Trekking: ಪರ್ವತದ ತುದಿಯಲ್ಲಿ ನಿಂತಾಗ ಸಂತೋಷದ ಕಣ್ಣೀರು ಹರಿಯಿತು!
Team Udayavani, Feb 18, 2024, 11:22 AM IST
ಮಳವಳ್ಳಿ ತಾಲೂಕು ಆಲದಹಳ್ಳಿ ಮೂಲದ ಗೌತಮ್ ಪುಟ್ಟಮಾದಯ್ಯ, ಪ್ರಸ್ತುತ ಬೆಂಗಳೂರಿನ ಮಹಾಲೇಖಪಾಲರ ಕಛೇರಿಯಲ್ಲಿ ಉದ್ಯೋಗಿ. ಯಾವುದೇ ಪೂರ್ವ ತರಬೇತಿಯಲ್ಲದೇ, ಮೊದಲ ಪ್ರಯತ್ನದಲ್ಲೇ ಆಫ್ರಿಕಾದ ಅತಿ ಎತ್ತರದ ಪರ್ವತವಾದ ಕಿಲಿಮಾಂಜರೋ ಪರ್ವತವನ್ನು ಇತ್ತೀಚಿಗೆ ಹತ್ತಿದ ಹೆಗ್ಗಳಿಕೆ ಇವರದು. ಪರ್ವತಾರೋಹಣಕ್ಕೆ ತಾವು ಮಾಡಿಕೊಂಡ ಸಿದ್ಧತೆ, ಪಯಣದ ಹಾದಿಯಲ್ಲಿ ಎದುರಿಸಿದ ಸವಾಲುಗಳ ಕುರಿತು ಅವರು ಇಲ್ಲಿ ಹೇಳಿಕೊಂಡಿದ್ದಾರೆ.
ನೀವು ಪರ್ವತಾರೋಹಣವನ್ನ ಹವ್ಯಾಸವಾಗಿ ಬೆಳೆಸ್ಕೊಂಡಿದ್ದೀರ. ಅದು ಸಹಜವಾಗಿಯೇ ಇಷ್ಟವಾಯ್ತಾ ಅಥವಾ ಅದರ ಹಿಂದೆ ಯಾವುದಾದರೂ ವಿಶೇಷ ಕಾರಣ ಇದ್ಯಾ?
ನನಗೆ ಮೊದಲಿನಿಂದಲೂ ಪರ್ವತಾರೋಹಣ ಆಸಕ್ತಿಯ ವಿಷಯ. ಅದರ ಎತ್ತರ, ಅಲ್ಲಿಯ ಲೈವ್ಲಿನೆಸ್ ನನ್ನನ್ನು ಯಾವಾಗಲೂ ಸೆಳೆಯುತ್ತಲೇ ಇತ್ತು. ಹೀಗಾಗಿ ಅದರ ಕುರಿತಾದ ಲೇಖನಗಳನ್ನ, ವೆಬ್ ಸಿರೀಸ್ ಮತ್ತು ಡಾಕ್ಯುಮೆಂಟರಿಗಳನ್ನ ನೋಡುತ್ತಿದ್ದೆ. “ಎವೆರೆಸ್ಟ್’ ಸಿನಿಮಾ ಹಾಗೂ “ಇನ್ ಟೂ ದಿ ಥಿನ್ ಏರ್’ ಪುಸ್ತಕಗಳನ್ನ ಆಸಕ್ತಿಯಿಂದ ಗಮನಿಸಿದ್ದೆ. ಕುದುರೆಮುಖ, ನಂದಿಬೆಟ್ಟ, ಸ್ಕಂದಗಿರಿಗಳ ಚಾರಣವನ್ನ ಮಾಡಿದ್ದೆ. ಅಲ್ಲದೆ ಸ್ವಿಜ್ಜರ್‌ಲೆಂಡಿನಲ್ಲಿರುವ ನನ್ನ ತಮ್ಮ ಮಿಥುನ್ ಪುಟ್ಟಮಾದಯ್ಯ ಅವರ ಜೊತೆ ಚಾರಣದ ವಿಷಯಗಳನ್ನ ಬಹಳ ಚರ್ಚಿಸಿದ್ದೆ. ಅವರು ಕೊಟ್ಟಿದ್ದ ಮಾಹಿತಿಗಳು ಆ ದಿಕ್ಕಿನಲ್ಲಿ ನನ್ನ ಗಮನವನ್ನು ಮತ್ತಷ್ಟು ಸೆಳೆದಿದ್ದವು.
ಕಿಲಿಮಾಂಜರೋ ಪರ್ವತಾರೋಹಣಕ್ಕಾಗಿ ನೀವು ವಿಶೇಷ ತರಬೇತಿಯನ್ನೇನೂ ಪಡ್ಕೊಂಡಿಲ್ಲ. ಈ ನಿಟ್ಟಿನಲ್ಲಿ ಹೇಗೆ ತಯಾರಿ ಮಾಡ್ಕೊಂಡ್ರಿ?
ಇಲ್ಲಿ ಚಟುವಟಿಕೆಯ ಜೀವನ ಶೈಲಿ, ನಡೆಯುವುದು ಹಾಗೂ ಶ್ವಾಸಕೋಶದ ಸಾಮರ್ಥ್ಯಗಳು ಬಹುಮುಖ್ಯವಾಗುವ ಸಂಗತಿಗಳು. ನಾನು ಪ್ರತಿದಿನ 10-12 ಕಿಲೋಮೀಟರ್ ನಡೆಯುತ್ತೇನೆ. ವಾರಾಂತ್ಯದಲ್ಲಿ 15 ಕಿಲೋಮೀಟರ್ ನಡೆಯುತ್ತೇನೆ. ಸದಾ ಚಟುವಟಿಕೆಯಿಂದಿರಲು ಪ್ರಯತ್ನಿಸುತ್ತೇನೆ. ಜೊತಗೆ ಫ್ರೀ ಹ್ಯಾಂಡ್ ವ್ಯಾಯಾಮಗಳಾದ ಪುಶಪ್, ಪುಲ್ಲಪ್‌ಗ್ಳನ್ನು ಮಾಡುತ್ತೇನೆ. ಇವನ್ನು ಪ್ರತಿದಿನದ ಅಭ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಪರ್ವತಾರೋಹಣವು ದೈಹಿಕ ಸಾಮರ್ಥ್ಯ ಹಾಗೂ ಉಸಿರಾಟಗಳಿಗೆ ಸವಾಲೊಡ್ಡುವುದರಿಂದ ಯೋಗ ಹಾಗೂ ಪ್ರಾಣಾಯಾಮಗಳು ಪರ್ವತ ಹತ್ತುವಾಗ ಬಹಳಷ್ಟು ಸಹಾಯ ಮಾಡುತ್ತವೆ.
ಕಿಲಿಮಾಂಜರೋ ಪರ್ವತವನ್ನ ಏರುವಾಗ ಅದರ ಎತ್ತರ, ಅಲ್ಲಿನ ವಾತಾವರಣ ಇದೆಲ್ಲ ಪರ್ವತಾರೋಹಿಗಳಿಗೆ ಹೇಗೆ ಸವಾಲೊಡ್ಡುತ್ತವೆ ಅನ್ನೋದನ್ನ ಹೇಳ್ತೀರಾ?
ಕಿಲಿಮಾಂಜರೋ ಪರ್ವತ ವನ್ನು ಏರುವಾಗ ಎದುರಾಗುವ ಮೊದಲ ಸವಾಲು ಅಲ್ಲಿನ ಉಷ್ಣತೆ. ಅಲ್ಲಿನ ಉಷ್ಣಾಂಶ ಪ್ಲಸ್ 45ರಿಂದ ಆರಂಭವಾಗಿ, ಪರ್ವತ ಏರುತ್ತಾ ಹೋದಂತೆ ಮೈನಸ್ 12ಕ್ಕೆ ಇಳಿಯುತ್ತದೆ. ಇದಕ್ಕೆ ಒಗ್ಗಿಕೊಳ್ಳುವುದು ಮೊದಲ ಸವಾಲು. ಎರಡನೆಯದು ಅಲ್ಟಿಟ್ಯೂಡ್ ಸಿಕೆ°ಸ್. ಇದು ಒಬ್ಬೊಬ್ಬರನ್ನು ಒಂದೊಂದು ರೀತಿ ಕಾಡುತ್ತದೆ. 3000 ಮೀಟರ್ ಹಾಗೂ ಅದಕ್ಕಿಂತ ಎತ್ತರಕ್ಕೆ ಹತ್ತಿದಂತೆಲ್ಲ ತಲೆ ತಿರುಗುವುದು, ವಾಂತಿ ಬರುವಿಕೆ ಮುಂತಾದ ಲಕ್ಷಣಗಳು ಕಾಡತೊಡಗುತ್ತವೆ. ಗಾಳಿಯಲ್ಲಿನ ಆಮ್ಲಜನಕದ ಪ್ರಮಾಣ ತೀರಾ ಕಡಿಮೆಯಿದ್ದು ಉಸಿರಾಟದ ತೊಂದರೆ ಸಹ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಶ್ವಾಸಕೋಶ ಹಾಗೂ ಮೆದುಳಿನಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆಯೂ ಇದೆ. ಇಲ್ಲಿ ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕ ಗಟ್ಟಿತನವೂ ಮುಖ್ಯ.
ಕಿಲಿಮಾಂಜರೋ ಪರ್ವತದ ತುತ್ತ ತುದಿಯನ್ನ ತಲುಪಿದ ಆ ಕ್ಷಣ ಹೇಗಿತ್ತು?
ಅದೊಂದು ಅದ್ಭುತ ಕ್ಷಣ. ನಾವಾಗ ಆಫ್ರಿಕಾದ ಅತಿ ಎತ್ತರದ ತುದಿಯಲ್ಲಿದ್ದೆವು. ಅಲ್ಲಿ ಕಳೆದ ಆ 25 ನಿಮಿಷಗಳು ಬದುಕಿನು ದ್ದಕ್ಕೂ ನೆನಪಿನಲ್ಲುಳಿಯುವಂಥದ್ದು. ಪರ್ವತಾರೋಹಿಗಳು ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿದ್ದರು. ಕೆಲವರು ಕಣ್ಣೀರಾಗಿದ್ದರು. ಮಂಜಿನ ಪ್ರಪಂಚವೊಂದು ನಮ್ಮೆದುರಿತ್ತು. ಆರೋಹಣದ ವೇಳೆ ಎಷ್ಟೋ ಸಲ ಧೈರ್ಯಗೆಟ್ಟ ಕ್ಷಣಗಳಲ್ಲಿ ವಾಪಸ್ ಹೋಗಿಬಿಡೋಣ ಅನಿಸಿದ್ದುಂಟು. ಹಾಗೇನಾದರೂ ಮಾಡಿದ್ದರೆ ಈ ಗೆಲುವು ಸಿಗುತ್ತಿರಲಿಲ್ಲವಲ್ಲ ಅನ್ನಿಸಿತು. ಇಳಿದು ಬೇಸ್ ಕ್ಯಾಂಪಿಗೆ ಮರಳಿ ಹೋದಾಗ ಅಲ್ಲಿನ ಪೋರ್ಟರ್‌ಗಳು, ಕುಕ್ ಗಳು ನಮ್ಮನ್ನು ನೋಡಿ ಕುಣಿದಾಡಿಬಿಟ್ಟರು. ನಾವು ಸಾಧಿಸಿದ್ದೇನು ಎನ್ನುವುದು ಆಗ ನಮಗೆ ಮನವರಿಕೆಯಾಯಿತು.
ಈಗ ಪರ್ವತಾರೋಹಣವನ್ನ ಕಲೀತಿರುವವರಿಗೆ, ಪರ್ವತ ಏರಬೇಕು ಅಂತ ಆಸೆ ಪಡ್ತಿರುವವರಿಗೆ ನೀವು ಏನು ಸಲಹೆ ನೀಡ್ತೀರ?
ಮೊದಲನೆಯದಾಗಿ ಆರೋಗ್ಯಕರವಾದ ದಿನಚರಿಯನ್ನು ಬೆಳೆಸಿಕೊಳ್ಳಿ. ಚಟುವಟಿಕೆಯಿಂದಿರಿ. ಯೋಗ, ಪ್ರಾಣಾಯಾಮಗಳು ಪರ್ವತಾರೋಹಣದ ವೇಳೆ ಬಹಳ ನೆರವಾಗುತ್ತವೆ. ಹಾಗೇ ಸಾಕಷ್ಟು ಮಾಹಿತಿ ಸಂಗ್ರಹಿಸಿ. ಓದಿ. ಆರೋಹಣದ ವೇಳೆ ನಿಮ್ಮ ದೇಹಸ್ಥಿತಿಯ ಬಗ್ಗೆ ಮಾರ್ಗದರ್ಶಕರ ಜೊತೆ ಪ್ರಾಮಾಣಿಕವಾಗಿ ಹೇಳಿ. ಅವರ ಮಾತನ್ನು ಅನುಸರಿಸಿ. ತನ್ನ ತುದಿಗೆ ಯಾರನ್ನು ಬಿಟ್ಟುಕೊಳ್ಳಬೇಕು ಎಂಬುದನ್ನು ಪರ್ವತವೇ ನಿರ್ಧರಿಸುತ್ತದೆ ಎಂದು ನಂಬಿದವನು ನಾನು. ಅದರೆದುರು ವಿನಯವಂತರಾಗಿರಿ.
ಈ ವಾರದ ಅತಿಥಿ: ಗೌತಮ್ ಪುಟ್ಟಮಾದಯ್ಯ
ಸಂದರ್ಶನ: ವಿನಾಯಕ ಅರಳಸುರಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.