E-Kazana: ಕಡತ ಮಿಸ್ಸಿಂಗ್ ಸಮಸ್ಯೆಗೆ ಇ-ಖಜಾನೆ ಪರಿಹಾರ
Team Udayavani, Feb 6, 2024, 4:48 PM IST
ಕೋಲಾರ: ಸರ್ಕಾರಿ ಮತ್ತು ಖಾಸಗಿ ಜಮೀನುಗಳ ಕಂದಾಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುಭದ್ರವಾಗಿ ಸುರಕ್ಷಿತವಾಗಿ ಸಂಗ್ರಹಿಸುವ ಭೂ ಸುರಕ್ಷಾ ಇ-ಖಜಾನೆ ಕಾರ್ಯಕ್ರಮ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ.
ಕೋಲಾರ ಜಿಲ್ಲಾ ಕೇಂದ್ರದಲ್ಲಿ ಉಸ್ತುವಾರಿ ಸಚಿವ ಭೈರತಿ ಸುರೇಶ್ ತಹಶೀಲ್ದಾರ್ ಕೇಂದ್ರದಲ್ಲಿರುವ ಕಂಪ್ಯೂಟರ್‌ನಲ್ಲಿ ಈಗಾಗಲೇ ದಾಖಲಾಗಿರುವ ಭೂದಾಖಲೆಗಳನ್ನು ಪರಿಶೀಲಿಸಿ ಚಾಲನೆ ನೀಡಿದರು. ಇದೊಂದು ದೊಡ್ಡ ಮಟ್ಟದ ಗಣಕೀಕರಣ ಕಾರ್ಯವಾಗಿದ್ದು, ಅಧಿಕಾರಿಗಳಿಂದ ಸಿದ್ಧ ಉತ್ತರವಾಗಿ ಸಿಗುತ್ತಿದ್ದ ಕಡತ ಮಿಸ್ಸಿಂಗ್ ಎಂಬ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ.
ಸಾಕಷ್ಟು ಸಮಸ್ಯೆ: ಸರ್ಕಾರಿ ಕಚೇರಿಗಳಿಂದ ದಾಖಲೆಗಳನ್ನು ಪಡೆಯುವುದು ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳನ್ನು ತಂದೊಡುತ್ತಿದ್ದವು. ದಾಖಲೆಗಳು ಇಲ್ಲ ಎಂಬ ಸಿದ್ಧ ಉತ್ತರ ಸಿಗುತ್ತಿತ್ತು. ದಾಖಲೆಗಳನ್ನು ಕಾಲಮಿತಿಯೊಳಗೆ ಪಡೆಯಲು ಅಧಿಕಾರಿ ಸಿಬ್ಬಂದಿಯ ಕೈ ಬೆಚ್ಚಗೆ ಮಾಡಬೇಕಾಗಿತ್ತು. ದಾಖಲೆಗಳು ಸಿಕ್ಕರೂ ಯಾವ ಹಂತದ ದಾಖಲೆ ಎನ್ನುವುದು ತಿಳಿಯುತ್ತಿರಲಿಲ್ಲ. ಮಧ್ಯದ ಹಂತದ ದಾಖಲೆಗಳ ಆಧಾರದ ಮೇಲೆ ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ನ್ಯಾಯಾಲಯದಲ್ಲಿ ವ್ಯತಿರಿಕ್ತ ತೀರ್ಪು ಆದೇಶಗಳು ದೊರೆಯುವಂತಾಗಿದ್ದವು. ದಾಖಲೆ ಸಿಗಲೇ ಇಲ್ಲ ಎಂದರೆ ಕಡತ ಮಿಸ್ಸಿಂಗ್ ಎಂಬ ಸಿದ್ಧ ಉತ್ತರ ಸಿಗುತ್ತಿತ್ತು.
ಹಿಂದಿನ ಪದ್ಧತಿ: ಈವರೆಗೂ ಸರ್ಕಾರದ ಕಂದಾಯ ದಾಖಲೆಗಳನ್ನು ನಿರ್ವಹಣ ಅಭಿಲೇಖಾಲಯದ ಅಭಿರಕ್ಷೆಯಲ್ಲಿ ನಿರ್ವಹಿಸಲಾಗುತ್ತಿತ್ತು. ಭೂಮಂಜೂರಾತಿ, ಖಾತೆ, ಪಹಣಿ ಇನ್ನಿತರ ಕಡತಗಳನ್ನು ವರ್ಗವಾರು ವಿಂಗಡಿಸಿ ಶಾಶ್ವತ ಕಡತಗಳು, 30, 10, 5 ಮತ್ತು 1 ವರ್ಷದ ಅವಧಿಯ ಕಡತಗಳೆಂದು ವಿಂಗಡಿಸಿ ಇಡಲಾಗುತ್ತಿತ್ತು. ಆದರೂ, ಇತ್ತೀಚಿನ ವರ್ಷಗಳಲ್ಲಿ ಕಡತಗಳ ಸಂರಕ್ಷಣೆ ಮಾಡುವಲ್ಲಿ ವಹಿಗಳಲ್ಲಿ ತಿದ್ದುಪಡಿ, ನಮೂದುಗಳಲ್ಲಿ ದಾಖಲಿಸಿರುವುದು ಇತ್ಯಾದಿ ನ್ಯೂನತೆಗಳು ಕಂಡು ಬರುತ್ತಿದ್ದವು. ಕೆಲವು ಕಡತಗಳು ಶಿಥಿಲಾವಸ್ಥೆ ತಲುಪಿರುತ್ತಿದ್ದವು. ಮುಂದಿನ ದಿನಗಳಲ್ಲಿ ಕೆಲವು ಸಂಪೂರ್ಣವಾಗಿ ನಶಿಸಿ ಹೋಗುವಂತ ಸಾಧ್ಯತೆಗಳಿದ್ದವು.
ಇಂಥ ವೇಳೆಗಳಲ್ಲಿ ಕೋರ್ಟ್‌ನಲ್ಲಿ ಯಾವುದೋ ವೇಳೆ ಪಡೆದಿದ್ದ ದಾಖಲೆಗಳ ನಕಲು ಪ್ರತಿಗಳ ಆಧಾರದ ಮೇರೆಗೆ ಪ್ರಕರಣಗಳನ್ನು ದಾಖಲಿಸಿ ಸರ್ಕಾರದ ವಿರುದ್ಧ ವ್ಯತಿರಿಕ್ತ ಆದೇಶಗಳನ್ನು ಸಂಭವ ಹೆಚ್ಚಾಗಿದ್ದವು.
ದಾಖಲೆಗಳ ಇ-ಖಜಾನೆ: ಭೂದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಹಿಂದಿನ ಪದ್ಧತಿಗಳನ್ನು ಬಿಟ್ಟು ಕಂಪ್ಯೂಟರೀಕರಣಗೊಳಿಸುವ ಮಹತ್ವದ ನಿರ್ಧಾರಕ್ಕೆ ರಾಜ್ಯದ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಬೈರೇಗೌಡ ಆಸಕ್ತಿ ವಹಿಸಿದ್ದರು. ಸರ್ಕಾರಿ ಜಮೀನುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿ ಭೂಸುರಕ್ಷಾ ಇ-ಖಜಾನೆ ಯೋಜನೆಗೆ ಚಾಲನೆ ನೀಡಿದೆ.
ದಾಖಲೆ ಸಂರಕ್ಷಣೆ ಹೇಗೆ: ಶಿಥಿಲಾವಸ್ಥೆಯಲ್ಲಿರುವ ಮೂಲ ಮಂಜೂರಾತಿ ದಾಖಲೆಗಳಾದ ದರಖಾಸ್ತು ವಹಿ, ಸಾಗುವಳಿ ಚೀಟಿ ವಿತರಣಾ ವಹಿ, ಐಎಲ್ ಮತ್ತು ಆರ್‌ಆರ್ ಮತ್ತು ಮೂಲ ಟಿಪ್ಪಣಿ, ಫೈಸಲ್ ಪತ್ರಿಕೆ ದಾಖಲೆಗಳನ್ನು ಲಭ್ಯವಿರುವ ಮೂಲ ಮಂಜೂರಾತಿ ಕಡತಗಳನ್ನು ಆದ್ಯತೆ ಮೇರೆಗೆ ಸ್ಕ್ಯಾನ್ ಮಾಡಲಾಗುವುದು.
ಸ್ಕ್ಯಾನ್ ಮಾಡಲಾದ ದಾಖಲೆಗಳನ್ನು ಪುಟವಾರು ಕಡತ ದಾಖಲೆಗಳೊಂದಿಗೆ ತಾಳೆ ಮಾಡಿ, ಸಂಬಂಧಪಟ್ಟ ತಹಶೀಲ್ದಾರ್ ವಿಶೇಷ ತಹಶೀಲ್ದಾರ್, ಆರ್‌ಆರ್‌ಟಿ, ಶಿರಸ್ತೇದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿ ಮತ್ತು ಅಭಿಲೇಖಾಲಯ ಶಾಖೆ ವಿಷಯ ನಿರ್ವಾಹಕರು ಜಂಟಿ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ದೃಢೀಕರಿಸಬೇಕಾಗುತ್ತದೆ.
ದೃಢೀಕರಿಸಿದ ನಂತರ ಮುಂದಿನ ಎಲ್ಲಾ ಸಂದರ್ಭಗಳಲ್ಲಿಯೂ ಸ್ಕ್ಯಾನ್ ಮಾಡಿದ ದಾಖಲೆಗಳನ್ನೇ ಅಧಿಕೃತವಾಗಿ ಬಳಕೆ ಮಾಡುವುದು, ಕೋರ್ಟ್ ವಿಚಾರಣೆ ಮತ್ತು ತನಿಖೆ ವೇಳೆ ಮಾತ್ರ ಮೂಲ ದಾಖಲಾತಿಗಳನ್ನು ಬಳಕೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ.
ಪ್ರಯೋಜನಗಳೇನು: ಅತ್ಯಂತ ತ್ವರಿತವಾಗಿ ದಾಖಲೆಗಳು ಸಾರ್ವಜನಿಕರಿಗೆ ದೊರೆಯುತ್ತದೆ. ಜನಸಾಮಾನ್ಯರಿಗೆ ಸೇವೆ ನೀಡುವುದು ಸುಲಭವಾಗುತ್ತದೆ. ದಾಖಲೆಗಳು ಆನ್‌ಲೈನ್‌ನಲ್ಲಿ ಇರುವುದರಿಂದ ಕಾಲಾಂತರದಲ್ಲಿ ಹವಾಮಾನ ಇತ್ಯಾದಿ ಕಾರಣಗಳಿಂದ ಶಿಥಿಲಗೊಳ್ಳದಂತೆ ರಕ್ಷಿಸಬಹುದು. ಕಚೇರಿಗಳಲ್ಲಿ ದಕ್ಷತೆ ಪಾರದರ್ಶಕತೆ ಹೆಚ್ಚಾಗುತ್ತದೆ. ಆಡಳಿತ ವ್ಯವಸ್ಥೆಯು ಜವಾಬ್ದಾರಿಯುತವಾಗುತ್ತದೆ.
ಕೋಲಾರ ಜಿಲ್ಲೆಯಲ್ಲಿ ಭೂದಾಖಲೆಗಳ ಪ್ರಗತಿ:
ಜಿಲ್ಲೆಯ ಕೋಲಾರ ತಾಲೂಕಿನಲ್ಲಿ ಏಳು ಹೋಬಳಿಯಿದ್ದು, 365 ಗ್ರಾಮಗಳಿವೆ. ಈ ಪೈಕಿ 53 ಗ್ರಾಮಗಳು ಹಳೆ ಕೈ ಬರಹದ ಪಹಣಿಗಳ ಸ್ಕ್ಯಾನಿಂಗ್ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಒಟ್ಟಾರೆ 78,716 ಭೂಮಂಜೂರಾತಿ, ಭೂಸುಧಾರಣೆ, ಇನಾಂತಿ ಇತ್ಯಾದಿ ಎಲ್ಲಾ ಕಂದಾಯ ಇಲಾಖೆಯ ಕಡತಗಳು ಎ,ಬಿ,ಸಿ,ಡಿ,ಇ ಯಂತೆ ವರ್ಗವಾರು ಕ್ಯಾಟಲಾಗ್ ಆಗಿದೆ. ಇನ್ನೂ 10,76,908 ಪುಟಗಳ ದಾಖಲೆ ಸಂಪೂರ್ಣ ಗಣಕೀಕರಣಗೊಳಿಸುವುದು ಬಾಕಿ ಇದೆ.
100 ದಿನಗಳ ಗುರಿ :
ಕಂದಾಯ ದಾಖಲೆಗಳ ಗಣಕೀಕರಣಗೊಳಿಸುವುದಕ್ಕೆ ಕಾಲಮಿತಿ ನಿಗದಿಪಡಿಸಲಾಗಿದೆ. ಕೋಲಾರ ತಾಲೂಕು ಆಡಳಿತವು ಜಿಲ್ಲಾಡಳಿತದ ಮಾರ್ಗದರ್ಶನದೊಂದಿಗೆ ಈ ಗಣಕೀಕರಣ ಯೋಜನೆಯನ್ನು ಮುಂದಿನ 100 ದಿನಗಳಲ್ಲಿ ಪೂರ್ಣಗೊಳಿಸಿ ಎಲ್ಲಾ ದಾಖಲೆಗಳನ್ನು ಇ-ಖಜಾನೆಯಲ್ಲಿ ಸುಭದ್ರಗೊಳಿಸಬೇಕಾಗಿದೆ. ಎಲ್ಲವೂ ಸಮರ್ಪಕವಾಗಿ ಕಾಲಮಿತಿಯೊಳಗೆ ನಡೆದಲ್ಲಿ ಕೋಲಾರ ತಾಲೂಕಿನ ಕಂದಾಯ ದಾಖಲಾತಿಗಳು ಇ- ಖಜಾನೆ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಸರ್ಕಾರಿ ಕಚೇರಿಗಳಲ್ಲಿ ಕಂದಾಯ ದಾಖಲೆ ನಿರ್ವಹಣೆ ವಿಚಾರದಲ್ಲಿ ಭವಿಷ್ಯದ ಕಡೆಗೆ ಒಂದು ಹೆಜ್ಜೆ ಇಟ್ಟಿದ್ದೇವೆ, ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸಿ ಭವಿಷ್ಯದಲ್ಲಿ ರೈತರಿಗೆ ಅವರ ಜಮೀನಿನ ದಾಖಲಾತಿಗಳು ಸುಲಭವಾಗಿ ಕೈಗೆ ದೊರಕುವಂತೆ ಮಾಡಲಾಗುತ್ತಿದೆ. –ಭೈರತಿ ಸುರೇಶ್, ಉಸ್ತುವಾರಿ ಸಚಿವರು
– ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ
UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.