Lok Sabha Elections: ಕಾಂಗ್ರೆಸ್ ಆಕಾಂಕ್ಷಿಗಳ ಚಟುವಟಿಕೆ ಸ್ತಬ್ಧ
Team Udayavani, Mar 5, 2024, 6:13 PM IST
ಕೋಲಾರ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸದ್ಯಕ್ಕೆ ಚಟುವಟಿಕೆಗಳು ಸ್ತಬ್ದವಾಗಿದ್ದು, ಆಕಾಂಕ್ಷಿಗಳೆಲ್ಲರ ಚಿತ್ತ ಹೈಕಮಾಂಡ್ ಮೇಲೆ ನೆಟ್ಟಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ವ್ಯಾಪ್ತಿಗೆ ಬರುವ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಲು ಹೆಚ್ಚಿನ ಪೈಪೋಟಿ ಕಂಡು ಬರುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಆಕಾಂಕ್ಷಿಗಳ ಪೈಪೋಟಿ ಯನ್ನು ಗೊಂದಲಮಯವಾಗಿಸಿದೆ.
ಕಳೆದ ಐದಾರು ತಿಂಗಳುಗಳಿಂದಲೂ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾರಾಗಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಲೇ ಇದ್ದವು. ಹತ್ತಾರು ನಾಯಕರು ತಮ್ಮ ಹೆಸರುಗಳನ್ನು ತೇಲಿ ಬಿಟ್ಟಿದ್ದರು. ಕೆಲವರು ಹೈಕಮಾಂಡ್ ವಲ ಯದಲ್ಲಿ ವಿವಿಧ ರೀತಿಯ ಲಾಬಿಯಲ್ಲಿ ತೊಡಗಿದ್ದರು. ಫ್ಲೆಕ್ಸ್ ರಾಜಕೀಯವನ್ನು ಮಾಡಿದ್ದರು. ಹಿರಿಯ ಮುಖಂಡರ ಆಶೀರ್ವಾದ ಪಡೆಯಲು ಕಾಲಿಗೂ ಬಿದ್ದಿದ್ದರು. ಆದರೆ, ಯಾವುದೇ ಆಕಾಂಕ್ಷಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಕೈಹಾಕಿರಲಿಲ್ಲ. ಏಕೆಂದರೆ, ಪಕ್ಷ ಸಂಘಟನೆಗೆ ತೊಡಗಲು ಯಾವ ಬಣದ ಮುಖಂಡರ ಅನುಮತಿ ಪಡೆಯಬೇಕು ಎನ್ನುವುದು ಆಕಾಂಕ್ಷಿಗಳ ಗೊಂದಲಕ್ಕೆ ಕಾರಣವಾಗಿತ್ತು.
ಆಕಾಂಕ್ಷಿಗಳು: ಕೋಲಾರ ಕ್ಷೇತ್ರದಲ್ಲಿ ಸತತ ಎಂಟು ಚುನಾವಣೆಗಳಿಂದ ಕೆ.ಎಚ್. ಮುನಿಯಪ್ಪ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳುತ್ತಿದ್ದರು. ಈ ಬಾರಿಯೂ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಇವರೊಂದಿಗೆ ಕನಿಷ್ಠ 12 ಮಂದಿ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿಗಿಳಿದಿದ್ದರು. ಅಂತಿಮ ಹಂತಕ್ಕೆ ಕೆ.ಎಚ್.ಮುನಿಯಪ್ಪರ ಅಳಿಯ ಚಿಕ್ಕಪೆದ್ದನ್ನ, ಮುದ್ದುಗಂಗಾಧರ್, ಸಿ.ಎಂ.ಮು ನಿಯಪ್ಪ, ಎಚ್.ನಾಗೇಶ್, ಸಂಪಂಗೆರೆ ಮುನಿರಾಜು ಕಾಣಿಸಿಕೊಂಡಿದ್ದಾರೆ. ಬೆಳಗಾನಹಳ್ಳಿ ಮುನಿವೆಂಕಟಪ್ಪ, ಡಾ. ಲೋಹಿತ್, ಶಾಂತಕುಮಾರಿ ಇತರರು ಪ್ರಯತ್ನ ಬಿಟ್ಟಿಲ್ಲ. ಪ್ರತಿಯೊಬ್ಬ ಆಕಾಂಕ್ಷಿಯೂ ಹೈಕಮಾಂಡ್ ಮುಖಂಡರ ಮೂಲಕ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಎಲ್ಲ ರೀ ತಿಯ ಪ್ರಯತ್ನಗಳ ನಂತರ ಈಗ ಸದ್ಯಕ್ಕೆ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಕಾಯುತ್ತಿದ್ದಾರೆ.
ಎಡಗೈಗಾ-ಬಲಗೈಗಾ: ಕೋಲಾರ ಮೀಸಲು ಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್ ಟಿಕೆಟ್ ದಲಿತ ಎಡಗೈ ಅಥವಾ ಬಲಗೈ ಪೈಕಿ ಯಾರಿಗೆ ಸಿಗಬಹುದು ಎಂಬ ಲೆಕ್ಕಾಚಾರಗಳಿವೆ. ಕರ್ನಾಟಕದಲ್ಲಿ ಒಟ್ಟು ಐದು ಮೀಸಲು ಕ್ಷೇತ್ರಗಳಿದ್ದು, ಎರಡರಲ್ಲಿ ಬಲಗೈ ಮತ್ತೆರೆಡರಲಿ ಎಡಗೈ ಅಭ್ಯರ್ಥಿಗಳು ಆಯ್ಕೆ ಮಾಡಲಾಗುತ್ತಿದೆ. ಉಳಿದ ಒಂದರಲ್ಲಿ ಪರಿಶಿಷ್ಟ ಪಟ್ಟಿಯಲ್ಲಿರುವ ಮತ್ತೂಂದು ಪ್ರಮುಖ ಸಮುದಾಯಕ್ಕೆ ಟಿಕೆಟ್ ನೀಡಲಾಗುತ್ತಿದೆ. ಈ ಬಾರಿ ಗುಲ್ಬರ್ಗಾ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ದಲಿತ ಬಲಗೈ ಅಭ್ಯರ್ಥಿಗಳಾಗುವ ಸಾಧ್ಯತೆಗಳಿವೆ.
ಅದೇ ರೀತಿ ಚಿತ್ರದುರ್ಗ ಹಾಗೂ ಕೋಲಾರದಲ್ಲಿ ದಲಿತ ಎಡಗೈ ಅಭ್ಯರ್ಥಿಗಳಾಗುತ್ತಿದ್ದರು. ಚಿತ್ರ ದುರ್ಗ, ವಿಜಯಪುರ ಎಡಗೈಗಾದರೆ, ಕೋಲಾರ ಬಲಗೈ ಅಭ್ಯರ್ಥಿಗೆ ಆಗಬಹುದು ಎಂಬ ಲೆಕ್ಕಾಚಾರಗಳಿವೆ.
ಬಲಗೈಗೆ ಬೇಡಿಕೆ: ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಕೆ. ಎಚ್.ಮುನಿಯಪ್ಪರಿಗೆ ಪ್ರಬಲ ವಿರೋಧಿ ಗುಂಪು ಕಾ ರ್ಯನಿರ್ವಹಿಸುತ್ತಿದೆ. ಮಾಜಿ ಸ್ಪೀಕರ್ ರಮೇಶ್‌ಕುಮಾರ್ ನೇತೃತ್ವದ ಗುಂಪು ಈ ಬಾರಿ ಕೋಲಾರ ಕ್ಷೇತ್ರದಿಂದ ದಲಿತ ಬಲಗೈ ಅಭ್ಯರ್ಥಿಗೆ ಟಿಕೆಟ್ ನೀಡ ಬೇಕೆಂದು ಪಕ್ಷದ ಮೇಲೆ ಒತ್ತಡ ಹೇರಿದೆ. ದಲಿತ ಬಲಗೈ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ತಮ್ಮದೇ ಆಗಿರುತ್ತದೆ. ಹೈಕಮಾಂಡ್ ಬೇರೆ ಯಾರದೋ ಒತ್ತಡಕ್ಕೆ ಯಾರಿಗೋ ಟಿಕೆಟ್ ನೀಡಿದರೆ ನಮ್ಮ ಪ್ರಯತ್ನ ನಾವು ಮಾಡುತ್ತೇವೆ, ಸೋಲು ಗೆಲುವು ನಮ್ಮ ಹೊಣೆಯಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಎಡಗೈಗೆ ಬೇಡಿಕೆ: ತಮ್ಮ ವಿರೋಧಿ ಗುಂಪಿನ ಬಲಗೈ ಅಭ್ಯರ್ಥಿ ಬೇಡಿಕೆಗೆ ಆಹಾರ ಸಚಿವ ಕೆ.ಎಚ್.ಮುನಿ ಯಪ್ಪ ಪಕ್ಷದ ಮುಂದೆ ಕೆಲವು ಷರತ್ತುಗಳ ಮೂಲಕ ಎಡಗೈ ಅಭ್ಯರ್ಥಿಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಕೋಲಾರ ಕ್ಷೇತ್ರವನ್ನು ದಲಿತ ಎಡಗೈ ಅಭ್ಯರ್ಥಿಗೆ ನೀಡಬೇಕು. ಅದರಲ್ಲೂ ಸತತವಾಗಿ ಕೋಲಾರವನ್ನು ತಾವು ಪ್ರತಿನಿಧಿಸಿಕೊಂಡು ಬರುತ್ತಿರುವುದರಿಂದ ತಾವು ಅಥವಾ ತಮ್ಮ ಕುಟುಂಬದ ಯಾರಿಗಾದರೂ ಇಲ್ಲವೇ ತಾವು ಸೂಚಿಸಿದವರಿಗೇ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಮುಂದೆ ಸ್ಪಷ್ಟಪಡಿಸಿದ್ದಾರೆ. ಹಿಂದೆ ತಮ್ಮ ಸೋಲಿಗೆ ಕಾರಣರಾದ ತಮ್ಮದೇ ಪಕ್ಷದ ವಿರೋಧಿ ಗುಂಪಿನೊಂದಿಗೆ ಹೊಂದಾಣಿಕೆಯೂ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆನ್ನಲಾಗಿದೆ.
ಚಿಕ್ಕ ತಾಳಿ ಬೇಡಿಕೆ: ಎಡಗೈ ಮತ್ತು ಬಲಗೈ ಬೇಡಿಕೆಯ ನಡುವೆ ಇತ್ತೀಚಿಗೆ ಬಲಗೈನ ಮತ್ತೂಂದು ಸಮುದಾ ಯವಾದ ರೇಣುಕಾ ಯಲ್ಲಮ್ಮ ಚಿಕ್ಕತಾಳಿ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬ ಕೂಗು ಎದ್ದಿದೆ. ಕೋಲಾರ ಟಿಕೆಟ್ ಬಲಗೈಗೆ ನೀಡಬೇಕು ಎಂದು ವಿರೋಧಿ ಗುಂಪು ವಾದಿಸುತ್ತಿದ್ದು, ಇದಕ್ಕೆ ಪ್ರತಿ ತಂತ್ರವಾಗಿ ಕೆ.ಎಚ್.ಮುನಿಯಪ್ಪ ತಮ್ಮದೇ ಬೆಂಬಲಿಗರ ಮೂಲಕ ಬಲಗೈಗೆ ನೀಡುವುದಾದರೆ ಚಿಕ್ಕತಾಳಿ ಸಮುದಾಯಕ್ಕೆ ನೀಡಬೇಕೆಂಬ ಒತ್ತಾಯವನ್ನು ಮಾಡಿಸಿದ್ದಾರೆ. ಈಗಾಗಲೇ ಚಿಕ್ಕತಾಳಿ ಮುಖಂಡರ ನಿಯೋಗ ಪಕ್ಷದ ಹಿರಿಯ ಮುಖಂಡರಿಗೆ ಈ ಕುರಿತು ಮನವಿಯನ್ನು ಮಾಡಿ ಬಂದಿದೆ.
ಗೊಂದಲ ಗೂಡಾದ ಅಭ್ಯರ್ಥಿ ಆಯ್ಕೆ : ಆರು ತಿಂಗಳಿನಿಂದಲೂ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗಾಗಿ ಎರಡೂ ಗುಂಪುಗಳ ತಂತ್ರ ಪ್ರತಿ ತಂತ್ರಗಳು ನಡೆಯುತ್ತಲೇ ಇದ್ದವು. ಕಾಂಗ್ರೆಸ್ ಗುಂಪುಗಳ ಕಿತ್ತಾಟದಲ್ಲಿ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ದಲಿತ ಬಲಗೈ ಮುಖಂಡರು ಇಬ್ಭಾಗವಾಗಿದ್ದಾರೆ. ಈಗ ಐದಾರು ಮಂದಿ ಆಕಾಂಕ್ಷಿಗಳ ಹಿಂದೆ ಈ ಎರಡೂ ಗುಂಪುಗಳ ಕೈವಾಡವು ಇದೆ. ಆದರೆ, ಯಾರಿಗೆ ಟಿಕೆಟ್ ಬೇಕು ಎಂಬ ಕುರಿತು ಎರಡೂ ಗುಂಪುಗಳು ಗುಟ್ಟು ಬಿಟ್ಟುಕೊಡುತ್ತಿಲ್ಲ. ಸ್ಪಷ್ಟವಾಗಿ ಯಾವ ಅಭ್ಯರ್ಥಿಯ ಪರವಾಗಿಯೂ ಎರಡೂ ಗುಂಪುಗಳು ಬೇಡಿಕೆ ಇಡುತ್ತಿಲ್ಲ. ಟಿಕೆಟ್ ಬೇಡಿಕೆಯನ್ನು ಮುಖಂಡರು ಗೊಂದಲಮಯವಾಗಿಸಿದ್ದಾರೆ.
ಆಯ್ಕೆಗಾಗಿ ತಂತ್ರ- ಪ್ರತಿತಂತ್ರ : ಕ್ಷೇತ್ರದಲ್ಲಿ, ರಾಜ್ಯ ಹೈಕಮಾಂಡ್ ಮಟ್ಟದಲ್ಲಿ ಏನು ಬೇಕೋ ಎಲ್ಲಾ ರೀತಿಯ ಪ್ರಯತ್ನ ಗಳನ್ನು ನಡೆಸಿರುವ ಆಕಾಂಕ್ಷಿಗಳು ತಂತ್ರ, ಪ್ರತಿ ತಂತ್ರಗಳನ್ನು ರೂಪಿಸಿರುವ ಕೋಲಾರ ಕಾಂಗ್ರೆಸ್ ಗುಂಪುಗಳು ಈಗ ಆಯ್ಕೆಯ ಫಲಿತಾಂಶಕ್ಕಾಗಿ ದೆಹಲಿ ಹೈಕಮಾಂಡ್‌ನತ್ತ ಚಿತ್ತ ನೆಟ್ಟಿದ್ದಾರೆ. ಗೆಲ್ಲಬಹುದಾದ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಗುಂಪುಗಾರಿಕೆ ಉಲ್ಬಣಗೊಂಡಿರುವುದರಿಂದ ಹೈಕಮಾಂಡ್ ಕೂಡ ಯಾರಿಗೆ ಟಿಕೆಟ್ ನೀಡಬೇಕೆಂದು ಗೊಂದಲಕ್ಕೀಡಾಗಿದೆ.
ಎರಡು ಗುಂಪುಗಳಲ್ಲಿ ಯಾವ ಗುಂಪಿಗೆ ಮಣೆ ಹಾಕಬೇಕು, ಇಲ್ಲವೇ ತಟಸ್ಥ ಗುಂಪಿನ ಅಭ್ಯರ್ಥಿಗೆ ಟಿಕೆಟ್ ನೀಡಬೇಕೇ, ಇದರಲ್ಲಿ ಎಡಗೈ, ಬಲಗೈ, ದೊಡ್ಡತಾಳಿ, ಚಿಕ್ಕತಾಳಿಯ ಯಾರಿಗೆ ಟಿಕೆಟ್ ಸಿಗಬಹುದು ಎನ್ನುವುದು ಕೂಡ ಹೈಕಮಾಂಡ್ ನಿರ್ಧಾರದ ಮೇಲೆಯೇ ಅವಲಂಬಿತವಾಗಿರುವಂತಿದೆ.
– ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.