Physiotherapy: ಮಕ್ಕಳ ಬೆಳವಣಿಗೆಯ ಹಾದಿಯಲ್ಲಿ ಫಿಸಿಯೋಥೆರಪಿ
Team Udayavani, Mar 3, 2024, 11:22 AM IST
ಸಮಾರಂಭದಲ್ಲಿ ಇನ್ನೂ ಮಗುವನ್ನು ಎತ್ತಿಕೊಂಡು ತಿರುಗುತ್ತಿರುವ ರಾಮನನ್ನು ದೂರದ ಸಂಬಂಧಿಕರು ಕೇಳುತ್ತಾರೆ: ಎಷ್ಟು ವರ್ಷ ಮಗುವಿಗೆ? ಇನ್ನೂ ನಡೆಯುವುದಿಲ್ಲವೇ?
ಶಾಲೆಯ ಆಟೋಟದ ಮೈದಾನ: ಎಲ್ಲರೂ ಟೊಂಕ ಮಾಡಿ ಆಡುತ್ತಿದ್ದಾರೆ. ಒಂದು ಹುಡುಗ ದೂರದಲ್ಲಿ ಕುಳಿತು ನೋಡುತ್ತಿದ್ದಾನೆ. ಆಡಲು ಇಷ್ಟವಿದ್ದರೂ ಎಲ್ಲಿ ಬೀಳುತ್ತೇನೋ ಎಂಬ ಭಯ.
14 ವರ್ಷದ ಹುಡುಗಿ: ಅತಿಯಾದ ಬೊಜ್ಜಿನಿಂದ ಕೂಡಿದ ಮೈ. ಇಡೀ ದಿನ ಶಾಲೆ, ಶಾಲೆಯಿಂದ ಬಂದ ಅನಂತರ ಅಂಗಡಿಯ ಕುರುಕುರು ತಿಂಡಿಯೊಂದಿಗೆ ಮೊಬೈಲ್ ಸಹವಾಸ.
ಮಂಗಳೂರು ಈ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿದಾಗ ಮಕ್ಕಳ ಫಿಸಿಯೋಥೆರಪಿಯು ಮುಖ್ಯ ಪಾತ್ರ ವಹಿಸುತ್ತದೆ.
ಮಕ್ಕಳ ಫಿಸಿಯೋಥೆರಪಿ ಎಂದರೇನು?
ಪೀಡಿಯಾಟ್ರಿಕ್ ಥೆರಪಿ (ಮಕ್ಕಳ ಭೌತ ಚಿಕಿತ್ಸೆ)ಯು ಭೌತಚಿಕಿತ್ಸೆಯ ಒಂದು ಶಾಖೆಯಾಗಿದ್ದು ಇಲ್ಲಿ ಹುಟ್ಟಿನಿಂದ 18 ವರ್ಷ ವಯಸ್ಸಿನ ವರೆಗೆ ಮಕ್ಕಳ ಚಲನೆ ಮತ್ತು ಚಲನೆ ಆಧಾರಿತ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ಇತ್ತೀಚೆಗಿನ ವರ್ಷಗಳಲ್ಲಿ ನವಜಾತ ಶಿಶುಗಳ ಮರಣವು ಕಡಿಮೆಯಾಗಿದೆ. ಆದರೆ ಬೆಳವಣಿಗೆಯ ಅಂಗವೈಕಲ್ಯ ಹೊಂದಿರುವ 5 ವರ್ಷದೊಳಗಿನ ಮಕ್ಕಳ ಸಂಖ್ಯೆಯು ಬದಲಾಗದೇ ಉಳಿದಿದೆ. ಮಕ್ಕಳಲ್ಲಿ ಮೊದಲ 36 ತಿಂಗಳುಗಳು ಮೆದುಳಿನ ಬೆಳವಣಿಗೆಗೆ ನಿರ್ಣಾಯಕ ಅವಧಿಯಾಗಿದೆ. ಈ ಸಮಯದಲ್ಲಿ ಚಿಕಿತ್ಸೆ, ನಿರ್ವಹಣೆಗಳು ಬಹಳ ಪರಿಣಾಮಕಾರಿಯಾಗಿರುತ್ತವೆ. ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಶೀಘ್ರ ನಿರ್ವಹಣೆ ಭೌತಚಿಕಿತ್ಸೆಯು ಮಗುವಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ.
ಶೀಘ್ರ ನಿರ್ವಹಣೆ ಎಂದರೇನು?
ಮಗುವಿನ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸಲು ಹುಟ್ಟಿನಿಂದ 5 ವರ್ಷದ ವಯಸ್ಸಿನ ಮಕ್ಕಳಿಗೆ ಒದಗಿಸಲಾದ ಬಹುಶಿಸ್ತೀಯ ಸೇವೆಗಳು. ಶೀಘ್ರ ನಿರ್ವಹಣೆಯ ಭೌತ ಚಿಕಿತ್ಸೆಯಲ್ಲಿ ಭೌತ ಚಿಕಿತ್ಸಕರು ಮಗುವಿನ ಚಲನಶೀಲತೆ ಮತ್ತು ಚಲನೆಯ ವ್ಯಾಪ್ತಿಯನ್ನು ಸುಧಾರಿಸಲು ಶಕ್ತಿಯನ್ನು ಹೆಚ್ಚಿಸಲು, ಬ್ಯಾಲೆನ್ಸ್‌ನು° ಸುಧಾರಿಸಲು, ಮುಂದೆ ಭವಿಷ್ಯದಲ್ಲಿ ಸಂಭವಿಸುವ ವಿಕಲಾಂಗತೆಗಳನ್ನು ತಡೆಯಲು, ಕಡಿಮೆ ಮಾಡಲು ಸಹಾಯ ಮಾಡುತ್ತಾರೆ.
ಯಾವ ಮಕ್ಕಳಿಗೆ ಫಿಸಿಯೋಥೆರಪಿ ಅಗತ್ಯ ಬೀಳಬಹುದು?
ನವಜಾತ ಶಿಶುಗಳಲ್ಲಿ, ಮುಖ್ಯವಾಗಿ ತಿಂಗಳು ತುಂಬದೇ ಅವಧಿಪೂರ್ವ ಜನಿಸಿದ ಶಿಶುಗಳಲ್ಲಿ, ಜನನ ತೂಕ ಸಾಮಾನ್ಯ ಜನನ ತೂಕಕ್ಕಿಂತ ಕಡಿಮೆ ಇದ್ದಲ್ಲಿ, ಹುಟ್ಟಿದ ತತ್‌ಕ್ಷಣ ಅಳದೇ ಇರುವ ಶಿಶುಗಳಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ವಿಭಾಗದಲ್ಲಿ 15-20 ದಿನಗಳಿಗಿಂತ ಜಾಸ್ತಿಯಾಗಿ ಉಳಿಯುವ ಆವಶ್ಯಕತೆ ಇದ್ದಾಗ, ಇಂತಹ ಶಿಶುಗಳಲ್ಲಿ ಸಂಶೋಧನೆಯ ಅನುಸಾರ ಮೆದುಳಿನ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳು ಜಾಸ್ತಿ ಇರುವುದರಿಂದ ಫಿಸಿಯೋಥೆರಪಿಯ ಅಗತ್ಯ ಬೀಳಬಹುದು. ಬೆಳವಣಿಗೆಯ ಮುಂದಿನ ಹಂತಗಳಲ್ಲಿ ದೈಹಿಕವಾಗಿ ಮಗು ಬೆಳೆಯುತ್ತಾ ಹೋದಂತೆ ವಯಸ್ಸಿಗೆ ಸಹಜವಾದ ಬೆಳವಣಿಗೆಯ ಮೈಲುಗಲ್ಲುಗಳನ್ನು ತಲುಪಲು ತಡವಾದಾಗ, ಶ್ವಾಸಕೋಶದ ಅಸಮರ್ಥತೆ, ಮೂಳೆ, ಮಾಂಸಖಂಡಗಳ ತೊಂದರೆಗಳು, ಸಂಧಿವಾತ, ಅಧಿಕ ತೂಕದ (ಬೊಜ್ಜು) ಸಮಸ್ಯೆಗಳಲ್ಲಿ ನಡವಳಿಕೆಯ ಅತಿರೇಕಗಳಲ್ಲಿ ಫಿಸಿಯೋಥೆರಪಿಯ ಪಾತ್ರ ಗಣನೀಯವಿರುತ್ತದೆ.
ಫಿಸಿಯೋಥೆರಪಿಯ ಅಗತ್ಯ ಹೇಗೆ ಗುರುತಿಸಬಹುದು?
ಪೋಷಕರು ಈ ಕೆಳಗಿನ ಅಂಶಗಳು ಮಗುವಿನಲ್ಲಿ ಕಂಡುಬಂದರೆ, ಆದಷ್ಟು ಬೇಗನೇ ಮಕ್ಕಳ ತಜ್ಞರು ಮತ್ತು ಮಕ್ಕಳ ಭೌತಚಿಕಿತ್ಸಕರನ್ನು ಭೇಟಿಯಾಗುವುದು ಉತ್ತಮ.
– 2-3 ತಿಂಗಳೊಳಗೆ ಅಮ್ಮನ ಮುಖ ನೋಡಿ ನಗದೇ ಇರುವುದು, 4-5 ತಿಂಗಳೊಳಗೆ ಮಗು ತಲೆ/ಕುತ್ತಿಗೆ ಗಟ್ಟಿ ಮಾಡಿಕೊಳ್ಳದೇ ಇರುವುದು, 8-10 ತಿಂಗಳೊಳಗೆ ಮಗು ಕುಳಿತುಕೊಳ್ಳಲು ಪ್ರಯತ್ನಿಸದಿರುವುದು, ಒಂದು ವರ್ಷವಾದರೂ ಮಗು ಕೈಬಿಟ್ಟು ನಿಲ್ಲದೇ ಇರುವುದು, ಕೈಕಾಲುಗಳು ಸಾಮಾನ್ಯಕ್ಕಿಂತ ಜಾಸ್ತಿ ಬಿಗಿದುಕೊಂಡಿರುವುದು, ಕೈಕಾಲುಗಳು ಜಾಸ್ತಿ ಸಡಿಲವಾಗಿರುವುದು.
-ದೇಹದ ಒಂದು ಭಾಗದಿಂದ ಅಂದರೆ ಒಂದೋ ಎಡ ಅಥವಾ ಬಲ ಬದಿಯ ಅಂಗಗಳಿಂದ ಮಾತ್ರ ಚಲನೆಯನ್ನು ಮಾಡುತ್ತಿರುವುದು. ಮಗುವು ಸಾಮಾನ್ಯ ಚಲನೆಗಳನ್ನು ತೋರಿಸದೇ ಇರುವುದು. ಎರಡು ತಿಂಗಳ ಬಳಿಕವೂ ಮಗು ಸತತವಾಗಿ ಮುಷ್ಟಿ ಕಟ್ಟಿಕೊಂಡಿರುವುದು, ದೃಷ್ಟಿ ಮತ್ತು ಶ್ರವಣ ಸಂವೇದನೆ ಇಲ್ಲದಿರುವುದು, ಅತಿಯಾದ ಚಟುವಟಿಕೆ ಕಂಡು ಬರುವುದು, ಮಗು ಬಾಹ್ಯ ಪರಿಸರಕ್ಕೆ ಸ್ಪಂದಿಸದೇ ತನ್ನದೇ ಲೋಕದಲ್ಲಿ ಇರುವುದು, ಸಹಜ ರೀತಿಯ ಪ್ರತಿಕ್ರಿಯೆ ನೀಡಬಹುದಾದ ಸನ್ನಿವೇಶಗಳಲ್ಲಿ ಮಗು ಅಸಹಜ ರೀತಿಯಲ್ಲಿ ಅತಿರೇಕವಾಗಿ ಸ್ಪಂದಿಸುವುದು, ಶಾಲೆಯಲ್ಲಿ ಮಗು ಆಟೋಟಗಳಲ್ಲಿ ಭಾಗವಹಿಸದೇ ದೂರ ಉಳಿಯುವುದು, ಒಂದು ಕಾಲ ಮೇಲೆ ನಿಲ್ಲ ಬೇಕಾದ, ಎತ್ತರದಿಂದ ಹಾರುವ ಸನ್ನಿವೇಶಗಳಿರುವ ಚಟುವಟಿಕೆಗಳಿಂದ ದೂರವಿರುವುದು.
– ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸದೇ, ಇತರ ಮಕ್ಕಳೊಂದಿಗೆ, ಸಹಪಾಠಿಗಳೊಡನೆ ಬೆರೆಯದೇ ಒಂಟಿಯಾಗಿಸಲು ಬಯಸುವುದು.
ನವಜಾತ ಶಿಶುಗಳ ಆರೈಕೆಯಲ್ಲಿ ಫಿಸಿಯೋಥೆರಪಿ ಚಿಕಿತ್ಸೆ ಹೇಗೆ ನಡೆಯುತ್ತದೆ?
ಮೊದಲೇ ತಿಳಿಸಿದ ಅಪಾಯಕಾರಿ ಅಂಶಗಳಿರುವ ನವಜಾತ ಶಿಶುಗಳನ್ನು ಸಾಮಾನ್ಯವಾಗಿ ನವಜಾತ ಶಿಶುಗಳ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಲಾಗುತ್ತದೆ. ಈ ಶಿಶುಗಳಲ್ಲಿ ಅತಿಯಾದ ಸಡಿಲತೆ ಅಥವಾ ಅತಿಯಾದ ಬಿಗಿತ, ಅಮ್ಮನ ಹಾಲು ಚೀಪಲು ಅಸಮರ್ಥತೆ, ಶ್ವಾಸಕೋಶದಲ್ಲಿ ಕಫದ ಸಂಗ್ರಹಣೆ ಮುಂತಾದವು ಕಂಡುಬರುವ ಸಾಧ್ಯತೆಗಳು ಜಾಸ್ತಿ ಇರುತ್ತವೆ. ಈ ಮಗುವನ್ನು ನಿರ್ದಿಷ್ಟ ರೀತಿಯ ಭಂಗಿಗಳಲ್ಲಿ ಮಲಗಿಸಿ ಬಿಗಿತವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ. ಸಡಿಲತೆ ಜಾಸ್ತಿ ಇರುವ ಮಗುವನ್ನು ಸ್ವಾಡ್ಲಿಂಗ್ (Swaddling) ಮುಖಾಂತರ ನಿರ್ವಹಿಸಲಾಗುತ್ತದೆ. ತೀವ್ರ ನಿಗಾ ವಿಭಾಗದಲ್ಲಿ ಶಬ್ದ -ಬೆಳಕಿನಿಂದಾಗಿ,ನವಜಾತ ಶಿಶು ವಿಚಲಿತವಾಗದೇ ಇರುವಂತೆ ಮಾಡಲು ಪರಿಸರ ಬದಲಾವಣೆಗಳನ್ನು ಮಾಡಲಾಗುತ್ತದೆ. ಚಾಲನ ಪರಿಮಿತಿಯ ವ್ಯಾಯಾಮಗಳು, ಬಿಗಿದಾಗ ಮಾಂಸಖಂಡಗಳ ನಾಜೂಕಾದ ಸೆಳೆಯುವಿಕೆಯನ್ನು ಕೊಡಲಾಗುತ್ತದೆ. ತದನಂತರ ಮಗು ತೀವ್ರ ನಿಗಾ ವಿಭಾಗದಿಂದ ಹೊರಗೆ ಬಂದಾಗ ಈ ವ್ಯಾಯಾಮಗಳನ್ನು , ಶಿಶುವನ್ನು ನಿರ್ವಹಿಸುವ ವಿಧಾನಗಳನ್ನು ತಾಯಂದಿರಿಗೆ ಮನದಟ್ಟು ಮಾಡಿಕೊಡಲಾಗುತ್ತದೆ. ಇದರೊಂದಿಗೆ ಮಗುವನ್ನು ಎತ್ತುವ ರೀತಿ, ಹಿಡಿಯುವ ರೀತಿ ಮಗುವಿನೊಂದಿಗೆ ವ್ಯವಹರಿಸುವ ರೀತಿಯನ್ನು ತಿಳಿಸಲಾಗುತ್ತದೆ.
ಮುಂದಿನ ಹಂತದ ಮಗುವಿನ ನಿರ್ವಹಣೆಯನ್ನು ಹೇಗೆ ಮಾಡಲಾಗುತ್ತದೆ?
ಒಂದು ಮಗುವಿನ ಫಿಸಿಯೋಥೆರಪಿ ನಿರ್ವಹಣೆಯ ಆವಶ್ಯಕತೆಗಳು ಮಗು ಬೆಳೆದಂತೆ ಬದಲಾಗುತ್ತವೆ. ಈ ಸಂದರ್ಭದಲ್ಲಿ ಪೋಷಕರ, ಕುಟುಂಬ ಸದಸ್ಯರ ನಿರೀಕ್ಷೆಗಳಿಗೆ ಅನುಗುಣವಾಗಿ ಚಾಲನಾ ಬೆಳವಣಿಗೆಗೆ ಪೂರಕವಾಗುವಂತಹ ಚಟುವಟಿಕೆಗಳನ್ನು ಮಗುವಿಗೆ ಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಭೌತಚಿಕಿತ್ಸಕರು ಮತ್ತು ಪೋಷಕರು ಒಂದಾಗಿ ಕೆಲಸ ಮಾಡುತ್ತಾರೆ.
ಈ ಗುರಿಗಳನ್ನು ತಲುಪಲು ವಿಧ ವಿಧದ ಸಾಧನಗಳನ್ನು (ಥೆರಪಿ ಬಾಲ್, ಬೋಲ್‌ಸ್ಟರ್, ವೆಜ್, ಸ್ಟಾಂಡಿಂಗ್ ಟೇಬಲ್, ಬಾಲ್‌ಪೂಲ್, ಟ್ರಾಂಪೋಲಿನ್, ಮಕ್ಕಳ ಥ್ರೆಡ್ ಮಿಲ್ Pedratic Treadmill) ಬಳಸಲಾಗುತ್ತದೆ.
ಥೆರಪಿ ಸೆಶನ್‌ಗಳು ಆನಂದದಾಯಕ ಮತ್ತು ಸಂವಾದಾತ್ಮಕವಾಗಿರಲು ಆಟಿಕೆಗಳು, ಆಟದ ಜೇಡಿಮಣ್ಣು (Therapy putty), ಬಣ್ಣಗಳನ್ನು ಉಪಯೋಗಿಸಲಾಗುತ್ತದೆ. ಮಗುವಿನ ವಿಶೇಷ ಇಂದ್ರಿಯಗಳನ್ನು ಪ್ರಚೋದಿಸಲು ಶ್ರವಣ, ದೃಶ್ಯ, ಅರಿವಿನ ಆಟಿಕೆಗಳನ್ನು ಬಳಸಲಾಗುತ್ತದೆ. ಭೌತ ಚಿಕಿತ್ಸಕರು ಮಗುವಿನ ಆರೋಗ್ಯದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒಟ್ಟು ಮಾಡಿ, ಕೂಲಂಕಷವಾಗಿ ಪರಿಶೀಲಿಸಿ ವೈಯಕ್ತಿಕ ಗುರಿಗಳನ್ನು ರೂಪಿಸುತ್ತಾರೆ. ಇಲ್ಲಿ ಕೇವಲ ವೈದ್ಯಕೀಯ ಆರೈಕೆಗಿಂತ ಮುಂದೆಹೋಗಿ ಮಗುವಿಗೆ ಚಿಕಿತ್ಸೆಯನ್ನು ಹೆಚ್ಚು ಆನಂದಮಯವಾಗಿಸುವುದು ಮುಖ್ಯ ಗುರಿಯಾಗಿದೆ.
ಪ್ರತಿ ಮಗುವಿನ ಆವಶ್ಯಕತೆಗೆ ಅನುಗುಣವಾಗಿ ಆರ್ಥೋಸಿಸ್ (Orthosis) ಅಥವಾ ಸಹಾಯ ಸಾಧನಗಳನ್ನು ಕೂಡ ಶಿಫಾರಸು ಮಾಡಲಾಗುತ್ತದೆ. ಆಟಿಸಂಗೆ ಒಳಗಾದ ಮಕ್ಕಳಿಗೆ ಸಂವೇಧನಾ ಪರಿಶೋಧನೆಯ ಚಟುವಟಿಕೆಗಳು ಮತ್ತು ಆಟ ಆಧಾರಿತ ಸಂವಾದಾತ್ಮಕ ಚಟುವಟಿಕೆಗಳನ್ನು ಕೊಡಲಾಗುತ್ತದೆ.
ಮಗುವು ಶೈಕ್ಷಣಿಕ, ಸಾಮಾಜಿಕ ಮತ್ತು ದೈನಂದಿನ ಜೀವನದಲ್ಲಿ ಗರಿಷ್ಟ ಚಟುವಟಿಕೆಯ ಸ್ವಾತಂತ್ರ್ಯವನ್ನು ಸಾಧಿಸಲು ಅಥವಾ ಚಿಕಿತ್ಸಾ ಯೋಜನೆಗೆ ಯಾವುದೇ ಮಾರ್ಪಾಡುಗಳನ್ನು ಮಾಡಲು/ಸಲಹೆ ನೀಡಲು ಮಗುವಿನ ಮನೆ, ಶಾಲೆ ಮತ್ತು ಸಮುದಾಯ ಪ್ರದೇಶಕ್ಕೆ ಭೌತ ಚಿಕಿತ್ಸಕರು ಭೇಟಿ ನೀಡಲೂಬಹುದು. ಮಕ್ಕಳ ಭೌತ ಚಿಕಿತ್ಸಕರು ಮಕ್ಕಳ ಜೀವನದಲ್ಲಿ ಬದಲಾವಣೆಗಳನ್ನು ತರಲು ಶಿಶುವೈದ್ಯರು (Occupational Therapist), ಸ್ಪೀಚ್ ಮತ್ತು ಶ್ರವಣ ಚಿಕಿತ್ಸಕರು, ಒಪ್ಟೊಮೆಟ್ರಿ ಚಿಕಿತ್ಸಕರು, ಮನೋವಿಜ್ಞಾನ ಮತ್ತು ವರ್ತನೆಯ ಚಿಕಿತ್ಸಕರು ಮತ್ತು ವಿಶೇಷ ಚಿಕಿತ್ಸಕರೊಂದಿಗೆ ಸೇರಿ ಕೆಲಸ ಮಾಡುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಕುಟುಂಬ ಕೇಂದ್ರಿತ ಆರೈಕೆ (family centred care) ಎಂಬ ಹೊಸ ಪರಿಕಲ್ಪನೆಯು ಕುಟುಂಬ ಮತ್ತು ವೃತ್ತಿಪರರ ಗೌರವಾನ್ವಿತವಾದ ಪಾಲುದಾರಿಕೆಯಲ್ಲಿ ಮಕ್ಕಳು ಮತ್ತು ಅವರ ಕುಟುಂಬಗಳ ಆರೋಗ್ಯ ಮತ್ತು ಯೋಗಕ್ಷೇಮಗಳನ್ನು ಖಾತ್ರಿ ಪಡಿಸುವ ಸೇವೆಗಳನ್ನು ಒದಗಿಸುವ ಒಂದು ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಭೌತ ಚಿಕಿತ್ಸಕರ ಪಾತ್ರ ಗಣನೀಯವಾಗಿ ಬೆಳೆಯುತ್ತಿದೆ.
-ಶುಭಾ ಆರ್. ನಾಯಕ್,
ಅಸಿಸ್ಟೆಂಟ್ ಲೆಕ್ಚರರ್,
–ಮೇಘಾ ಜೈನ್ ವಿ.
ಎಂಪಿಟಿ ವಿದ್ಯಾರ್ಥಿನಿ
ಕೆ. ಅಂಕಿತಾ ನಾಯಕ್
ಮಹೇಶ್ ಎಂ. ರಾವ್
ಫಿಸಿಯೊಥೆರಪಿ ಇಂಟರ್ನ್ಗಳು
ಫಿಸಿಯೊಥೆರಪಿ ವಿಭಾಗ,
ಎಂಸಿಎಚ್‌ಪಿ, ಮಾಹೆ,ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್ಸ್ ವಿಭಾಗ, ಕೆಎಂಸಿ,ಮಣಿಪಾಲ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.