Udupi; ಬೇಸಗೆಯಲ್ಲಿ ನೀರಿನ ಕೊರತೆ ಆಗದಂತೆ ಎಚ್ಚರ ವಹಿಸಿ
ಉಸ್ತುವಾರಿ ಕಾರ್ಯದರ್ಶಿ ಡಾ| ಎಂ.ಟಿ. ರೆಜು ಸೂಚನೆ
Team Udayavani, Feb 28, 2024, 12:46 AM IST
ಮಣಿಪಾಲ: ಜಿಲ್ಲೆಯಲ್ಲಿ ಬೇಸಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಹುದಾದ ಗ್ರಾಮಗಳನ್ನು ಗುರುತಿಸಿ, ನೀರಿನ ಸಮಸ್ಯೆ ಉಂಟಾದಲ್ಲಿ ಸ್ಥಳೀಯ ನೀರಿನ ಮೂಲಗಳಿಂದ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ಎಂ.ಟಿ. ರೆಜು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಒದಗಿಸಲು ಜಲಜೀವನ್ ಮಿಷನ್ ಅಡಿಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಶೀಘ್ರ ಪೂರ್ಣಗೊಳಿಸಬೇಕು. ಉಡುಪಿ ನಗರಕ್ಕೆ ವಾರಾಹಿ ಯೋಜನೆಯ ಕುಡಿಯುವ ನೀರಿನ ಕಾಮಗಾರಿಯನ್ನು ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆದು ಹಾಗೂ ಕೆಲವೊಂದು ಭಾಗದಲ್ಲಿ ತಾತ್ಕಾಲಿಕ ಕಾಮಗಾರಿಯನ್ನು ಕೈಗೊಂಡು ನಗರಕ್ಕೆ ನೀರು ಒದಗಿಸಬೇಕು ಎಂದು ಸೂಚಿಸಿದರು.
19 ವಾರಕ್ಕೆ ಬೇಕಾದ
ಮೇವು ದಾಸ್ತಾನು
ಜಿಲ್ಲೆಯಲ್ಲಿ ಮುಂದಿನ 19 ವಾರಗಳಿಗಾಗುವಷ್ಟು ಜಾನುವಾರುಗಳ ಮೇವು ಲಭ್ಯವಿದೆ. ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ಕಿಟ್‌ಗಳನ್ನು ರೈತರಿಗೆ ವಿತರಿಸುವುದರೊಂದಿಗೆ ಮೇವು ಬೆಳೆಯಲು ಪ್ರೋತ್ಸಾಹಿಸಬೇಕು. ಸಾಧ್ಯವಾದಲ್ಲಿ ನರೇಗಾಡದಡಿ ಮೇವು ಬೆಳೆಯಲು ಮುಂದಾಗಬೇಕು ಎಂದರು.
ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಜಿಲ್ಲೆಯಲ್ಲಿ ಅಡಿಕೆ ಹಳದಿ ರೋಗ ನಿಯಂತ್ರಣ, ಪ್ರಧಾನ ಮಂತ್ರಿ ಸಿಂಚಾಯ ಯೋಜನೆಯ ಅನುಷ್ಠಾನ ಮಾಹಿತಿ ಪಡೆದು, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆಗೆ ಒತ್ತು ನೀಡಬೇಕು. ಆಹಾರ ಸಂಸ್ಕರಣ ಘಟಕ ತೆರೆಯಲು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸಿದ್ಧ ಆಹಾರ ಪದಾರ್ಥಗಳ ಉತ್ಪಾದನೆಗೆ ತೊಡಗಿಸಿಕೊಳ್ಳಲು ಉತ್ತೇಜಿಸಬೇಕು ಎಂದರು.
ವಿವೇಕ ಯೋಜನೆಯಡಿ ಹೊಸದಾಗಿ 200 ಶಾಲಾ ತರಗತಿಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಅವುಗಳಲ್ಲಿ 160 ಪೂರ್ಣಗೊಂಡಿದ್ದು, ಬಾಕಿ ಉಳಿದ 40 ಕಾಮಗಾರಿಗಳು ನಿರ್ಮಾಣ ಹಂತದಲ್ಲಿವೆ. ಇವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಎಸೆಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಪಡೆಯುವಂತೆ ಕ್ರಮಕೈಗೊಳ್ಳಬೇಕು ಅಧಿಕಾರಿಗೆ ನಿರ್ದೇಶಿಸಿದರು.
ಮೀನುಗಾರಿಕೆ ವೇಳೆ ಮರಣ ಹೊಂದಿದ ಸಂದರ್ಭದಲ್ಲಿ ಪರಿಹಾರ ಪಡೆಯಲು ಅನುಕೂಲವಾಗುವಂತೆ ಮೀನುಗಾರರ ಸೊಸೈಟಿಯಲ್ಲಿ ಸದಸ್ಯತ್ವ ಹೊಂದಿದ ಮೀನುಗಾರರಿಗೆ ವಿಮೆಯ ಪ್ರೀಮಿಯಂ ಮೊತ್ತವನ್ನು ಸರಕಾರ ತುಂಬುತ್ತಿದೆ. 5 ಲಕ್ಷ ರೂ. ವರೆಗೆ ಪರಿಹಾರ ಒದಗಿಸಲಾಗುವುದು. ಕಳೆದ ಹಲವು ದಿನಗಳ ಹಿಂದೆ ಗಂಗೊಳ್ಳಿಯ ಬಂದರಿನಲ್ಲಿ ಬೆಂಕಿ ಅಪಘಾತದಿಂದ ಸುಟ್ಟು ಹೋದ ಬೋಟ್ ಮಾಲಕರಿಗೆ ಶೀಘ್ರದಲ್ಲಿಯೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳ ಪಡಿತರ ಚೀಟಿಯಲ್ಲಿ ಸಣ್ಣ ಪುಟ್ಟ ತಪ್ಪುಗಳಿಂದಾಗಿ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ವಂಚಿತರಾಗುತ್ತಿದ್ದಾರೆ. ಸರಕಾರ ತಿದ್ದುಪಡಿಗೆ ಕಾಲಾವಕಾಶ ನೀಡಿದ ಸಂದರ್ಭದಲ್ಲಿ ಅವುಗಳನ್ನು ಸರಿಪಡಿಸುವ ಕಾರ್ಯ ಆಹಾರ ಇಲಾಖೆಯವರು ಮಾಡಬೇಕು ಎಂದರು.
ಗ್ಯಾರಂಟಿ ಯೋಜನೆಯ ಸರ್ವೇ ಕಾರ್ಯವನ್ನು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬಂದಿ, ಅಂಗನವಾಡಿ ಕಾರ್ಯಕರ್ತೆಯರು ಕೈಗೊಳ್ಳುತ್ತಿದ್ದು, ಸರ್ವೇಕಾರ್ಯದಲ್ಲಿ ಯಾವುದೇ ರೀತಿಯ ಲೋಪದೋಷಗಳು ಆಗದಂತೆ ಹಾಗೂ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಜಿಪಂ ಸಿಇಒ ಪ್ರತೀಕ್ ಬಯಾಲ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.