ಕುಕ್ಕುಟೋದ್ಯಮಕ್ಕೆ ಹೊಡೆತ ನೀಡಿದ ಬಿರು ಬಿಸಿಲು: ಶೆಡ್‌ಗಳಲ್ಲೇ ಸಾಯುತ್ತಿವೆ ಕೋಳಿಗಳು
ಸಾಕಣೆದಾರರಿಗೆ ಸಂಕಷ್ಟ
Team Udayavani, Apr 3, 2024, 6:55 AM IST
ಬಂಟ್ವಾಳ: ದಿನೇದಿನೆ ಏರುತ್ತಿರುವ ಬಿಸಿಲ ಕಾವು ಕುಕ್ಕುಟೋದ್ಯಮದ ಮೇಲೆ ದೊಡ್ಡ ಹೊಡೆತ ನೀಡುತ್ತಿದೆ. ಪ್ರತಿನಿತ್ಯ ಶೆಡ್‌ಗಳಲ್ಲಿ ನೂರಾರು ಕೋಳಿಗಳು ಸಾಯುತ್ತಿರುವ ಪರಿಣಾಮ ಸಾಕಣೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕೋಳಿಯ ಧಾರಣೆಯೂ ಏರಿಕೆಯಾಗುವ ಆತಂಕ ಎದುರಾಗಿದೆ.
ಬಿಸಿಲ ಝಳದ ನಡುವೆ ಕೋಳಿಗಳನ್ನು ಉಳಿಸಿಕೊಳ್ಳಲು ಸಾಕಣೆದಾರರು ವಿವಿಧ ರೀತಿಯ ಸರ್ಕಸ್ ಮಾಡುತ್ತಿದ್ದರೂ ಎಲ್ಲ ಉಪಾಯಗಳೂ ವಿಫಲವಾಗಿ ಸತ್ತ ಕೋಳಿಗಳನ್ನು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಸಮಯದಲ್ಲಿ ಕೋಳಿಗಳ ಗಾತ್ರ ಹೆಚ್ಚಾದಂತೆ ಅವುಗಳ ಒತ್ತಡ ಹೆಚ್ಚಾಗಿ ಸಾಯುತ್ತವೆ. ಆದ್ದರಿಂದ ತೂಕ ನಿಯಂತ್ರಣದ ಕುರಿತು ಕೂಡ ಗಮನಹರಿಸಬೇಕಿದೆ.
ಬೇಸಗೆಗೆ ಸಾಕಷ್ಟು
ಶೆಡ್‌ಗಳು ಖಾಲಿ
ದ.ಕ., ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ ಕರಾವಳಿ ಭಾಗದಲ್ಲಿ ಸುಮಾರು 1,500 ಸಾಕಣೆದಾರರು 20ರಿಂದ 25 ಲಕ್ಷದಷ್ಟು ಕೋಳಿಗಳನ್ನು ಸಾಕುತ್ತಿದ್ದಾರೆ. ಆದರೆ ಈಗ ಅದರಲ್ಲಿ ಬಹುತೇಕ ಕೋಳಿಗಳು ಸತ್ತೇ ಹೋಗುತ್ತಿವೆ. ಇನ್ನು ಕೆಲವರು ಹಿಂದಿನ ವರ್ಷಗಳ ಅನುಭವದ ಆಧಾರದಲ್ಲಿ ಬೇಸಗೆಯಲ್ಲಿ ಕೋಳಿ ಸಾಕುವುದನ್ನೇ ಬಿಟ್ಟಿದ್ದಾರೆ. ಆದ್ದರಿಂದ ಬೇಸಗೆ ಅವಧಿಯಲ್ಲಿ ಒಂದು ಬ್ಯಾಚ್ ಬಹುತೇಕ ಶೆಡ್‌ಗಳು ಖಾಲಿಯಾಗಿಯೇ ಇರುತ್ತವೆ. ಈ ಸಮಯದಲ್ಲಿ ಕೋಳಿ ಮರಿಗಳ ಧಾರಣೆ ಕೂಡ ಹೆಚ್ಚಿರುವುದರಿಂದ ಇನ್ನು ಮಳೆ ಬಿದ್ದ ಬಳಿಕವೇ ಸಾಕಣೆ ಆರಂಭಿಸುತ್ತಾರೆ. ಇದು ಕೋಳಿ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಜತೆಗೆ ಧಾರಣೆಯ ಏರಿಕೆಗೂ ಕಾರಣವಾಗುತ್ತದೆ.
ಫ್ಯಾನ್‌ನಿಂದ ಬದುಕುವ ಸಾಧ್ಯತೆ
ಕರಾವಳಿ ಭಾಗದಲ್ಲಿ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಟಿದರೆ ಕೋಳಿಗಳು ಬದುಕುವ ಸಾಧ್ಯತೆಯೇ ಕಡಿಮೆ ಇದ್ದು, ಬಯಲು ಸೀಮೆಗಳಲ್ಲಿ ನೀರು ಚಿಮ್ಮಿಸುವ ಅವಕಾಶವಿದ್ದರೆ 40 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿದರೂ ಕೋಳಿಗಳು ಬದುಕುತ್ತವೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಈ ಭಾಗದಲ್ಲಿ ನೀರು ಚಿಮ್ಮಿಸಿದರೂ ಕೋಳಿಗಳಿಗೆ ಉಪಯೋಗವಾಗುವುದಿಲ್ಲ. ಅದರ ಬದಲು ಫ್ಯಾನ್‌ನ ಗಾಳಿ ಹಾಯಿಸಿದರೆ ಬದುಕುವ ಸಾಧ್ಯತೆ ಇರುತ್ತದೆ. ಆದರೆ ಬೇಸಗೆಯಲ್ಲಿ ಪದೇಪದೆ ವಿದ್ಯುತ್ ಕೈಕೊಡುವುದರಿಂದ ನಿರಂತರವಾಗಿ ಫ್ಯಾನ್ ಉಪಯೋಗಿವುದು ಕೂಡ ಅಸಾಧ್ಯ. ಆದರೆ ದೊಡ್ಡ ಶೆಡ್‌ಗಳನ್ನು ಹೊಂದಿರುವವರು ಸೋಲಾರ್ ಫ್ಯಾನ್ ಉಪಯೋಗಿಸಿಕೊಂಡು ಕೋಳಿ ಸಾಕಣೆ ನಡೆಸುತ್ತಿದ್ದಾರೆ.
ತೀವ್ರ ಬಿಸಿಲಿನ ಕಾರಣ ಕೋಳಿಗಳ ಮರಣ ಪ್ರಮಾಣ ಹೆಚ್ಚಿದ್ದು, ಕರಾವಳಿಯಲ್ಲಿ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಟಿದರೆ ಅವುಗಳ ಒತ್ತಡ ಹೆಚ್ಚಾಗಿ ಸಾಯುತ್ತವೆ. ಫ್ಯಾನ್ ಗಾಳಿಯಿಂದ ಕೆಲವೊಂದೆಡೆ ಕೋಳಿಗಳನ್ನು ಬದುಕಿಸುವ ಪ್ರಯತ್ನಗಳು ನಡೆಯುತ್ತಿದೆ.
– ಡಾ| ವಸಂತ ಕುಮಾರ್ ಶೆಟ್ಟಿ,
ಪ್ರಾದೇಶಿಕ ಸಂಶೋಧನಾಧಿಕಾರಿ ಪಶುರೋಗ ತಪಾಸಣಾ ಕೇಂದ್ರ, ಮಂಗಳೂರು
ಕೆಲವು ದಿನಗಳಿಂದ ನಿರಂತರ ಕೋಳಿಗಳು ಸಾಯುತ್ತಿದ್ದು, ಸಾಯುವ ಪ್ರಮಾಣ 30-40ರಿಂದ ಪ್ರಸ್ತುತ 100 ದಾಟಿದೆ. ಇದು ನಮ್ಮಂತಹ ಸಣ್ಣ ಪ್ರಮಾಣದ ಶೆಡ್ ಹೊಂದಿರುವವರಿಗೆ ಬಲುದೊಡ್ಡ ನಷ್ಟವೆನಿಸುತ್ತದೆ. ಯಾವ ಪ್ರಯತ್ನ ಮಾಡಿದರೂ ಕೋಳಿಗಳನ್ನು ಬದುಕಿಸಲು ಸಾಧ್ಯವಾಗುತ್ತಿಲ್ಲ.
- ಚೇತನ್ ಅಮೀನ್ ಬಜ, ಕೋಳಿ ಸಾಕಣೆದಾರ
-ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.