Desi Swara: ಕಣ್ಸೆಳೆಯುವ ವೇಗಾಸಿನ ಕಸಿನೋಗಳ ಮಾಂತ್ರಿಕತೆ
ಕಾಲಚಕ್ರದ ಹಂಗಿಲ್ಲದೇ ಎಚ್ಚರವಿರುವ ನಗರ !
Team Udayavani, Jan 27, 2024, 2:20 PM IST
ವೇಗಾಸ್ ಎಂಬುದೊಂದು ಮಾಂತ್ರಿಕ ನಗರಿ. A city that never sleeps! ಸೂರ್ಯ ಮುಳುಗಿದರೂ ಅದು ಲೆಕ್ಕಕ್ಕೇ ಇಲ್ಲ ಎಂಬಂತೆ ಜನ ಓಡಾಡುತ್ತಿರುತ್ತಾರೆ. ಎಂತಹ ಅಪರಾತ್ರಿಯಲ್ಲಿ ಹೋದರೂ ಹಗಲಿನ ಗಿಜಿಗಿಜಿ ಈ ನಗರಕ್ಕಿದೆ.
ಗಡಿಯಾರದತ್ತ ತಿರುಗಿಯೂ ನೋಡದೆ ಜನ ಕಾಲಚಕ್ರದ ಹಂಗಿಲ್ಲದೇ ಮೋಜು ಮಸ್ತಿಗಳಲ್ಲಿ ಮುಳುಗಿರುತ್ತಾರೆ. ಭರ್ಜರಿಯಾಗಿ ತಿನ್ನುವವರಿಗೆ, ಸೇದುವವರಿಗೆ, ಜೂಜಾಡುವವರಿಗೆ, ಮೋಜಿನ ಕ್ರೀಡೆಗಳಿಗೆ ಸೈ ಎನ್ನುವವರಿಗೆ ಇದು ಹೇಳಿ ಮಾಡಿಸಿದ ಜಾಗ. ಇಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲ. . What happens in Vegas stays in Vegas ಎಂಬ ಮಾತಿದೆ. ಅಂದರೆ ಇಲ್ಲಿ ಏನು ಬೇಕಾದರೂ ನಡೆಯಬಹುದು. ಅಂತಹ ಏನಾದರೂ ಆಸೆಗಳಿದ್ದಲ್ಲಿ ವೇಗಾಸಿಗೆ ಹೋಗಲೇಬೇಕು. ಹಾಗಂತ ಇಲ್ಲಿ ಹೋದವರೆಲ್ಲ ಪರಮಪಾಪಿಗಳೇ ಅಂತಲ್ಲ. ಅಂತಹದ್ದೇನಿದೆ ಇಲ್ಲಿ ಎಂದು ನೋಡಲಿಕ್ಕಾದರೂ ಹೋಗಿ ಬರುವ ಜನರಿದ್ದಾ ರೆ. ಇಲ್ಲಿ ಸಿಗುವ ಎಲ್ಲ ಸುಖಗಳನ್ನು ಅನುಭವಿಸದೇ ಹೋದರೂ ಕಣ್ಣುಕುಕ್ಕುವ ಬೆಳಕಿನಿಂದ, ಜಗಮಗಿಸುವ ಸಿರಿವಂತ ಹೊಟೇಲ್‌ಗಳಿಂದ, ಆ ಹೊಟೇಲ್‌ಗಳಲ್ಲಿನ ಸೌಕರ್ಯಗಳಿಂದ ವೇಗಾಸ್ ಆಕರ್ಷಿಸುತ್ತದೆ.
ಕಸಿನೋಗಳೆಂದರೆ ಜೂಜಾಡುವ ತಾಣಗಳು. ಇಲ್ಲಿ ಎಲ್ಲ ಬಗೆಯ ಜೂಜಿನ ಆಟಗಳಿರುತ್ತವೆ. ಹಣವನ್ನು ಪಣಕ್ಕಿಟ್ಟು ಆಡುವ ಈ ಆಟಗಳಿಗೆ ದೊಡ್ಡ ಮೊತ್ತದ ಹಣವನ್ನೇ ಪಣಕ್ಕಿಡಬೇಕು ಅಂತಿಲ್ಲ. ತೀರಾ ಕಡಿಮೆ ಅಂದರೆ ಒಂದು ಸೆಂಟ್ (ಎಂಬತ್ತು ಪೈ), ಐದು ಸೆಂಟ್ (ನಾಲ್ಕು ರೂ.), ಹತ್ತು ಸೆಂಟ್ (ಎಂಟು ರೂ.) ಎಂದು ಚಿಲ್ಲರೆ ಲೆಕ್ಕದಿಂದ ಶುರುವಾಗಿ ಕ್ರಮೇಣ ಒಂದು, ಹತ್ತು ಡಾಲರ್ ಎಂದೆಲ್ಲ ಏರುತ್ತ ಹೋಗಿ ನೂರು, ಸಾವಿರ ಡಾಲರ್‌ಗಳವರೆಗೂ ತಲುಪುತ್ತವೆ. ಪೆನ್ನಿ ಗೇಮ್ಸ್ ಅಥವಾ ಚಿಲ್ಲರೆ ಆಟಗಳನ್ನು ಆಡಲಿಕ್ಕೆ ಸ್ಲಾಟ್ ಮೆಷಿನ್‌ಗಳು ಸೂಕ್ತ.
ದೊಡ್ಡ ದೊಡ್ಡ ಆಟದ ಮೆಷಿನ್‌ಗಳನ್ನು ಇಟ್ಟು ಅದರಲ್ಲಿ ಮೊಬೈಲ್‌ನಲ್ಲಿ ಆಡುವಂತಹ ತರಾವರಿ ಗೇಮ್‌ಗಳನ್ನು ಅತ್ಯಾಕರ್ಷಕ ಬಣ್ಣಗಳಲ್ಲಿ, ಚಿತ್ರಗಳಲ್ಲಿ ವಿನ್ಯಾಸ ಮಾಡಿರುತ್ತಾರೆ. ಹತ್ತೋ ಇಪ್ಪತ್ತೋ ಡಾಲರ್ ಅನ್ನು ಮೆಷಿನ್ನಿಗೆ ತುಂಬಿ ಆ ಮೆಷಿನ್ನಿಗಿರುವ ಬಟನ್ ಅನ್ನು ಒತ್ತುತ್ತ ಕೂತರೆ ಪ್ರತೀಸಲ ಒತ್ತಿದಾಗಲೂ ಹತ್ತು ಇಪ್ಪತ್ತು ಪೈಸೆಗಳು ಮಾಯವಾಗುತ್ತ ಇಪ್ಪತ್ತು ಡಾಲರ್‌ಗಳಿದ್ದದ್ದು ಸೊನ್ನೆಯಾಗಿದ್ದು ಅರಿವಿಗೇ ಬರುವುದಿಲ್ಲ.
ವೇಗಾಸಿನಲ್ಲಿರುವ ಪ್ರತಿಯೊಂದು ಕಸಿನೋದಲ್ಲಿಯೂ ಈ ತರಹದ ಸಾಲು ಸ್ಲಾಟ್ ಮೆಷಿನ್‌ಗಳನ್ನು ನೋಡಬಹುದು. ಅವುಗಳ ಮುಂದೆ ಕೈಯ್ಯಲ್ಲೊಂದು ಪೆಗ್ ಗ್ಲಾಸ್ ಅನ್ನೋ ಅಥವಾ ಸಿಗರೇಟನ್ನೋ ಹಿಡಿದುಕೊಂಡು ಕೂತು ಯಾವ ಕ್ಷಣದಲ್ಲಾದರೂ ಈ ಮೆಷಿನ್ ತನಗೆ ಹಣದ ಸುರಿಮಳೆ ಹರಿಸಬಹುದೆಂದು ಕಾಯುತ್ತ ಕೂತಿರುವ ಜನರನ್ನು ಕಾಣಬಹುದು. ಇತ್ತ ಹೆಚ್ಚು ದುಡ್ಡು ಹಾಕಿ ಅದೃಷ್ಟ ಪರೀಕ್ಷಿಸಿಕೊಳ್ಳುತ್ತೇನೆ ಎನ್ನುವವರಿಗೆ ರೌಲೇ, ಬ್ಲಾಕ್ ಜಾರ್ಕ, ವೀಡಿಯೋ ಪೋರ್ಕ, ಕ್ರ್ಯಾಪ್ಸ್ ಇತ್ಯಾದಿ ಆಟಗಳಿವೆ. ದುಂಡು ಮೇಜಿನ ಸುತ್ತ ನಡೆಯುವ ಈ ಆಟಗಳನ್ನು ಒಬ್ಬೊಬ್ಬರಾಗಿ ಬೆಟ್ ಕಟ್ಟಿ ಆಡಬಹುದಾದರೂ ಆಡುವಾಗ ಜತೆಯಲ್ಲಿ ಇನ್ನೂ ಕೆಲವು ಆಟಗಾರರಿರುತ್ತಾರೆ. ಈ ಆಟಗಳನ್ನು ಆಡಿಸಲಿಕ್ಕೆ ಡೀಲರ್ ಇರುತ್ತಾರೆ.
ಆಡುವ ಮೊದಲು ದುಡ್ಡು ಕೊಟ್ಟು ಐದು, ಹತ್ತು, ಇಪ್ಪತ್ತು, ಐವತ್ತು, ನೂರು ಡಾಲರ್ ಗಳ ಚಿಪುÕಗಳನ್ನು ಖರೀದಿಸಿ ಆಡುವಾಗ ನಮ್ಮಿಷ್ಟದ ಮೊತ್ತವನ್ನು ಪಣಕ್ಕಿಟ್ಟು ಆಡಬೇಕು. ಈ ಕಸಿನೋಗಳು ದೊಡ್ಡ ದೊಡ್ಡ ಹೊಟೇಲಿನೊಳಗೆಯೇ ಇರುತ್ತವೆ. ದೈತ್ಯ ಕಟ್ಟಡಗಳನ್ನು ಹೊಂದಿ ಹತ್ತಾರು ಅಂತಸ್ತುಗಳನ್ನು ಹೊಂದಿರುವ ಈ ಹೊಟೇಲ್‌ಗಳ ಕೆಳಗಡೆ ಅಂದರೆ ಗ್ರೌಂಡ್ ಫ್ಲೋರಿನಲ್ಲಿ ಕಸಿನೋಗಳು, ಕೂತು ಕುಡಿಯಲಿಕ್ಕೆ ತಿನ್ನಲಿಕ್ಕೆ ರೆಸ್ಟೋ ಬಾರ್‌ಗಳು, ಪಾನೀಯಗಳನ್ನು ಮಾರುವ ಅಂಗಡಿ, ಹೊಟೇಲಿನ ಕಾನ್ಸಿಯರ್ಜ್ (ನೋಂದಣಿ ವಿಭಾಗ), ಈಜುಕೊಳ, ಸ್ಪಾ, ಹೆಸರಾಂತ ಬ್ರ್ಯಾಂಡಿನ ಶಾಪಿಂಗ್ ಅಂಗಡಿಗಳು, ಇತ್ಯಾದಿಗಳನ್ನು ಹೊಂದಿರುತ್ತವೆ. ಮೇಲಿನ ಫ್ಲೋರ್‌ಗಳಲ್ಲಿ ರೂಮುಗಳಿರುತ್ತವೆ. ಇಲ್ಲಿರುವ ಪ್ರತಿಯೊಂದು ಹೊಟೇಲು ತನ್ನದೇ ಆದ ವಿಶೇಷತೆಯನ್ನು ಹೊಂದಿ ಪ್ರವಾಸಿಗರನ್ನು ಆಕರ್ಷಿಸುತ್ತ ತನ್ನಲ್ಲಿಯೇ ಉಳಿದುಕೊಳ್ಳುವಂತೆ ಪುಸಲಾಯಿಸುತ್ತವೆ.
ಎಂಜಿಎಂ ರೆಸಾರ್ಟ್ ಎಂಬ ಬೃಹತ ಕಂಪೆನಿಯ ಅನೇಕ ಹೊಟೇಲುಗಳು ವೇಗಾಸಿನಲ್ಲಿವೆ. ಅದರಡಿಯಲ್ಲಿ ಬರುವ ಬೆಲಾಜಿಯೋ, ಎಂಜಿಎಂ ಗ್ರಾಂಡ್, ನ್ಯೂಯಾರ್ಕ್ ನ್ಯೂಯಾರ್ಕ್, ಎಕ್ಸ್ ಕಾಲಿರ್ಬು, ಅರಿಯಾ, ಲುರ್ಕ್ಸಾ, ಮ್ಯಾಂಡಲೇ ಬೇ, ಡೆಲಾನೋ ಇತ್ಯಾದಿ ಹೊಟೇಲುಗಳು ಒಂದಕ್ಕೊಂದು ಪೈಪೋಟಿಯೆಂಬಂತೆ ಗಗನವನ್ನು ಚುಂಬಿಸುವಂತೆ ತಲೆಯೆತ್ತಿ ನಿಂತು ವೇಗಾಸಿನ ಸೌಂದರ್ಯಕ್ಕೆ ಮೂಲಕಾರಣವಾಗಿವೆ. ಪ್ರತೀ ಹೊಟೇಲಿನಲ್ಲಿಯೂ ಏನೋ ಒಂದು ನೋಡಬಹುದಾದ, ಸಮಯವನ್ನು ಕಳೆಯಬಹುದಾದ ಆಕರ್ಷಣೆಗಳಿವೆ. ಎಲ್ಲ ಹೊಟೇಲುಗಳಿಗೂ ಮುಕ್ತ ಪ್ರವೇಶ.
ರೂಮುಗಳನ್ನು ಬುಕ್ ಮಾಡಿರದೇ ಇದ್ದರೂ ಪ್ರತಿಯೊಂದು ಹೊಟೇಲಿನಲ್ಲಿ ಆರಾಮಾಗಿ ಓಡಾಡಿ ಅಲ್ಲಿರುವ ವಿಶೇಷಗಳನ್ನು ಆಸ್ವಾದಿಸಬಹುದು. ಬೆಲಾಜಿಯೋ ಹೊಟೇಲಿನ ಮುಂದೆ ಇರುವ ಕಾರಂಜಿ ಬಹಳ ಜನಪ್ರಿಯ. ದೈತ್ಯವಾದ ಹೊಟೇಲಿನ ಮುಂದೆ ಸಂಗೀತಕ್ಕೆ ನರ್ತಿಸುವ ಈ ಕಾರಂಜಿ ಸಂಜೆಯ ಬೆಳಕಿನಲ್ಲಿ ಇನ್ನೂ ಆಕರ್ಷಕವಾಗಿ ಕಾಣಿಸುತ್ತದೆ. ಒಳಗಡೆ ಹೋದರೆ ಭವ್ಯವಾದ ಕಾರಿಡಾರ್, ಹೆಜ್ಜೆಗೊಂದರಂತೆ ಸಿಗುವ ನೂರು ಬಲ್ಬುಗಳನ್ನು ಹೊತ್ತ ತೂಗುದೀಪಗಳ ಜಗಮಗಿಸುವ ಬೆಳಕಿನಿಂದ ಯಾವುದೋ ಆಸ್ಥಾನಕ್ಕೆ ಕಾಲಿಟ್ಟಿದ್ದೆವೇನೋ ಎನ್ನಿಸುತ್ತದೆ. ಲುಕ್ಸಾರ್ ಹೊಟೇಲಿನ ಮೇಲೆ ಇರುವ ಹವಳದಂತಹ ಬೆಳಕು ಆಕಾಶದವರೆಗೂ ಚಾಚಿದ್ದು ಸುತ್ತಮುತ್ತಲಿರುವ ಗಲ್ಲಿಯೊಳಗೆ ಹಾಯುವಾಗ ಎಲ್ ಇಡಿಯಂತೆ ಕಾಣಿಸುವ ಈ ಬೆಳಕನ್ನು ನೋಡಬಹುದು. ನ್ಯೂಯಾರ್ಕ್ ನ್ಯೂಯಾರ್ಕ್ ಹೊಟೇಲಿನ ಒಳಗೆ ಹೋದಾಗ ನ್ಯೂಯಾರ್ಕಿನೊಳಗೆ ಇದ್ದೆವೇನೋ ಎಂದು ಭಾಸವಾಗುವಂತಹ ವಿನ್ಯಾಸವಿದೆ. ಈ ಹೊಟೇಲಿನ ಹೊರಗಿರುವ ಅತೀ ಉದ್ದವಾದ, ಹಲವಾರು ತಿರುವುಗಳನ್ನು ಹೊಂದಿರುವ ರೋಲರ್ ಕೋಸ್ಟರ್ ಆಟ ಎಂತಹ ಧೈರ್ಯಶಾಲಿಗಳನ್ನು ಅರೆಕ್ಷಣ ನಡುಗಿಸುವುದು ಸುಳ್ಳಲ್ಲ.
ಎಂಜಿಎಂ ಗ್ರಾಂಡ್ ಅಡಿಯಲ್ಲಿ ಬರದ ಬೇರೆ ಹೊಟೇಲುಗಳೆಂದರೆ ವೆನೆಷಿಯನ್, ಕಾಸ್ಮೋಪಾಲಿಟಿನ್, ಮಿರಾಜ್, ಸ್ಟ್ರ್ಯಾಟ್ ಮತ್ತು ಹಲವಾರು. ಮಿರಾಜ್ ಹೊಟೇಲಿನ ಮುಂದೆ ಪ್ರತೀ ಸಂಜೆ ವೊಲ್ಕಾನೋ ಶೋ ನಡೆಸುತ್ತಾರೆ. ನಿಜವಾದ ಅಗ್ನಿಪರ್ವತವೇನೋ ಎಂದು ಭಾಸವಾಗುವಂತೆ ನುಗ್ಗುವ ಬೆಂಕಿಯನ್ನು ನೋಡಲಿಕ್ಕೆ ಜನ ಕಾದು ನಿಂತಿರುತ್ತಾರೆ.
ಸ್ಟ್ರ್ಯಾಟ್ ವೇಗಾಸಿನಲ್ಲಿಯೇ ಅತೀ ಎತ್ತರವಾದ ಹೊಟೇಲು. ನೋಡಲಿಕ್ಕೆ ಉದ್ದನೆಯ ಟವರ್ ಹಾಗಿರುವ ಇದರ ಒಳಗೆಯೂ ಕಸಿನೋ ಮತ್ತು ಹೊಟೇಲುಗಳಿವೆ. ಸ್ಟ್ರ್ಯಾಟ್‌ನ ತುತ್ತ ತುದಿಯ ಅಂತಸ್ತಿಗೆ ಹೋಗಿ ಅಲ್ಲಿಂದ ಇಡೀ ವೇಗಾಸ್ ಅನ್ನು ನೋಡಲಿಕ್ಕೆ ದುಡ್ಡು ಕೊಡಬೇಕಿದ್ದರೂ ಅಲ್ಲಿ ದಕ್ಕುವ ದೃಶ್ಯ ಕಣ್ಮನಗಳಿಗೆ ಹಬ್ಬ. ಹಗಲಿನಲ್ಲಿ ಚೆಂದವಾಗಿ ರಾತ್ರಿಯಲ್ಲಿ ಅದಕ್ಕಿಂತಲೂ ಮನಮೋಹಕವಾಗಿ ಕಾಣಿಸುವ ವೇಗಾಸನ್ನು ನೋಡಬಹುದು. ಇಲ್ಲಿಯೂ ಜೀವ ಹೋಗಿ ಬರುವಂತಹ ಆಟಗಳಿವೆ. ಕುರ್ಚಿಯ ಮೇಲೆ ಬೆಲ್ಟ್ ಹಾಕಿ ಕೂರಿಸಿ ಕಟ್ಟಡದ ತುತ್ತ ತುದಿಗೆ ಜಾರಿಸುವ ಆಟದ ಜತೆಗೆ ಕುರ್ಚಿಗಳಲ್ಲಿ ಕೂರಿಸಿ ಅಷ್ಟು ಎತ್ತರದ ಕಟ್ಟಡದ ಮೇಲೆ ಗಿರಗಿರನೇ ತಿರುಗಿಸುವಂತಹ ಭಯಂಕರ ಆಟವೂ ಇದೆ. ಎಲ್ಲವೂ ನಿಮ್ಮ ಶಕ್ತಾನುಸಾರ, ಕಿಸೆಯಲ್ಲಿರುವ ಹಣದ ಅನುಸಾರ!
ಈ ಚಿತ್ರ ವಿಚಿತ್ರ ಆಟಗಳು, ಅಕ್ವೇರಿಯಮ್‌ಗಳು, ಕಸಿನೋಗಳು, ಹೊಟೇಲಿನಲ್ಲಿರುವ ಆಕರ್ಷಣೆಯಲ್ಲದೇ ಹಲವಾರು ಶೋಗಳು ವೇಗಾಸಿನಲ್ಲಿ ನಡೆಯುತ್ತವೆ. Cirque du Soleil ಎಂಬ ಹೆಸರಿನ ಜನಪ್ರಿಯ ಕೆನಡಾದ ಕಂಪೆನಿ ನಡೆಸಿಕೊಡುವ ಶೋಗಳಾದ ಕಾ, ಓ ಇತ್ಯಾದಿ ಶೋಗಳು ಬಹಳ ಜನಪ್ರಿಯ ಮತ್ತು ದುಬಾರಿ ಶೋಗಳು. ಜತೆಗೆ ಸ್ಟ್ಯಾಂಡ್ ಅಪ್ ಕಾಮಿಡಿ ಶೋ, ತೆಳ್ಳನೆಯ ಹುಡುಗಿಯರು ಹಲವಾರು ಭಂಗಿಗಳನ್ನು ಬಹಳ ಸರಳವೆನ್ನಿಸುವಂತೆ ಮಾಡುವ ದೈಹಿಕ ಕಸರತ್ತುಗಳ ಶೋ, ಸಂಗೀತದ ಗೋಷ್ಠಿಗಳು (ಕನ್ಸರ್ಟ್ಸ್) ಇತ್ಯಾದಿಗಳು ನಡೆಯುತ್ತವೆ. ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿ ಮಾಡಬೇಕೆಂದರೆ ವೇಗಾಸ್ ಸೂಕ್ತ ತಾಣ. ಯಾಕೆಂದರೆ ಅಂತಹವರಿಗೂ (ಆ ಹಂತವನ್ನು ದಾಟಿದವರಿಗೂ!) ಯೋಗ್ಯವಾದ ಪ್ರದರ್ಶನಗಳನ್ನು ಇಲ್ಲಿ ಕಾಣಬಹುದು. ಇತ್ತೀಚಿಗೆ ಹೊಸದಾಗಿ ಸ್ಪೀಯರ್ ಎಂಬ ಕಟ್ಟಡ ವೆನೆಶಿಯನ್ ಹೊಟೇಲಿನವರಿಂದ ನಿರ್ಮಿತವಾಗಿದೆ.
ಗುಂಡನೆಯ ಈ ಕಟ್ಟಡ ಹದಿನಾರು ಲಕ್ಷ ಚದರಡಿಯ ಪರಿಧಿಯನ್ನು ಹೊಂದಿದ್ದು ಮೇಲೆ 16k ರೆಸಲೂಷನ್ ಅಳವಡಿಸಲಾಗಿದೆ. ಸದಾ ಯಾವುದಾದರೊಂದು ಬಣ್ಣದ ಬಣ್ಣದ ವಿನ್ಯಾಸದ ಚಿತ್ರಗಳು ಇದರ ಮೇಲೆ ಬರುವುದರಿಂದ ಬಹಳ ಆಕರ್ಷಕವಾಗಿ ಕಾಣಿಸುತ್ತದೆ. ಇದಲ್ಲದೇ ಇದರೊಳಗೆ ಹೋಗಿ 3ಈ ಸಿನೆಮಾ ನೋಡಬಹುದು. ಭವ್ಯವಾದ, ಸಾವಿರಾರು ಕುರ್ಚಿಗಳಿರುವ ಥೀಯೆಟರಿನ ಒಳಗೆ ನಮ್ಮೆದುರಿಗೆ ಎಲ್ಲವೂ ನಡೆಯುತ್ತಿದೆ ಎಂಬಂತೆ ಕಾಣಿಸುವ ಸಿನೆಮಾ ಮತ್ತು ಅದರ ಜತೆಗೆ ಕೂತಿರುವ ಕುರ್ಚಿಗಳಿಂದ ಸಿನೆಮಾನಲ್ಲಿ ಬರುವ ಭಾವಕ್ಕೆ ತಕ್ಕಂತೆ ಎಫೆಕ್ಟ್ ಅನ್ನು ಕೂರಿಸಿದ್ದ ರಾದ್ದರಿಂದ ನಾವು ನಿಜವಾಗಿಯೂ ಕಾಡಲ್ಲಿದ್ದೇವೇನೋ ಎಂದು ಭಾಸವಾಗುತ್ತದೆ.
ಇನ್ನೂ ಫ್ರೀಮಾಂಟ್ ಸ್ಟ್ರೀಟ್ ಎಂಬ ಮಾಂತ್ರಿಕ ರಸ್ತೆಯ ಬಗ್ಗೆ ಹೇಳದಿದ್ದರೆ ವೇಗಾಸ್ ಅಪೂರ್ಣವಾಗುತ್ತದೆ. ವೇಗಾಸಿನ ಡೌನ್ ಟೌನ್ ಅಂದರೆ ನಗರದ ಕೇಂದ್ರಭಾಗದಲ್ಲಿ ಬರುವ ಈ ತಾಣದಲ್ಲಿ ತಲೆಯ ಮೇಲೆ ಚಪ್ಪರದಂತೆ ಹಾಕಿರುವ ಡಿಸ್‌ಪ್ಲೇ ಇಡೀ ರಸ್ತೆಯನ್ನು ಆವರಿಸಿದ್ದು ತಲೆಯೆತ್ತಿ ನೋಡಿದಾಗಲೆಲ್ಲ ಕಾಣುವ ವಿಭಿನ್ನವಾದ ವಿನ್ಯಾಸಗಳ ಚಿತ್ರಗಳೆಲ್ಲ ಪ್ರತೀ ಬಾರಿಯೂ ಹೊಸದೆನ್ನಿಸುತ್ತವೆ. ಇದು ಅಗ್ಗದ ಕಸಿನೋಗಳಿರುವ ಜಾಗ. ಇಲ್ಲಿ ರಸ್ತೆಯ ಮೇಲೆ ಹಲವಾರು ಬ್ಯಾಂಡ್‌ಗಳು ಲೈವ್ ನಡೆಯುತ್ತಿರುತ್ತವೆ. ಕಲಾವಿದರು ಅಲ್ಲಲ್ಲಿ ನಿಂತು ತಮಗಿರುವ ಪ್ರತಿಭೆಯನ್ನು ಪ್ರದರ್ಶಿಸುತ್ತ ಎದುರಿಗಿಟ್ಟ ಡಬ್ಬದಲ್ಲಿ ದುಡ್ಡು ಸಂಗ್ರಹಿಸುವ ಕಾಯಕದಲ್ಲಿ ನಿರತರಾಗಿರುತ್ತಾರೆ. ಜಿಪ್ ಲೈನ್, ಲೈಟ್ ಶೋಗಳು, ಮ್ಯೂಸಿಯಮ್ ಇತ್ಯಾದಿಗಳಿದ್ದು ಸಂಜೆಯ ಸಮಯದಲ್ಲಿ ಹೋದರೆ ಕಾಲಿಡದಷ್ಟು ಜನರಿರುತ್ತಾರೆ. ಇಷ್ಟೆಲ್ಲ ಓದಿದ ಮೇಲೆ ಈ ಮಾಂತ್ರಿಕ ವೇಗಾಸ್ ನಿಮ್ಮನ್ನು ಸಹ ಆಕರ್ಷಿಸುತ್ತಿದೆ ಅಲ್ಲವೇ?
*ಸಂಜೋತಾ ಪುರೋಹಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.