ಸಂಪಾದಕೀಯ: ಹುಕ್ಕಾ, ಧೂಮಪಾನ ನಿಷೇಧ: ಕಟ್ಟುನಿಟ್ಟಾಗಿ ಜಾರಿಯಾಗಲಿ
Team Udayavani, Feb 23, 2024, 8:24 AM IST
ರಾಜ್ಯದಲ್ಲಿ ಜಾರಿಯಲ್ಲಿರುವ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುವ ತಿದ್ದುಪಡಿ ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ಹುಕ್ಕಾಬಾರ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಮತ್ತು 21 ವರ್ಷದೊಳಗಿನವರಿಗೆ ಸಿಗರೇಟು ಮಾರಾಟ ಮಾಡುವಂತಿಲ್ಲ ಮತ್ತು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದವರಿಗೆ ಒಂದು ಸಾವಿರ ರೂ. ದಂಡ ವಿಧಿಸುವ ಪ್ರಸ್ತಾವಗಳನ್ನು ಈ ತಿದ್ದುಪಡಿ ಮಸೂದೆ ಒಳಗೊಂಡಿದೆ.
ಹೊಸ ಕಾನೂನಿನ ಅನುಸಾರ ಪಬ್, ಬಾರ್, ರೆಸ್ಟೋರೆಂಟ್ ಸಹಿತ ಯಾವುದೇ ಸ್ಥಳದಲ್ಲೂ ಹುಕ್ಕಾ ಬಾರ್ ನಡೆಸುವಂತಿಲ್ಲ. ಕಾನೂನನ್ನು ಮೀರಿ ಹುಕ್ಕಾ ಬಾರ್ ನಡೆಸಿದಲ್ಲಿ ಅಂಥವರಿಗೆ ಒಂದು ವರ್ಷದಿಂದ 3 ವರ್ಷದವರೆಗೆ ಜೈಲು ಶಿಕ್ಷೆ, 50 ಸಾವಿರ ರೂ.ಗಳಿಂದ ಒಂದು ಲ.ರೂ.ಗಳ ವರೆಗೆ ದಂಡ ವಿಧಿಸಲಾಗುವುದು. 21 ವರ್ಷಕ್ಕಿಂತ ಕೆಳ ಹರೆಯದವರಿಗೆ ಬೀಡಿ, ಸಿಗರೇಟುಗಳನ್ನು ಮಾರಾಟ ಮಾಡಿದಲ್ಲಿ ಈಗಿನ 200 ರೂ. ದಂಡದ ಬದಲಾಗಿ 1,000 ರೂ. ದಂಡವನ್ನು ವಿಧಿಸಲಾಗುವುದು. 30 ಕೊಠಡಿಗಳನ್ನು ಹೊಂದಿರುವ ಹೊಟೇಲ್, 30ಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯವುಳ್ಳ ರೆಸ್ಟೋರೆಂಟ್, ವಿಮಾನ ನಿಲ್ದಾಣ ಗಳಲ್ಲಿ ಧೂಮಪಾನಿಗಳಿಗಾಗಿ ಪ್ರತ್ಯೇಕ ಪ್ರದೇಶವನ್ನು ಮೀಸಲಿರಿಸಬೇಕು ಎಂಬ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ಇನ್ನು ಶಿಕ್ಷಣ ಸಂಸ್ಥೆಗಳಿಂದ 100 ಮೀ. ಅಂತರದೊಳಗಿನ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡು ವಂ ತಿಲ್ಲ ಎಂದು ಹಾಲಿ ನಿಯಮದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ.
ತಂಬಾಕು ಉತ್ಪನ್ನಗಳ ವ್ಯವಹಾರದಿಂದ ಸರಕಾರಕ್ಕೆ ಬರುತ್ತಿರುವ ಆದಾಯವನ್ನು ಕಳೆದುಕೊಳ್ಳಲು ಯಾವೊಂದೂ ರಾಜ್ಯವೂ ಮುಂದಾಗುತ್ತಿಲ್ಲ. ಹೀಗಾಗಿ ಪರೋಕ್ಷವಾಗಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಗೆ ಸಂಬಂಧಿಸಿದಂತೆ ನಿರ್ಬಂಧಗಳನ್ನು ಹೇರುವ ಮೂಲಕ ಇವುಗಳ ಬಳಕೆಗೆ ಕಡಿವಾಣ ಹೇರುವ ಪ್ರಯತ್ನ ನಡೆಸುತ್ತಲೇ ಬಂದಿವೆ. ಇದೇ ಹಾದಿಯಲ್ಲಿ ಈಗ ರಾಜ್ಯ ಸರಕಾರ ಕೂಡ ಹೆಜ್ಜೆ ಇರಿಸಿದ್ದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಹಾಲಿ ಜಾರಿಯಲ್ಲಿರುವ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಗೆ ಸಂಬಂಧಿಸಿದ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಿದೆ. ರಾಜ್ಯದಲ್ಲಿ ಹದಿಹರೆಯದವರು ಧೂಮಪಾನ, ಹುಕ್ಕಾ ಸೇವನೆಯಂತಹ ಚಟಗಳ ದಾಸರಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಮತ್ತು ಯುವಜನಾಂಗ ವನ್ನು ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳು ಬಾಧಿಸುತ್ತಿರುವ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ.
ಸರಕಾರದ ಈ ನಿರ್ಧಾರ ಸ್ವಾಗತಾರ್ಹವಾದರೂ ಸದ್ಯ ಜಾರಿಯಲ್ಲಿರುವ ಕಾನೂನನ್ನೇ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಂಬಂಧಿತ ಇಲಾಖೆಗಳು ವಿಫಲವಾಗಿರುವಾಗ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುವುದರಿಂದ ಸರಕಾರದ ನೈಜ ಉದ್ದೇಶ ಈಡೇರಲು ಹೇಗೆ ಸಾಧ್ಯ ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ. ಕಾನೂನು, ನಿಯಮಾವಳಿಯನ್ನು ಉಲ್ಲಂ ಸಿದವರಿಗೆ ಗರಿಷ್ಠ ಪ್ರಮಾಣದ ದಂಡ, ಶಿಕ್ಷೆ ವಿಧಿಸುವ ಮೂಲಕ ಜನರಲ್ಲಿ ಕಾನೂನಿನ ಭಯ ಮೂಡಿಸಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಜನರನ್ನು ದೂರವಿಡುವ ಸರಕಾರದ ಚಿಂತನೆಯೇನೋ ಸೂಕ್ತವಾದುದೇ. ಆದರೆ ಕಾನೂನನ್ನು ಜಾರಿಗೊಳಿಸಬೇಕಾದ ಇಲಾಖೆ ಮತ್ತು ಅಧಿಕಾರಿಗಳು ಈ ದಿಸೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ಇದು ಕೂಡ ವ್ಯರ್ಥ ಪ್ರಯತ್ನವೇ ಸರಿ. ಈ ಬಗ್ಗೆ ಆರೋಗ್ಯ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಿ ಕಾನೂನಿನ ಸಮರ್ಪಕ ಮತ್ತು ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಅಗತ್ಯ ಕಾರ್ಯತಂತ್ರವನ್ನು ರೂಪಿಸಿ ಅದರಂತೆ ಕಾರ್ಯೋನ್ಮುಖವಾಗಬೇಕು. ಇದೊಂದು ನಿರಂತರ ಪ್ರಕ್ರಿಯೆಯಾದಾಗಲಷ್ಟೇ ಸರಕಾರದ ನೈಜ ಉದ್ದೇಶ ಈಡೇರಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.