Science Day: ಅಮೃತ ಕಾಲದ ದೃಷ್ಟಿಕೋನ: ವಿಕಸಿತ ಭಾರತಕ್ಕೆ ನಾಂದಿ ಹಾಡಲಿದೆ ವಿಜ್ಞಾನ ದಿನ
ಅಮೃತ ಕಾಲ ಮುಂದಿನ 25 ವರ್ಷಗಳ ಅವಧಿಯನ್ನು ಪ್ರತಿನಿಧಿಸುತ್ತದೆ
Team Udayavani, Feb 26, 2024, 11:31 AM IST
ಭಾರತೀಯ ಭೌತಶಾಸ್ತ್ರಜ್ಞರಾದ ಸರ್ ಚಂದ್ರಶೇಖರ ವೆಂಕಟ ರಾಮನ್ ಅವರು ಫೆಬ್ರವರಿ 28, 1928ರಂದು ಒಂದು ಮಹತ್ವದ ವಿಚಾರವನ್ನು ಘೋಷಿಸಿದರು. ಆ ದಿನದಂದು ಅವರು ಜಾಗತಿಕ ವಿಜ್ಞಾನ ಸಮುದಾಯಕ್ಕೆ ‘ರಾಮನ್ ಇಫೆಕ್ಟ್’ ಅನ್ವೇಷಣೆಯನ್ನು ಪರಿಚಯಿಸಿದರು. ಅವರ ಮಹತ್ತರ ಅನ್ವೇಷಣೆಗೆ 1930ರಲ್ಲಿ ಅವರಿಗೆ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ ನೀಡಲಾಯಿತು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಭಾರತದಲ್ಲಿ ಪ್ರತಿವರ್ಷವೂ ಫೆಬ್ರವರಿ 28ರಂದು ಆಚರಿಸಲಾಗುತ್ತದೆ. ಭಾರತದಾದ್ಯಂತ ಈ ದಿನದಂದು ಒಂದು ನಿರ್ದಿಷ್ಟ ಥೀಮ್ ಅಡಿಯಲ್ಲಿ ವಿಜ್ಞಾನ ಕೇಂದ್ರಿತ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ.
1986: ಎನ್‌ಸಿಎಸ್‌ಟಿಸಿ ಪ್ರಸ್ತಾವನೆ
ಕೇಂದ್ರ ಸಂಸ್ಕೃತಿ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ವಿಜ್ಞಾನ ವಸ್ತು ಸಂಗ್ರಹಾಲಯಗಳ ರಾಷ್ಟ್ರೀಯ ಸಮಿತಿ, 1986ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕಮ್ಯುನಿಕೇಶನ್ (ಎನ್‌ಸಿಎಸ್‌ಟಿಸಿ) ಭಾರತ ಸರ್ಕಾರಕ್ಕೆ ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುವುದಾಗಿ ಘೋಷಿಸುವಂತೆ ಕರೆ ನೀಡಿತು.
ರಾಮನ್ ಪರಿಣಾಮದ ಸಂಶೋಧನೆಯನ್ನು ಗೌರವಿಸಲು ಮತ್ತು ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಸಲುವಾಗಿ ಎನ್‌ಸಿಎಸ್‌ಟಿಸಿ ಈ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಸಲಹೆಗೆ ಸಮ್ಮತಿ ಸೂಚಿಸಿದ ಭಾರತ ಸರ್ಕಾರ, ಫೆಬ್ರವರಿ 28ನ್ನು ಅಧಿಕೃತವಾಗಿ ವಿಜ್ಞಾನ ದಿನವನ್ನಾಗಿ ಘೋಷಿಸಿತು.
1986ರ ಫೆಬ್ರವರಿ 28ರಂದು ಮೊದಲ ಬಾರಿಗೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಅಂದಿನಿಂದ, ಪ್ರತಿವರ್ಷವೂ ಭಾರತದಾದ್ಯಂತ ಶಾಲಾ ಕಾಲೇಜುಗಳಲ್ಲಿ, ಮತ್ತು ವೈಜ್ಞಾನಿಕ ಸಮುದಾಯದಲ್ಲಿ ಒಂದು ಪ್ರಮುಖ ಸಮಾರಂಭವಾಗಿ ಆಚರಿಸಲ್ಪಡುತ್ತಿದೆ. ವಿಜ್ಞಾನ ದಿನಾಚರಣೆ ಎಲ್ಲರಲ್ಲೂ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು, ವೈಜ್ಞಾನಿಕ ಚಿಂತನೆ ಬೆಳೆಸಲು ನೆರವಾಗುತ್ತದೆ.
ರಾಷ್ಟ್ರೀಯ ವಿಜ್ಞಾನ ದಿನದ ಗುರಿಗಳು
• ವಿಜ್ಞಾನದ ಮಹತ್ವದೆಡೆಗೆ ಬೆಳಕು ಚೆಲ್ಲುವುದು ಮತ್ತು ದೈನಂದಿನ ಜೀವನದಲ್ಲಿ ವಿಜ್ಞಾನ ಹೇಗೆ ಬಳಕೆಯಾಗುತ್ತದೆ ಎನ್ನುವುದನ್ನು ತಿಳಿಸುವುದು.
• ಯುವ ಜನರನ್ನು ವಿಜ್ಞಾನ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು ಮತ್ತು ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ಯೋಗವನ್ನು ಆರಿಸಿಕೊಳ್ಳುವಂತೆ ಉತ್ತೇಜಿಸುವುದು.
• ಯುವ ಜನತೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಮತ್ತು ಜನ ಸಾಮಾನ್ಯರಲ್ಲೂ ವೈಜ್ಞಾನಿಕ ಅನ್ವೇಷಣೆಗಳ ಕುರಿತು ಮನೋಭಾವನೆ ಮೂಡಿಸುವುದು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2024ರ ಥೀಮ್
2024ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ‘ವಿಕಸಿತ ಭಾರತಕ್ಕಾಗಿ ಸ್ವದೇಶೀ ತಂತ್ರಜ್ಞಾನಗಳು’ ಎಂಬ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ. ಇದು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದ ಗುರಿಗೆ ಪೂರಕವಾಗಿದೆ.
ಈ ಧ್ಯೇಯವಾಕ್ಯ ಹಲವು ರೀತಿಯಿಂದ ಮುಖ್ಯವಾಗಿದೆ. ಅವೆಂದರೆ:
• ವಿಜ್ಞಾನ, ತಂತ್ರಜ್ಞಾನ, ಮತ್ತು ಆವಿಷ್ಕಾರಗಳನ್ನು ಹೆಚ್ಚು ಹೆಚ್ಚು ದೇಶೀಯವಾಗಿಸುವ ಮತ್ತು ದೇಶಕ್ಕೆ ಅವಶ್ಯಕವಿರುವ ಮಾದರಿಯಲ್ಲಿ ನಿರ್ಮಿಸುವ ಕುರಿತ ಪ್ರಯತ್ನವನ್ನು ಈ ಥೀಮ್ ತೋರಿಸುತ್ತದೆ.
• ದೇಶೀಯವಾಗಿ ನಿರ್ಮಿಸಿರುವ ತಂತ್ರಜ್ಞಾನಗಳ ಮೂಲಕ ರಾಷ್ಟ್ರೀಯ ಅಭಿವೃದ್ಧಿಯ ಸವಾಲುಗಳನ್ನು ಮೀರಲು ಭಾರತೀಯ ವಿಜ್ಞಾನಿಗಳ ಸಾಧನೆಗಳನ್ನು ಶ್ಲಾಘಿಸುವುದು ಮತ್ತು ಬೆಂಬಲಿಸುವುದು.
• ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಜನ ಜೀವನ ಸುಧಾರಿಸುವ ಸಲುವಾಗಿ, ಭಾರತ ಮತ್ತು ಜಾಗತಿಕ ಸಾಮಾನ್ಯ ನಾಗರಿಕರು ಮತ್ತು ವೈಜ್ಞಾನಿಕ ಸಮುದಾಯ ಒಂದಾಗಿ ಸಹಯೋಗದೊಂದಿಗೆ ಕಾರ್ಯಾಚರಿಸುವ ಹೊಸ ಕಾಲದ ಆರಂಭಕ್ಕೆ ಇದು ಮುನ್ನುಡಿಯಾಗಿದೆ.
• ಭಾರತದ ಸ್ವಾವಲಂಬನೆಯ ಅಥವಾ ಆತ್ಮನಿರ್ಭರ ಭಾರತದ ಸಾಧನೆಗೆ ವಿಜ್ಞಾನ ಎಷ್ಟು ಮಹತ್ತರವಾದುದು ಎಂದು ಸಾಬೀತುಪಡಿಸುತ್ತದೆ.
• ಅಮೃತಕಾಲದ ದೂರದೃಷ್ಟಿಯ ಗುರಿಯಾದ 2047ರಲ್ಲಿ ವಿಕಸಿತ ಭಾರತದ ನಿರ್ಮಾಣದ ಗುರಿಯನ್ನು ಪುನರುಚ್ಚರಿಸುತ್ತದೆ.
ವಿಕಸಿತ ಭಾರತ @ 2047 ಎನ್ನುವುದು ಭಾರತವನ್ನು ಸ್ವಾತಂತ್ರ್ಯ ಪಡೆದ ನೂರನೆಯ ವರ್ಷದ ವೇಳೆಗೆ, ಅಂದರೆ 2047ರಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಗುರಿಯಾಗಿದೆ. ಈ ದೂರದೃಷ್ಟಿಯ ಯೋಜನೆ ಆರ್ಥಿಕ ಪ್ರಗತಿ, ಸಾಮಾಜಿಕ ಅಭಿವೃದ್ಧಿ, ಪರಿಸರ ರಕ್ಷಣೆ ಹಾಗೂ ಪರಿಣಾಮಕಾರಿ ಆಡಳಿತದಂತಹ ಅಭಿವೃದ್ಧಿಯ ವಿವಿಧ ಮಜಲುಗಳನ್ನು ಒಳಗೊಂಡಿದೆ.
ಅಮೃತ ಕಾಲ ಎಂದರೇನು?: ಭಾರತದ ಸ್ವಾತಂತ್ರ್ಯದ 75ನೇ ವರ್ಷದಿಂದ 100ನೇ ವರ್ಷದ ಅವಧಿಯನ್ನು ‘ಅಮೃತ ಕಾಲ’ ಎಂದು ಗುರುತಿಸಲಾಗಿದೆ. ಅರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2022-23ನೇ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಈ ಪದವನ್ನು ಬಳಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 2021ರಲ್ಲಿ ಮೊದಲ ಬಾರಿಗೆ ಈ ಪದವನ್ನು ಪರಿಚಯಿಸಿದ್ದರು. ಅಮೃತ ಕಾಲ ಮುಂದಿನ 25 ವರ್ಷಗಳ ಅವಧಿಯನ್ನು ಪ್ರತಿನಿಧಿಸುತ್ತದೆ.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮಹತ್ವ
ವಿಜ್ಞಾನ ಮತ್ತು ತಂತ್ರಜ್ಞಾನಗಳು ಆಧುನಿಕ ಜಗತ್ತಿನಲ್ಲಿ ಎಲ್ಲವನ್ನೂ ಅತ್ಯಂತ ಕ್ಷಿಪ್ರವಾಗಿ ಬದಲಾಯಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿ ವರ್ಷವೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸುವುದು ಹಲವು ಕಾರಣಗಳಿಂದ ಮುಖ್ಯವಾಗಿದೆ. ಅವುಗಳಲ್ಲಿ ಪ್ರಮುಖ ಕಾರಣಗಳು ಇಂತಿವೆ:
ನಮ್ಮ ವಿಜ್ಞಾನಿಗಳಿಗೆ ಬೆಂಬಲ ನೀಡುವುದು:
ರಾಮನ್ ಪರಿಣಾಮವನ್ನು ಘೋಷಿಸಿದ ದಿನದಂದೇ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವುದು ಒಂದು ರೀತಿ ಭಾರತದ ಎಲ್ಲ ವಿಜ್ಞಾನಿಗಳಿಗೆ ಧನ್ಯವಾದ ಸಮರ್ಪಿಸುವ ರೀತಿಯಾಗಿದೆ. ಇದು ವಿಜ್ಞಾನಿಗಳಿಗೆ ತಮ್ಮ ವೈಜ್ಞಾನಿಕ ಯೋಜನೆಗಳಲ್ಲಿ ಇನ್ನಷ್ಟು ಉತ್ತಮವಾಗಿ ಕಾರ್ಯಾಚರಿಸಲು ಉತ್ತೇಜನ ನೀಡುತ್ತದೆ.
ವಿಜ್ಞಾನದ ಕುರಿತು ಅರಿವು ಹೆಚ್ಚಿಸುವುದು:
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸುವ ಸಮಾರಂಭಗಳು ಜನರಿಗೆ ವಿವಿಧ ವೈಜ್ಞಾನಿಕ ವಿಚಾರಗಳ ಕುರಿತು ಅರಿವು ಮೂಡಿಸುವುದು ಮತ್ತು ಇತ್ತೀಚಿನ ವೈಜ್ಞಾನಿಕ ಅನ್ವೇಷಣೆಗಳ ಕುರಿತು ಮಾಹಿತಿ ಹಂಚಿಕೊಳ್ಳುವುದು.
ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವುದು:
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಂದರ್ಭದಲ್ಲಿ, ಭಾಷಣ, ಚರ್ಚೆ, ರಸಪ್ರಶ್ನೆ, ಮತ್ತು ಇತರ ಸಂವಾದಗಳು ಜನರಲ್ಲಿ ವಿಜ್ಞಾನ ವಲಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ಒದಗಿಸುತ್ತವೆ ಮತ್ತು ಜನರನ್ನು ತಾರ್ಕಿಕವಾಗಿ ಮತ್ತು ವೈಜ್ಞಾನಿಕವಾಗಿ ಚಿಂತಿಸಲು ಪ್ರೇರೇಪಿಸುತ್ತವೆ. ಇದು ಭಾರತೀಯ ಸಂವಿಧಾನದಲ್ಲಿ ದಾಖಲಿಸಲಾದ, 51ಎ ವಿಧಿಯಲ್ಲಿರುವ ಕನಿಷ್ಠ ಜವಾಬ್ದಾರಿಯನ್ನು ಬೆಂಬಲಿಸುತ್ತದೆ.
ಭಾರತೀಯ ಸಂವಿಧಾನದ 51ಎ ವಿಧಿ ದೇಶದ ಮೌಲ್ಯಗಳನ್ನು ಗೌರವಿಸುವುದು, ರಾಷ್ಟ್ರದ ಇತಿಹಾಸವನ್ನು ಕಾಪಾಡಿಕೊಳ್ಳುವುದು, ಪ್ರಶ್ನಿಸುವುದನ್ನು ಉತ್ತೇಜಿಸುವುದು ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ಪಟ್ಟಿಮಾಡಿದೆ.
ಯುವ ಮನಸ್ಸುಗಳಲ್ಲಿ ಕುತೂಹಲ ಮೂಡಿಸುವುದು:
ವಸ್ತು ಪ್ರದರ್ಶನಗಳು, ಕಾರ್ಯಾಗಾರಗಳು, ವಿಜ್ಞಾನ ಮೇಳಗಳಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ವಿಜ್ಞಾನದೊಡನೆ ನೇರ ಅನುಭವ ಒದಗಿಸುತ್ತದೆ. ಆ ಮೂಲಕ ಅವರಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮತ್ತು ಪ್ರೀತಿ ಮೂಡಿಸುತ್ತದೆ.
ಭಾರತೀಯ ವಿಜ್ಞಾನದ ಅಭಿವೃದ್ಧಿಯೆಡೆಗೆ ಬೆಳಕು:
ರಾಷ್ಟ್ರೀಯ ವಿಜ್ಞಾನ ದಿನ ಭಾರತದಲ್ಲಿ ವಿವಿಧ ನೂತನ ವೈಜ್ಞಾನಿಕ ಸಾಧನೆಗಳು ಮತ್ತು ಯೋಜನೆಗಳ ಅಭಿವೃದ್ಧಿಯನ್ನು ಪ್ರದರ್ಶಿಸುತ್ತದೆ. ಇದರಿಂದಾಗಿ ಭಾರತೀಯರು ತಮ್ಮ ದೇಶದ ಕುರಿತು ಹೆಮ್ಮೆ ಪಡುವಂತೆ ಮಾಡುತ್ತದೆ ಮತ್ತು ಮುಂದಿನ ತಲೆಮಾರು ವಿಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಆರಿಸುವಂತೆ ಪ್ರೇರೇಪಿಸುತ್ತದೆ.
ಅಂತಾರಾಷ್ಟ್ರೀಯ ಸಹಯೋಯಕ್ಕೆ ಉತ್ತೇಜನ:
ವಿಜ್ಞಾನಕ್ಕಾಗಿ ಒಂದು ರಾಷ್ಟ್ರೀಯ ಉತ್ಸವವನ್ನು ಆಯೋಜಿಸುವ ಮೂಲಕ, ಭಾರತ ವೈಜ್ಞಾನಿಕ ಅಭಿವೃದ್ಧಿಯ ಕುರಿತು ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಆ ಮೂಲಕ ಜಗತ್ತಿನಾದ್ಯಂತ ವಿವಿಧ ವೈಜ್ಞಾನಿಕ ಗುಂಪುಗಳೊಡನೆ ಒಂದಾಗಿ ಕಾರ್ಯಾಚರಿಸಲು ಅವಕಾಶ ಕಲ್ಪಿಸುತ್ತದೆ.
ವೈಜ್ಞಾನಿಕ ತಳಹದಿಯನ್ನು ಭದ್ರಪಡಿಸುತ್ತದೆ:
ಮುಂದಿನ ತಲೆಮಾರುಗಳನ್ನು ವೈಜ್ಞಾನಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ನೆರವು ನೀಡಲು ಮತ್ತು ವಿಜ್ಞಾನದ ನೆರವಿನಿಂದ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಉತ್ತೇಜಿಸುವ ಮೂಲಕ ವಿಜ್ಞಾನ ದಿನಾಚರಣೆ ದೇಶಕ್ಕೆ ಗಟ್ಟಿಯಾದ ವೈಜ್ಞಾನಿಕ ತಳಹದಿ ನಿರ್ಮಿಸುತ್ತದೆ.
ರಾಷ್ಟ್ರೀಯ ವಿಜ್ಞಾನ ದಿನ ಕೇವಲ ರಾಮನ್ ಪರಿಣಾಮವನ್ನು ಮಾತ್ರವೇ ನೆನಪಿಸುವ ದಿನವಾಗಿರದೆ, ಜಾಗತಿಕ ವಿಜ್ಞಾನ ನಾಯಕನಾಗುವತ್ತ ಭಾರತದ ಪಥವನ್ನು ನೆನಪಿಸುತ್ತದೆ. ಈ ದಿನ ವೈಜ್ಞಾನಿಕ ಸಾಧನೆಗಳನ್ನು ಗೌರವಿಸುತ್ತಾ, ಎಲ್ಲರಿಗೂ ನ್ಯಾಯಯುತವಾದ, ಹಸಿರುಮಯವಾದ, ಮತ್ತು ಸುಸ್ಥಿರ ಜಗತ್ತು ನಿರ್ಮಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುವ ಭಾರತದ ಗುರಿಯನ್ನು ಸಾಧಿಸಲು ನೆರವಾಗುತ್ತದೆ.
ರಾಮನ್ ಪರಿಣಾಮ ಎಂದರೇನು?
ಸರ್ ಸಿ ವಿ ರಾಮನ್ ಅವರು ಅನ್ವೇಷಿಸಿರುವ ರಾಮನ್ ಪರಿಣಾಮ ಎನ್ನುವುದು, ಬೆಳಕು ಒಂದು ವಸ್ತುವಿನ ಮೂಲಕ ಸಾಗುವಾಗ ಚದುರುತ್ತದೆ ಮತ್ತು ಅದರ ಶಕ್ತಿಯಲ್ಲಿ ಬದಲಾವಣೆ ಉಂಟಾಗುತ್ತದೆ ಎಂದು ವಿವರಿಸುತ್ತದೆ. ಆ ಬೆಳಕಿನ ಶಕ್ತಿಯಲ್ಲಿ ಉಂಟಾಗುವ ಬದಲಾವಣೆಯ ಕಾರಣದಿಂದ, ಮೂಲ ಬೆಳಕಿಗೆ ಹೋಲಿಸಿದರೆ, ಚದುರಿದ ಬೆಳಕಿನ ಬಣ್ಣ ಮತ್ತು ತರಂಗಾಂತರದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ರಾಮನ್ ಪರಿಣಾಮ ವಸ್ತುಗಳ ಸಂಯೋಜನೆ ಮತ್ತು ರಚನೆಯ ಕುರಿತಂತೆ ಮಹತ್ವದ ಮಾಹಿತಿ ಒದಗಿಸುವಲ್ಲಿ ಅತ್ಯಂತ ಮಹತ್ವದ್ದಾಗಿದೆ. ಚದುರಿದ ಬೆಳಕಿನಲ್ಲಿ ಬದಲಾದ ತರಂಗಾಂತರದ ಅಧ್ಯಯನ ಮಾಡುವುದರಿಂದ, ವಿಜ್ಞಾನಿಗಳಿಗೆ ವಿವಿಧ ವಸ್ತುಗಳ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳ ಕುರಿತು ಮಾಹಿತಿ ಪಡೆಯಲು ನೆರವಾಗುತ್ತದೆ. ಇದು ವೈದ್ಯಕೀಯ, ವಸ್ತು ವಿಜ್ಞಾನ, ಹವಾಮಾನ ವೀಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ಬಳಕೆಯಾಗುತ್ತದೆ.
ಪ್ರಾಯೋಗಿಕ ಒಳನೋಟಗಳು: ರಾಮನ್ ಪರಿಣಾಮದ ಬಳಕೆಗಳು
1. ಸೂರ್ಯಾಸ್ತದ ಸಮಯದಲ್ಲಿ ಆಕಾಶ ಕೆಂಪು ಬಣ್ಣಕ್ಕೆ ತಿರುಗುವುದು ನಮಗೆ ಕಾಣುತ್ತದೆ. ಇದಕ್ಕೆ ರಾಮನ್ ಪರಿಣಾಮವೇ ಕಾರಣವಾಗಿರುತ್ತದೆ. ಭೂಮಿಯ ವಾತಾವರಣದ ಮೂಲಕ ಹಾದುಹೋಗುವ ಸೂರ್ಯನ ಬೆಳಕು ಚದುರಿ, ಬಣ್ಣ ಬದಲಾಯಿಸಿ, ಆ ರೀತಿಯ ರೋಮಾಂಚಕ ವರ್ಣಗಳನ್ನು ಸೃಷ್ಟಿಸುತ್ತದೆ.
2. ನೀವು ನವಿಲಿನ ಗರಿಗಳನ್ನು ಗಮನಿಸಿದರೆ, ಅಲ್ಲಿ ಅತ್ಯಂತ ವರ್ಣಮಯವಾದ ನೀಲಿ ಮತ್ತು ಹಸಿರು ಬಣ್ಣಗಳು ಕಾಣಿಸುತ್ತವೆ. ಇದಕ್ಕೂ ರಾಮನ್ ಪರಿಣಾಮ ಕಾರಣವಾಗಿರುತ್ತದೆ. ನವಿಲಿನ ಗರಿಗಳಲ್ಲಿರುವ ಅತ್ಯಂತ ಸೂಕ್ಷ್ಮವಾದ ರಚನೆಗಳು ಬೆಳಕನ್ನು ಚದುರಿಸುತ್ತವೆ. ಆ ಮೂಲಕ ಇಷ್ಟು ವರ್ಣಮಯವಾಗಿ ಕಾಣಿಸುತ್ತವೆ.
3. ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ, ಕೆಲವೊಂದು ಬ್ಯಾಕ್ಟೀರಿಯಾಗಳು ಮತ್ತು ಆಲ್ಗೇಗಳು ಕೆಂಪು ಅಥವಾ ಹಸಿರು ಬಣ್ಣದಲ್ಲಿ ಕಾಣಿಸುತ್ತವೆ. ಇದಕ್ಕೂ ರಾಮನ್ ಪರಿಣಾಮವೇ ಕಾರಣವಾಗಿರುತ್ತದೆ. ಇಂತಹ ಸೂಕ್ಷ್ಮ ಜೀವಿಗಳೊಡನೆ ವರ್ತಿಸುವ ಬೆಳಕು ಚದುರಿ, ಬಣ್ಣ ಬದಲಾಯಿಸುತ್ತದೆ. ಆ ಮೂಲಕ ಈ ವಿಶಿಷ್ಟ ವರ್ಣಗಳನ್ನು ತೋರುತ್ತವೆ.
4. ವೈದ್ಯಕೀಯ ರೋಗನಿರ್ಣಯದಲ್ಲಿ, ಮೂತ್ರದ ಮಾದರಿಯ ವಿಶ್ಲೇಷಣೆ ನಡೆಸಲು ರಾಮನ್ ಸ್ಪೆಕ್ಟ್ರೋಸ್ಕಪಿ ಬಳಕೆಯಾಗುತ್ತದೆ. ಮಾದರಿಯ ಮೇಲೆ ಲೇಸರ್ ಬೆಳಕನ್ನು ಹಾಯಿಸುವ ಮೂಲಕ, ಅದು ಚದುರಿ ಅದರಲ್ಲಿರಬಹುದಾದ ಯಾವುದೇ ನಿರ್ದಿಷ್ಟ ಸಂಯುಕ್ತಗಳನ್ನು ಕುರಿತು ಮಾಹಿತಿ ನೀಡುತ್ತದೆ. ಇದರಿಂದ ಕೆಲವು ರೋಗಗಳು ಮತ್ತು ವೈದ್ಯಕೀಯ ಸ್ಥಿತಿಗಳನ್ನು ಕುರಿತು ತಿಳಿಯಲು ಸಾಧ್ಯವಾಗುತ್ತದೆ.
5. ಔಷಧೀಯ ವಲಯದಲ್ಲಿ, ಔಷಧಿಗಳ ಗುಣಮಟ್ಟ ಮತ್ತು ಅಧಿಕೃತತೆಯನ್ನು ಪತ್ತೆಹಚ್ಚಲು ರಾಮನ್ ಸ್ಪೆಕ್ಟ್ರೋಸ್ಕೊಪಿ ಬಳಕೆಯಾಗುತ್ತದೆ. ಸಂಕೀರ್ಣ ಪರೀಕ್ಷೆಗಳನ್ನು ನಡೆಸುವ ಬದಲು, ತಜ್ಞರು ಔಷಧ ಮಾದರಿಯ ಮೇಲೆ ಒಂದು ವಿಶೇಷ ಬೆಳಕನ್ನು ಹಾಯಿಸುತ್ತಾರೆ. ಆ ಬೆಳಕು ಔಷಧಿಯಿಂದ ಪ್ರತಿಫಲಿಸಿ, ವಿಷಿಷ್ಟ ಬಣ್ಣಗಳ ಮಾದರಿಯನ್ನು ಒದಗಿಸುತ್ತದೆ. ಈ ಮಾದರಿಯನ್ನು ಮೊದಲೇ ತಿಳಿದಿರುವ ಮಾದರಿಯೊಡನೆ ಹೋಲಿಸುವುದರಿಂದ, ಅವರಿಗೆ ಈ ಔಷಧ ನೈಜವೇ ಅಥವಾ ನಕಲಿಯೇ ಎಂದು ತಿಳಿಯಲು ಸಾಧ್ಯವಾಗುತ್ತದೆ. ಇದು ರೋಗಿಗಳಿಗೆ ಸುರಕ್ಷಿತವಾದ ಮತ್ತು ಪರಿಣಾಮಕಾರಿ ಔಷಧಿ ದೊರೆಯುವಂತೆ ಮಾಡಲು ನೆರವಾಗುತ್ತದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.