Ram Mandir: ಮೋಟರ್ ವೈಂಡಿಂಗ್ ಲೆಟರ್‌ಹೆಡ್ ಬದುಕು ಬದಲಿಸಿತು!
ಅಯೋಧ್ಯೆಯ ರಾಮಮಂದಿರಕ್ಕೆ ವಿದ್ಯುದ್ದೀಪಾಲಂಕಾರ ಮಾಡಿದ ಹೆಮ್ಮೆಯ ಕನ್ನಡಿಗ ರಾಜೇಶ್.ಆರ್. ಶೆಟ್ಟಿ ರೋಚಕ ಕಥಾಹಂದರ
Team Udayavani, Jan 29, 2024, 7:30 AM IST
ಬೆಂಗಳೂರು: ಕೆಲಸ ಹುಡುಕಿಕೊಂಡು ಹೊರಟ ವ್ಯಕ್ತಿ ಇಂದು ತನ್ನದೇ ಸಂಸ್ಥೆಯನ್ನು ಕಟ್ಟಿ, ನೂರಾರು ಕಂಪೆನಿಗಳಿಗೆ ಎಲೆಕ್ಟ್ರಿಕಲ್ ಇನ್‌ಫ್ರಾಸ್ಟ್ರಕ್ಚರ್ ಕಲ್ಪಿಸುವುದರ ಜತೆಗೆ 2500ಕ್ಕೂ ಅಧಿಕ ಮಂದಿಗೆ ಕೆಲಸ ಕೊಟ್ಟು ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ.
ಅಯೋಧ್ಯೆಯ ರಾಮಮಂದಿರಕ್ಕೆ ವಿದ್ಯು ದ್ದೀಪಾಲಂಕಾರ ಮಾಡಿದ ಹೆಮ್ಮೆಯ ಕನ್ನಡಿಗ ರಾಜೇಶ್.ಆರ್. ಶೆಟ್ಟಿ ಕಟ್ಟಿ ಬೆಳೆಸಿರುವ ಶಂಕರ್ ಎಲೆಕ್ಟ್ರಿಕಲ್ಸ್ ಇಂದು ಜನಜನಿತವಾಗಿದೆ. ಆದರೆ ಈ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆಯ ಹಿಂದೆ ರೋಚಕ ಕಥಾಹಂದರವೇ ಇದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ತಾಲೂಕಿನ ಮಿಜಾರಿನವರಾದ ರಾಜೇಶ್ ಶೆಟ್ಟಿ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ. ಐಟಿಐ, ಬಿಎಚ್‌ಇಎಲ್ ಸೇರಿದಂತೆ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದವರ ನಡುವೆಯೇ ಬೆಳೆದುಬಂದ ರಾಜೇಶ್ ಶೆಟ್ಟಿ ಅವರ ತಂದೆ ಮಾತ್ರ ಹೊಟೇಲ್‌ನಲ್ಲಿ ಕೆಲಸ ಮಾಡಿ ಕೊಂಡಿದ್ದವರು. ಬಡತನದ ನಡುವೆ ಪ್ರೌಢಶಿಕ್ಷಣ ಪೂರೈಸಿದ ಅವರಿಗೆ ಮುಂದೇನು ಓದ ಬೇಕೆಂಬ ಕಲ್ಪನೆಯೂ ಇರಲಿಲ್ಲ. ಅನೇಕರು ಅನೇಕ ರೀತಿಯ ಸಲಹೆಗಳನ್ನು ಕೊಟ್ಟರು. ಆರ್ಥಿಕ ಪರಿಸ್ಥಿತಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದಿದ್ದ ಅಂಕಗಳ ಆಧಾರದ ಮೇಲೆ ಎಂಇಐ ಪಾಲಿಟೆಕ್ನಿಕ್ ಸೇರಿದರು. ಮೀಸಲಾತಿ ಇಲ್ಲದ ಸಾಮಾನ್ಯ ವರ್ಗದಡಿ ದಾಖಲಾತಿ ಸಿಕ್ಕಿದ್ದರಿಂದ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಆಸಕ್ತಿಯಿದ್ದರೂ ಅನಿವಾರ್ಯವಾಗಿ ಸಿವಿಲ್ ವಿಭಾಗ ಆಯ್ಕೆ ಮಾಡಿಕೊಂಡಿದ್ದರು. ಪ್ರಾಂಶು ಪಾಲರನ್ನು ಕಾಡಿ, ಬೇಡಿ ಎಲೆಕ್ಟ್ರಿಕಲ್ಸ್ ವಿಭಾಗದಲ್ಲಿ ಓದು ಮುಗಿಸಿದರು.
ಎಲೆಕ್ಟ್ರಾನಿಕ್ ಸಿಟಿಯಲ್ಲಿದ್ದ ಐಟಿಐ ಕಾರ್ಖಾನೆ ಯಲ್ಲಿ 725 ರೂ. ಸ್ಟೈಫಂಡ್‌ನೊಂದಿಗೆ ಅಪ್ರಂಟೀ ಸ್‌ಶಿಪ್ ತರಬೇತಿ ಪಡೆದರು. ಮಿತ್ತಲ್ ಟವರ್‌ನಲ್ಲಿದ್ದ ಮ್ಯಾಸ್ಕಾಟ್ ಕಂಪೆನಿಯ ಟೆಕ್ನಿಶಿಯನ್ ಹುದ್ದೆಯನ್ನೂ 1997ರಲ್ಲಿ ಗಿಟ್ಟಿಸಿಕೊಂಡಿದ್ದರು. ಮ್ಯಾಸ್ಕಾಟ್ ಕಂಪೆನಿ ವಿಸ್ತಾರಗೊಂಡಿತು. ಟೆಕ್ನಿಶಿ ಯನ್ ಹುದ್ದೆಯ ಜತೆಗೆ ಎಕ್ಸಿಕ್ಯುಟಿವ್ ಕೆಲಸಕ್ಕೂ ಅರ್ಜಿ ಹಾಕಲು ಮುಂದಾದಾಗ ಸಂಸ್ಥೆಯ ಮಖ್ಯ ಸ್ಥರಾಗಿದ್ದ ಸಿ.ಎನ್.ಅಬ್ರಹಾಂ ಅವರು ಕೆಲಸ ಕೊಡಲು ನಿರಾಕರಿಸಿದರು. ಪಟ್ಟು ಬಿಡದ ರಾಜೇಶ್, ಅಬ್ರಹಾಂ ಅವರಿಗೆ ದುಂಬಾಲು ಬಿದ್ದರು. ಪರಿಪರಿ ಯಾಗಿ ಬೇಡಿಕೊಂಡರೂ ಕೆಲಸ ಕೊಡದ ಅಬ್ರಹಾಂ, ಲೆಟರ್ ಹೆಡ್ ಒಂದನ್ನು ತಮಗೆ ತಂದು ಕೊಡುವಂತೆ ನಿರ್ದೇಶನ ನೀಡಿದ್ದರು. ಇಲ್ಲದಿದ್ದರೆ ಕಂಪೆನಿಯೊಳಗೆ ಕಾಲಿಡದಂತೆ ಎಚ್ಚರಿಕೆಯನ್ನೂ ಕೊಟ್ಟಿದ್ದರು.
ಇದ್ದ ಕೆಲಸವನ್ನೂ ಕಳೆದುಕೊಳ್ಳುವ ಭೀತಿಯಲ್ಲಿ ಸ್ನೇಹಿತರೊಬ್ಬರ ತಂದೆ ನಡೆಸುತ್ತಿದ್ದ ಶಂಕರ್ ಮೋಟರ್ ಅಂಡ್ ವೈಂಡಿಂಗ್ ಸಂಸ್ಥೆಯ ಲೆಟರ್ ಹೆಡ್‌ನ್ನು ಅಬ್ರಹಾಂ ಅವರಿಗೆ ನೀಡಿದರು. ಅದನ್ನು ಶಂಕರ್ ಎಲೆಕ್ಟ್ರಿಕಲ್ಸ್ ಎಂದು ತಿದ್ದುಪಡಿ ಮಾಡಿ ಮ್ಯಾಸ್ಕಾಟ್ ಸಂಸ್ಥೆಯ ಎಲೆಕ್ಟ್ರಿಕಲ್ ಇನ್‌ಫ್ರಾಸ್ಟ್ರಕ್ಚರ್ ನಿರ್ವಹಣೆಯ ಹೊಣೆಯನ್ನು ರಾಜೇಶ್ ಅವರಿಗೆ ಗುತ್ತಿಗೆ ಮೂಲಕ ನೀಡಿದರು.
ಆರೇಳು ತಿಂಗಳಿಂದ ರಾಜೇಶ್‌ರ ಕಾರ್ಯ ವೈಖರಿ, ದಕ್ಷತೆ ಗಮನಿಸಿದ್ದ ಅಬ್ರಹಾಂ, ತಮ್ಮ ಕಂಪೆನಿ ಯಲ್ಲಿ ಕೆಲಸಗಾರನಾಗಿ ಇಟ್ಟುಕೊಳ್ಳುವ ಬದಲು ರಾಜೇಶ್‌ರನ್ನೇ ಶಂಕರ್ ಎಲೆಕ್ಟ್ರಿಕಲ್ಸ್‌ನ ಮಾಲಕರ ನ್ನಾಗಿ ಮಾಡಿ, 4,950 ರೂ. ಮೊತ್ತದ ಮೊಟ್ಟ ಮೊದಲ ಗುತ್ತಿಗೆಯನ್ನೂ ನೀಡಿದರು. ಕೆಲಸ ಕೇಳಿ ಕೊಂಡು ಹೋದ ರಾಜೇಶ್, ಅಂದಿನಿಂದ ಉದ್ಯಮಿ ಯಾಗಿ ಬೆಳೆದರು.
1998ರಲ್ಲಿ ಸ್ಥಾಪನೆಯಾದ ಶಂಕರ್ ಎಲೆಕ್ಟ್ರಿಕಲ್ಸ್ ಇದೀಗ ಬೆಂಗಳೂರು, ಹೈದರಾ ಬಾದ್, ಚೆನ್ನೈ, ಮುಂಬಯಿ ಹಾಗೂ ಮಂಗಳೂರಿ ನಲ್ಲಿ ತನ್ನ ಕಾರ್ಯವ್ಯಾಪ್ತಿ ಹೊಂದಿದೆ. ಆರಂಭದಲ್ಲಿ ಕೆಲಸಕ್ಕೆ ಯಾರೂ ಇಲ್ಲದಿದ್ದಾಗ ತಾವೊಬ್ಬರೇ ದಿನಕ್ಕೆ 10-12 ಗಂಟೆ ಕೆಲಸ ಮಾಡಿ ಪರಿಶ್ರಮದಿಂದ ಸಂಸ್ಥೆಯನ್ನು ಬೆಳೆಸಿದ್ದು, ಸದ್ಯ 2,500ಕ್ಕೂ ಅಧಿಕ ನೌಕರರಿದ್ದಾರೆ. ಸರಕಾರದ ಸೂಪರ್ ಗ್ರೇಡ್ ಪರ ವಾನಿಗೆ ಹೊಂದಿರುವ ಎಲೆಕ್ಟ್ರಿಕಲ್ ಕನ್ಸಲ್ಟೆನ್ಸಿಯಾಗಿ ಹೊರ ಹೊಮ್ಮಿದೆ. ಆರಂಭದಲ್ಲಿ ಸೊನಾಟ, ಮ್ಯಾಸ್ಕಾಟ್, ಟಾಟಾ ಎಲೆಕ್ಸಿ, ಜಯದೇವ ಆಸ್ಪತ್ರೆಯಂತಹ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ ಶಂಕರ್ ಎಲೆಕ್ಟ್ರಿಕಲ್ಸ್ ಇಂದು ನೂರಾರು ಗ್ರಾಹಕರನ್ನು ಹೊಂದಿದೆ. 500 ಕೋಟಿ ರೂಪಾಯಿ ವಾರ್ಷಿಕ ವಹಿವಾಟನ್ನು ಹೊಂದಿದೆ. ದಕ್ಷಿಣ ಭಾರತವಷ್ಟೇ ಅಲ್ಲದೆ, ಅಯೋಧ್ಯೆಯ ರಾಮಮಂದಿರಕ್ಕೆ ಎಲೆಕ್ಟ್ರಿಕಲ್ ಇನ್‌ಫ್ರಾಸ್ಟ್ರಕ್ಚರ್ ಒದಗಿಸುವ ಮೂಲಕ ಉತ್ತರ ಭಾರತಕ್ಕೂ ಕಾಲಿಟ್ಟಿದೆ.
ಮಂತ್ರಾಲಯದಲ್ಲಿ ಟರ್ನಿಂಗ್ ಪಾಯಿಂಟ್
ಚಿಕ್ಕಂದಿನಿಂದಲೂ ಸಂಪ್ರದಾಯಬದ್ಧವಾಗಿ ಬೆಳೆದು ಬಂದ ತಾವು, ತಮ್ಮ ಅಣ್ಣ ಎಲ್ಲರೂ ಮನೆಯಲ್ಲಿ ಪ್ರತೀ ಗುರುವಾರ ದೇವರ ಪೂಜೆ ಮಾಡಿಕೊಂಡು ಬರುತ್ತಿದ್ದೆವು. ದಕ್ಷಿಣ ಕನ್ನಡ ಜಿಲ್ಲೆಯು ಜನ್ಮಭೂಮಿಯಾದ್ದರಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸೇವೆಯ ಲೆಕ್ಕದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿಕೊಟ್ಟೆ. ದೇವರ ದಯೆಯಿಂದ ಸಾಕಷ್ಟು ಕೆಲಸಗಳು ಸಿಗುತ್ತಿದ್ದವು. ಅದೇ ರೀತಿ ರಾಘವೇಂದ್ರ ಸ್ವಾಮಿಗಳ ಭಕ್ತರಾಗಿ ವರ್ಷಕ್ಕೊಮ್ಮೆ ಮಂತ್ರಾಲಯಕ್ಕೆ ಹೋಗಿಬರುತ್ತಿದ್ದೆ. ಒಮ್ಮೆ ಧರ್ಮಸ್ಥಳದ ಪರಿಚಿತರೊಂದಿಗೆ ಹೋದಾಗ ಶ್ರೀಸುಬುಧೇಂದ್ರತೀರ್ಥ ಸ್ವಾಮೀಜಿ ಅವರು ಮಂತ್ರಾಕ್ಷತೆ ನೀಡಿ ನನ್ನ ಬಗ್ಗೆ ವಿಚಾರಿಸಿದರು. ಖಾಸಗಿ ಕೋಣೆಗೆ ಕರೆದು ಮೂರು ಕಡತಗಳನ್ನು ನನ್ನ ಕೈಗಿಟ್ಟು, ಇದರಲ್ಲೊಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಆದೇಶಿಸಿದರು.
ತಿರುಪತಿಯಲ್ಲಿರುವ ಮಂತ್ರಾಲಯ ಮಠಕ್ಕೆ ಲೈಟಿಂಗ್, ಆಂಧ್ರಪ್ರದೇಶದ ಮಂತ್ರಾಲಯ ಹೊರಭಾಗ ಸೌರವಿದ್ಯುತ್ ಎಲ್‌ಇಡಿ ಲೈಟಿಂಗ್ ಮಾಡುವುದು ಹಾಗೂ ಮಠದ ಮುಂಭಾಗ 365 ಕಲರ್ ಆರ್‌ಜಿಬಿ ಲೈಟಿಂಗ್ ಮಾಡಬೇಕೆನ್ನುವುದು ಮೂರು ಕಡತಗಳಲ್ಲಿತ್ತು. ಮಂತ್ರಾಲಯ ದಲ್ಲಿನ ಮಠದ ಮುಂಭಾಗಕ್ಕೆ 365 ಬಣ್ಣದ ಆರ್‌ಜಿಬಿ ಲೈಟಿಂಗ್ ಮಾಡುವ 2014ರಲ್ಲಿ ಬಜಾಜ್ ಕಂಪೆನಿ ಸರ್ವೇ ಮಾಡಿದ್ದ ಕಡತವನ್ನು ಹಿಡಿದು ಇದನ್ನು ನಾನು ಮಾಡುತ್ತೇನೆ ಎಂದೆ. ಶಕ್ತಿ ಇದೆಯೇ ಎಂದರು. ಬೃಂದಾವನದಲ್ಲಿ ರಾಯರಿದ್ದಾರೆ, ನೀವು ಶಕ್ತಿ ಕೊಡಿಸಿದರೆ ನಾನು ಮಾಡುತ್ತೇನೆ ಎಂದಿದ್ದೆ. ಮೈಸೂರು ಅರಮನೆಯ ವಿದ್ಯುತ್ ಅಲಂಕಾರದಂತೆ 365 ಕಲರ್ ವಿದ್ಯುತ್ ಅಳವಡಿಸಬೇಕು ಎಂದರು. ಜೂನ್-ಜುಲೈ ಒಳಗಾಗಿ 150 ವ್ಯಾಟೇಜ್‌ನ ಜರ್ಮನಿ ಫಿಟ್ಟಿಂಗ್‌ಗಳನ್ನು ಪೂರೈಸುವುದಾಗಿ ಬಜಾಜ್ ಒಪ್ಪಿಕೊಂಡಿತ್ತು. ಈ ಬಾರಿ ಆಗಸ್ಟ್‌ನಲ್ಲಿ ನಡೆಯುವ ರಾಯರ ಆರಾಧನೆಯಲ್ಲಿ ವಿಶೇಷ ಆಕರ್ಷಣೆ ಇರಲಿದೆ ಎಂದು ಗುರುಗಳು ಪ್ರಕಟಿಸಿಬಿಟ್ಟಿದ್ದರು.
ಬಜಾಜ್‌ನಿಂದ ಸಹಕಾರ ಸಿಗದೇ ಇದ್ದರಿಂದ ಸಾಧ್ಯವಾಗುತ್ತಿಲ್ಲ ಎಂದು ಗುರುಗಳಿಗೆ ತಿಳಿಸಿದಾಗ ಮಂಚಾಲಮ್ಮಳಿಗೆ ಪ್ರಾರ್ಥಿಸಿ ಎಲ್ಲವೂ ಆಗಲಿದೆ ಎಂದಿದ್ದರು. ಬಳಿಕ ಫಿಲಿಪ್ಸ್, ವಿಪ್ರೋ, ಹ್ಯಾವೆಲ್ಸ್ ಕಂಪೆನಿಗಳನ್ನು ಸಂಪರ್ಕಿಸಿದ್ದೆ. ಯಾವುದೋ ಇವೆಂಟ್ ಮ್ಯಾನೇಜ್‌ಮೆಂಟ್‌ಗಾಗಿ ಜರ್ಮನಿಯಿಂದ ದಿಲ್ಲಿಗೆ ಬಂದಿದ್ದ ಪರಿಕರಗಳು ಮಂತ್ರಾಲಯಕ್ಕೆ ಬಂದವು. ಹಗಲು-ರಾತ್ರಿ ಕೆಲಸ ಮಾಡಿ 96 ಗಂಟೆಗಳಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿದೆವು. ಅಂದಿನಿಂದ ಸುಬುಧೇಂದ್ರ ತೀರ್ಥರ ಆಶೀರ್ವಾದ ನನ್ನ ಮೇಲೆ ಇದ್ದೇ ಇದೆ ಎನ್ನುತ್ತಾರೆ ರಾಜೇಶ್ ಶೆಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.