ಕೋಲ-ನೇಮ; ಜಾತ್ರೆ-ಉತ್ಸವದ ಸಂಭ್ರಮ
ಕಲಾ ಚಟುವಟಿಕೆಗಳು ಸಾಂಸ್ಕೃತಿಕ ಪಾರಂಪರೆಯನ್ನು ಶ್ರೀಮಂತಗೊಳಿಸುತ್ತವೆ.
Team Udayavani, Feb 18, 2024, 5:30 AM IST
ಕರ್ನಾಟಕದ ಕರಾವಳಿಯಲ್ಲಿ ಧಾರ್ಮಿಕ ಚಟುವಟಿಕೆಗಳು ಮತ್ತು ಸಂಬಂಧಿತ ವಿವಿಧ ಕಾರ್ಯಕ್ರಮಗಳ ಸಂಭ್ರಮವೇ ಸಂಭ್ರಮ. ವರ್ಷದ ನಿರ್ದಿಷ್ಟ ಕೆಲವು ಸೂಚಿತ ಸಮಯಗಳನ್ನು ಬಿಟ್ಟು ಉಳಿದಂತೆ ಪ್ರತೀ ದಿನವೂ ಸಂಭ್ರಮ. ಇಲ್ಲಿ ಗರಿಷ್ಠ ಸಂಖ್ಯೆಯಲ್ಲಿ ದೇವಸ್ಥಾನ, ದೈವಸ್ಥಾನ, ನಾಗಸ್ಥಾನ, ಗರಡಿ ಸಹಿತ ಪವಿತ್ರ ಕ್ಷೇತ್ರಗಳಿರುವುದರಿಂದ ಎಲ್ಲೆಡೆ ಈ ಸಂಭ್ರಮ ಇದ್ದೇ ಇರುತ್ತದೆ. ಇನ್ನು ಈ ಉತ್ಸವಗಳಿಗೆ ಬ್ರಹ್ಮಕಲಶ, ನಾಗಮಂಡಲ, ತಂಬಿಲ, ಕಂಬಳ ಮುಂತಾದ ಪೂರಕ ಆಚರಣೆಗಳಿಂದ ವರ್ಷಪೂರ್ತಿ ಕಾರ್ಯಕ್ರಮಗಳು. ಇಂತಹ ಅಭೂತಪೂರ್ವ ಪರಿಸರವನ್ನು ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಕಾಣಲು ಸಾಧ್ಯ. ಸಂಘಟಕರು ಮತ್ತು ಭಕ್ತಾಭಿಮಾನಿಗಳು ಇಲ್ಲಿ ಒಳಗೊಳ್ಳುವ ಕಾರ್ಯಕ್ರಮವು ಅನನ್ಯ.
ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಅಧಿಕ ಸಂಖ್ಯೆಯಲ್ಲಿವೆ. ಬಾಲವಾಡಿಯಿಂದ ಉನ್ನತ ವೃತ್ತಿಪರ ಶಿಕ್ಷಣದ ವರೆಗೆ ಇಲ್ಲಿ ಪ್ರತೀ ದಿನ ಎಂಬಂತೆ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಕರಾವಳಿಯಲ್ಲಿ ನಿತ್ಯ ಹಬ್ಬದ ವಾತಾವರಣ. ಜಾತ್ರೋತ್ಸವಗಳೆಂದರೆ ಹಲವೆಡೆ 3ರಿಂದ 10 ದಿನಗಳ ವರೆಗೂ ನಡೆಯುತ್ತವೆ. ಬ್ರಹ್ಮಕಲಶೋತ್ಸವ ಕೂಡ. ಇನ್ನು ಕೆಲವು ನಿರ್ದಿಷ್ಟ ಮನೆತನಗಳವರು ವಾಡಿಕೆ ಮತ್ತು ಕಟ್ಟುಕಟ್ಟಲೆಯಂತೆ ಕುಲದೈವಗಳಿಗೆ ಪೂರ್ಣ ಕುಟುಂಬದ ಸಮ್ಮುಖದಲ್ಲಿ ನೇಮ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ.
ಜಿಲ್ಲೆಯ ಸರ್ವ ಧರ್ಮಗಳಲ್ಲೂ ಈ ರೀತಿಯ ಆಚರಣೆಗಳು ನಡೆಯುತ್ತವೆ. ಕೆಲವನ್ನು ಉದಾಹರಿಸುವುದಾದರೆ ಜೈನ ಪರಂಪರೆಯ ಮಹಾಮಸ್ತಕಾಭಿಷೇಕ, ಕ್ರೈಸ್ತ ಪರಂಪರೆಯ ಸಾಂತ್‌ಮಾರಿ, ದರ್ಗಾಗಳ ಉರೂಸ್.
ಪೂರಕ ವಾತಾವರಣ: ಧಾರ್ಮಿಕ ಮತ್ತಿತರ ಇಂತಹ ಕಾರ್ಯ ಕ್ರಮಗಳು ಬಗೆಬಗೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಪೂರಕವಾದ ವಾತಾವರಣ ಆಗಿರುತ್ತವೆ. ಉತ್ಸವಗಳ ಸಂದರ್ಭದಲ್ಲಿ ಏರ್ಪಡಿ ಸುವ ಕಲಾ ಚಟುವಟಿಕೆಗಳು ಸಾಂಸ್ಕೃತಿಕ ಪಾರಂಪರೆಯನ್ನು ಶ್ರೀಮಂತಗೊಳಿಸುತ್ತವೆ. ಕ್ರೀಡಾ ಮತ್ತಿತರ ಚಟುವಟಿಕೆಗಳು ಯುವ ಜನತೆಯನ್ನು ಸೆಳೆಯುತ್ತವೆ. ನಾಟಕ, ನೃತ್ಯ, ಹಾಡು ಮುಂತಾದ ಮನೋರಂಜನೆಯ ಚಟುವಟಿಕೆಗಳು ಅಪಾರ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಿ ಕೊಡುತ್ತವೆ. ಈ ಕಾರ್ಯಕ್ರಮಗಳಲ್ಲಿ ಇನ್ನೊಂದು ಆಕರ್ಷಣೆ ಸಭಾ ಕಾರ್ಯಕ್ರಮಗಳು. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಮಂತ್ರಿಸಿ ಅವರಿಂದ ಉಪನ್ಯಾಸ, ಭಾಷಣ ಮತ್ತಿತರ ಮಾತುಗಳನ್ನು ಕೇಳುವುದು ಕೂಡ ಜನತೆಯಲ್ಲಿ ಜ್ಞಾನ ಉದ್ದೀಪನಕ್ಕೆ ಪೂರಕವಾಗಿರುತ್ತದೆ. ಕರಾವಳಿಯದ್ದೇ ಆದ ಜಾನಪದ ಕ್ರೀಡೆಗಳಂತೂ ವೈಭವದ ಪಾರಂಪರೆಯನ್ನು ಹೊಂದಿದೆ. ಕೆಲವು ಆಟಗಳ ಪುನಶ್ಚೇತನಕ್ಕೆ ಸಂಘ ಸಂಸ್ಥೆಗಳು ಸ್ಪರ್ಧಾತ್ಮಕ ಕಾರ್ಯಕ್ರಮ ಏರ್ಪಡಿಸುವುದು ಕೂಡ ಗಮನಾರ್ಹ. ಉದಾ ಹರಣೆಗೆ ಕೆಸರು ಗದ್ದೆ ಓಟ. ಉತ್ಸವಗಳ ಸಂದರ್ಭದ ಜನಪದ ಕ್ರೀಡೆ ಅಥವಾ ಆಟಗಳು ಮನೆಯಿಂದ ಆರಂಭವಾಗಿ ಸಂಘಟನ ವೇದಿಕೆಯ ವರೆಗೂ ವೈವಿಧ್ಯಮಯ ಹರವು ಹೊಂದಿರುತ್ತದೆ. ಅನೇಕ ಪ್ರತಿಭೆಗಳು ಇಂತಹ ವೇದಿಕೆಗಳಲ್ಲಿ ಪೋಷಣೆಗೊಂಡು ಮುಂದೆ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿರುವುದು ಇಂತಹ ಕಾರ್ಯಕ್ರಮಗಳ ಸಂಘಟನೆಯ ಮಹತ್ವಕ್ಕೆ ಸಾಕ್ಷಿಯಾಗಿರುತ್ತದೆ.
ಸುಡುಮದ್ದುಗಳ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ನೃತ್ಯಕಲಾ ಪ್ರದರ್ಶನ, ಪ್ರತಿಭಾ ಪ್ರದರ್ಶನ ಹೀಗೆ ಉತ್ಸವಗಳಿಗೆ ಪೂರಕವಾಗಿ ನಡೆಯುವ ಆಚರಣೆಗಳು ಮೆರುಗನ್ನು ಹೆಚ್ಚಿಸುತ್ತವೆ.
ಕರ್ನಾಟಕದ ಕರಾವಳಿಯ ಪ್ರದೇಶವು ಅನಾದಿಕಾಲದಿಂದಲೂ ತನ್ನದೇ ಆದ ಧಾರ್ಮಿಕ ಮತ್ತು ಜನಪದ ಪರಂಪರೆಯನ್ನು ಪೋಷಿಸುತ್ತಾ ಬಂದಿದೆ. ರಾಜ ಮಹಾರಾಜರ ಕಾಲದಲ್ಲಿಯೂ ಈ ಬಗ್ಗೆ ಆದ್ಯತೆ ಇರುತ್ತಿದ್ದರ ಉಲ್ಲೇಖಗಳ ಶಾಸನಗಳು ಲಭ್ಯವಿದೆ. ಮಾನವ ಮೂಲತಃ ಸಂಘಜೀವಿ. ಈ ಸಾಂಘಿಕವಾದ ಮನೋ ಭಾವವನ್ನು ವೃದ್ಧಿಸುವುದು ಈ ಎಲ್ಲ ಆಚರಣೆಗಳ ಆಶಯವೂ ಆಗಿದೆ. ಧಾರ್ಮಿಕ ಉಪನ್ಯಾಸಗಳು ಎಲ್ಲ ಧರ್ಮಗಳಲ್ಲೂ ಅಂತರ್ಗತಗೊಂಡಿರುತ್ತವೆ. ಈ ಆಚರಣೆಗಳ ಉದ್ದೇಶವೇನು? ಈ ಆಚರಣೆಗಳನ್ನು ಹೇಗೆ ನಡೆಸಬೇಕು? ಈ ಆಚರಣೆಗಳಿಂದ ದೊರೆಯುವ ಸಂತೃಪ್ತಿಯೇನು? ಎಂಬೆಲ್ಲ ವಿವರಗಳು ಆಯಾ ವೇದಿಕೆಗಳಲ್ಲಿ ಆಯಾ ಮತಗಳ ಧಾರ್ಮಿಕ ಚಿಂತಕರ ಮಾತುಗಳಿಂದ ವ್ಯಕ್ತವಾಗುತ್ತದೆ. ಹೀಗಾಗಿ ಅರ್ಥಪೂರ್ಣವಾಗಿ ಆಚರಣೆಯು ನಡೆಯುತ್ತದೆ.
ಇಷ್ಟು ಮಾತ್ರವಲ್ಲದೆ ಪ್ರತೀ ವರ್ಷದ ಶಿವರಾತ್ರಿ, ಯುಗಾದಿ, ಅಷ್ಟಮಿ, ಚೌತಿ, ನವರಾತ್ರಿ, ದೀಪಾವಳಿ ಎಲ್ಲ ಸಂದರ್ಭಗಳಲ್ಲೂ ಬಹು ದಿನಗಳ ಬಹು ವೈಭವದ, ಬಹು ಅರ್ಥಪೂರ್ಣವಾದ ಆಚರಣೆಗಳು. ಕ್ರಿಸ್‌ಮಸ್ ಮುಂತಾದ ಹಬ್ಬಗಳೂ ಕೂಡ ಇಲ್ಲಿ ಉಲ್ಲೇಖನೀಯ. ಶಾಲಾ ಕಾಲೇಜುಗಳ ವೇದಿಕೆಗಳು ಕೂಡ ಇಂತಹ ಚಟುವಟಿಕೆಗಳಿಗೆ ಆದ್ಯತೆ ನೀಡುವ ಮೂಲಕ ಉತ್ಸವ ಮತ್ತು ಉತ್ಸಾಹದ ವಾತಾವರಣ ನಿರ್ಮಿಸಿ ವಿದ್ಯಾರ್ಥಿಗಳಿಗೆ ವೈಯಕ್ತಿಕ, ವ್ಯಕ್ತಿತ್ವ ವಿಕಸನವನ್ನು ಪ್ರಭಾವಿತಗೊಳಿಸುತ್ತವೆ.
ಹಾಗಾಗಿ ಈ ಉತ್ಸವಗಳೆಂದರೆ ಕೇವಲ ಉತ್ಸವಗಳಲ್ಲ. ಇದು ಸದಾಶಯದ ಮತ್ತು ಸದ್ವಿಚಾರಗಳ ಉದ್ದೀಪನಗೊಳಿಸುವ ಸಂದರ್ಭವೂ ಆಗಿ ಸಹಜವಾದ ವಿನ್ಯಾಸಗಳನ್ನು ಹೊಂದಿರುತ್ತವೆ.
ಅಂದಹಾಗೆ: ಉತ್ಸವಗಳೆಂದರೆ ಸಾಮೂಹಿಕ ಸಹಭೋಜನಗಳು ಇರಲೇ ಬೇಕು. ಒಂದೊಂದು ಪ್ರದೇಶಗಳಲ್ಲಿ ಒಂದೊಂದು ರೀತಿಯ ಖಾದ್ಯ ವೈವಿಧ್ಯ ಇದ್ದೇ ಇರುತ್ತದೆ. ಹೀಗಾಗಿ ಉತ್ಸವಗಳಲ್ಲಿ ಒಂದಿಷ್ಟು ಉತ್ಸಾಹ ತುಂಬುವುದೂ ಕೂಡ ಈ ಭೋಜನ ಪ್ರಸಾದ!
ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.