Bengaluru: ವೈದ್ಯಕೀಯ ವಿದ್ಯಾರ್ಥಿಗಳಿಗೇ ಕಾಲರಾ!
ಬಿಎಂಸಿಆರ್‌ಐ ಮಹಿಳಾ ಹಾಸ್ಟೆಲ್‌ನ 47 ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು
Team Udayavani, Apr 7, 2024, 12:03 AM IST
ಬೆಂಗಳೂರು: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆಯ (ಬಿಎಂಸಿಆರ್‌ಐ) ಮಹಿಳಾ ಹಾಸ್ಟೆಲ್‌ನ 47 ವಿದ್ಯಾರ್ಥಿನಿಯರು ಅತಿಸಾರ ಹಾಗೂ ನಿರ್ಜಲೀಕರಣದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ ಇಬ್ಬರಿಗೆ ಕಾಲರಾ ದೃಢಪಟ್ಟಿದೆ. ಮತ್ತೋರ್ವ ವಿದ್ಯಾರ್ಥಿನಿಗೆ ಹ್ಯಾಂಗಿಗ್ ಮಾದರಿಯ ಪರೀಕ್ಷೆಯಲ್ಲಿ ಕಾಲರಾ ಪಾಸಿಟಿವ್ ಬಂದಿದ್ದು, ಕಲ್ಚರಲ್ ಟೆಸ್ಟ್ ವರದಿ ಬಂದ ಬಳಿಕ ದೃಢಪಡಲಿದೆ.
ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಟ್ರಾಮಾ ಆ್ಯಂಡ್ ಎಮರ್ಜೆನ್ಸಿ ಕೇರ್ ಸೆಂಟರ್) ಕಾಲರಾ ದೃಢಪಟ್ಟ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹ್ಯಾಂಗಿಗ್ ಡ್ರಾಪ್ ಮಾದರಿಯ ಪರೀಕ್ಷೆಯಲ್ಲಿ ಮತ್ತೋರ್ವ ವಿದ್ಯಾರ್ಥಿನಿಗೂ ಕಾಲರಾ ಪಾಸಿಟಿವ್ ಬಂದಿದ್ದು, ಆಕೆಗೂ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಐಸಿಯು (ಎಂಬಿಪಿ)ನಲ್ಲಿ 1, ಟ್ರಾಮಾ ಆ್ಯಂಡ್ ಎಮರ್ಜೆನ್ಸಿ ಕೇರ್ ಸೆಂಟರ್‌ನಲ್ಲಿ 9, ಎಚ್ ಬ್ಲಾಕ್‌ನಲ್ಲಿ 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಬಿಡುಗಡೆ ಹೊಂದಿದ್ದಾರೆ. ಸದ್ಯ 41 ಮಂದಿ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಕಾಲರಾ ಇರುವ ಮೂವರ ಸ್ಥಿತಿ ಗಂಭೀರವಾಗಿದೆ. 21 ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಸ್ಥಿತಿಗತಿ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ. ಅಡುಗೆಮನೆಯನ್ನು ಮುಚ್ಚಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿಕ್ಟೋರಿಯಾ ಆಸ್ಪತ್ರೆಯ ಕಿಚನ್‌ನಿಂದ ಊಟ, ನೀರು ಪೂರೈಸಲಾಗುತ್ತಿದೆ.
ವಾರ್ಡನ್ ಅಮಾನತು
ಪ್ರಕರಣಗಳಿಗೆ ಸಂಬಂಧಿಸಿ ಬಿಬಿಎಂಪಿಗೆ ಮಾಹಿತಿ ನೀಡಲಾಗಿದೆ. ಹಾಸ್ಟೆಲ್‌ನಲ್ಲಿ ಯಾವುದೇ ಸಮಸ್ಯೆಗಳ ಬಗ್ಗೆ ವಾರ್ಡನ್ ಅಥವಾ ವಿದ್ಯಾರ್ಥಿನಿಯರು ತಮ್ಮ ಗಮನಕ್ಕೆ ತಂದಿಲ್ಲ ಎಂದು ಬೆಂಗಳೂರು ಮೆಡಿಕಲ್ ಕಾಲೇಜಿನ ಡೀನ್ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತಂದಿದ್ದಾರೆ. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಲೇಡಿಸ್ ಹಾಸ್ಟೆಲ್ ವಾರ್ಡನ್ ಡಾ| ಅಖೀಲಾಂಡೇಶ್ವರಿ ಅವರನ್ನು ಅಮಾನತುಗೊಳಿಸಲಾಗಿದೆ. ಇನ್ನು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಬೆನ್ನಲ್ಲೇ ಬೆಂಗಳೂರು ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯು ಹಾಸ್ಟೆಲ್‌ನ ಕುಡಿಯುವ ನೀರನ್ನು ಪರಿಶೀಲಿಸಲು ಸೂಚಿಸಿದೆ ಎಂದು ತಿಳಿದು ಬಂದಿದೆ.
ಅಡುಗೆ ಮನೆ ಸೀಲ್‌ಡೌನ್
ಬೆಂಗಳೂರು ವೈದ್ಯಕೀಯ ಕಾಲೇಜು ಡೀನ್ ಡಾ| ರಮೇಶ್ ಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ಹಾಸ್ಟೆಲ್ ವ್ಯವಸ್ಥೆ ಚೆನ್ನಾಗಿದ್ದು, ನಾನು ಕೂಡ ಹಾಸ್ಟೆಲ್‌ಗೆ ಹೋಗಿ ಪರಿಶೀಲಿಸಿದ್ದೇನೆ. ಹಾಸ್ಟೆಲ್‌ನಲ್ಲಿ ಉಳಿದವರಿಗೆ ಯಾವುದೇ ಗುಣಲಕ್ಷಣಗಳು ಇಲ್ಲ. ಹಾಸ್ಟೆಲ್ ಅಡುಗೆ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಸುಮಾರು 800 ವಿದ್ಯಾರ್ಥಿಗಳಿದ್ದಾರೆ. ಒಟ್ಟು 2 ಹಾಸ್ಟೆಲ್ ಇದೆ. ನೀರಿನಿಂದ ಸಮಸ್ಯೆ ಉಂಟಾಗಿದ್ದರೆ ಎಲ್ಲ ವಿದ್ಯಾರ್ಥಿಗಳಿಗೂ ಸೋಂಕು ತಗುಲಬೇಕಿತ್ತು. ಆದರೆ ಕೇವಲ 47 ವಿದ್ಯಾರ್ಥಿಗಳು ಮಾತ್ರ ಅಸ್ವಸ್ಥಗೊಂಡಿದ್ದಾರೆ. ಆಹಾರದಿಂದ ಸಮಸ್ಯೆ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.