Hunsur: ವಿದ್ಯುತ್ ಸಮಸ್ಯೆ ಕಂಡು ಬಂದಲ್ಲಿ 1912ಕ್ಕೆ ಸಂಪರ್ಕಿಸಿ: ಇಇ ಮಹೇಶ್
ಮುನ್ನೆಚ್ಚರಿಕೆ ವಹಿಸುವುದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದು
Team Udayavani, Feb 10, 2024, 12:37 PM IST
ಹುಣಸೂರು: ಗ್ರಾಹಕರು ಯಾವುದೇ ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಉಚಿತ ಹೆಲ್ಪ್ ಲೈನ್ 1912 ಮತ್ತು ಹುಣಸೂರು ಉಪ ವಿಭಾಗಕ್ಕೆ ಸಂಬಂಧಿಸಿದಂತೆ 9449598688ಗೆ ಸಂಪರ್ಕಿಸುವಂತೆ ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಮಹೇಶ್‌ಕುಮಾರ್ ತಿಳಿಸಿದರು.
ನಗರದ ಚೆಸ್ಕಾಂ ಕಚೇರಿಯಲ್ಲಿ ಹುಣಸೂರು ಉಪವಿಭಾಗ ವ್ಯಾಪ್ತಿಯ ವಿದ್ಯುತ್ ಸೇವೆಗಳು ಮತ್ತು ಸುರಕ್ಷತಾ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯುತ್ ಒಂದು ಕಾಣದ ವಸ್ತು. ಸಾರ್ವಜನಿಕರಿರಲಿ, ಇಲಾಖೆ ಸಿಬ್ಬಂದಿಗಳಾಗಲಿ ಮುನ್ನೆಚ್ಚರಿಕೆ ವಹಿಸುವುದರಿಂದ ಸಾಕಷ್ಟು ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದು ಎಂದರು.
ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದು, ಮನೆಗಳ ಬಳಿ ಕಂಬಕ್ಕೆ ಹಗ್ಗಕಟ್ಟಿ ಬಟ್ಟೆ ಒಣಗಿಸುವುದು, ರೈತರು ವನ್ಯಜೀವಿ ಹಾವಳಿ ತಪ್ಪಿಸಲು ಬೇಲಿಗೆ ಅಥವಾ ಸೋಲಾರ್ ಬೇಲಿಗೆ ಅನಧಿಕೃತವಾಗಿ ವಿದ್ಯುತ್ ಲೈನ್‌ನಿಂದ ಸಂಪರ್ಕ ನೀಡುವುದು ತಪ್ಪು. ಹೀಗೆ ಮಾಡಿದಲ್ಲಿ ಕಾಯ್ದೆ ಪ್ರಕಾರ ಶಿಕ್ಷೆಗೆ ಒಳಗಾಗಬೇಕಾದೀತು ಎಂದು ಎಚ್ಚರಿಸಿದರು.
ಯಾವುದೇ ವಿದ್ಯುತ್ ಸಮಸ್ಯೆ, ಪವರ್‌ಕಟ್, ವೈರ್‌ಕಟ್, ಪರಿವರ್ತಕ ಬದಲಾವಣೆ, ಐ.ಪಿ.ಸೆಟ್ ಸಮಸ್ಯೆ, ಬಿಲ್ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆ ಪರಿಹರಿಸಲು ಉಚಿತ ಹೆಲ್ಪ್ ಲೈನ್ ನಂಬರ್‌ಗೆ ಕರೆ ಮಾಡಿದಲ್ಲಿ ಚೆಸ್ಕಾಂ ಸಿಬ್ಬಂದಿ ಸ್ಪಂದಿಸಲಿದ್ದಾರೆ ಎಂದರು.
26 ಸಾವಿರ ಪಂಪ್‌ಸೆಟ್:
ತಾಲೂಕಿನಲ್ಲಿ ಒಟ್ಟು 26 ಸಾವಿರ ಕೃಷಿ ಪಂಪ್‌ಸೆಟ್‌ಗಳಿದ್ದು, ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಅರಣ್ಯದಂಚಿನ ಗ್ರಾಮಗಳಲ್ಲಿ ಹಗಲಿನ ವೇಳೆ, ಉಳಿದೆಡೆ ರಾತ್ರಿ-ಹಗಲು ವೇಳೆ ನೀಡಲಾಗುತ್ತಿದೆ. 22-23ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 560 ಟಿ.ಸಿ. ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಕ್ರಮ-ಸಕ್ರಮ ಯೋಜನೆಯಡಿ ಈವರೆಗೆ 1800 ಮಂದಿ ರೈತರು ನೊಂದಾಯಿಸಿಕೊಂಡಿದ್ದಾರೆ. ಇನ್ನು ಒಂದು ಸಾವಿರ ಟ್ರಾನ್ಸ್ ಫಾರ್ಮರ್ ನ ಬೇಡಿಕೆ ಇದ್ದು, ಸರಕಾರದಿಂದ ಇನ್ನು ಯಾವುದೇ ಸೂಚನೆ ಬಂದಿಲ್ಲ ಎಂದರು.
58 ಸಾವಿರ ಗೃಹಜ್ಯೋತಿ:
ಉಪವಿಭಾಗದಲ್ಲಿ ಒಟ್ಟು 58 ಸಾವಿರ ಗ್ರಾಹಕರು ಗೃಹಜ್ಯೋತಿ ಸೌಲಭ್ಯ ಪಡೆದಿದ್ದು, ವಿವಿಧ ಕಾರಣಗಳಿಂದ 1185 ಮಂದಿ ಸೌಲಭ್ಯ ಪಡೆದಿಲ್ಲ. ಈ ವಿದ್ಯುತ್ ಬಿಲ್ ಬಾಪ್ತು ಸರಕಾರದಿಂದ ತಾಲೂಕಿಗೆ 1.40ಕೋಟಿ ಅನುದಾನ ಬರುತ್ತಿದ್ದು, ಗೃಹಜ್ಯೋತಿ ಯೋಜನೆ ಜಾರಿಗೂ ಮೊದಲು ಉಪವಿಭಾಗ ವ್ಯಾಪ್ತಿಯ ಗ್ರಾಹಕರಿಂದ 3.5 ಕೋಟಿ ಬಾಕಿ ವಸೂಲಾಗಬೇಕಿದೆ ಎಂದ ಅವರು, ಗೃಹ ಸೋಲಾರ್ ಯೋಜನೆ ಬಗ್ಗೆ ಇನ್ನೂ ಮಾಹಿತಿ ಬರಬೇಕಿದ್ದು, ಬಂದ ನಂತರ ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಂಸದ ನಿಂಗರಾಜಮಲ್ಲಾಡಿ ತಾಲೂಕಿನ ಅಲೆಮಾರಿ ಕುಟುಂಬಗಳಿಗೆ ಉಚಿತ ಸೋಲಾರ್ ವ್ಯವಸ್ಥೆ ಕಲ್ಪಿಸುವ ಕೋರಿಕೆಗೆ, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಎಇಇ ಸಿದ್ದಪ್ಪ ತಿಳಿಸಿದರು.
ಕಲ್ಕುಣಿಕೆ ಫೀಡರ್‌ಗೆ ಹೆಚ್ಚು ಲೈನ್ ಅಳವಡಿಕೆಯಿಂದಾಗಿ ಆಗಾಗ್ಗೆ ವಿದ್ಯುತ್ ಕಟ್ ಆಗುತ್ತಲೇ ಇದ್ದು, ಈ ಬಗ್ಗೆ ಸ್ಪಂದನೆ ಸಿಗುತ್ತಿಲ್ಲವೆಂದು ರಾಜಪ್ಪರ ದೂರಿಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಲೈನ್ ಮೆನ್‌ಗಳಿಗೆ ಕಿಟ್‌ವಿತರಣೆ:
ಇದೇ ವೇಳೆ ಉಪವಿಭಾಗದ 34 ಲೈನ್‌ಮೆನ್‌ಗಳಿಗೆ ಅಗತ್ಯವಿರುವ ಟೂಲ್ ಕಿಟ್ ವಿತರಿಸಲಾಯಿತು.
ಎಇಇ ಸಿದ್ದಪ್ಪ, ಸಹಾಯಕ ಇಂಜಿನಿಯರ್ ಸೋಮಶೇಖರ್, ಕಿರಿಯ ಇಂಜಿನಿಯರ್‌ಗಳಾದ ಕಾಂತರಾಜ್, ಮಹಮದ್‌ಗೌಸ್, ಕಂದಾಯ ಶಾಖೆ ಸಹಾಯಕ ಶ್ರೀಧರ್ ಸೇರಿದಂತೆ ಅನೇಕ ಗ್ರಾಹಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.