ನಲ್ಲಿ ಒಂದೂವರೆ ವರ್ಷ ಶಿಲ್ಪಕಲೆಯನ್ನು ಅಭ್ಯಸಿದ್ದಾರೆ. ಬಳಿಕ ಚಿಕ್ಕಬಳ್ಳಾಪುರದ ಡಾ| ಜಿ. ಜ್ಞಾನಾನಂದ ಅವರ ಬ್ರಹ್ಮಶ್ರೀ ಶಿಲ್ಪಗುರುಕುಲದಲ್ಲಿ ಸುಮಾರು 10 ವರ್ಷ ಕಾಲ ಶಿಲ್ಪಕಲಾ ಅಧ್ಯಯನ ನಡೆಸಿದರು. ಬಳಿಕ ಬೆಂಗಳೂರು ಮಲ್ಲತ್ತಹಳ್ಳಿಯ ಸಾಂಪ್ರದಾಯಿಕ ಶಿಲ್ಪಗುರುಕುಲದಲ್ಲಿ 3 ವರ್ಷ ಪ್ರತಿಮಾ ಶಿಲ್ಪ ಹಾಗೂ 4 ವರ್ಷ ದೇವಾಲಯ ಶಿಲ್ಪವನ್ನು ಕಲಿತು 8 ವರ್ಷಗಳಿಂದ ಅದೇ ಗುರುಕುಲದಲ್ಲಿ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರೇ ಮೊದಲಿಗರು
ತಂದೆ ದಿ| ಗೋಪಾಲ ಆಚಾರ್ಯ ವೃತ್ತಿಯಲ್ಲಿ ಟೈಲರ್ ಆಗಿದ್ದರು. ದೊಡ್ಡಪ್ಪ ಮರದ ಕೆಲಸ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು. ಕಲ್ಲಿನ ಕೆತ್ತನೆಯಲ್ಲಿ ಕುಟುಂಬದಲ್ಲಿ ಮೊದಲಿಗರಾಗಿ ತೊಡಗಿಸಿಕೊಂಡ ಖ್ಯಾತಿ ಚಿದಾನಂದ ಅವರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.