Karkala ಆಸ್ತಿ ವಿಚಾರಕ್ಕೆ ಸಹೋದರನ ಕೊಲೆ: ಜೀವಾವಧಿ ಶಿಕ್ಷೆ
Team Udayavani, Mar 13, 2024, 1:06 AM IST
ಕಾರ್ಕಳ: ಆಸ್ತಿ ವಿಚಾರವಾಗಿ ಸಹೋದರನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ರಾಜು ಯಾನೆ ಕಪಿಲ (38) ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೀಠಾಸೀನ ಕಾರ್ಕಳ) ಮಾ.12ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಾರ್ಕಳ ತಾಲೂಕು ನಿಟ್ಟೆ ಬಜಕಳ ನಿವಾಸಿ ರಾಜು ಯಾನೆ ಕಪಿಲ ಮತ್ತು ಶೇಖರ ಸಹೋದರರಾಗಿದ್ದು, ಇವರ ನಡುವೆ ಆಸ್ತಿ ವಿಚಾರದಲ್ಲಿ ಗಲಾಟೆ ನಡೆದಿತ್ತು. 2022ರ ಮಾ.6ರಂದು ಶೇಖರ ಅವರು ಮನೆಯ ಬಳಿ ಕೆಲಸ ಮಾಡುತ್ತಿದ್ದಾಗ ರಾಜು ಬಂದು ಗಲಾಟೆ ನಡೆಸಿ ಚೂರಿಯಿಂದ ಶೇಖರನ ಹೊಟ್ಟೆಗೆ ತಿವಿದು ಗಂಟಲು ಕೊಯ್ದು ಕೊಲೆ ಮಾಡಿದ್ದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾ ಧಿಕಾರಿಯಾಗಿದ್ದ ಕಾರ್ಕಳ ವೃತ್ತ ನಿರೀಕ್ಷಕ ಸಂಪತ್‌ಕುಮಾರ್ ಅವರು ರಾಜು ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ (ಪೀಠಾಸೀನ ಕಾರ್ಕಳ) ಇಲ್ಲಿನ ನ್ಯಾಯಾಧೀಶ ದಿನೇಶ್ ಹೆಗ್ಡೆ ಅವರು ಆರೋಪಿ ಮೇಲಿನ ಆರೋಪವು ಸಾಬೀತು ಆಗಿದೆ ಎಂದು ಮಾ.12ರಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಜತೆಗೆ ಮೃತ ಶೇಖರನ ಪತ್ನಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ ಇವರಿಗೆ ನಿರ್ದೇಶನ ನೀಡಿರುತ್ತಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಬಿ. ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.