ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೆಕಾಯಿ!
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶೇಷ ಲೇಖನ
Team Udayavani, Feb 20, 2024, 6:20 AM IST
ಈ ಘಟನೆಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತ್ ಜೋಡೋ ಯಾತ್ರೆ ತುಮಕೂರಿನ ಚಿಕ್ಕನಾಯಕನಹಳ್ಳಿ ಬಳಿ ಹಾದು ಹೋಗುತ್ತಿದ್ದ ಸಂದರ್ಭ ನೆತ್ತಿಯನ್ನು ಸುಡುವ ಬಿಸಿ ಲನ್ನೂ ಲೆಕ್ಕಿಸದೆ ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕುತ್ತಿದ್ದೆವು. ಸಾವಿರಾರು ಜನರ ಮಧ್ಯೆ ತಾಯಿಯೊಬ್ಬರು ಕೈಯಲ್ಲಿ ಸೌತೆಕಾಯಿ ಹಿಡಿದುಕೊಂಡು ರಾಹುಲ್ ಗಾಂಧಿ ಕಡೆಗೆ ಕೈ ಬೀಸುತ್ತಿದ್ದರು. ಹತ್ತಿರ ಬನ್ನಿ ಎಂದು ಕೈ ಸನ್ನೆ ಮಾಡಿದ್ದೇ ತಡ, ನಮ್ಮ ಬಳಿಗೆ ಓಡಿ ಬಂದ ತಾಯಿ, “ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೆಕಾಯಿ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು.
ಉಳುವವನೆ ಭೂಮಿಯ ಒಡೆಯ ಕಾನೂನಿನ ಮೂಲಕ ಅಂದು ಬಿತ್ತಿದ ಬೀಜ ಮರವಾಗಿ ಫಲ ಕೊಟ್ಟಿತ್ತು. ಈ ಸನ್ನಿವೇಶ ಸಾಮಾಜಿಕ ನ್ಯಾಯಕ್ಕೆ ಪುಟ್ಟ ಉದಾಹರಣೆ ಮಾತ್ರ. ನಮಗೆ ಸೌತೆಕಾಯಿ ಕೊಟ್ಟ ಶಾರದಮ್ಮ ಅವರು ಇಂದು ನಮ್ಮ ನಡುವೆ ಇಲ್ಲ. ಆದರೆ ಇಡೀ ರಾಜ್ಯ, ದೇಶದಾದ್ಯಂತ ಶಾರದಮ್ಮ ಅವರಂ ತಹ ಲಕ್ಷಾಂತರ ಕುಟುಂಬಗಳು ಸಾಮಾಜಿಕ ನ್ಯಾಯ ಪರಿ ಕಲ್ಪನೆಯ ಪಾಲುದಾರರಾಗಿ¨ªಾರೆ. ಅನ್ನ ಬೆಳೆದು ಜನರ ಹಸಿವು ನೀಗಿಸುತ್ತಿದ್ದಾರೆ. ಫೆ. 20 “ವಿಶ್ವ ಸಾಮಾಜಿಕ ನ್ಯಾಯ ದಿನ’ದ ನೆಪದಲ್ಲಿ ಈ ಘಟನೆಯನ್ನು ನೆನಪಿಸಿಕೊಳ್ಳಬೇಕಾಯಿತು.
ಸಂಪತ್ತು ಮತ್ತು ಅಧಿಕಾರವು ಸಮಾನ ಹಂಚಿಕೆಯಾದಾಗ ಮಾತ್ರ ಸಾಮಾಜಿಕ ನ್ಯಾಯದ ಪರಿಧಿ ಹೆಚ್ಚುತ್ತಾ ಹೋಗುತ್ತದೆ ಎಂಬುದು ನನ್ನ ವೈಯಕ್ತಿಕ ನಂಬಿಕೆ. ಸಮಾಜದಲ್ಲಿರುವ ಎಲ್ಲ ರೀತಿಯ ಅಸಮಾನತೆಯನ್ನು ಹೋಗಲಾಡಿಸಿ ಹಿಂದುಳಿದವರ, ಬಡವರ, ದುರ್ಬಲರ, ತುಳಿತಕ್ಕೆ ಮತ್ತು ಶೋಷಣೆಗೆ ಒಳಪಟ್ಟ ವರನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕ ವಾಗಿ ಸಬಲರನ್ನಾಗಿ ಮಾಡುವುದೇ ಸಾಮಾಜಿಕ ನ್ಯಾಯ.
ಕುಡಿಯುವ ನೀರಿಗೆ, ನಡೆಯುವ ದಾರಿಗೆ ಹೋರಾಟ ಮಾಡಬೇಕಾಗಿದ್ದ ಕಾಲ ಇಂದಿಗೂ ಜೀವಂತವಿದೆ ಎಂದರೆ ಯಾರೂ ನಂಬುವುದಿಲ್ಲ. ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಒಂದು ಇತಿಹಾಸವಿದೆ. ಈ ಇತಿಹಾಸವನ್ನು ಮರೆತರೆ ನಮ್ಮ ದೇಶ ಮತ್ತೆ ಇನ್ನೂರು ವರ್ಷಗಳಷ್ಟು ಹಿಂದಕ್ಕೆ ಹೋದರೂ ಆಶ್ಚರ್ಯಪಡಬೇಕಾಗಿಲ್ಲ. ಕಾಕತಾಳೀಯ ಎಂಬಂತೆ ಬಸವಣ್ಣ ನವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಕಾಂಗ್ರೆಸ್ ಸರಕಾರ ಘೋಷಣೆ ಮಾಡಿದೆ. ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಬಸವಣ್ಣನವರು, 900 ವರ್ಷದ ಹಿಂದೆಯೇ ಕನ್ನಡದ ನೆಲದಲ್ಲಿ ಸಾಮಾಜಿಕ ನ್ಯಾಯದ ಪರವಾದ ದೊಡ್ಡ ಕ್ರಾಂತಿಯ ಕಿಡಿ ಹೊತ್ತಿಸಿದ್ದರು.
ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ
ಕೂಡಲಸಂಗಮ ದೇವ ನಿಮ್ಮ ಮನೆಯ
ಮಗನೆಂದೆನಿಸಯ್ಯಾ
ಈ ರೀತಿಯ ನೂರಾರು ವಚನಗಳ ಮೂಲಕ ಕಾಯಕ, ದಾಸೋಹ ಪರಿಕಲ್ಪನೆಯನ್ನು ಹುಟ್ಟುಹಾಕಿ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಮಹಾಮನೆ ನಿರ್ಮಾಣ ಮಾಡಿದವರು ಬಸವಣ್ಣ.ಇದರ ಜತೆಗೆ ಸಾರ್ವಜನಿಕ ಜೀವನದಲ್ಲಿ ಇರುವ ನಾವುಗಳು ಪ್ರತಿಕ್ಷಣವೂ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಈ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು. ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ ಅದೊಂದು ಹಕ್ಕು ಎಂದಿದ್ದರು. ಬುದ್ದ, ಬಸವಣ್ಣನವರ ಪರಿಕಲ್ಪನೆಯನ್ನು ಸರಕಾರದ ನೀತಿಯಾಗಿಸಿದವರು. ಬಾಬಾ ಸಾಹೇಬರು ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಅತ್ಯಂತ ಸರಳವಾಗಿ ಸಾಮಾಜಿಕ ನ್ಯಾಯದ ಬಗ್ಗೆ ವಿವರಿಸಿದ್ದಾರೆ. ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿಕೊಡುವುದು. ಕಿಂಚಿತ್ತೂ ಭೇದ ಮಾಡದೆ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಸಂವಿಧಾನಾತ್ಮಕ ಪರಿಹಾರದ ಹಕ್ಕು, ಶೋಷಣೆಯ ವಿರುದ್ಧ ಹೋರಾಡುವ ಹಕ್ಕನ್ನು ನೀಡಲಾಗಿದೆ. ಪ್ರತಿಯೊಬ್ಬrರಿಗೂ ಮೂಲಭೂತ ಕರ್ತವ್ಯಗಳನ್ನು ನೀಡಲಾಗಿದೆ.
ನನ್ನ ಬಾಲ್ಯ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಕಾಂಗ್ರೆಸ್ ಪಕ್ಷದ ನೂರಾರು ಕೆಲಸ ಕಾರ್ಯಗಳನ್ನು ನೋಡಿ ಬೆಳೆದವನು. ನಾನು ರಾಜಕೀಯಕ್ಕೆ ಪದಾರ್ಪಣೆ ಮಾಡುವ ವೇಳೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಾಕಾರಗೊಳ್ಳುತ್ತಿದ್ದ ಉಚ್ಛ್ರಾಯ ಸ್ಥಿತಿ ಎನ್ನ ಬಹುದು. ಇಂದಿರಾ ಗಾಂಧಿ ಅವರ ಉಳುವವನೆ ಭೂಮಿಯ ಒಡೆಯ ಯೋಜನೆಯ ಫಲವಾಗಿ ಕೋಟ್ಯಂತರ ಕುಟುಂಬಗಳು ಭೂಮಿಯನ್ನು ಪಡೆದಿದ್ದವು. ದೇವರಾಜ ಅರಸು ಅವರು ಇಂದಿರಾಗಾಂಧಿ ಅವರ ಕನಸಿಗೆ ಬೆನ್ನೆಲುಬಾಗಿ ನಿಂತರು. ಅರಸು ಅವರ ಕಾಲದ ಜನತಾ ಮನೆ ಯೋಜನೆ ಬಗ್ಗೆ ಸಣ್ಣ ಉದಾಹರಣೆ ನೀಡುವುದಾದರೆ, 1972-73ರಲ್ಲಿ 85 ಲಕ್ಷ ರೂಪಾಯಿಗಳನ್ನು ಬಜೆಟ್ ನಲ್ಲಿ ಮೀಸಲಿಡುವ ಮೂಲಕ ಪ್ರಾರಂಭವಾದ ಸೂರು ನೀಡುವ ಯೋಜನೆ ಕ್ರಾಂತಿ ಸೃಷ್ಟಿಸಿತು. ಅಂಕಿ-ಅಂಶಗಳ ಪ್ರಕಾರ 1971-1981ರ ಅವಧಿಯಲ್ಲಿ ಕರ್ನಾಟಕದಲ್ಲಿ ಎದ್ದು ನಿಂತ ಮನೆಗಳ ಸಂಖ್ಯೆ 31.04 ಲಕ್ಷ.
ಅರಸು ಅವರು ಜಾರಿಗೆ ತಂದ ಉದ್ಯೋಗ ಭರವಸೆಯ ಯೋಜನೆಯು 2005ರಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರಕಾರ ಜಾರಿಗೆ ತಂದ ಮಹಾತ್ಮಾಗಾಂಧಿ ನರೇಗಾ ಯೋಜನೆಗೆ ಸ್ಫೂರ್ತಿ. ಜೀತವಿಮುಕ್ತಿ, ಮಲಹೊರುವ ಪದ್ಧತಿಯ ನಿಷೇಧ, ಗ್ರಾಮೀಣ ಬಡವರ ಸಾಲಮನ್ನಾ ಯೋಜನೆ, ನಗರ ಕೊಳಚೆ ಪ್ರದೇಶ ನಿರ್ಮೂಲನೆಗೆ ಕೊಳಚೆ ನಿರ್ಮೂಲನ ಮಂಡಳಿ ಸ್ಥಾಪನೆ, ಬಡವರಿಗೆ ಮತ್ತು ಬೇರೆಬೇರೆ ವೃತ್ತಿ ಸಮುದಾಯಗಳಿಗೆ ಅಗ್ಗದ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ರಸ್ತೆ ಬದಿಯಲ್ಲಿ ಚಮ್ಮಾರಿಕೆಗೆ ಲಿಡ್ಕರ್ ಸಂಸ್ಥೆ ಮೂಲಕ ನೆರವು, ಭಿûಾಟನೆ ನಿರ್ಮೂಲನಕ್ಕೆ ಕ್ರಮ, ಭಿಕ್ಷುಕರ ಪುನರ್ವಸತಿ ಕೇಂದ್ರ ಸ್ಥಾಪನೆ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಪೌಷ್ಟಿ ಕಾಂಶಯುಕ್ತ ಆಹಾರ ಪೂರೈಕೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳು ಜಾರಿಯಾದವು. ನನ್ನ ರಾಜಕೀಯ ಗುರುಗಳಾದ ಬಂಗಾರಪ್ಪ ಅವರು ಗ್ರಾಮೀಣ ಕೃಪಾಂಕ ಕಾರ್ಯಕ್ರಮದ ಮೂಲಕ ಲಕ್ಷಾಂತರ ಗ್ರಾಮೀಣ ಯುವಕರು ಸರಕಾರಿ ಕೆಲಸ ಪಡೆಯಲು ಕಾರಣರಾದರು.
ವೀರಪ್ಪ ಮೊಯ್ಲಿ ಅವರು ಸಿಇಟಿ ಪ್ರಾರಂಭ ಮಾಡಿದ ಕಾರಣ ರಾಜ್ಯದ ಪ್ರತೀ ಕುಟುಂಬದಲ್ಲಿಯೂ ಒಬ್ಬ ಎಂಜಿನಿ ಯರ್, ಡಾಕ್ಟರ್‌ಗಳು ಉದಯಿಸಿದರು. ಎಸ್.ಎಂ. ಕೃಷ್ಣ ಅವರ ಐಟಿ ಕ್ರಾಂತಿಯಿಂದ ಹಳ್ಳಿ ಹೈದರು ಸಾಫ್ಟ್ ವೇರ್ ಕ್ಷೇತ್ರದಲ್ಲಿ ಸಾಧನೆ ಮಾಡಿದರು. 2013- 18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಗರ್ಭಿಣಿಯರಿಗೆ ಮಾತೃಪೂರ್ಣ ಯೋಜನೆ ಸೇರಿದಂತೆ ಹಿಂದೆಂದೂ ಕಾಣದಂತ ಅಭೂತಪೂರ್ವ ಯೋಜನೆಗಳನ್ನು ನೀಡಲಾಯಿತು. ವೈಜ್ಞಾನಿಕವಾಗಿ ಜಾತಿಗಣತಿ ನಡೆಸಲು ಮುನ್ನುಡಿ ಇಟ್ಟಿದ್ದೇ ನಮ್ಮ ಸರಕಾರ.
ಗೋಪಾಲಕೃಷ್ಣ ಅಡಿಗರ ಕವಿತೆ ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳ ಆಶಯವನ್ನೇ ಪ್ರತಿಧ್ವನಿಸುತ್ತದೆ.
ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನಲಹರಿಯ ಮೇಲೆ
ತೇಲಿ ಬರಲಿದೆ ನೋಡು, ನಮ್ಮ ನಾಡು!
ಪ್ರಸ್ತುತ ಇಡೀ ಭಾರತವೇ ಕರ್ನಾಟಕ ಮಾದರಿಯ ಕಡೆಗೆ ತಿರುಗಿ ನೋಡುತ್ತಿದೆ. “ಫ್ರೀಬೀಸ್’ ಎಂದು ಆಡಿಕೊಂಡವರೇ ಅದರ ಫಲಾನುಭವಿಗಳಾಗಿ¨ªಾರೆ. ಆದರೆ ಇಂದು ಕೇವಲ 9 ತಿಂಗಳಲ್ಲಿ 1.5 ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದಿವೆ. 2024-25ರಲ್ಲಿ 52,0009 ಕೋಟಿ ಹಣವನ್ನು ಐದು ಗ್ಯಾರಂಟಿ ಯೋಜನೆಗಳಿಗೆ ನೀಡಿದ್ದೇವೆ. ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಗೌರವ ಸಲ್ಲಿಸುವುದು ಎಂದರೆ ಇದೇ ಅಲ್ಲವೇ?
ಬಾಬಾ ಸಾಹೇಬರ ನೇತೃತ್ವದಲ್ಲಿ ಸಂವಿಧಾನ ರಚನೆಗೆ ಜವಾಹ ರ ಲಾ ಲ್ ನೆಹರೂ ಅವರು ಬ ದ್ಧತೆ ತೋರಿದ ಕಾರಣಕ್ಕೆ ನೀರು, ಅನ್ನ, ಸೂರು ಎಲ್ಲರಿಗೂ ಸಿಗುವಂತಾಗಿದೆ. ಇಲ್ಲದಿದ್ದರೆ ಎಲ್ಲರಂತೆ ಓಡಾಡುವಂತಿರಲಿಲ್ಲ, ಅಕ್ಷರದ ಗಂಧ ಗಾಳಿಯೂ ತಾಕುತ್ತಿರಲಿಲ್ಲ. ಕಾಲಗರ್ಭದಲ್ಲಿ ಬಹುದೂರ ಸಾಗಿ ಬಂದಿದ್ದೇವೆ. ಈಗ ಹೊಸ ತಲೆಮಾರಿಗೆ ನಮ್ಮ ಇತಿಹಾಸವನ್ನು ನೆನಪಿಸುವ, ವರ್ಗಾಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ಎನ್ನುವ ಸಾಲುಗಳನ್ನು ಯುವ ಜನರು ಗುನುಗಬೇಕಿದೆ.
ಕೊನೆಯದಾಗಿ ಹೇಳುವುದಾದರೆ ಯುಗದ ಕವಿ, ಜಗದ ಕವಿ ಕುವೆಂಪು ಅವರ ಈ ಸಾಲುಗಳು ಪ್ರತಿಯೊಬ್ಬರ ಎದೆಯಲ್ಲಿ ಪ್ರತಿಧ್ವನಿಸಬೇಕಿದೆ.
ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ಯಾವುದೂ ಯಃಕಶ್ಚಿತವಲ್ಲ!
ಇಲ್ಲಿ
ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲವೂ ತೀರ್ಥ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.