UCC; ಸಮಾನ ಸಂಹಿತೆಗೆ ಉತ್ತರಾಖಂಡ ಮುನ್ನುಡಿ: ಇಂದು ಐತಿಹಾಸಿಕ ಮಸೂದೆ ಮಂಡನೆ
Team Udayavani, Feb 6, 2024, 6:30 AM IST
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವ ಕುರಿತು ವರ್ಷದಿಂದ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ ಉತ್ತರಾಖಂಡ ಸರಕಾರ ಈ ವಿಷಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರಕಾರದ ಸಚಿವ ಸಂಪುಟವು ಯುಸಿಸಿ ಮಸೂದೆಗೆ ಒಪ್ಪಿಗೆ ನೀಡಿದ್ದು, ಇಂದು ( ಮಂಗಳವಾರ ) ಮಸೂದೆಯನ್ನು ಮಂಡಿಸಲಾಗುತ್ತಿದೆ. ಒಂದು ವೇಳೆ ಇದು ಅನುಮೋದನೆಗೊಂಡರೆ ಬಹುದೊಡ್ಡ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ. ಹಾಗಾಗಿ ಉತ್ತರಾಖಂಡದಲ್ಲಿ ಮಸೂದೆಯ ಪ್ರಕ್ರಿಯೆ ನಡೆದು ಬಂದ ಹಾದಿ, ಸಮಿತಿಯಲ್ಲಿದ್ದ ಸದಸ್ಯರ ಕುರಿತು, ಸಮಿತಿಯ ಅಧ್ಯಯನದ ಬಗ್ಗೆ ಇಲ್ಲಿ ವಿವರವಾಗಿ ನೀಡಲಾಗಿದೆ.
20 ತಿಂಗಳ ಅಧ್ಯಯನ, 750 ಪುಟಗಳ ವರದಿ
2022ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಏಕರೂಪ ಕಾನೂನನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರಕಾರ ಅದನ್ನು ಪೂರೈಸುವುದಕ್ಕಾಗಿ, ಅಧಿಕಾರ ವಹಿಸಿಕೊಂಡ ತತ್‌ಕ್ಷಣ, 2022ರ ಮೇ ತಿಂಗಳಿನಲ್ಲಿ ಯುಸಿಸಿ ಸಂಬಂಧಿತ ಅಧ್ಯಯನಕ್ಕಾಗಿ ತಜ್ಞರ ತಂಡವನ್ನು ರಚಿಸಿತ್ತು. 20 ತಿಂಗಳ ಸುದೀರ್ಘ ಅವಧಿಯ ಅನಂತರ, ಸುಮಾರು 750 ಪುಟಗಳ ವರದಿಯನ್ನು 2024ರ ಫೆ.2ರಂದು ತಜ್ಞರ ತಂಡವು ಉತ್ತರಾಖಂಡದ ಮುಖ್ಯಮಂತ್ರಿಗೆ ಸಲ್ಲಿಸಿದೆ. ಐದು ಜನರನ್ನು ಒಳಗೊಂಡ ತಜ್ಞರ ತಂಡಕ್ಕೆ ಈ ಕಾನೂನು ಜಾರಿಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ, ಅಧ್ಯಯನ ನಡೆಸಿ ವರದಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ವಿವಾಹ, ವಿಚ್ಛೇದನ, ಲಿವ್ ಇನ್ ರಿಲೇಷನ್‌ಶಿಪ್, ಆಸ್ತಿ ಹಕ್ಕು, ದತ್ತು ನಿರ್ವಹಣೆ, ಉತ್ತರಾಖಂಡದ ನಿವಾಸಿಗಳ ಉತ್ತರಾಧಿಕಾರ ಹಾಗೂ ವೈಯಕ್ತಿಕ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಪರಿಶೀಲಿಸುವುದು ತಂಡದ ಮುಖ್ಯ ಕಾರ್ಯವಾಗಿತ್ತು.
ಅಸ್ಸಾಂ, ಗುಜರಾತ್ ರಾಜ್ಯದಲ್ಲೂ ಅಳವಡಿಕೆ
ಉತ್ತರಾಖಂಡದಲ್ಲಿ ಈ ಮಸೂದೆ ಜಾರಿಯಾದರೆ, ಉಳಿದ ರಾಜ್ಯಗಳಲ್ಲಿ ಅಳವಡಿಸಲು ಇದು ಮಾದರಿಯಾಗಲಿದೆ. ಈಗಾಗಲೇ ಅಸ್ಸಾಂ ಹಾಗೂ ಗುಜರಾತ್ ಯುಸಿಸಿ ಮಸೂದೆಯ ಅಳವಡಿಕೆಯಲ್ಲಿ ಒಲವು ತೋರಿಸಿದೆ. ಉತ್ತರಾಖಂಡದ ಅನಂತರ ಈ ಮಸೂದೆಯನ್ನು ಗುಜರಾತ್ ಹಾಗೂ ಅಸ್ಸಾಂಗೆ ನೀಡಲಾಗುವುದು. ಅಸ್ಸಾಂನಲ್ಲಿ ಇದು ತತ್‌ಕ್ಷಣ ಜಾರಿಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.
ಧಾರ್ಮಿಕ ಮುಖಂಡರೊಂದಿಗೆ ಚರ್ಚೆ
ತಂಡವು ಸಾರ್ವಜನಿಕ ಸಭೆಗಳನ್ನು ನಡೆಸುವುದರ ಮೂಲಕ ಈ ಕಾನೂನಿನ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಅಲ್ಲದೇ ಹರಿದ್ವಾರದ ಹಿಂದೂ ಧಾರ್ಮಿಕ ಮುಖಂಡರು ಹಾಗೂ ಎಲ್ಲ ಹಿಂದೂ ಅಖಾಡದೊಂದಿಗೆ ಭೇಟಿ ಮಾಡಿ ಚರ್ಚಿಸಿದೆ. ಜತೆಗೆ ಮುಸ್ಲಿಂ ಪ್ರಾಬಲ್ಯ ಪ್ರದೇಶಗಳಾದ ಖಾಲಿಯಾರ್ ಶರೀಫ್, ರಾಮ್‌ನಗರ್, ಮಂಗಳೂರು, ಹಲ್ªವಾನಿ, ಕಾಶಿಪುರ ಹಾಗೂ ವಿಕಾಸ ನಗರಗಳಲ್ಲಿ ಸಭೆಗಳನ್ನು ನಡೆಸಿದೆ. ಇತರ ದೇಶಗಳಲ್ಲಿನ ನಾಗರಿಕ ಸಂಬಂಧಿ ಕಾನೂನುಗಳ ಬಗ್ಗೆಯೂ ಕಮಿಟಿ ಅಧ್ಯಯನ ನಡೆಸಿದೆ. ಧರ್ಮದಿಂದ ಕಾನೂನುಗಳನ್ನು ನಿಯಂತ್ರಿಸುವ ದೇಶಗಳಲ್ಲಿನ ಕಾನೂನನ್ನು ತಂಡ ಪರಿಶೀಲಿಸಿದೆ. ನಾಗರಿಕ ಕಾನೂನಿಗೆ ಸಂಬಂಧಿಸಿದಂತೆ ವಿವಿಧ ಆಯೋಗಗಳ ಮುಂದೆ ಇರುವ ಧಾರ್ಮಿಕ ಹಾಗೂ ವೈಯಕಿಕ ಕಾನೂನು, ಪ್ರಕರಣಗಳನ್ನು ತನ್ನ ಅಧ್ಯಯನದಲ್ಲಿ ಒಳಪಡಿಸಿಕೊಂಡಿದೆ. ಉತ್ತರಾಖಂಡದಲ್ಲಿ ಸಕ್ರಿಯವಾಗಿರುವ ಹತ್ತು ರಾಜಕೀಯ ಪಕ್ಷಗಳನ್ನು ಈ ಕುರಿತು ಚರ್ಚಿಸುವಂತೆ ಆಹ್ವಾನಿಸಿತ್ತು. ಇದರಲ್ಲಿ ಕಾಂಗ್ರೆಸ್, ಆಪ್ ಹಾಗೂ ಸಿಪಿಐನ್ನು ಹೊರತು ಪಡಿಸಿ ಉಳಿದ ಪಕ್ಷಗಳು ಪಾಲ್ಗೊಂಡು, ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಿದ್ದವು.
2.3 ಲಕ್ಷ ಸಲಹೆ ಸಂಗ್ರಹ
ಸಮಿತಿ ರಚನೆಯಾದ ಸಮಯದಿಂದ ಸಾರ್ವಜನಿಕರಿಂದ ಸಮಿತಿಯು 2.3 ಲಕ್ಷ ಸಲಹೆಗಳನ್ನು ಸ್ವೀಕರಿಸಿದೆ. ಹೆಚ್ಚಿನ ಸಲಹೆಗಳನ್ನು ಪತ್ರಗಳು, ರಿಜಿಸ್ಟರ್‌ಪೋಸ್ಟ್‌ಗಳು, ಇಮೇಲ್ ಹಾಗೂ ಆನ್‌ಲೈನ್ ಪೋರ್ಟಲ್‌ನಲ್ಲಿ ಮೆಸೇಜ್‌ಗಳ ಮುಖಾಂತರ ಪಡೆದಿದೆ. 2023ರ ಸೆಪ್ಟಂಬರ್ ವೇಳೆಗೆ ಉತ್ತರಾಖಂಡದ ರಾಜ್ಯಾದ್ಯಂತ ಸಮಿತಿಯು 38 ಸಾರ್ವಜನಿಕ ಸಭೆ, ಸಂವಾದಗಳನ್ನು ನಡೆಸಿದೆ. 10 ಸಾವಿರ ಜನರೊಂದಿಗೆ ಚರ್ಚಿಸಲು, ಸಲಹೆಗಳನ್ನು ಅಧ್ಯಯನ ಮಾಡಲು ಸಮಿತಿಯು 72 ಸಭೆಗಳನ್ನು ನಡೆಸಿದೆ.
ಸಮಿತಿಯಲ್ಲಿ ಯಾರ್ಯಾರು ?
1. ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ
2. ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ
3. ಮನು ಗೌರ್
4. ಶತ್ರುಘ್ನ ಸಿಂಗ್
5. ಡಾ| ಸುರೇಖಾ ದಂಗ್ವಾಲ್
ಬಹುಪತ್ನಿತ್ವ ಹಲಾಲ್ ನಿಷೇಧ,ಲಿವ್ ಇನ್‌ಗೆ ನೋಂದಣಿ ಕಡ್ಡಾಯ,ಜನಸಂಖ್ಯೆ ನಿಯಂತ್ರಣ
ಕರಡು ಮಸೂದೆಯ ಅಂಶಗಳು
ಹಲಾಲ್, ಇದ್ದತ್, ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ
ಬಹುಪತ್ನಿತ್ವ ಪದ್ಧತಿಗೆ ನಿಷೇಧ
ಮಕ್ಕಳ ಸಂಖ್ಯೆಯಲ್ಲಿ ಏಕರೂಪತೆ ಮುಂತಾದ ಜನಸಂಖ್ಯೆ ನಿಯಂತ್ರಣ ಉದ್ದೇಶದ ಕ್ರಮಗಳು
ಲಿವ್ ಇನ್ ರಿಲೇಷನ್‌ಶಿಪ್ (ಸಹ ಜೀವನ) ನೋಂದಣಿ ಕಡ್ಡಾಯ
ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಪಾಲು
ಧರ್ಮದ ಹಂಗಿಲ್ಲದೆ, ಯುವಕ ಮತ್ತು ಯುವತಿಯರಿಗೆ ಮದುವೆಯ ವಯೋಮಿತಿ ನಿಗದಿ
ಆಸ್ತಿ ವಿಚಾರದಲ್ಲಿ ಮಹಿಳೆ ಹಾಗೂ ಪುರುಷರಿಗೆ ಸಮಾನ ಹಕ್ಕು
ಯುಸಿಸಿಯಿಂದ ಬುಡಕಟ್ಟು ಸಮುದಾಯಕ್ಕೆ ವಿನಾಯಿತಿ
ಯುಸಿಸಿ ವ್ಯಾಪ್ತಿಯಿಂದ ಬುಡಕಟ್ಟು ಸಮುದಾಯ ಹೊರಕ್ಕೆ ಇಡುವಂತೆ ಸಮಿತಿ ಸಲಹೆ ನೀಡಿದೆ. ಉತ್ತರಾಖಂಡದ ಒಟ್ಟು ಜನಸಂಖ್ಯೆಯಲ್ಲಿ ಶೇ.2.9 ರಷ್ಟು ಬುಡಕಟ್ಟು ಸಮುದಾಯವಿದೆ. ಈ ಸಮು ದಾಯವು ಮೊದಲಿನಿಂದಲೂ ಯುಸಿಸಿಯ ವಿರುದ್ಧ ತಮ್ಮ ಭಿನ್ನಾಭಿಪ್ರಾಯವನ್ನು ವÂಕ್ತಪಡಿಸುತ್ತಲೇ ಇವೆ. ಈ ಕಾರಣದಿಂದ ಸಲಹೆಯನ್ನು ನೀಡಲಾಗಿದೆ.
ಪರಿಣಾಮ ಏನು?
ಈ ಕಾನೂನು ಮದುವೆ, ಬಹುಪತ್ನಿತ್ವ, ಉತ್ತರಾಧಿಕಾರಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳ ಪ್ರಾಮುಖ್ಯವನ್ನು ಕಡಿಮೆಗೊಳಿಸಬಹುದು, ಮುಸ್ಲಿಂ ಮಹಿಳೆಯರು ದತ್ತು ಪಡೆಯುವ ಅಧಿಕಾರವನ್ನು ಪಡೆಯಬಹುದು ಹಾಗೂ ಬಹುಪತ್ನಿತ್ವವು ಅಪರಾಧವೆಂದು ಪರಿಗಣನೆಗೆ ಒಳಪಡಬಹುದು. ಜತೆಗೆ ಎಲ್ಲ ಸಮುದಾಯಗಳಲ್ಲಿ ಮದುವೆಯ ವಯಸ್ಸನ್ನು ಹೆಣ್ಣು ಮಕ್ಕಳಿಗೆ 18 ಹಾಗೂ ಗಂಡು ಮಕ್ಕಳಿಗೆ 21 ಎಂದು ನಿಗದಿ ಪಡಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.