Vijayapura: ಮಾ.11 ರಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಘಟಿಕೋತ್ಸವ
ರಾಜ್ಯಪಾಲರಿಂದ ದಾಕ್ಷಾಯಿಣಿ ಅಪ್ಪ, ಮುಂಬೈನ ಸಂಧ್ಯಾರಿಗೆ ಗೌರವ ಡಾಕ್ಟರೇಟ್ ಪ್ರದಾನ
Team Udayavani, Mar 10, 2024, 4:45 PM IST
ವಿಜಯಪುರ : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾ.11 ರಂದು ರಾಜ್ಯಪಾಲ ಥಾವರಚಂದ್ ಗೆಹಲೋಟ ಅಧ್ಯಕ್ಷತೆಯಲ್ಲಿ 15ನೇ ಘಟಿಕೋತ್ಸವ ನಡೆಯಲಿದೆ. ರಾಜ್ಯಪಾಲರು ಈ ಬಾರಿ ಕಲಬುರ್ಗಿಯ ಡಾ.ದಾಕ್ಷಾಯಿಣಿ ಅಪ್ಪ ಹಾಗೂ ಮುಂಬೈನ ಡಾ.ಸಂಧ್ಯಾ ಇವರಿಗೆ ಗೌರವ ಡಾಕ್ಟರೇಟ್ ಘೋಷಿಸಿದ್ದು, ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತುಳಸಿಮಾಲಾ ತಿಳಿಸಿದ್ದಾರೆ.
ಭಾನುವಾರ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘಟಿಕೋತ್ಸವದ ವಿವರ ನೀಡಿದ ಅವರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಾ.11 ರಂದು ಮ 12.15 ಗಂಟೆಗೆ ವಿಶೇಷವಾಗಿ ನಿರ್ಮಿಸಿರುವ ಸಭಾಂಗಣದಲ್ಲಿ ಘಟಿಕೋತ್ಸವದಕ್ಕೆ ಚಾಲನೆ ದೊರೆಯಲಿದೆ. ಮುಖ್ಯ ಅತಿಥಿಗಳಾಗಿ ಹರಿಯಾಣದ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಮಕುಲಪತಿ ಪ್ರೊ. ಡಾ.ಸುಷ್ಮಾ ಯಾದವ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆಯಾಗಿ 80ಕ್ಕೂ ಹೆಚ್ಚು ಶಾಲಾ-ಕಾಲೇಜು ಸಹಿತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತಿರುವ ಡಾ.ದಾಕ್ಷಾಯಿಣಿ ಅಪ್ಪಾ ಅವರಿಗೆ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ. ಇದಲ್ಲದೇ ಮುಂಬೈನ ಸಫೆರ್Çೀಜಿರಾಜೆ ಭೋಸಲೆ ಸೆಂಟರ್ ಸ್ಥಾಪಕ ಪ್ರಾಂಶುಪಾಲೆ ಡಾ.ಸಂಧ್ಯಾ ಪುರೇಚ ಅವರು ಭರತನಾಟ್ಯ, ಭಾರತೀಯ ಶಾಸ್ತ್ರೀಯ ಪ್ರದರ್ಶನ ಕಲೆಗಳ ಉತ್ತೇಜನ ಸೇರಿದಂತೆ ಸಾಂಸ್ಕೃತಿಕ ಸಂಪ್ರದಾಯದ ಸಂರಕ್ಷಣೆನೀಡಿರುವ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ ಎಂದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‍ಳಲ್ಲಿ ಗರಿಷ್ಠ ಅಂಕ ಪಡೆದಿರುವ 77 ವಿದ್ಯಾರ್ಥಿನಿಯರಿಗೆ 80 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ. ಒಂದೇ ಚಿನ್ನದ ಪದಕಕ್ಕೆ ಒಂದಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರು ಅರ್ಹರಾಗಿರುವುದರಿಂದ ವಿಶ್ವವಿದ್ಯಾಲಯದ ಪರಿನಿಯಗಳ ಅನ್ವಯ ಹೆಚ್ಚುವರಿಯಾಗಿ ಪಡೆದ ಚಿನ್ನದ ಪದಕಗಳನ್ನು ನಗದು ಪಾರಿತೋಷಕಕ್ಕೆ ಪರಿವರ್ತಿಸಿ 20 ವಿದ್ಯಾರ್ಥಿನಿಯರಿಗೆ ನಗದು ಪಾರಿತೋಷಕ ನೀಡಲಾಗುತ್ತಿದೆ ಎಂದು ವಿವರಿಸಿದರು.
ಘಟಿಕೋತ್ಸವದಲ್ಲಿ 12,347 ಸ್ನಾತಕ ಮತ್ತು ಸ್ನಾತಕೋತ್ತರ, 48 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ, 1,107 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಗುವುದು. 11,240 ವಿದ್ಯಾರ್ಥಿನಿಯರಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ವಿವರಿಸಿದರು.
ಘಟಿಕೋತ್ಸವವನ್ನು ಯಶಸ್ವಿಯಾಗಿ ಸಂಘಟಿಸಲು ಈಗಾಗಲೇ ಹಲವಾರು ಸಮಿತಿ ರಚಿಸಿದ್ದು, ಭರದಿಂದ ಸಿದ್ಧತೆಗಳು ಅಂತಿಮ ಸ್ಪರ್ಶ ನೀಡುವ ಕೆಲಸ ನಡೆದಿದೆ.
ಘಟಿಕೋತ್ಸವ ಸಂದರ್ಭದಲ್ಲಿ ಮೊಬೈಲ್ ಫೋನ್, ವಿಡಿಯೋ ಕೆಮರಾ, ಸ್ಟಿಲ್ ಕೆಮರಾಗಳನ್ನು ನಿಷೇಧಿಸಲಾಗಿದೆ. ಆಹ್ವಾನಿತರು ಬೆಳಗ್ಗೆ 11-15 ಗಂಟೆಯೊಳಗೆ ಆಗಮಿಸಿ, ತಮ್ಮ ಆಸನಗಳಲ್ಲಿ ಕುಳಿತಿರಲು ಸೂಚಿಸಲಾಗಿದೆ ಎಂದರು.
ಘಟಿಕೋತ್ಸವ ಮೆರವಣಿಗೆ ಸಭಾಂಗಣದಲ್ಲಿ ಪ್ರವೇಶಿಸುವಾಗಿನಿಂದ ಹಿಡಿದು ಕುಲಾಧಿಪತಿಗಳು ಪೀಠಸ್ಥರಾಗುವವರೆಗೂ ಸಭಾಸದರು ಎದ್ದು ನಿಂತಿರಬೇಕು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ಘಟಿಕೋತ್ಸವ ಸಂಯೋಜನಾಧಿಕಾರಿ ಪ್ರೊ.ಯು.ಕೆ.ಕುಲಕರ್ಣಿ, ಮಾಧ್ಯಮ ಸಮಿತಿ ಅಧ್ಯಕ್ಷ ಪ್ರೊ.ಓಂಕಾರ ಕಾಕಡೆ, ಸಂಯೋಜಕಿ ಡಾ.ತಹಮೀನಾ ಕೋಲಾರ, ಐಸಿಟಿ ಸಂಯೋಜಕ ಸಂದೀಪ್ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.