Autograph: ದಾ.ಸಿ.ಪ.ನ……
Team Udayavani, Feb 4, 2024, 7:45 AM IST
ದಾ.ಸಿ.ಪ.ನ. ಇದೇನಪ್ಪ ಅಂದುಕೊಂಡ್ರಾ? ಹೀಗೆಂದರೆ ದಾರಿಯಲ್ಲಿ ಸಿಕ್ಕಾಗ ಪರಿಚಯದ ನಗುವಿರಲಿ. ಈ ವಾಕ್ಯ ಕಿವಿಗೆ ಬೀಳುತ್ತಿದ್ದಂತೆ ನೈಂಟೀಸ್ ಕಿಡ್ಸ್‌ಗೆ ತಮ್ಮ ಆಟೋಗ್ರಾಫ್ ನ ಪುಟಗಳು ನೆನಪಾಗುವುದರಲ್ಲಿ ಅನುಮಾನವೇ ಇಲ್ಲ. ಹತ್ತು ಹದಿನೈದು ವರ್ಷಗಳ ಹಿಂದೆ ಸ್ಮಾರ್ಟ್ ಫೋನ್ ಹಾವಳಿ ಇಲ್ಲದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತರ ನೆನಪು ಸದಾ ಹಸುರಾಗಿರುವಂತೆ ಮಾಡುತ್ತಿದ್ದದ್ದೇ ಈ ಆಟೋಗ್ರಾಫ್. ಎಸೆಸ್ಸೆಲ್ಸಿ, ಪಿಯುಸಿ ಅಂತಿಮ ಪರೀಕ್ಷೆಗೆ ಇನ್ನೂ ಮೂರು ತಿಂಗಳು ಇದೆ ಅನ್ನುವಾಗಲೇ ಪರೀಕ್ಷೆಗೆ ಸಿದ್ಧರಾಗುವುದಕ್ಕೂ ಮೊದಲು ವಿದ್ಯಾರ್ಥಿಗಳು ಆಟೋಗ್ರಾಫ್ ಬುಕ್ ತಯಾರಿಗೆ ಶುರುವಿಟ್ಟುಕೊಳ್ಳುತ್ತಿದ್ದರು.
ತಮ್ಮ ಗೆಳೆಯರಿಂದಲೂ, ಸಹಪಾಠಿಗಳಿಂದಲೂ, ಶಿಕ್ಷಕರಿಂದಲೂ ಆಟೋಗ್ರಾಫ್ ನಲ್ಲಿ ಶುಭ ಸಂದೇಶ, ಹಾರೈಕೆ ಪಡೆಯುಲು ಹಾತೊರೆಯುತ್ತಿದ್ದೇವೆ. ಹೀಗೆ ಪ್ರತೀ ಶುಭಾಶಯಗಳ ಮುಕ್ತಾಯಕ್ಕೂ ಮುನ್ನ ಹಾಳೆಯ ಕೊನೆಯಲ್ಲಿ ತಪ್ಪದೇ ಕಾಣಸಿಗುತ್ತಿದ್ದ ವಾಕ್ಯವೇ ದಾ.ಸಿ.ಪ.ನ. ಅಥವಾ ದಾರಿಯಲ್ಲಿ ಸಿಕ್ಕಾಗ ಪರಿಚಯದ ನಗುವಿರಲಿ.
ಆಟೋಗ್ರಾಫ್ ಬುಕ್‌ನಲ್ಲಿ ಈ ವಾಕ್ಯ ನೋಡಿದಾಗ ನನಗೆ ಆ ಸಂದರ್ಭದಲ್ಲಿ ನಗು ಬಂದಿತ್ತು. ದಾರಿಯಲ್ಲಿ ಸಿಕ್ಕಾಗ ಪರಿಚಯದ ನಗುಬೀರಲು ಅವರು ಯಾರೋ ಒಂದೆರಡು ಬಾರಿ ಸಿಕ್ಕು ನಕ್ಕ ಹೆಸರಿಗಷ್ಟೇ ಪರಿಚಿತರಲ್ಲ. ವರ್ಷಗಳ ಕಾಲ ನಮ್ಮ ಜತೆಗೆ ಓದಿದವರು. ಅವರು ಖಾಲಿ ಪರಿಚಿತರು ಅಲ್ಲವಲ್ಲ? ಎನ್ನುವುದು ಆ ನಗುವಿಗೆ ಕಾರಣ.
ಆದರೆ ಇದೆಲ್ಲಾ ಆಗಿ ಹತ್ತು ವರ್ಷಗಳ ಅನಂತರ ಈಗ ಈ ಸಾಲುಗಳು ನೆನಪಾದಾಗೆಲ್ಲಾ ಮನಸ್ಸು ಭಾರವಾಗುತ್ತೆ. ಪರಿಚಯದ ನಗು ಬೀರಲು ದಾರಿಯಲ್ಲಿ ಏಕೆ? ಸ್ಮಾರ್ಟ್ ಫೋನಿನ ಪರದೆಯ ಮೇಲು ಎಲ್ಲರನ್ನು ಕಾಣಲಾಗುತ್ತಿಲ್ಲ. ಬೆರಳೆಣಿಕೆಯ ಸ್ನೇಹಿತರಷ್ಟೇ ಇಂದು ಸಂಪರ್ಕ ಉಳಿಸಿಕೊಂಡಿದ್ದೇವೆ.
ವೇಗದ ಬದುಕಿನಲ್ಲಿ ಧಾವಂತದ ಹೆಜ್ಜೆಗಳನ್ನಿಟ್ಟು ನಡೆಯುವ ಭರದಲ್ಲಿ ಸ್ನೇಹವನ್ನು, ಸ್ನೇಹಿತರನ್ನು ಉಳಿಸಿಕೊಳ್ಳುವುದರಲ್ಲಿ ಎಲ್ಲಿಯೋ ಎಡವುತ್ತಿದ್ದೇವೆ. ತರಗತಿಯಲ್ಲಿದ್ದಾಗ ಪಾಠದ ನಡುವೆಯೂ ಶಿಕ್ಷಕರ, ಉಪನ್ಯಾಸಕರ ಕಣ್ಣು ತಪ್ಪಿಸಿ ಸಮಯದ ಪರಿವೇ ಇಲ್ಲದೇ ಮಾತನಾಡುತ್ತಿದ್ದ ನಮಗೆ ಈಗ ದೂರದಲ್ಲಿರುವ ಗೆಳೆಯ/ಗೆಳತಿಗೆ ಕರೆ ಮಾಡಿ ನಿಮಿಷಗಳ ಕಾಲ ಮಾತನಾಡಲು ಪುರುಸೊತ್ತು ಇಲ್ಲ.
ಪುರುಸೊತ್ತು ಸಿಕ್ಕಲ್ಲಿ ನಾನೇ ಏಕೆ ಕರೆ ಮಾಡಲಿ? ಅವರೇ ಮಾಡಲಿ, ಇಷ್ಟು ದಿನ ಕರೆ ಮಾಡಲಿಲ್ಲ ಈಗ ಮಾಡಿದರೆ ಏನಂದುಕೊಳ್ಳುತ್ತಾರೋ ಏನೋ? ಅವರು ಬ್ಯುಸಿ ಇದ್ದರೆ?, ನನ್ನ ಮಾತಿಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ ಅಂದರೆ? ಎಂದು ಅನಗತ್ಯ ಯೋಚನೆಗಳು ನಮ್ಮ ಮನಸ್ಸನ್ನು ಹೊಕ್ಕು ಕರೆ ಮಾಡದಂತೆ ತಡೆಯುತ್ತವೆ. ಕೊನೆಗೂ ನಾವು ಅವರಿಗೆ ಕರೆ ಮಾಡುವುದೇ ಇಲ್ಲ.
ಇಂದು ಸ್ನೇಹ ಸಂಪಾದಿಸುವುದು ಸಾಧನೆಯಲ್ಲ, ಅದನ್ನು ಉಳಿಸಿಕೊಳ್ಳುವುದೇ ನಿಜವಾದ ಸಾಧನೆ ಎನ್ನುವಂತಾಗಿದೆ. ನಮ್ಮೊಂದಿಗೆ ಕಲಿತ ಪ್ರತಿಯೊಬ್ಬರ ಹೆಸರು ನಮಗೆ ನೆನಪಿದೆಯಾ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೇ ಎದುರಾಗುವುದು ನಿರಾಸೆಯೇ. ಅದೆಷ್ಟು ಸಹಪಾಠಿಗಳ ಹೆಸರು ಹಾಗಿರಲಿ, ಮುಖಪರಿಚಯವೂ ಮರೆತಿದ್ದೇವೆ. ದಾರಿಯಲ್ಲಿ ಸಿಕ್ಕಾಗ ಪರಿಚಯದ ನಗು ಬೀರಲು ನೂರು ಬಾರಿ ಯೋಚಿಸುವಂತಾಗಿದೆ.
ಅದೇನೇ ಇರಲಿ ಸ್ನೇಹವನ್ನು ಉಳಿಸಿಕೊಳ್ಳಲು ಮೊದಲ ಹೆಜ್ಜೆ ನಾವೇ ಇಡುವುದರಲ್ಲಿ ತಪ್ಪೇನಿಲ್ಲ. ಇಲ್ಲದ ಯೋಚನೆಗಳನ್ನು ಬದಿಗಿಟ್ಟು ಒಂದು ಹೆಜ್ಜೆ ಮುಂದಿಡಿ, ಯಾರಿಗೆ ಗೊತ್ತು ಮತ್ತೆ ನಮ್ಮ ಸ್ನೇಹ ಅವರು ಬಯಸುತ್ತಿದ್ದರೇ ನಮ್ಮೆಡೆಗೆ ಅವರು ಹೆಜ್ಜೆ ಹಾಕುತ್ತಾರೆ. ಹೆಜ್ಜೆ ಎತ್ತಿಟ್ಟಮೇಲೆ ಇನ್ನೇನು ಜತೆಗೆ ಹೆಜ್ಜೆ ಹಾಕೋದಷ್ಟೇ. ಇನ್ಯಾಕೆ ತಡ ಮಾತನಾಡುವ ಮನಸ್ಸಿದ್ದರೂ ಇಲ್ಲದ ಹಿಂಜರಿಕೆಯಿಂದ ಇಷ್ಟುದಿನ ಸುಮ್ಮನಿದ್ದವರು ಒಮ್ಮೆ ಮೊಬೈಲ್ ಕೈಗೆತ್ತಿಕೊಂಡು ಫೋನ್ ಹಾಯಿಸಿ. ಮರೆತ ಸ್ನೇಹ ಮತ್ತೆ ಸಂಪಾದಿಸಿ.
–ಸುಶ್ಮಿತಾ
ನೇರಳಕಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.