Caste census; ಸರಕಾರಕ್ಕೆ ಜಾತಿ ಗಣತಿ ವರದಿ: BJP-JDS ಮೈತ್ರಿ ವಿರುದ್ಧ ಬಳಕೆ?

ಕಾಂಗ್ರೆಸ್‌ನಲ್ಲಿ ಈಗಾಗಲೇ ವಿರೋಧ...ಒಕ್ಕಲಿಗರು, ವೀರಶೈವರ ವಿರೋಧ... ಲೆಕ್ಕಾಚಾರ ಆರಂಭಿಸಿದ ಸರಕಾರ

Team Udayavani, Mar 1, 2024, 6:30 AM IST

1-caste

ಬೆಂಗಳೂರು: ಬಹು ನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿ ರಾಜ್ಯ ಸರಕಾರಕ್ಕೆ ಗುರುವಾರ ಸಲ್ಲಿಕೆಯಾಗಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ವರದಿಯನ್ನು ಹಸ್ತಾಂತರಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಎರಡು ಪ್ರಬಲ ಸಮುದಾಯಗಳನ್ನು ಪ್ರತಿನಿಧಿಸುವ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಕಾಂಗ್ರೆಸ್‌ ಸರಕಾರವು ವರದಿಯನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಅಗತ್ಯ ವೇದಿಕೆಯನ್ನು ಸನ್ನದ್ಧಗೊಳಿಸುತ್ತಿದೆ.

ಆಯೋಗದ ವಿಸ್ತರಿತ ಅವಧಿಯ ಕೊನೆಯ ದಿನವಾದ ಗುರುವಾರ, ಫೆ. 29ರಂದು ಭದ್ರವಾಗಿ ಮೊಹರು ಮಾಡಿದ ಎರಡು ದೊಡ್ಡ ಪೆಟ್ಟಿಗೆಗಳಲ್ಲಿ ವರದಿಯ ಪ್ರತಿಗಳನ್ನು ವಿಧಾನಸೌಧದ ಮುಖ್ಯಮಂತ್ರಿ ಕೊಠಡಿಯಲ್ಲಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಲಾಯಿತು.

“ವರದಿಯನ್ನು ಮುಂಬರುವ ದಿನಗಳಲ್ಲಿ ಸಚಿವ ಸಂಪುಟದ ಮುಂದಿಟ್ಟು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಮುಖ ಅಂಶಗಳನ್ನಾಗಲಿ ಅಥವಾ ಆಯೋಗದ ಶಿಫಾರಸುಗಳನ್ನಾಗಲಿ ಬಹಿರಂಗಪಡಿಸಲು ಬರುವುದಿಲ್ಲ. ಇದರಲ್ಲಿನ ಅಂಶಗಳನ್ನು ಸರಕಾರವೇ ತಿಳಿಸಲಿದೆ’ ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ಜಾತಿ ಜನಗಣತಿ ವರದಿಯನ್ನು ಸ್ವೀಕರಿಸುವುದಾಗಿ ಘೋಷಿಸಿದ್ದರು. ಈಗ ವರದಿ ಬಹಿರಂಗಪಡಿಸಲಾಗು ತ್ತದೆಯೇ ಇಲ್ಲವೇ ಎಂಬ ವಿಚಾರದಲ್ಲಿ ಸರಕಾರದ ನಡೆ ಗೌಪ್ಯವಾಗಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಅದನ್ನು ಮೈತ್ರಿ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ಖಚಿತ ಎನ್ನಲಾಗಿದೆ.

ಜಾತಿ ಗಣತಿ ವರದಿ ಸ್ವೀಕರಿಸಿದ 2ನೇ ರಾಜ್ಯ
ಬಿಹಾರ ಬಳಿಕ ಜಾತಿ ಜನಗಣತಿ ವರದಿ ಸ್ವೀಕರಿಸಿದ ಎರಡನೇ ರಾಜ್ಯ ಕರ್ನಾಟಕ ಆಗಿದೆ. ಈ ಹೆಗ್ಗಳಿಕೆಗೂ ಅಹಿಂದ ನಾಯಕ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.

ರಾಜ್ಯದಲ್ಲಿ ಜಾತಿ ಜನಗಣತಿ ಸಮೀಕ್ಷೆ ಮುಗಿದ ಮೇಲೆ ಬಿಹಾರದಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಇನ್ನೂ ವಿಶೇಷವೆಂದರೆ ಇಲ್ಲಿನ ಮಾದರಿಯನ್ನೇ ಅಲ್ಲೂ ಅನುಸರಿಸಲಾಗಿತ್ತು. ಅಲ್ಲಿನ ಸರಕಾರ ಸಮೀಕ್ಷೆ ವರದಿ ಸ್ವೀಕರಿಸಿ, ಕಳೆದ ಅಕ್ಟೋಬರ್‌ನಲ್ಲಿ ವರದಿಯ ಅಂಶಗಳನ್ನೂ ಬಹಿರಂಗಪಡಿಸಿತು. ಆದರೆ ನಮ್ಮಲ್ಲಿ ಇನ್ನೂ ವರದಿ ಸಲ್ಲಿಕೆಯೂ ಆಗಿರಲಿಲ್ಲ.

ಜಾತಿ ಗಣತಿ ವರದಿಗೆ ಒಕ್ಕಲಿಗರು, ವೀರಶೈವರ ಭಾರೀ ವಿರೋಧ
ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಸಲ್ಲಿಸಿರುವ ವರದಿ ಬಗ್ಗೆ ಹಲವು ಅನುಮಾನಗಳಿರುವ ಹಿನ್ನೆಲೆಯಲ್ಲಿ ಅದನ್ನು ಸರಕಾರ ಅಂಗೀಕರಿಸಬಾರದು ಎಂದು ಅಖೀಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸಿವೆ. ಇದೇ ವೇಳೆ, ವರದಿ ಬಗ್ಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ವಿಧಾನ ಮಂಡಲದ ವಿಶೇಷ ಅಧಿವೇಶನ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಮೊದಲಿಗೆ ಜಾತಿಗಣತಿ ಸಮೀಕ್ಷೆ ಉದ್ದೇಶ ದಿಂದಲೇ ಕಾಂತರಾಜು ಆಯೋಗ ರಚಿಸ ಲಾಯಿತು. ಅನಂತರದಲ್ಲಿ ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಬದಲಾಯಿಸಲಾಯಿತು. ಈ ವರದಿ ಸಿದ್ಧವಾಗಿ ಸುಮಾರು 8 ವರ್ಷಗಳಾಗಿದ್ದು, ಈ ಅವಧಿ ಯಲ್ಲಿ ಜಾತಿವಾರು ಜನಸಂಖ್ಯೆಯಲ್ಲಿ ಸಾಕಷ್ಟು ಏರುಪೇರುಗಳಾಗಿವೆ ಎಂದು ವೀರಶೈವ- ಲಿಂಗಾಯತ ಮಹಾಸಭಾದ ಮಹಾಸಭಾದ ಕಾರ್ಯದರ್ಶಿ ಎಚ್‌.ಎಂ.ರೇಣುಕ ಪ್ರಸನ್ನ ತಿಳಿಸಿದ್ದಾರೆ.

ಕೋವಿಡ್‌ ಬಳಿಕದ ಕಾಲಘಟ್ಟದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ಈ ವರದಿಯನ್ನು ಯಥಾ ವತ್ತಾಗಿ ಅಂಗೀಕರಿಸುವುದರಿಂದ ಎಲ್ಲ ಸಮುದಾಯಗಳಿಗೂ ಅನ್ಯಾಯವಾಗುತ್ತದೆ. ಈ ವರದಿಗೆ ಮೊದಲಿನಿಂದಲೂ ಮಹಾಸಭಾ ವಿರೋಧಿಸಿಕೊಂಡೇ ಬಂದಿದೆ. ದಾವಣಗೆರೆಯಲ್ಲಿ ನಡೆದ ಮಹಾಧಿವೇಶನದಲ್ಲಿ ಕೂಡ ಸರಕಾರ ಈ ವರದಿ ಅಂಗೀಕರಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ನಮ್ಮ ಸಮುದಾಯದವರು ಅರಿವಿನ ಕೊರತೆ ಹಾಗೂ ಮಾಹಿತಿ ಕೊರತೆಯಿಂದ ನಿಗದಿತ ಸಂಕೇತ ನಮೂದಿಸದೆ ಇರುವುದರಿಂದ ಇಡೀ ಸಮುದಾಯದ ಜನಸಂಖ್ಯೆಯೇ ಕ್ಷೀಣಿಸಿದೆ. ಗಣತಿಗೆ ನಿಯುಕ್ತರಾದ ಸಿಬಂದಿಯು ಹಲವರ ಮನೆಗಳಿಗೆ ಖುದ್ದು ಭೇಟಿ ನೀಡದೆ ಸರಿಯಾದ ಮಾಹಿತಿ ಒದಗಿಸಿಲ್ಲ. ಈ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ತರಾತುರಿಯಲ್ಲಿ ಅಂಗೀ ಕರಿ ಸಿದರೆ ಉಪಯೋಗಕ್ಕಿಂತ ಹಾನಿಯೇ ಹೆಚ್ಚು. ಹೀಗಾಗಿ ಈ ವರದಿಯನ್ನು ತಿರಸ್ಕರಿಸ ಬೇಕು. ಇಲ್ಲದಿದ್ದರೆ, ಎಲ್ಲ ಹರ-ಗುರು ಚರಮೂರ್ತಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ವನ್ನು ಮಹಾಸಭಾ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಒಕ್ಕಲಿಗರ ಸಂಘ ಕೂಡ ಸರಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವೈಜ್ಞಾನಿಕ ವರದಿಯನ್ನು ಹೇಗೆ ಸ್ವೀಕರಿಸುತ್ತದೆ ಎಂದು ಪ್ರಶ್ನಿಸಿದೆ. ಜತೆಗೆ ಕಾನೂನು ಹೋರಾಟದ ಜತೆಗೆ ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲು ಸದ್ಯದಲ್ಲೇ ತೀರ್ಮಾನಿಸಲಿದೆ. ವರದಿ ಯಲ್ಲಿ ಏನೇನು ಮಾಹಿತಿಗಳಿವೆ ಎಂಬುದನ್ನು ಸರಕಾರದ ಬಹಿರಂಗಪಡಿಸಿದ ಬಳಿಕ ಬೀದಿಗಿಳಿಯಲು ಸಂಘ ನಿರ್ಧರಿಸಿದೆ.

ನಾವು ಜಾತಿ ಗಣತಿಯ ವಿರುದ್ಧವಿಲ್ಲ. ನಮ್ಮ ಸಮಾಜದ ದೃಷ್ಟಿಯಿಂದ ಹೇಳುವುದಾದರೆ ವರದಿಯು ಅವೈಜ್ಞಾನಿಕವಾಗಿದೆ. ನಾವು ನೋಡಿಯೇ ಹೇಳುತ್ತಿರುವುದು. ಲಿಂಗಾಯತರಲ್ಲಿ ಕಂಬಾರ, ಕುಂಬಾರ, ಬಡಿಗ, ಮಡಿವಾಳ, ಹಡಪದ ಸಹಿತ 99 ಉಪಪಂಗಡಗಳಿವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಈ ಸಣ್ಣ ಸಮುದಾಯಗಳು ಹಿಂದು ಧರ್ಮದಡಿ ಮೀಸಲಾತಿ ಪಡೆಯುತ್ತಿವೆ.
– ವಿನಯ್‌ ಕುಲಕರ್ಣಿ, ಮಾಜಿ ಸಚಿವ

ವರದಿ ಈಗಷ್ಟೇ ಸಲ್ಲಿಕೆಯಾಗಿದೆ. ಸರಕಾರ ಒಪ್ಪಬೇಕೋ ಬೇಡವೋ ಎಂಬ ಪ್ರಶ್ನೆ ಇದೆ. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ನೋಡಿದ ಬಳಿಕ ಪ್ರತಿಕ್ರಿಯೆ ಕೊಡುತ್ತೇನೆ. ಮೀಸಲಾತಿ ಸಲುವಾಗಿ ಲಿಂಗಾಯತ ಉಪಪಂಗಡದವರು ಹಿಂದುಗಳಾಗಿ ಗುರುತಿಸಿಕೊಂಡಿದ್ದರು. ಅವರನ್ನೆಲ್ಲ ಒಂದೇ ಸೂರಿನಡಿ ತರಬೇಕು ಎಂದಿದ್ದೆವು. ನಾವಂತೂ ಸಕಾರಾತ್ಮಕವಾಗಿ ಇದ್ದೇವೆ.
– ಎಂ.ಬಿ. ಪಾಟೀಲ್‌, ಕೈಗಾರಿಕೆ ಸಚಿವ

ಸರಕಾರ ರೂಪಿಸಿರುವ ವರದಿಯು ಅವೈಜ್ಞಾನಿಕವಾಗಿದ್ದು, ಇದನ್ನು ವೈಜ್ಞಾನಿಕವಾಗಿ ರೂಪಿಸಲಿ. ಸರಿಯಾದ ಅಂಕಿಅಂಶಗಳನ್ನು ಸಂಗ್ರಹಿಸಿ, ವರದಿ ಸಿದ್ಧಪಡಿಸಲಿ.
– ಆರ್‌.ಅಶೋಕ, ವಿಧಾನಸಭೆ ವಿಪಕ್ಷ ನಾಯಕ

ರಾಜ್ಯ ಸರಕಾರ ವಿವಿಧ ಸಮುದಾಯದ ವಿರೋಧ ನಿರ್ಲಕ್ಷಿಸಿ ವರದಿ ಅಂಗೀಕರಿಸಿದರೆ ರಾಜ್ಯದ ಎಲ್ಲ ಹರ-ಗುರು ಚರಮೂರ್ತಿಗಳ ನೇತೃತ್ವದಲ್ಲಿ ರಾಜ್ಯವ್ಯಾಪಿ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ.
-ಎಚ್‌.ಎಂ.ರೇಣುಕ ಪ್ರಸನ್ನ, ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಮಹಾಸಭಾ.

ಯಾವುದೇ ಕಾರಣಕ್ಕೂ ನಾವು ಈ ವರದಿಯನ್ನು ಒಪ್ಪುವುದಿಲ್ಲ, ವರದಿ ಪ್ರಶ್ನಿಸಿ ಕಾನೂನು ಹೋರಾಟ ನಡೆಸಲು ನಮ್ಮ ವಕೀಲರ ತಂಡವು ಸಿದ್ಧತೆ ನಡೆಸುತ್ತಿದೆ. ಜತೆಗೆ ಜನಾಂಗದ ಮುಖಂಡರ ಸಭೆ ಕರೆದು ಹೋರಾಟದ ರೂಪುರೇಷೆ ತೀರ್ಮಾನಿಸುತ್ತೇವೆ. ನಮ್ಮ ಶಕ್ತಿ ಏನೆಂಬುದನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸರಕಾರಕ್ಕೆ ತೋರಿಸುತ್ತೇವೆ.
-ಬಿ.ಕೆಂಚಪ್ಪಗೌಡ, ಮಾಜಿ ಅಧ್ಯಕ್ಷ, ಒಕ್ಕಲಿಗರ ಸಂಘ

ನನ್ನಲ್ಲಿಗೇ ಬಂದಿಲ್ಲ: ಸಿದ್ಧಲಿಂಗ ಶ್ರೀ
ನಾನ್ಯಾವ ಜಾತಿ, ಏನು ಅಂತ ಯಾವ ಮಾಹಿತಿಯನ್ನೂ ನನ್ನ ಬಳಿಗೆ ಬಂದು ಯಾರೂ ಕೇಳಿಲ್ಲ. ಹೀಗಿರುವಾಗ ಎಲ್ಲರ ಬಳಿಗೂ ಹೋಗಿದ್ದೇವೆ ಎಂದು ಹೇಳುವುದು ಎಷ್ಟು ಸರಿ ಎನ್ನುವ ಮೂಲಕ ಪರೋಕ್ಷವಾಗಿ ಜಾತಿಗಣತಿ ವರದಿ ವೈಜ್ಞಾನಿಕವಾಗಿ ಆಗಿಲ್ಲ ಎಂಬ ಅಭಿಪ್ರಾಯವನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ.

ಗುರುವಾರ ಮಾಧ್ಯಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ವರದಿ ಸ್ವೀಕರಿಸಿದ ವಿಚಾರವಾಗಿ ಪ್ರತಿಕ್ರಿಯಿಸಿರುವ ಸ್ವಾಮೀಜಿ, ಸರಕಾರ ಜಾತಿ ಗಣತಿ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಗೊತ್ತಿಲ್ಲ. ಇದನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ. ಯಾಕೆಂದರೆ ಜಾತಿ ಆಧಾರದಲ್ಲಿ ಸವಲತ್ತುಗಳನ್ನು ಕೊಡಬೇಕಾಗುತ್ತದೆ. ಆದರೆ ಜಾತಿ ಗಣತಿ ವರದಿ ವೈಜ್ಞಾನಿಕವಾಗಿ ಆಗಿಲ್ಲ, ವ್ಯಾಪಕವಾಗಿ ಎಲ್ಲರನ್ನೂ ಸಂದರ್ಶನ ಮಾಡಿಲ್ಲ ಎಂಬ ಕೂಗು ಕೇಳಿ ಬಂದಿದೆ. ಗಣತಿ ವಿಚಾರದಲ್ಲಿ ಎಲ್ಲರಿಗೂ ಸಂದರ್ಶನ ಆಗಿದೆಯೋ ಗೊತ್ತಿಲ್ಲ. ಆದರೆ ನನ್ನನ್ನಂತೂ ಇದುವರೆಗೂ ಯಾರೂ ಬಂದು ಸಂದರ್ಶನ ಮಾಡಿಲ್ಲ ಎಂದು ಸ್ವಾಮೀಜಿ ತಿಳಿಸಿದರು.

ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ
ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಲಾಗಿದ್ದು, ಸಚಿವ ಸಂಪುಟದ ಮುಂದಿಟ್ಟು ಸೂಕ್ತ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗುರುವಾರ ವಿಧಾನಸೌಧದ ಮುಖ್ಯಮಂತ್ರಿ ಕೊಠಡಿ ಯಲ್ಲಿ ವರದಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂತರಾಜ ನೇತೃತ್ವದ ಆಯೋಗ ಸಮೀಕ್ಷೆ ನಡೆಸಿತ್ತು. ಆದರೆ ಅವರ ಕಾಲದಲ್ಲಿ ವರದಿ ಸಲ್ಲಿಸಲು ಆಗಿರಲಿಲ್ಲ. ಅನಂತರದಲ್ಲಿ ಅವರದ್ದೇ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡು ಈಗ ಜಯಪ್ರಕಾಶ ಹೆಗ್ಡೆ ವರದಿ ಸಲ್ಲಿಸಿದ್ದಾರೆ. ಅದರಲ್ಲೇನಿದೆ ಎಂಬುದನ್ನು ಇನ್ನೂ ನೋಡಿಲ್ಲ ಎಂದು ಹೇಳಿದರು.

ಈಗಷ್ಟೇ ಸ್ವೀಕೃತಗೊಂಡ ವರದಿಯನ್ನು ಸಚಿವ ಸಂಪುಟದ ಮುಂದಿಟ್ಟು, ಕೂಲಂಕಷವಾಗಿ ಪರಿಶೀಲಿಸಲಾಗುವುದು. ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಅನುಮಾನಗಳನ್ನು ನಿವಾರಿಸಲಿದೆ
ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಮಾತನಾಡಿ, ಜಾತಿ ಗಣತಿ ವರದಿಗೆ ಎಲ್ಲ ಸದಸ್ಯರು, ಸದಸ್ಯ ಕಾರ್ಯದರ್ಶಿಗಳು ಸಹಿ ಜತೆಗೆ ಅಗತ್ಯ ಕಾರ್ಯ ವಿಧಾನಗಳನ್ನು ಅನುಸರಿಸಲಾಗಿದ್ದು, ಕಾಂತರಾಜ ವರದಿ ಬಗ್ಗೆ ಇದ್ದ ಹಲವು ಅನುಮಾನಗಳನ್ನೂ ನಿವಾರಣೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ಆಯೋಗವು ಸರಕಾರ ನಿಗದಿಪಡಿಸಿದ ಅವಧಿಯಲ್ಲಿ ವರದಿಯನ್ನು ಸಲ್ಲಿಸಿದೆ. ಇನ್ನೇನಿದ್ದರೂ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಹಾಗಾಗಿ ಆಯೋಗದ ಜವಾಬ್ದಾರಿಯಂತೂ ಮುಗಿಯಿತು. ಕಾಂತರಾಜ ಆಯೋಗ ನೀಡಿದ ದತ್ತಾಂಶಗಳನ್ನು ಆಧರಿಸಿಯೇ ವರದಿಯನ್ನು ಸಿದ್ಧಪಡಿಸಲಾಗಿದೆ. ಹಿಂದಿನ ವರದಿಯಲ್ಲಿ ಬಿಟ್ಟುಹೋದ ಕೆಲವು ಉಪಜಾತಿಗಳನ್ನೂ ಈ ವರದಿಯಲ್ಲಿ ಸೇರಿಸಲಾಗಿದೆ. ನಾವೆಲ್ಲರೂ ಈ ವರದಿಗೆ ಸಹಿ ಮಾಡಿದ್ದು, ಹಿಂದಿನ ವರದಿ ಬಗ್ಗೆ ಇದ್ದ ಅನುಮಾನಗಳನ್ನೂ ಇದು ನಿವಾರಣೆ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಮತ್ತಿತರರು ಉಪಸ್ಥಿತರಿದ್ದರು.

ವರದಿಯನ್ನು ಅಂಗೀಕರಿಸಲಿ: ಈಶ್ವರಾನಂದಪುರಿ ಶ್ರೀ
ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿಗಳು ಶಾಸನಸಭೆಯಲ್ಲಿ ಮಂಡಿಸಿ ಅಂಗೀಕರಿಸಬೇಕು ಎಂದು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಆಗ್ರಹಿಸಿದ್ದಾರೆ.

ಜಾತಿ ಗಣತಿ ವರದಿಯನ್ನು ವಿರೋ ಧಿಸುವವರಿಗೆ ನಾವು ಕೇಳುವುದು ಇಷ್ಟೇ. ಈಗ ತಾನೇ ವರದಿ ಸಲ್ಲಿಕೆಯಾಗಿದೆ. ಅದು ಶಾಸನಸಭೆಯಲ್ಲಿ ಅಂಗೀಕಾರವಾಗಲಿ. ವೈಜ್ಞಾನಿಕವೋ, ಅವೈಜ್ಞಾನಿಕವೋ ಎಂಬುದು ಆಮೇಲೆ ಗೊತ್ತಾಗುತ್ತದೆ. ವರದಿಯೇ ಬಿಡುಗಡೆಯಾಗಿಲ್ಲ. ಈಗಲೇ ಅದರ ಬಗ್ಗೆ ವಿರೋಧಿಸುವುದು ಸರಿಯಲ್ಲ. ವರದಿ ಸ್ವೀಕರಿಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸರಕಾರದ ಮುಂದಿನ ಕ್ರಮ?
ಸಿಎಂಗೆ ಲಿಂಗಾಯತ, ಒಕ್ಕಲಿಗ ಮುಖಂಡರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕಾದ ಅನಿವಾರ್ಯ.
ಬದಲಾಗಲಿರುವ ಜಾತಿ ಸಮೀಕರಣದ ಬಗ್ಗೆ ವಿವರಣೆ ನೀಡುವುದು ಸವಾಲಾಗಬಹುದು.
ವರದಿ ಸ್ವೀಕಾರ ಬಗ್ಗೆ ಕಾಂಗ್ರೆಸ್‌ನಲ್ಲಿ ಈಗಾಗಲೇ ವಿರೋಧ ವ್ಯಕ್ತವಾಗಿದೆ.

 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.