ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?
ಈ ಸಮಸ್ಯೆಯನ್ನು ಎದುರಿಸಲು ಜನರು ಮತ್ತು ಸರ್ಕಾರ ಜಂಟಿಯಾಗಿ ಪ್ರಯತ್ನಿಸಬೇಕಾಗಿದೆ..
Team Udayavani, Mar 18, 2024, 1:24 PM IST
ಭಾರತದ ತಂತ್ರಜ್ಞಾನ ಕೇಂದ್ರವಾಗಿರುವ ಬೆಂಗಳೂರು ಬರಗಾಲದ ಪರಿಣಾಮವಾಗಿ ನೀರಿನ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಇನ್ನು ಬೇಸಿಗೆ ಕಾಲ ಆರಂಭವಾಗುತ್ತಿದ್ದು, ಈ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕಗಳಿವೆ.
ಈ ವರ್ಷ ತಲೆದೋರಿದ ಬರ ಪರಿಸ್ಥಿತಿಯ ಕಾರಣದಿಂದಾಗಿ, ನಗರದಲ್ಲಿ ಸಾವಿರಾರು ಕೊಳವೆ ಬಾವಿಗಳು ಬತ್ತಿಹೋಗಿವೆ. ಅಧಿಕಾರಿಗಳು ಬೆಂಗಳೂರು ನಗರದ 1.3 ಕೋಟಿ ನಿವಾಸಿಗಳಿಗೆ ನೀರು ಒದಗಿಸಲು ಟ್ಯಾಂಕರ್‌ಗಳನ್ನು ಬಳಸುತ್ತಿದ್ದಾರೆ. ಅತಿಯಾಗಿ ಹಣ ಸುಲಿಗೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ಟ್ಯಾಂಕರ್ ನೀರಿಗೆ ಪೂರೈಕೆದಾರರು ವಿಧಿಸಬಹುದಾದ ಗರಿಷ್ಠ ಮೊತ್ತವನ್ನು ಈಗಾಗಲೇ ನಿಗದಿಪಡಿಸಿದೆ.
ಭಾರತದ 194 ಬಿಲಿಯನ್ ಡಾಲರ್ ಮೌಲ್ಯದ ಐಟಿ ಸೇವಾ ವಲಯಕ್ಕೆ ಬೆಂಗಳೂರು ಆಶ್ರಯ ತಾಣವಾಗಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಮಳೆಯ ಕೊರತೆ ಮತ್ತು ಅತಿಯಾದ ಅಂತರ್ಜಲದ ಬಳಕೆಯ ಕಾರಣದಿಂದಾಗಿ, ಭಾರತದ ಇತರ ನಗರಗಳಂತೆ ಬೆಂಗಳೂರಿನಲ್ಲೂ ಕೆಲವೊಮ್ಮೆ ನೀರಿನ ಅಭಾವ ಕಾಣಿಸಿಕೊಳ್ಳುತ್ತದೆ. ಬೇಸಿಗೆ ಹತ್ತಿರ ಬರುತ್ತಿದ್ದಂತೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತನಕ ಹೆಚ್ಚಾಗುವ ಸಾಧ್ಯತೆಗಳಿದ್ದು, ಇದರಿಂದ ನೀರಿನ ಅಭಾವ ಇನ್ನಷ್ಟು ಹೆಚ್ಚಾಗುವ ಅಪಾಯಗಳಿವೆ.
ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ರಾಮ್ ಮನೋಹರ್ ಅವರು ಮಾಧ್ಯಮಗಳೊಡನೆ ಮಾತನಾಡುವ ಸಂದರ್ಭದಲ್ಲಿ, ಬೆಂಗಳೂರಿನ ನಿವಾಸಿಗಳಿಗೆ ನೀರಿನ ಬಳಕೆಯಲ್ಲಿ ಅತ್ಯಂತ ಜಾಗರೂಕವಾಗಿದ್ದು, ಅವಶ್ಯಕತೆಗಳಿಗೆ ಮಾತ್ರವೇ ನೀರು ಬಳಸುವಂತೆ ಸೂಚನೆ ನೀಡಿದ್ದರು.
ಅಧಿಕೃತ ಮೂಲಗಳ ಪ್ರಕಾರ, ಬೆಂಗಳೂರಿನ ಜನಸಂಖ್ಯೆಯ ಮೂರನೇ ಒಂದರಷ್ಟು ಭಾಗ ಅಂತರ್ಜಲದ ಮೇಲೆ ಅವಲಂಬಿತವಾಗಿದೆ. ಈ ವರದಿಗಳ ಪ್ರಕಾರ, ಬೆಂಗಳೂರಿನ 13,900 ಕೊಳವೆ ಬಾವಿಗಳ ಪೈಕಿ ಹಲವಾರು ಕೊಳವೆ ಬಾವಿಗಳು 1,500 ಅಡಿಗಳಷ್ಟು ಆಳಕ್ಕೆ ಸಾಗಿವೆ.
ಕಳೆದ ವಾರ, ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಅಂದಾಜು 7,000 ಕೊಳವೆ ಬಾವಿಗಳು ಬತ್ತಿ ಹೋಗಿವೆ ಎಂದಿದ್ದಾರೆ. ಆದರೆ, ಅಧಿಕಾರಿಗಳು ಇದಕ್ಕೆ ಬದಲಿ ವ್ಯವಸ್ಥೆಗಳನ್ನು ಕೈಗೊಳ್ಳುತ್ತಿದ್ದು, ಸದ್ಯಕ್ಕೆ ಬೆಂಗಳೂರಿನಲ್ಲಿ ನೀರಿನ ಅಭಾವವಿಲ್ಲ ಎಂದಿದ್ದರು.
ನೀರಿನ ಅಭಾವಕ್ಕೆ ಸಂಬಂಧಿಸಿದಂತೆ, ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ನಡುವೆ ಈಗಾಗಲೇ ರಾಜಕೀಯ ಕಿತ್ತಾಟಗಳು ನಿರಂತರವಾಗಿ ನಡೆಯುತ್ತಿವೆ.
ಭಾರತೀಯ ಜನತಾ ಪಾರ್ಟಿ ಕರ್ನಾಟಕ ಸರ್ಕಾರ ಕಾವೇರಿ ನದಿ ನೀರನ್ನು ಕದ್ದು ಮುಚ್ಚಿ ತಮಿಳುನಾಡಿಗೆ ಬಿಡುಗಡೆ ಮಾಡುತ್ತಿದೆ ಎಂದು ಆರೋಪಿಸಿದ್ದು ಇದರಿಂದಾಗಿ ಕರ್ನಾಟಕದ ನೀರಿನ ಅಭಾವ ಇನ್ನಷ್ಟು ಹೆಚ್ಚಾಗಿದೆ ಎಂದಿದೆ. ಆದರೆ ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಆರೋಪಗಳನ್ನು ತಳ್ಳಿಹಾಕಿದ್ದು, ಈಗಾಗಲೇ ಕರ್ನಾಟಕದಲ್ಲಿ ತಲೆದೋರಿರುವ ನೀರಿನ ಅಭಾವದಿಂದ ತಮಿಳುನಾಡಿಗೆ ನೀರು ಹರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬಿಜೆಪಿ ನೀರಿನ ಅಭಾವದ ಸಮಸ್ಯೆಯನ್ನೂ ಒಂದು ರಾಜಕೀಯ ವಿಚಾರವನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರಸ್ತುತ ನೀರಿನ ಅಲಭ್ಯತೆ ಉಂಟಾಗಿಲ್ಲ ಎಂದಿರುವ ಶಿವಕುಮಾರ್, ಸರ್ಕಾರ ಪ್ರಸ್ತುತ ತಮಿಳುನಾಡಿಗೆ ನೀರು ಹರಿಸುವ ಕುರಿತಂತೆ ತನ್ನ ಮೇಲಿರುವ ಕಾನೂನು ಜವಾಬ್ದಾರಿಗಳನ್ನು ನಿಭಾಯಿಸಲು ಗಮನ ಹರಿಸುತ್ತಿದೆ ಎಂದಿದ್ದಾರೆ.
ಪ್ರಸ್ತುತ ಬೆಂಗಳೂರು ನಗರ ನೀರಿನ ಕೊರತೆಗೆ ಸಿಲುಕಿರುವುದರಿಂದ, ಬಹಳಷ್ಟು ಐಟಿ ಉದ್ಯೋಗಿಗಳು ಕಚೇರಿಯ ಬದಲು, ಬೇರೆ ಕಡೆಯಿಂದ ಕಾರ್ಯ ನಿರ್ವಹಿಸುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗತೊಡಗಿದ್ದು, ಇದರ ಪರಿಣಾಮವಾಗಿ ಕೆರೆಗಳು ಬತ್ತಲಾರಂಭಿಸಿವೆ. ಇತ್ತೀಚೆಗೆ ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಕೆಳಗೆ ಬಿದ್ದುಹೋಗುವ ಘಟನೆಗಳು ಹೆಚ್ಚಾಗತೊಡಗಿವೆ. ಅದರೊಡನೆ, ಬೆಂಗಳೂರಿನಲ್ಲಿ ನಾಗರಹಾವುಗಳು, ಮಂಡಲದ ಹಾವುಗಳು, ಕೇರೆ ಹಾವು, ವೂಲ್ಫ್ ಸ್ನೇಕ್‌ಗಳು ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿವೆ.
ಬಿಬಿಎಂಪಿ ವನ್ಯಜೀವಿ ಪರಿಪಾಲಕರಾದ ಪ್ರಸನ್ನ ಕುಮಾರ್ ಅವರು ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಹಾವುಗಳ ರಕ್ಷಣೆಗಾಗಿ ಬರುತ್ತಿರುವ ದೂರವಾಣಿ ಕರೆಗಳ ಪ್ರಮಾಣದಲ್ಲಿ ಬಹಳಷ್ಟು ಏರಿಕೆ ಕಂಡಿದೆ ಎಂದಿದ್ದಾರೆ. ಇಲಾಖೆಗೆ ಈ ವರ್ಷ, ಅದರಲ್ಲೂ ಕಳೆದ ಎರಡು ವಾರಗಳಿಂದ ಪ್ರತಿದಿನವೂ ಕನಿಷ್ಠ ನೂರಕ್ಕೂ ಹೆಚ್ಚು ದೂರವಾಣಿ ಕರೆಗಳು ಬರುತ್ತಿದ್ದು, ಕಳೆದ ವರ್ಷದ ಸರಾಸರಿ 45 ಕರೆಗಳ ಎರಡು ಪಟ್ಟಿಗೂ ಹೆಚ್ಚಾಗಿದೆ.
ತಮ್ಮ ಆಹಾರವನ್ನು ಹುಡುಕುತ್ತಾ ಅತ್ಯಂತ ಎತ್ತರದಲ್ಲಿ ಹಾರಾಟ ನಡೆಸುವುದಕ್ಕೆ ಹೆಸರಾಗಿರುವ ಹದ್ದುಗಳು ನಿರ್ಜಲೀಕರಣಕ್ಕೆ ತುತ್ತಾಗಿ, ನೆಲಕ್ಕೆ ಬೀಳುತ್ತಿವೆ. ಇನ್ನು ಮೈನಾಗಳು, ಬುಲ್‌ಬುಲ್‌ಗಳಂತಹ ಸಣ್ಣ ಹಕ್ಕಿಗಳು, ಮಿಶ್ರಾಹಾರಿಗಳಾದ ಕಾಗೆಗಳಂತಹ ಪಕ್ಷಿಗಳೂ ತಾಪಮಾನಕ್ಕೆ ಬಲಿಯಾಗುತ್ತಿವೆ. ಪ್ರಸನ್ನ ಕುಮಾರ್ ಅವರು ಹೆಚ್ಚಿನ ನೆರವಿನ ಕರೆಗಳು ಆರ್ ಆರ್ ನಗರ ವಲಯ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳಿಂದ ಬರುತ್ತಿವೆ ಎಂದಿದ್ದಾರೆ.
ಇತ್ತೀಚೆಗೆ ಉದ್ಯಾನಗಳಲ್ಲಿ ಮತ್ತು ಮನೆಗಳ ಅಡುಗೆ ಕೋಣೆಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿರುವ ಕುರಿತು ದೂರುಗಳು ಹೆಚ್ಚಾಗಿವೆ ಎಂದು ಅವರು ವಿವರಿಸಿದ್ದಾರೆ. ಬೆಂಗಳೂರಿನಲ್ಲಿ ಈಗ ತಲೆದೋರಿರುವ ನೀರಿನ ಅಭಾವ, ನೀರಿನ ಸುಸ್ಥಿರ ಬಳಕೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮತ್ತು ಈ ಸಮಸ್ಯೆಯನ್ನು ಎದುರಿಸಲು ಜನರು ಮತ್ತು ಸರ್ಕಾರ ಜಂಟಿಯಾಗಿ ಪ್ರಯತ್ನಿಸಬೇಕಾದ ಅನಿವಾರ್ಯತೆಗಳನ್ನು ತೋರಿಸಿದೆ.
ನೀರಿನ ಪೂರೈಕೆ ಟ್ಯಾಂಕರ್‌ಗಳನ್ನು ಒದಗಿಸುವ ಟ್ಯಾಂಕರ್‌ವಾಲಾ ಎಂಬ ಆ್ಯಪ್, ಬೆಂಗಳೂರಿನ ನೀರಿನ ಕೊರತೆಗೆ ಇರುವ ಎಂಟು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದ್ದು, ಅದಕ್ಕೆ ಸಂಭಾವ್ಯ ಪರಿಹಾರಗಳನ್ನೂ ಒದಗಿಸಿದೆ.
1. ಬೆಂಗಳೂರಿನಲ್ಲಿ ಸಮಗ್ರ ನೀರಿನ ಪೂರೈಕೆ ಸೇವೆಯ ಕೊರತೆ ಇದೆ. ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇನ್ನೂ ಬೆಂಗಳೂರಿನ ಹೊರವಲಯಕ್ಕೆ ನೀರಿನ ಪೈಪ್‌ಲೈನ್‌ಗಳನ್ನು ಅಳವಡಿಸಿಲ್ಲ. ಇದರ ಪರಿಣಾಮವಾಗಿ, ಬೆಳ್ಳಂದೂರು, ಸಿಂಗಸಂದ್ರ, ರಾಮಮೂರ್ತಿ ನಗರ, ಬ್ಯಾಟರಾಯನಪುರ, ಜಕ್ಕೂರು, ಮತ್ತು ದೇವರಬೀಸನಹಳ್ಳಿಗಳು ಅತಿಹೆಚ್ಚು ನೀರಿನ ಕೊರತೆ ಎದುರಿಸುತ್ತಿವೆ. ಅದರೊಡನೆ, ಈ ಪ್ರದೇಶಗಳು ನೀರಿಗಾಗಿ ಟ್ಯಾಂಕರ್‌ಗಳ ಮೇಲೆ ಅತಿಹೆಚ್ಚು ಅವಲಂಬಿತವಾಗಿವೆ.
2. ಸರ್ಕಾರಿ ನೀರಾವರಿ ಯೋಜನೆಗಳ ಜಾರಿಯಲ್ಲಿನ ವೈಫಲ್ಯ: ಪ್ರತಿಯೊಂದು ಸರ್ಕಾರವೂ ತಾನು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡುತ್ತದೆ. ಆದರೆ, ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಬಹುತೇಕ ಯೋಜನೆಗಳು ಸಂಪೂರ್ಣವಾಗಿ ಜಾರಿಗೆ ಬರಲು ವಿಫಲವಾಗುತ್ತವೆ.
3. ಮಳೆ ನೀರಿನ ಮೇಲೆ ಅತಿಯಾದ ಅವಲಂಬನೆ: ಬೆಂಗಳೂರಿನ ಪ್ರಾಥಮಿಕ ನೀರಿನ ಮೂಲಗಳಾದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟು, ಕಬಿನಿ ಜಲಾಶಯ ಸೇರಿದಂತೆ, ರಾಜ್ಯದ ಬಹುತೇಕ ಅಣೆಕಟ್ಟುಗಳು ಈಗ ತಮ್ಮ ಸಾಮರ್ಥ್ಯದ ಕೇವಲ 20%ದಷ್ಟು ನೀರು ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ, ರಾಜ್ಯ ಸರ್ಕಾರದ ಬಳಿ ಬೇಸಿಗೆ ಕಾಲವನ್ನು ಪೂರ್ಣಗೊಳಿಸಲು ಬಹಳ ಕಷ್ಟದಿಂದ ಸಾಕಾಗುವಷ್ಟು ನೀರಿನ ಲಭ್ಯತೆಯಿದೆ.
4. ನೈಸರ್ಗಿಕ ಜಲಮೂಲಗಳ ಅತಿಕ್ರಮಣ: ಬೆಂಗಳೂರು ಒಂದು ಕಾಂಕ್ರೀಟ್ ಮಯ ಮೆಟ್ರೋ ನಗರಿಯಾಗಿ ರೂಪುಗೊಳ್ಳುತ್ತಿದೆ. ಆದರೆ ಬೆಂಗಳೂರಿನ ಅಭಿವೃದ್ಧಿಗಾಗಿ, ಅದರ ಸುಂದರವಾದ ಕೆರೆಗಳು ಮತ್ತು ಸರೋವರಗಳು ಬಲಿಯಾಗುತ್ತಿವೆ. ಅತ್ಯವಶ್ಯಕವಾದ ಈ ನೀರಿನ ಮೂಲಗಳು ಅತಿಕ್ರಮಣಕ್ಕೆ ಒಳಗಾಗುತ್ತಿದ್ದು, ಇದರಿಂದಾಗಿ ಬೆಂಗಳೂರಿನ ಸಹಜ ಸೌಂದರ್ಯವೂ ಮರೆಯಾಗುತ್ತಿದೆ.
5. ಅಂತರ್ಜಲದ ಅತಿಯಾದ ಬಳಕೆ: ನೈಸರ್ಗಿಕ ಜಲಮೂಲಗಳ ಬಳಕೆ ನಿಂತಿರುವ ಕಾರಣದಿಂದ, ಅಂತರ್ಜಲವೇ ಬೆಂಗಳೂರಿನ ಬಹುಪಾಲು ಪ್ರದೇಶಗಳ ನೀರಿನ ಮೂಲವಾಗಿದೆ. ನಾಗರಿಕರು ಕುಡಿಯಲು, ಸ್ವಚ್ಛತೆಗಾಗಿ ಮತ್ತು ಉದ್ಯಾನಗಳ ನಿರ್ವಹಣೆಗಾಗಿ ಅಂತರ್ಜಲದ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ, ನೀರಿನ ಮರುಬಳಕೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವ ಕಾರಣದಿಂದ, ಮರುಬಳಕೆ ಮಾಡಬಹುದಾದ ನೀರು ಚರಂಡಿಯಲ್ಲಿ ವ್ಯರ್ಥವಾಗಿ ಹರಿಯುತ್ತಿದೆ.
6. ಕೊಳವೆ ಬಾವಿಗಳಲ್ಲಿ ಕುಸಿಯುತ್ತಿರುವ ನೀರಿನ ಮಟ್ಟ: ನೀರಿಗಾಗಿ ಹುಡುಕಾಟ ನಡೆಸುತ್ತಾ, ಕೊಳವೆ ಬಾವಿಗಳನ್ನು ಈಗ ಕನಿಷ್ಠ 900 ಅಡಿಗೂ ಹೆಚ್ಚು ಆಳವಾಗಿ ಕೊರೆಯಲಾಗುತ್ತಿದೆ. ಕೆಲವು ದಶಕಗಳ ಹಿಂದಕ್ಕೆ ಗಮನಿಸಿದರೆ, ಬೆಂಗಳೂರಿನಲ್ಲಿ ಕೇವಲ 150-200 ಅಡಿಗಳ ಆಳದಲ್ಲಿ ನೀರು ಲಭ್ಯವಾಗುತ್ತಿತ್ತು.
7. ಸ್ಥಳೀಯ ನೀರು ಪೂರೈಕೆ ಜಾಲದಲ್ಲಿನ ಸಮಸ್ಯೆಗಳು: ಸರ್ಕಾರದ ನೀರು ಪೂರೈಕೆ ವ್ಯವಸ್ಥೆಯ ಕೊರತೆಯಿಂದಾಗಿ, ನಾಗರಿಕರು ಟ್ಯಾಂಕರ್ ನೀರಿನ ಮೇಲೆ ಅವಲಂಬನೆ ಹೊಂದುವಂತಾಗಿದೆ. ಟ್ಯಾಂಕರ್ ಮೂಲಕ ಸಾಗಿಸುವ ಬಹುತೇಕ ನೀರು ನಿಯಮಗಳು ಮತ್ತು ನಿರ್ವಹಣೆಯ ಕೊರತೆ ಹೊಂದಿದ್ದು, ನೀರಿನ ಸಂಗ್ರಹಣೆ, ಸ್ವಚ್ಛತೆ, ಪೂರೈಕೆ ಮತ್ತು ಬೆಲೆ ನಿಗದಿ ಸೇರಿದಂತೆ, ಸಂಪೂರ್ಣ ನೀರು ಪೂರೈಕೆ ವ್ಯವಸ್ಥೆ ಅಸಮರ್ಪಕವಾಗಿದೆ.
8. ಮಾನ್ಸೂನ್ ವೈಫಲ್ಯ: ಸಂಪೂರ್ಣ ಜಗತ್ತು ಹವಾಮಾನ ಬದಲಾವಣೆಯನ್ನು ಎದುರಿಸುತ್ತಿದ್ದು, ಇದು ಭಾರತ, ಕರ್ನಾಟಕ ಮತ್ತು ಬೆಂಗಳೂರನ್ನೂ ಗಣನೀಯವಾಗಿ ಬಾಧಿಸುತ್ತಿದೆ. ಇಂತಹ ಹವಾಮಾನ ಬದಲಾವಣೆಯ ಪ್ರಾಥಮಿಕ ಪರಿಣಾಮ, ಮಾನ್ಸೂನ್ ವೈಫಲ್ಯ. ಮಾನ್ಸೂನ್ ಕೊರತೆಯಿಂದಾಗಿ ಅಂತರ್ಜಲ ಮರುಪೂರಣವೂ ಕಷ್ಟಕರವಾಗುತ್ತದೆ. ಬೆಂಗಳೂರಿನ ಐತಿಹಾಸಿಕ ಜಲಮೂಲಗಳು ಮಳೆಯ ಆಧಾರಿತವಾಗಿದ್ದು, ಮಳೆಯ ಕೊರತೆಯ ಕಾರಣದಿಂದಾಗಿ ಅವುಗಳು ನಶಿಸುವ ಹಂತಕ್ಕೆ ಬಂದಿವೆ.
ದೊಡ್ಡ ಪ್ರಮಾಣದಲ್ಲಿ, ಸಮುದಾಯ ಸಂಘಟನೆಗಳು ಮತ್ತು ಸಂಸ್ಥೆಗಳು ನೀರಿನ ಪೋಲನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ಕೈಗೊಂಡು, ಅಂತರ್ಜಲ ಮರುಪೂರಣ ನಡೆಸುವ ವಿಧಾನಗಳನ್ನು ಪ್ರೋತ್ಸಾಹಿಸಬೇಕು. ಇದಕ್ಕಾಗಿ ಇರುವ ಕೆಲವು ಪರಿಹಾರೋಪಾಯಗಳು ಇಂತಿವೆ:
ಎ. ಸಾಂಪ್ರದಾಯಿಕ ನೀರಾವರಿಯ ಬದಲು ಮೈಕ್ರೋ ನೀರಾವರಿ ಪದ್ಧತಿಗೆ ಬದಲಾವಣೆ: ಶುದ್ಧ ನೀರಿನ 80%ದಷ್ಟು ಬಳಕೆ ಕೃಷಿ ವಲಯ ನಡೆಸುತ್ತದೆ. ಆದ್ದರಿಂದ ಕೃಷಿಕರು ಹಳೆಯದಾಗಿರುವ, ಹೆಚ್ಚು ನೀರು ಪೋಲು ಮಾಡುವ ಸಾಂಪ್ರದಾಯಿಕ ವಿಧಾನದ ಬದಲಾಗಿ, ಕಡಿಮೆ ನೀರು ಬಳಸುವ, ಹನಿ ನೀರಾವರಿಯಂತಹ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಿದೆ. ಗಮನಾರ್ಹ ವಿಚಾರವೆಂದರೆ, ಹನಿ ನೀರಾವರಿ ಪದ್ಧತಿ ನೀರಿನ ಬಳಕೆಯಲ್ಲಿ 95% ದಷ್ಟು ಪರಿಣಾಮಕಾರಿಯಾಗಿದೆ. ಇದಕ್ಕೆ ಹೋಲಿಸಿದರೆ, ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆಗಳು ಕೇವಲ 40% ಪರಿಣಾಮ ಹೊಂದಿವೆ. ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆಯಿಂದ, ಅನವಶ್ಯಕವಾಗಿ ನೀರು ವ್ಯರ್ಥವಾಗುವುದು ಮಾತ್ರವಲ್ಲದೆ, ಮಣ್ಣಿನ ಸವಕಳಿ ಮತ್ತು ಮಣ್ಣಿನಲ್ಲಿರುವ ಪೋಷಕಾಂಶಗಳ ನಶಿಸುವಿಕೆಯೂ ಉಂಟಾಗುತ್ತದೆ.
ಬಿ. ಒಳಚರಂಡಿ ನೀರಿನ ಮರುಬಳಕೆ: ವಸತಿ ಸಮುಚ್ಚಯಗಳು ಕಡ್ಡಾಯವಾಗಿ ಒಳಚರಂಡಿ ನೀರಿನ ಪುನರ್ ಬಳಕೆ ನಡೆಸಬೇಕು ಎಂದು ಕಾನೂನು ಹೇಳುತ್ತದಾದರೂ, ಇಂತಹ ಎಷ್ಟು ವಸತಿ ಸಂಕೀರ್ಣಗಳು ನೀರಿನ ಮರುಬಳಕೆ ನಡೆಸುತ್ತಿವೆ ಎನ್ನುವುದು ಗಂಭೀರ ವಿಚಾರವಾಗಿದೆ. ಬೆಂಗಳೂರಿನಲ್ಲಿ, ಒಂದು ಸಾಮಾನ್ಯ ಕುಟುಂಬ ದಿನವೊಂದಕ್ಕೆ ಕೇವಲ ಶೌಚಾಲಯದಲ್ಲಿ ಫ್ಲಷ್ ಮಾಡುವ ಸಲುವಾಗಿಯೇ 150 ಲೀಟರ್ ನೀರು ಬಳಸುತ್ತದೆ. ಒಳಚರಂಡಿ ನೀರನ್ನು ಸಂಸ್ಕರಿಸಿ, ಶೌಚಾಲಯದ ಫ್ಲಷ್‌ಗಾಗಿ ಮರುಬಳಕೆ ಮಾಡುವುದರಿಂದ ಬಹಳಷ್ಟು ಅನುಕೂಲತೆಗಳಿವೆ. ಈ ರೀತಿ ಮರುಬಳಕೆ ಮಾಡುವುದರಿಂದ, ಪ್ರತಿಯೊಂದು ಮನೆಯೂ ಕೇವಲ ಶೌಚಾಲಯದ ಫ್ಲಷಿಂಗ್ ನಿಂದಲೇ ತಿಂಗಳಿಗೆ 4,500 ಲೀಟರ್‌ಗಳಷ್ಟು ನೀರು ಉಳಿಸಲು ಸಾಧ್ಯವಾಗುತ್ತದೆ. ಅದರೊಡನೆ, ಈ ರೀತಿ ಸಂಸ್ಕರಿಸಿದ ನೀರನ್ನು ಹೊರಗಡೆ ಶುದ್ಧೀಕರಣಕ್ಕೆ ಮತ್ತು ಹೂದೋಟಗಳಿಗೆ ಬಳಸಬಹುದು.
ಸಿ. ಸಂಸ್ಕರಿಸಿದ ಒಳಚರಂಡಿ ನೀರಿನಿಂದ ಕೆರೆಗಳು ಮತ್ತು ಸರೋವರಗಳಿಗೆ ನೀರಿನ ಮರುಪೂರಣ ನಡೆಸುವುದು: ಕೆರೆ, ಸರೋವರಗಳಂತಹ ಜಲಮೂಲಗಳನ್ನು ಮುಚ್ಚಿ, ಅವುಗಳ ಮೇಲೆ ಕಟ್ಟಡಗಳನ್ನು ನಿರ್ಮಿಸಿ, ನಗರೀಕರಣ ನಡೆಸುವುದನ್ನು ತಡೆಯುವುದು ಅತ್ಯವಶ್ಯಕವಾಗಿದೆ. ಅದರೊಡನೆ, ಈಗಾಗಲೇ ಅಂತಹ ಕೆಲಸಗಳು ನಡೆದಿದ್ದರೆ, ಅಂತಹ ಜಲಮೂಲಗಳನ್ನು ಮರಳಿ ರಕ್ಷಿಸಬೇಕು. ಮಳೆ ನೀರನ್ನು ಇಂತಹ ಜಲಮೂಲಗಳಿಗೆ ಸೇರುವಂತೆ ಮಾಡುವುದು ಮಾತ್ರವಲ್ಲದೆ, ಸಮರ್ಪಕವಾಗಿ ಸಂಸ್ಕರಿಸಿದ ಒಳಚರಂಡಿ ನೀರನ್ನೂ ಇವುಗಳಿಗೆ ಕಳುಹಿಸುವುದು ಒಂದು ಪ್ರಾಯೋಗಿಕ ಪರಿಹಾರವಾಗಿದೆ.
ವಾಸ್ತವ ವಿಚಾರವೆಂದರೆ, ಪ್ರತಿಯೊಂದು ಹನಿ ನೀರನ್ನೂ ಗರಿಷ್ಠ ಐದು ಬಾರಿ ಮರು ಬಳಕೆ ಮಾಡಲು ಸಾಧ್ಯವಾಗುತ್ತದೆ. ವಿಚಿತ್ರ ಎನಿಸಿದರೂ, ಇದು ಸತ್ಯವಾದ ವಿಚಾರವಾಗಿದೆ.
ಈಗಾಗಲೇ ಸಂಘಟನೆಗಳು ಮತ್ತು ಸರ್ಕಾರಗಳು ನೀರಿನ ಕೊರತೆಯನ್ನು ಎದುರಿಸಲು ಬದಲಿ ವ್ಯವಸ್ಥೆ ರೂಪಿಸಲು ಪ್ರಯತ್ನ ನಡೆಸುತ್ತಿದ್ದು, ಇದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ನೀರನ್ನು ಉಳಿಸುವುದು ಸಾಮಾಜಿಕ ಜವಾಬ್ದಾರಿಯ ಜೊತೆಗೆ, ವೈಯಕ್ತಿಕ ಜವಾಬ್ದಾರಿಯೂ ಹೌದು ಎನ್ನುವುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ. ಮನೆಗಳಲ್ಲಿ ನಾವು ಹೇಗೆ ನೀರಿನ ಬಳಕೆ ಮಿತಿಗೊಳಿಸಬಹುದು? ಅದಕ್ಕೆ ಒಂದಷ್ಟು ಪರಿಹಾರೋಪಾಯಗಳು ಇಲ್ಲಿವೆ:
i. ಸ್ನಾನದ ವೇಳೆ ನೀರಿನ ಉಳಿತಾಯ: ಸಾಮಾನ್ಯವಾಗಿ, ಸ್ನಾನಕ್ಕೆ ಬಿಸಿ ನೀರಿಗಾಗಿ ಕಾಯುವ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಣ್ಣೀರು ವ್ಯರ್ಥವಾಗಿ ಹರಿಯುತ್ತದೆ. ತಣ್ಣೀರು ಬರುವಾಗ ಅದನ್ನು ವ್ಯರ್ಥ ಮಾಡುವ ಬದಲು ಒಂದು ಬಕೆಟ್ ಇಟ್ಟು, ಆ ನೀರನ್ನು ಉಳಿಸಬಹುದು. ಅದರೊಡನೆ, ಶವರ್ ಮಾಡುವ ಸಂದರ್ಭದಲ್ಲೂ ಆಚೀಚೆ ಚೆಲ್ಲುವ ನೀರನ್ನು ಬಕೆಟ್ ಮೂಲಕ ಸಂಗ್ರಹಿಸಿ, ಫ್ಲಷ್ ಮಾಡಲು ಮತ್ತು ಬಾತ್ ರೂಮ್ ಸ್ವಚ್ಛಗೊಳಿಸಲು ಬಳಸಬಹುದು.
ii. ಹಲ್ಲುಜ್ಜುವ ಸಂದರ್ಭದಲ್ಲಿ ಟ್ಯಾಪ್ ಅನ್ನು ಸ್ಥಗಿತಗೊಳಿಸುವುದು: ಬಹಳಷ್ಟು ಜನರಿಗೆ ಹಲ್ಲುಜ್ಜುವ ಸಂದರ್ಭದಲ್ಲಿ ನಳ್ಳಿಯಲ್ಲಿ ನೀರು ಬಿಟ್ಟಿರುವ ಅಭ್ಯಾಸವಿರುತ್ತದೆ. ಅಗತ್ಯವಿಲ್ಲದ ಸಂದರ್ಭದಲ್ಲಿ ನಳ್ಳಿಯನ್ನು ಮುಚ್ಚುವುದರಿಂದ, ಚೊಂಬಿನಲ್ಲಿ ನೀರು ತೆಗೆದುಕೊಂಡು ಅಗತ್ಯವಿದ್ದಷ್ಟೇ ಬಳಸುವುದರಿಂದ, ಪ್ರತಿದಿನವೂ ಹೆಚ್ಚುವರಿ ನೀರನ್ನು ರಕ್ಷಿಸಬಹುದು.
iii. ಬಾಟಲಿಯಿಂದ ಸಂಪೂರ್ಣವಾಗಿ ಬಳಸಿರದ ಕುಡಿಯುವ ನೀರಿನ ಮರುಬಳಕೆ: ಹಲವಾರು ಬಾರಿ ನಾವು ಹೊರಗಡೆ ನೀರಿನ ಬಾಟಲಿ ಖರೀದಿಸಿದಾಗ, ಅದನ್ನು ಸಂಪೂರ್ಣವಾಗಿ ಬಳಸದೆ, ಹಾಗೆಯೇ ಎಸೆಯುತ್ತೇವೆ ಅಥವಾ ನೀರನ್ನು ಚೆಲ್ಲುತ್ತೇವೆ. ಇದೇ ಅಭ್ಯಾಸ ಮನೆಯಲ್ಲಿ ಬಳಸುವ ನೀರಿನ ಬಾಟಲಿಗಳಲ್ಲೂ ಮುಂದುವರಿಯುತ್ತದೆ. ಈ ರೀತಿ ಉಳಿದ ನೀರನ್ನು ಮನೆಯೊಳಗಿನ ಗಿಡಗಳಿಗೆ ಉಣಿಸಲು ಬಳಸಬಹುದು.
iv. ವಾಟರ್ ಪ್ಯೂರಿಫೈಯರ್‌ಗಳ ನೀರಿನ ಮರುಬಳಕೆ: ತರಕಾರಿಗಳು, ಕಾಳುಗಳು, ಹಣ್ಣುಗಳಲ್ಲಿ ಅಪಾರ ಪ್ರಮಾಣದಲ್ಲಿ ಕೀಟನಾಶಕಗಳು ಮತ್ತು ರಾಸಾಯನಿಕ ಸಂರಕ್ಷಕಗಳನ್ನು ಬಳಸಲಾಗುತ್ತದೆ. ಆದ್ದರಿಂದ, ಅವುಗಳನ್ನು ಬಳಸುವ ಮುನ್ನ ಸ್ವಚ್ಛವಾಗಿ ತೊಳೆಯುವುದು ಅನಿವಾರ್ಯವಾಗಿದೆ. ಈ ಅಭ್ಯಾಸವನ್ನು ಹೆಚ್ಚಿನ ಜನರು ಅನುಸರಿಸುತ್ತಾರೆ. ಆದರೆ, ಈ ರೀತಿ ತೊಳೆಯುವ ನೀರನ್ನು ಗಿಡಗಳಿಗೆ ಹಾಕಲು, ಶೌಚಾಲಯ ಸ್ವಚ್ಛಗೊಳಿಸಲು ಬಳಸಬಹುದು. ಕುಡಿಯುವ ನೀರಿನ ಪ್ಯೂರಿಫೈಯರ್ ಹೊರ ಹಾಕುವ ನೀರನ್ನೂ ಈ ರೀತಿ ಮರುಬಳಕೆ ಮಾಡಬೇಕು.
v. ನೀರಿನ ಸೋರುವಿಕೆಗೆ ಕಡಿವಾಣ: ಯಾವುದಾದರೂ ನಳ್ಳಿಯಲ್ಲಿ ನೀರು ಸೋರುತ್ತಿದ್ದರೆ, ತಡ ಮಾಡದೆ ಅದನ್ನು ಸರಿಪಡಿಸಬೇಕು. ಒಂದು ವೇಳೆ, ಸೋರುವ ನಳ್ಳಿಯ ದುರಸ್ತಿಯನ್ನು ವಾರಾಂತ್ಯದ ತನಕ ತಳ್ಳಿದರೆ, ಅದು ಅಷ್ಟರೊಳಗೆ 500 ಲೀಟರ್‌ಗೂ ಹೆಚ್ಚು ನೀರನ್ನು ವ್ಯರ್ಥಗೊಳಿಸುತ್ತದೆ.
ಒಟ್ಟಾರೆಯಾಗಿ, ಅತ್ಯಂತ ಅವಶ್ಯಕವಾದ ನೈಸರ್ಗಿಕ ಸಂಪನ್ಮೂಲವಾದ ನೀರನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಇದೆ. ಇದಕ್ಕಾಗಿ ನಾವು ನಮ್ಮ ಪ್ರಯತ್ನಗಳನ್ನು ನಡೆಸುತ್ತಿರುವಂತೆ, ಇತರರೂ ನಮಗಾಗಿ ನೀರು ಉಳಿಸುವ ಪ್ರಯತ್ನಗಳಲ್ಲಿ ನಿರತರಾಗಿರುತ್ತಾರೆ.
*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.