ಸೈನಿಕ-ರೈತರನ್ನು ಎಂದಿಗೂ ಮರೆಯದಿರಿ: ರಂಭಾಪುರಿಶ್ರೀ
Team Udayavani, Mar 22, 2024, 2:45 PM IST
ಉದಯವಾಣಿ ಸಮಾಚಾರ
ಬಾಳೆಹೊನ್ನೂರು: ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ಶ್ರಮವಿಲ್ಲದೇ ಬಂದ ಸಂಪತ್ತು ಬಹಳ ಕಾಲ ಉಳಿಯದು. ದೇಶವನ್ನು ಕಾಯುವ ಸೈನಿಕ ಮತ್ತು ಅನ್ನ ಕೊಡುವ ರೈತನನ್ನು ಎಂದಿಗೂ ಮರೆಯಬಾರದು ಎಂದು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಅಂಗವಾಗಿ ನಡೆದ ಸಾವಯವ ಕೃಷಿ ಒಂದು ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗಲು ಸಾಧ್ಯ. ಇಲ್ಲಿ ಶೇ.70 ರಷ್ಟು ಜನ ರೈತರಿದ್ದಾರೆ. ಮನುಷ್ಯನ ಉಜ್ವಲ ಭವಿಷ್ಯಕ್ಕೆ ಆಹಾರ, ಆರೋಗ್ಯ ಮತ್ತು ಆಧ್ಯಾತ್ಮ ಬಹಳ ಮುಖ್ಯ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಭೂಮಿಗಳು ಬರಡಾಗುತ್ತಿವೆ.
ರಾಸಾಯನಿಕ ಗೊಬ್ಬರದಿಂದ ಬೆಳೆದ ಪದಾರ್ಥಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಸತ್ವಭರಿತ, ಸಾವಯವ ಕೃಷಿಯಿಂದ ಬಂದ ಫಸಲುಗಳ ಬೆಳಕೆಯಿಂದ ಮನುಷ್ಯನ ಆರೋಗ್ಯ ಹೆಚ್ಚುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಔದ್ಯೋಗಿಕ ಕ್ಷೇತ್ರಕ್ಕೆ ಕೊಡುವ ಸಹಕಾರವನ್ನು ಸಾವಯವ ಕೃಷಿ ಮಾಡುವ ರೈತನಿಗೆ ಸರ್ಕಾರಗಳು ಕೊಟ್ಟರೆ ಅದ್ಭುತ ಸಾಧನೆ ಮಾಡಲು ಸಾಧ್ಯ ಎಂದರು.
ಸಮಾರಂಭ ಉದ್ಘಾಟಿಸಿದ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜ್ ಮಾತನಾಡಿ, ರೈತರ ಸಂಕಷ್ಟಗಳು ಬಹಳಷ್ಟಿವೆ. ಶ್ರಮದಿಂದ ದುಡಿಯುವ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಸಕಾಲಕ್ಕೆ ಮಳೆಯಿಲ್ಲದೇ ಉತ್ತಮ ಬೆಳೆಯಿಲ್ಲದೇ ಇರುವುದು ಹಾಗೂ ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಸಿಗದಂತಾಗಿ ರೈತ ಸಾಲದಲ್ಲಿ ಸಿಲುಕಿ ನಲುಗುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಗಮನ ಹರಿಸಿ ರೈತರಿಗೆ ಹೆಚ್ಚೆಚ್ಚು ಅನುಕೂಲ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಪಶುಸಂಗೋಪನೆಯಿಂದ ಬಹಳಷ್ಟು ಪ್ರಯೋಜನವಿದೆ. ಕೊಟ್ಟಿಗೆ ಗೊಬ್ಬರ ಬಳಸುವುದರಿಂದ ಭೂಮಿಯ ಸತ್ವ ಸಮೃದ್ಧಿಗೊಂಡು ಉತ್ತಮ ಬೆಳೆ ಬರಲು ಸಾಧ್ಯ. ಕೃಷಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಪರ ಯೋಜನೆಗಳಿವೆ.
ಅವುಗಳ ಪ್ರಯೋಜನ ಪಡೆಯಬೇಕು ಎಂದರು. ಕೃಷಿ ತಜ್ಞ ಚಂದ್ರಶೇಖರ ನಾರಾಯಣಪುರ ಮಾತನಾಡಿ, ನೈಸರ್ಗಿಕ ಕೃಷಿ ಮಾಡುವ ರೈತ ಎದೆಗುಂದಬಾರದು. ಅಲ್ಪ ಭೂಮಿಯಲ್ಲಿ ಒಳ್ಳೆ ಫಸಲು ಬೆಳೆಯಲು ಸಾಧ್ಯ ಎಂಬುದನ್ನು ಸ್ವತಃ ನಾನು ಕೃಷಿ ಮಾಡಿ ಯಶಸ್ವಿಯಾಗಿದ್ದೇನೆ. ರೈತ ಸಮುದಾಯ ಜಾಗೃತಗೊಂಡು ನೈಸರ್ಗಿಕ ಕೃಷಿ ಹೆಚ್ಚು ಬೆಳೆಸಲು ಮುಂದಾಗಬೇಕು ಎಂದರು.
ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ನುಡಿದರು. ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ
ಸ್ವಾಮಿಗಳು ಉಪಸ್ಥಿತರಿದ್ದರು.
ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಚಿಕ್ಕಮಗಳೂರು, ಕೂಡ್ಲಿಗೆರೆ ಎಸ್. ಹಾಲೇಶ, ಉಷಾ ಮತ್ತು ಚಂದ್ರಶೇಖರ ನಿಟ್ಟೂರು, ರೇಣುಕಾ ಮತ್ತು ಪ್ರಸನ್ನಕುಮಾರ್, ತವಡೆಹಳ್ಳಿ, ದಿವ್ಯಶ್ರೀ ಮತ್ತು ಶಂಕರ ಮೋಹನ್ ಶಂಕರನಹಳ್ಳಿ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಸುಳ್ಳ, ಮಳಲಿ, ಬಿಳಕಿ, ಚನ್ನಗಿರಿ, ಸಿಂದಗಿ, ಹರಪನಹಳ್ಳಿ, ಹಂಪಸಾಗರ, ಹಿರೆಮಲ್ಲನಕೆರಿ, ಮೈನಹಳ್ಳಿ, ಅಮ್ಮಿನಬಾವಿ, ಅಟ್ನೂರು, ಸಿದ್ಧರಬೆಟ್ಟ, ಹಾರನಹಳ್ಳಿ, ಮಾವಿನಹಳ್ಳಿ ಶ್ರೀಗಳು ಇದ್ದರು. ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ಸದಸ್ಯ ಬಿ.ಎ. ಶಿವಶಂಕರ ಸ್ವಾಗತಿಸಿದರು. ತಾವರೆಕೆರೆ ಡಾ| ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.
ಅಡ್ಡಪಲ್ಕಕ್ಕಿ ಮಹೋತ್ಸವ: ಸಮಾರಂಭಕ್ಕೂ ಮುನ್ನ ಶ್ರೀ ಸೋಮೇಶ್ವರ ದೇವಸ್ಥಾನದಿಂದ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದವರೆಗೆ ರಂಭಾಪುರಿ ಜಗದ್ಗುರುಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಸಂಜೆ ಶ್ರೀ ವೀರಭದ್ರಸ್ವಾಮಿ
ಚಿಕ್ಕರಥೋತ್ಸವ ಜರುಗಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.