Republic Day: ಕರ್ತವ್ಯಪಥದಲ್ಲಿ “ನಾರಿಶಕ್ತಿ” ಪಾರಮ್ಯ
ದಿಲ್ಲಿಯಲ್ಲಿ 75ನೇ ಗಣರಾಜ್ಯಪರೇಡ್: 3 ತುಕಡಿಗಳಿಗೂ ಮಹಿಳಾ ಯೋಧರ ಸಾರಥ್ಯ
Team Udayavani, Jan 27, 2024, 12:39 AM IST
ಹೊಸದಿಲ್ಲಿ: ಗ್ರಾಮೋದ್ಯೋಗದಿಂದ ನೌಕಾಪಡೆಯವರೆಗೆ, ರಕ್ಷಣೆಯಿಂದ ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದವರೆಗೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಗಣನೀಯ ಕೊಡುಗೆಗಳನ್ನು ಬಿಂಬಿಸುವ “ನಾರಿ ಶಕ್ತಿ’ಯು ಶುಕ್ರವಾರ ಹೊಸದಿಲ್ಲಿಯ ಕರ್ತವ್ಯ ಪಥದಲ್ಲಿ ಅನಾವರಣಗೊಂಡಿತು.
“ವಿಕಸಿತ ಭಾರತ’ ಮತ್ತು “ಭಾರತ-ಪ್ರಜಾಸತ್ತೆಯ ಮಾತೆ’ ಎಂಬ ಥೀಮ್‌ನೊಂದಿಗೆ ಶುಕ್ರವಾರ 75ನೇ ಗಣರಾಜ್ಯೋತ್ಸವದ ಅದ್ದೂರಿ ಪಥಸಂಚಲನ ನಡೆಯಿತು. ಇಡೀ ಪರೇಡ್‌ನಾದ್ಯಂತ ಮಹಿಳಾ ಶಕ್ತಿಯೇ ಆವರಿಸಿ ಕೊಂಡಿದ್ದು ಈ ಬಾರಿಯ ವಿಶೇಷ. ಇದರ ಜತೆಗೆ, ಪ್ರತೀ ವರ್ಷದಂತೆ ಈ ಬಾರಿಯೂ ದೇಶದ ಸೇನಾ ಶಕ್ತಿ ಹಾಗೂ ಸಾಂಸ್ಕೃತಿಕ ಪರಂಪರೆಯೂ ಕರ್ತವ್ಯಪಥದಲ್ಲಿ ಅನಾವರಣಗೊಂಡಿತು.
ಆರಂಭದಲ್ಲೇ “ಆವಾಹನ’ ಎಂಬ ಹೆಸರಿನಲ್ಲಿ ಇದೇ ಮೊದಲ ಬಾರಿಗೆ 112 ಮಹಿಳಾ ಕಲಾವಿದರು ಶಂಖ, ನಾದಸ್ವರ, ನಗಾಡಾ ದಂಥ ಭಾರತೀಯ ಸಾಂಪ್ರದಾಯಿಕ ಸಂಗೀತ ಉಪಕರಣಗಳನ್ನು ನುಡಿಸಿದರು. ಕರ್ನಾಟಕದ ಡೊಳ್ಳು ಕುಣಿತವೂ ಇದರಲ್ಲಿ ಸೇರಿದ್ದು ವಿಶೇಷ. ಜನಪದದಿಂದ ಹಿಡಿದು ಬುಡಕಟ್ಟು ಸಂಗೀತದವರೆಗೆ ದೇಶದ ಮೂಲೆ ಮೂಲೆಗಳ ಸಂಗೀತ ವಾದ್ಯವು, ಮಹಿಳೆಯರ ಸಾಮರ್ಥ್ಯ ಮತ್ತು ಶಕ್ತಿಯನ್ನು ಜಗತ್ತಿಗೆ ಪ್ರಚುರಪಡಿಸಿತು. ಇನ್ನು, ಮಣಿಪುರ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ಒಡಿಶಾ, ಝಾರ್ಖಂಡ್ ಮತ್ತು ಛತ್ತೀಸ್‌ಗಢ ರಾಜ್ಯಗಳ ಸ್ತಬ್ಧಚಿತ್ರಗಳೂ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರವನ್ನು ಬಿಂಬಿಸಿದವು.
ಮಹಿಳಾ ಯೋಧರದ್ದೇ ಹವಾ: ಪ್ರಪ್ರಥಮ ಬಾರಿಗೆ ಭಾರತದ ಮೂರೂ ಸೇನೆಗಳ ಮಹಿಳಾ ಯೋಧರು ಕರ್ತವ್ಯಪಥದಲ್ಲಿ ಹೆಜ್ಜೆ ಹಾಕಿದ್ದು ಕಂಡುಬಂತು. ವೈಮಾನಿಕ ಪ್ರದರ್ಶನದಲ್ಲೂ ಮಹಿಳಾ ಪೈಲಟ್‌ಗಳು ಸಾಹಸ ಮೆರೆದು, ನೆರೆದಿದ್ದವರ ಮನಸೂರೆಗೊಳಿಸಿದರು. ಪಥಸಂಚಲನದಲ್ಲಿ ಹೆಜ್ಜೆ ಹಾಕಿದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್)ಯ ತುಕಡಿ ಕೂಡ ಮಹಿಳೆಯರನ್ನೇ ಒಳಗೊಂಡಿತ್ತು.
ನೌಕಾಪಡೆ: ಲೆಫ್ಟಿನೆಂಟ್ ಕಮಾಂಡರ್ ಪ್ರಜ್ವಲ್ ಎಂ., ಲೆ| ಮುದಿತಾ ಗೋಯಲ್, ಲೆ| ಶರ್ವಾನಿ ಸುಪ್ರಿಯಾ ಮತ್ತು ಲೆ| ದೇವಿಕಾ ಎಚ್. ನೇತೃತ್ವದ ನೌಕಾಪಡೆಯ ಅಗ್ನಿವೀರರ ತಂಡ “ನಾರಿಶಕ್ತಿ’ ಮತ್ತು “ಸ್ವದೇಶೀಕರಣದ ಮೂಲಕ ಸಾಗರಗಳಲ್ಲಿ ನೌಕಾ ಶಕ್ತಿ’ ಎಂಬ ಥೀಮ್‌ನಡಿ ಹೆಜ್ಜೆ ಹಾಕಿತು.
ವಾಯುಪಡೆ: ಸ್ಕ್ವಾಡ್ರನ್ ಲೀಡರ್ ರಶ್ಮಿ ಠಾಕೂರ್, ಸ್ಕ್ವಾಡ್ರನ್ ಲೀಡರ್‌ಗಳಾದ ಸುಮಿತಾ ಯಾದವ್, ಪ್ರತೀತಿ ಅಹ್ಲುವಾ ಲಿಯಾ, ಫ್ಲೈಟ್ ಲೆಫ್ಟಿನೆಂಟ್ ಕೀರ್ತಿ ರೋಹಿಲ್ ಎಂಬ ನಾಲ್ವರು ಅಧಿಕಾರಿಗಳ ನೇತೃತ್ವದಲ್ಲಿ 144 ಏರ್‌ಮನ್‌ಗಳಿದ್ದ ವಾಯು ಪಡೆಯ ತಂಡವೂ ಪಥಸಂಚಲನದಲ್ಲಿ ಭಾಗಿಯಾಯಿತು.
ನೆಲ, ವಾಯು, ಸಮುದ್ರ, ಸೈಬರ್ ಮತ್ತು ಬಾಹ್ಯಾಕಾಶದಲ್ಲಿ ರಕ್ಷಣ ಕವಚವಾಗಿ ದೇಶವನ್ನು ರಕ್ಷಿಸುತ್ತಿರುವ ಮಹಿಳಾ ಶಕ್ತಿ ಎಂಬ ಥೀಮ್‌ನಲ್ಲೇ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಸ್ತಬ್ಧಚಿತ್ರ ರೂಪಿಸಿತ್ತು. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ವಿಭಾಗವನ್ನೂ ಮೊದಲ ಬಾರಿಗೆ ಸರ್ವಮಹಿಳಾ ಪಡೆಯೇ ಪ್ರತಿನಿಧಿಸಿತು. ಇದಲ್ಲದೇ, ಕೇಂದ್ರೀ ಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ದಿಲ್ಲಿ ಪೊಲೀಸರ ತುಕಡಿಗಳ ನೇತೃತ್ವವನ್ನೂ ಮಹಿಳೆಯರೇ ವಹಿಸಿದ್ದರು.
ಫ್ರಾನ್ಸ್‌ನ ಪಡೆಗಳೂ ಭಾಗಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ಅವರು 75ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡರೆ, ಫ್ರಾನ್ಸ್‌ನ ಸಶಸ್ತ್ರ ಪಡೆಗಳ ಯೋಧರು ಕೂಡ ಪಥಸಂಚಲನದಲ್ಲಿ ಹೆಜ್ಜೆಹಾಕಿ ಕಣ್ಮನ ತಣಿಸಿದರು. ಫ್ರಾನ್ಸ್ ಸೇನೆಯ ಕ್ಯಾಪ್ಟನ್ ಖೌರ್ದಾ ನೇತೃತ್ವದಲ್ಲಿ 30 ಸದಸ್ಯರ ಬ್ಯಾಂಡ್ ತಂಡ ಮತ್ತು ಕ್ಯಾ| ನೋಯೆಲ್ ನೇತೃತ್ವದಲ್ಲಿ 90 ಸದಸ್ಯರ ಸೇನಾ ಪಡೆ ಪರೇಡ್‌ನಲ್ಲಿ ಭಾಗಿಯಾದವು. ಇದರ ಜತೆ ಹಲವು ಟ್ಯಾಂಕರ್ ಏರ್‌ಕ್ರಾಫ್ಟ್, ರಫೇಲ್ ಕೂಡ ಇದ್ದವು.
ಮಹಿಳೆಯರ ಸಾಹಸ ಪ್ರದರ್ಶನ ಇದೇ ಮೊದಲು
265 ಮಹಿಳಾ ಯೋಧರು ಮೋಟಾರ್‌ಸೈಕಲ್‌ನಲ್ಲಿ ವಿವಿಧ ಡೇರ್‌ಡೆವಿಲ್ ಸ್ಟಂಟ್‌ಗಳನ್ನು ಪ್ರದರ್ಶಿಸುತ್ತಿದ್ದರೆ, ನೆರೆದವರೆಲ್ಲ ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದರು. ಇನ್ನು. 148 ಕೆಡೆಟ್‌ಗಳಿದ್ದ ಎನ್‌ಸಿಸಿಯ ಹೆಣ್ಣುಮಕ್ಕಳ ತಂಡ ಕೂಡ ಪರೇಡ್‌ನಲ್ಲಿ ಭಾಗಿಯಾಯಿತು.
ಕರ್ತವ್ಯ ಪಥದಲ್ಲಿ ಕಸರತ್ತು; ಆಕಾಶದಲ್ಲಿ ಐಎಎಫ್ನ ವಿಮಾನಗಳ ಸೆಲ್ಯೂಟ್
ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು, ಕಾಪ್ಟರ್‌ಗಳ ಜತೆಗೆ ಫ್ರಾನ್ಸ್ ವಾಯುಪಡೆಯ 3 ವಿಮಾನ ಗಳೂ ಸೇರಿದಂತೆ ಒಟ್ಟು 54 ವಿಮಾನ ಗಳು ಕರ್ತವ್ಯಪಥದ ಬಾನಂಗಣದಲ್ಲಿ ಕಸ ರತ್ತು ಪ್ರದರ್ಶಿಸಿವೆ. ಅಲ್ಲದೇ ತ್ರಿಶೂಲ, ಮಾರುತ್‌ನಂಥ ವಿಭಿನ್ನ ಶೈಲಿಯ ಹಾರಾಟದೊಂದಿಗೆ ಗಣರಾಜ್ಯೋತ್ಸವದಂದು ಬಾನಂಗಳದಲ್ಲಿ ರಾಷ್ಟ್ರನಮನ ಸಲ್ಲಿಸಿವೆ. ವಿಮಾನಗಳ ಕಾಕ್‌ಪಿಟ್‌ಗಳ ಮೂಲಕ ವೀಡಿಯೋಗಳನ್ನು ಸೆರೆ ಹಿಡಿದಿರುವುದು ಮತ್ತೂಂದು ವಿಶೇಷ. ಗಂಟೆಗೆ 900 ಕಿ.ಮೀ.ವೇಗದಲ್ಲಿ ಸುಖೋಯ್, ರಫೇಲ್ ವಿಮಾನಗಳು ಹಾರಾಟ ನಡೆಸಿರುವುದು ನೋಡುಗರನ್ನು ದಿಗ್ಭ್ರಮೆಗೊಳಿಸಿದೆ.
ದೇಶದ 1,500 ಕಲಾವಿದರಿಂದ 36 ವಿವಿಧ ಕಲಾಪ್ರಕಾರಗಳ ಪ್ರದರ್ಶನ
“ಶಕ್ತಿ ರೂಪೇಣ ಸಂಸ್ಥಿತಾ’ ಎಂಬ ಹೆಸರಿನ ಸ್ತಬ್ಧ ಚಿತ್ರವನ್ನು ಸಂಸ್ಕೃತಿ ಸಚಿವಾಲಯ ಪ್ರದರ್ಶಿಸಿದ್ದು, ಕಲಾವಿದರ ನೃತ್ಯ ಪ್ರದರ್ಶನದೊಂದಿಗೆ ಮುನ್ನಡೆದ ಸ್ತಬ್ಧಚಿತ್ರ ಈ ಬಾರಿಯ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿತ್ತು. ಅದರಲ್ಲಿ 1500 ಕಲಾವಿದರು 30 ಜಾನಪದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದ್ದಾರೆ. ದೇಶಾದ್ಯಂತ ನಡೆದ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗಳಿಂದ 479 ಮಂದಿ ಕಲಾವಿರನ್ನು ಆಯ್ಕೆ ಮಾಡಲಾಗಿತ್ತು. ದೇವಿ ಗೀತೆಗಳಿಗೆ ದೇಶದ ವಿವಿಧ ಭಾಗಗಳಲ್ಲಿನ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಾಗಿದೆ. ಮುಂಭಾಗದಲ್ಲಿ ದುರ್ಗೆಯ ಅವತಾರ ಹಾಗೂ ಹಿಂಭಾಗದಲ್ಲಿ ವಿವಿಧ ನೃತ್ಯ ಪ್ರಕಾರಗಳ ಚಿತ್ರಣವನ್ನು ಟ್ಯಾಬ್ಲೋ ಒಳಗೊಂಡಿತ್ತು.
ಮಹಿಳಾ ವಿಜ್ಞಾನಿಗಳ ಅದ್ಭುತ ಸಾಧನೆ ಸ್ತಬ್ಧಚಿತ್ರದಲ್ಲಿ ಕೊಂಡಾಡಿದ ಇಸ್ರೋ
ಚಂದ್ರನ ದಕ್ಷಿಣದ ಧ್ರುವದಲ್ಲಿಳಿದ ವಿಶ್ವದ ಮೊದಲ ರಾಷ್ಟ್ರವೆಂದು ಭಾರತಕ್ಕೆ ಖ್ಯಾತಿ ತಂದಂಥ ಚಂದ್ರಯಾನ-3 ಹಾಗೂ ದೇಶದ ಮೊದಲ ಸೌರ ಅಧ್ಯಯನದ ಯೋಜನೆ ಆದಿತ್ಯ ಎಲ್-1ನ ಯಶಸ್ಸನ್ನು ಇಸ್ರೋ ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಿದೆ. ಜತೆಗೆ ಮಹಿಳಾ ವಿಜ್ಞಾನಿಗಳು ವಿವಿಧ ಯೋಜನೆಗಳು ಪ್ರದರ್ಶಿಸಿದ ಸಾಧನೆಯನ್ನೂ ವಿವರಿಸಲಾಗಿದೆ. ಕಾರ್ಯಾಚರಣೆಗಳ ಹಿಂದಿದ್ದ 8 ಮಂದಿ ಮುಖ್ಯ ಮಹಿಳಾ ವಿಜ್ಞಾನಿಗಳೂ ಸ್ತಬ್ಧಚಿತ್ರದೊಂದಿಗೆ ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಿದ್ದಾರೆ. ವಿಕ್ರಮ್ ಲ್ಯಾಂಡರ್, ಶಿವ- ಶಕ್ತಿ ಪಾಯಿಂಟ್‌ಗಳ ಚಿತ್ರವಣನ್ನು ಇಸ್ರೋ ಕೋಷ್ಟಕ ಒಳಗೊಂಡಿತ್ತು.
ಸೇನೆ”ಆತ್ಮನಿರ್ಭರತೆ ಶಕ್ತಿ’ ಅನಾವರಣ ಸಂಭ್ರಮ – ದೇಶಿ ಶಸ್ತ್ರಾಸ್ತ್ರಗಳ ಕಂಡು ಜನರ ಹರ್ಷೋದ್ಘಾರ
ಕ್ಷಿಪಣಿಗಳು, ಯುದ್ಧ ವಿಮಾನಗಳು, ಶಸ್ತ್ರಾಸ್ತ್ರ ವ್ಯವಸ್ಥೆ ಗಳು, ಕಣ್ಗಾವಲು ಸಾಧನಗಳು… ಹೀಗೆ ದೇಶದ ಸೇನಾ ಶಕ್ತಿಯು ಒಂದೊಂದಾಗಿ ಅನಾವರಣಗೊಳ್ಳುತ್ತಿದ್ದರೆ, ದೆಹಲಿಯ ಕರ್ತವ್ಯ ಪಥದಲ್ಲಿ ನೆರೆದಿದ್ದ ಅತಿಥಿಗಳು ಹಾಗೂ ಸಾರ್ವಜನಿಕರು ಕರತಾ ಡನಗಳ ಮಳೆಯನ್ನೇ ಸುರಿಸುತ್ತಿದ್ದರು. ಅದರಲ್ಲೂ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಶಸ್ತ್ರಾಸ್ತ್ರ ವ್ಯವಸ್ಥೆಗಳು ಕಣ್ಣೆದುರು ಬರುತ್ತಿದ್ದಂತೆಯೇ, ಹರ್ಷೋದ್ಗಾರ ಮುಗಿಲುಮುಟ್ಟಿತ್ತು.
ಟ್ಯಾಂಕ್ ಟಿ-90 ಭೀಷ್ಮ, ನಾಗ್ ಕ್ಷಿಪಣಿ ವ್ಯವಸ್ಥೆಗಳು, ಇನ್‌ಫೆಂಟ್ರಿ ಯುದ್ಧ ವಾಹನಗಳು, ಎಲ್ಲ ರೀತಿ ಭೂಪ್ರದೇಶಗಳಲ್ಲೂ ಸಂಚರಿಸುವಂಥ ವಾಹನಗಳು, ಶಸ್ತ್ರಾಸ್ತ್ರ ಪತ್ತೆಹಚ್ಚುವ ರೇಡಾರ್ ವ್ಯವಸ್ಥೆ ಸ್ವಾತಿ, ಡ್ರೋನ್ ಜಾಮರ್, ಮಧ್ಯಮ ವ್ಯಾಪ್ತಿಯ ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳು ಪ್ರಮುಖವಾಗಿ ಪ್ರದರ್ಶನಗೊಂಡವು.
ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ಒಳಗೊಂಡ ಮೊತ್ತಮೊದಲ ಸ್ವದೇಶಿ ನಿರ್ಮಿತ ಕ್ಯಾರಿಯರ್ ಬ್ಯಾಟಲ್ ಗ್ರೂಪ್, ಡೆಲ್ಲಿ, ಕೋಲ್ಕತಾ, ಶಿವಾಲಿಕ್ ಮತ್ತು ಕಲವರಿ ದರ್ಜೆಯ ಜಲಾಂತರ್ಗಾಮಿಗಳು, ರುಕ್ಮಣಿ ಉಪಗ್ರಹಗಳು ಪ್ರದರ್ಶನಗೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.