Vijayapura; ನಾನೂ ಟಿಕೆಟ್ ಆಕಾಂಕ್ಷಿ, ಯಾರಿಗೆ ಕೊಟ್ಟರು ಗೆಲುವಿಗೆ ಶ್ರಮಿಸುವೆ : ಆಲಗೂರ
Team Udayavani, Mar 4, 2024, 4:28 PM IST
ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಲೋಕಸಭಾ ಕ್ಷೇತ್ರದಿಂದ ನಾನೂ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಇದರ ಹೊರತಾಗಿಯೂ ಬೇರೆ ಯಾರಿಗೆ ಪಕ್ಷ ಟಿಕೆಟ್ ನೀಡಿದರೂ ಪಕ್ಷದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಕಾಂಗ್ರೆಸ್ ವಿಜಯಪುರ ಜಿಲ್ಲಾಧ್ಯಕ್ಷ ರಾಜು ಆಲಗೂರ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ವಿಜಯಪುರ ಕ್ಷೇತ್ರದ ಟಿಕೆಟ್ ನೀಡಬೇಕು ಎಂಬ ಬೇಡಿಕೆಯಿದೆ. ಜಿಲ್ಲೆಯ ಇಬ್ಬರು ಸಚಿವರು, ಪಕ್ಷದ ಎಲ್ಲ ಶಾಸಕರ ಅಭಿಪ್ರಾಯವನ್ನು ಕೆಪಿಸಿಸಿ ಚುನಾವಣಾ ಸಮಿತಿಗೆ ರವಾನಿಸಲಿದ್ದು, ಅಲ್ಲಿಂದ ಕೇಂದ್ರ ಸಮಿತಿಗೆ ಹೆಸರು ಶಿಫಾರಸು ಮಾಡಲಾಗುತ್ತದೆ ಎಂದರು.
ಮಾ.14 ಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆ ಕೊನೆಗೊಳ್ಳಲ್ಲಿದ್ದು, ಮಾ.15 ನಂತರ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆಯಿದೆ. ಅದಕ್ಕಿಂತ ಮೊದಲೂ ಪಟ್ಟಿ ಬಿಡುಗಡೆ ಆದರೂ ಆಗಬಹುದು ಎಂದರು.
ವಿಜಯಪುರ ಕ್ಷೇತ್ರದ ಚುನಾವಣಾ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಸುಮಾರು 10 ಆಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದು, ಒಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ. ಇತರರಿಗೆ ಬೇರೆ ಬೇರೆ ಅವಕಾಶ ಸಿಗಲಿವೆ. ಈಗಾಗಲೇ ವಿಜಯಪುರ ಜಿಲ್ಲೆಯ ಕಾಂತಾ ನಾಯಕ ಅವರಿಗೆ ನಿಗಮ ಮಂಡಳಿ ಅವಕಾಶ ನೀಡಲಾಗಿದೆ. ಹೀಗಾಗಿ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
ನಾನೂ ಆಕಾಂಕ್ಷಿ: ಕಾಂಗ್ರೆಸ್ ಬಂದು ಹೋಗುವವರು ಅಪಪ್ರಚಾರ ಮಾಡುತ್ತಾರೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ನಾನು ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು ಖುದ್ದು ನಾನೇ ಭೇಟಿಯಾಗಿ ಹೇಳಿದ್ದೆ. ಈಗ ಖಂಡಿತವಾಗಿಯೂ ನಾನು ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಪ್ರಕಟಿಸಿದರು.
ಕಾಂಗ್ರೆಸ್ ಪಕ್ಷದ ಟಿಕೆಟ್ ಯಾರ ಸ್ವತ್ತಲ್ಲ, ಪಕ್ಷದ ಯಾರು ಬೇಕಾದರೂ ಟಿಕೆಟ್ ಕೇಳಬಹುದು ಎಂದರು.
ಕ್ಷೇತ್ರದಲ್ಲೇ ಸಾಕಷ್ಟು ಜನ ಆಕಾಂಕ್ಷಿಗಳಿರುವಾಗ ಹೊರಗಿನವರು ಆಪೇಕ್ಷೆ ಮಾಡಬಾರದು. ಹೊರಗಿನವರನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಚಿಕ್ಕೋಡಿ, ಚಾಮರಾಜನಗರ ಕ್ಷೇತ್ರಕ್ಕೆ ಹೋಗಿ ಸ್ಪರ್ಧಿಸಿದರೆ ನಮ್ಮನ್ನು ಯಾರು ಒಪ್ಪಿಕೊಳ್ಳುತ್ತಾರೆ ಹೇಳಿ ಎನ್ನುವ ಮೂಲಕ ಹೊರಗಿನ ಅಭ್ಯರ್ಥಿ ಸ್ಪರ್ಧೆಯನ್ನು ನೇರವಾಗಿ ವಿರೋಧಿಸಿದರು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರಂತ ರಾಷ್ಟ್ರೀಯ ನಾಯಕ ಸ್ಪರ್ಧೆ ಮಾಡಿದರೆ ನಮಗೆ ದೊಡ್ಡ ಬಲ ಬರಲಿದ್ದು, ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದರು.
ಸತತ ಮೂರು ಬಾರಿ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರಬಹುದು, ಆದರೆ ಈ ಬಾರಿ ವಿಜಯಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಗ್ಯಾರಂಟಿ ಚುನಾವಣಾ ಉಸ್ತುವಾರಿಯಾಗಿ ಸತೀಶ ಜಾರಕಿಹೊಳಿ ಇದ್ದಾರೆ. ಜಿಲ್ಲೆಯಲ್ಲಿ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಸಚಿವರಾಗಿದ್ದಾರೆ. ಯಶವಂತ್ರಾಯಗೌಡ ಪಾಟೀಲ, ಸಿ.ಎಸ್.ನಾಡಗೌಡ, ವಿಠ್ಠಲ ಕಟಕಧೋಂಡ ಸೇರಿದಂತೆ ಪ್ರಭಾವಿ ಸಚಿವರು, ಶಾಸಕರಿದ್ದಾರೆ. ಜಿಲ್ಲೆಯ ವಿಧಾನಸಭೆ ಚುನಾವಣೆಯಲ್ಲಿನ ಪರಾಜಿತರೂ ಕೂಡ ಬಲಿಷ್ಠರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ವಿಜಯಪುರ ಕ್ಷೇತ್ರದಲ್ಲಿ ಗೆಲ್ಲುವುದು ಗ್ಯಾರಂಟಿ ಎಂದರು.
ಬಿಜೆಪಿ ಪಕ್ಷದಿಂದ ಯಾರೇ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಅವರು ಅಭ್ಯರ್ಥಿ ಆಗಲಿದ್ದಾರೆ ಎಂಬುದು ಮಾತ್ರ ಸುಳ್ಳು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.