ರಬಕವಿ-ಬನಹಟ್ಟಿ: ಅಗ್ನಿಶಾಮಕ ಠಾಣೆಗೆ ಸೌಲಭ್ಯಗಳ ಕೊರತೆ
Team Udayavani, Feb 8, 2024, 5:36 PM IST
ಉದಯವಾಣಿ ಸಮಾಚಾರ
ರಬಕವಿ-ಬನಹಟ್ಟಿ: 2017ರಲ್ಲಿ ಸ್ಥಾಪನೆಗೊಂಡ ರಬಕವಿ- ಬನಹಟ್ಟಿ ಅಗ್ನಿಶಾಮಕ ಠಾಣೆ ಮೂಲ ಸೌಕರ್ಯ ಕೊರತೆ ಎದುರಿಸುತ್ತಿದೆ. ರಾಮಪುರದ ನಗರಸಭೆ ವಾಣಿಜ್ಯ ಸಂಕೀರ್ಣದ ಚಿಕ್ಕಕೋಣೆಯಲ್ಲಿ ಅಗ್ನಿಶಾಮಕ ಠಾಣೆ ಕಾರ್ಯ ನಿರ್ವಹಿಸುತ್ತಿದೆ. ನಗರಸಭೆ ವಾಹನ ನಿಲುಗಡೆ ಮಾಡುವ ಪತ್ರಾಸ್ ಶೆಡ್‌ನಲ್ಲಿ ಅಗ್ನಿಶಾಮಕದಳದ ವಾಹನ ನಿಲುಗಡೆ ಮಾಡಲಾಗುತ್ತಿದೆ. ಅಗ್ನಿಶಾಮಕ ಠಾಣೆ, ವಾಹನ ನಿಲುಗಡೆ ಮಾಡುವ ನಿಟ್ಟಿನಲ್ಲಿ ನಗರಸಭೆ ಬಳಿಯಿರುವ 20 ಗುಂಟೆ ನಿವೇಶನ ಮಂಜೂರು ಮಾಡಲಾಗಿದೆ.
ಅಗ್ನಿಶಾಮಕದಳದ ವಾಹನಕ್ಕೆ ನೀರು ತುಂಬಿಸುವ ಸಲುವಾಗಿ ಇಲ್ಲಿಯ ಸಿಬ್ಬಂದಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತ್ಯೇಕ ನೀರು ಭರ್ತಿ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲದಂತಾಗಿದೆ.ಇಲ್ಲಿನ ನೂಲಿನ ಗಿರಣಿಯ ಬೋರವೆಲ್, ನಂತರ ಬನಹಟ್ಟಿಯ ಕೆರೆಗೆ ಹೋಗಿ ನೀರು ತುಂಬಿಕೊಂಡು ಬರಬೇಕಿದೆ. ಸಿಬ್ಬಂದಿ ವರ್ಗಕ್ಕೆ ವಿಶ್ರಾಂತಿಗಾಗಿ ಸ್ಥಳದ ಕೊರತೆ ಇದೆ. ವಾಹನ ನಿಲುಗಡೆ ಇರುವ ಶೆಡ್‌ನಲ್ಲಿ ವಿಶ್ರಾಂತಿ ಪಡೆಯಬೇಕಿದೆ.
ಬಟ್ಟೆಗಳನ್ನು ಕೂಡ ವಾಹನದ ಹಿಂಬದಿಗೆ ನಿಂತು ಬದಲಿಸಿಕೊಳ್ಳಬೇಕಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ. ಸಿಬ್ಬಂದಿ ಮುಖ್ಯ ರಸ್ತೆ ಬದಿಗೆ ಕುಳಿತುಕೊಳ್ಳಬೇಕಿದೆ. ಸಿಬ್ಬಂದಿಗೆ ಶೌಚಾಲಯ ಮತ್ತು ಸ್ನಾನಗೃಹದ ಕೊರತೆ ಇದ್ದು, ನಗರಸಭೆ ಹಿಂಭಾಗದಲ್ಲಿರುವ ಕಟ್ಟಡದಲ್ಲಿರುವ ಶೌಚಾಲಯಕ್ಕೆ ಹೋಗಬೇಕಿದೆ. ಸಿಬ್ಬಂದಿಗೆ ವಸತಿ ಗೃಹಗಳು ಇಲ್ಲ.
ಅಗ್ನಿಶಾಮಕ ಠಾಣೆ ಕಾರ್ಯ ನಿರ್ವಹಿಸುತ್ತಿರುವ ಕೋಣೆ ಕೂಡಾ ಇಕ್ಕಟ್ಟಾಗಿದೆ. ಠಾಣಾಧಿಕಾರಿಗಳು, ಕಂಪ್ಯೂಟರ್ ಸಿಬ್ಬಂದಿ, ಕಾರ್ಯಾಲಯದ ಇನ್ನಿತರೆ ಸಿಬ್ಬಂದಿ ಕುಳಿತುಕೊಳ್ಳಲು ಸ್ಥಳವೇ ಇಲ್ಲದಂತಾಗಿದೆ. ಅಗ್ನಿಶಾಮಕದಳದ ಎಲ್ಲ ವಸ್ತುಗಳನ್ನು ಇಲ್ಲಿಯೇ ಇಟ್ಟುಕೊಳ್ಳಬೇಕಿದೆ. ಇಲ್ಲಿಯ ವಸ್ತುಗಳು ಮತ್ತು ದಾಖಲೆಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇಲಾಖೆ ಅಧಿಕಾರಿಗಳು ಗಮನ ಹರಿಸಿ ಇಲ್ಲಿನ ಅಗ್ನಿಶಾಮಕದಳಕ್ಕೆ ಸೂಕ್ತ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಕಟ್ಟಡ ಕಾಮಗಾರಿ ಆರಂಭಿಸಿದರೆ ಅನುಕೂಲವಾಗುತ್ತದೆ ಎಂಬುದು ನಿವಾಸಿಗಳ ಆಗ್ರಹ.
*ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.