Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Team Udayavani, Apr 12, 2024, 2:13 PM IST
ನಟ ಶಿವರಾಜ್‌ಕುಮಾರ್ ನಾಯಕನಾಗಿ ಅಭಿನಯಿಸಿದ್ದ “ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿ “ಭೈರತಿ ರಣಗಲ್’ ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರುತ್ತಿರುವುದು ನಿಮಗೆ ಗೊತ್ತಿರಬಹುದು. “ಮಫ್ತಿ’ ಸಿನಿಮಾ ನಿರ್ದೇಶಿಸಿದ್ದ ನರ್ತನ್ ಅವರೇ “ಭೈರತಿ ರಣಗಲ್’ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಕಳೆದ ವರ್ಷ ಮಧ್ಯ ಭಾಗದಲ್ಲಿ ಸಿನಿಮಾದ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ಸಿಕ್ಕಿತ್ತು.
ಈಗಾಗಲೇ ಸದ್ದಿಲ್ಲದೆ “ಭೈರತಿ ರಣಗಲ್’ ಸಿನಿಮಾದ ಬಹುತೇಕ ಚಿತ್ರೀಕರಣದ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಯುಗಾದಿ ಹಬ್ಬದ ಪ್ರಯುಕ್ತ ಹೊಸ ಲುಕ್ ವೊಂದನ್ನು ಬಿಡುಗಡೆ ಮಾಡಿದೆ. ಇದು ಸಿನಿಮಾದ ಬಗೆಗಿನ ಕುತೂಹಲ ಹೆಚ್ಚಿಸಿದೆ.
ಇಷ್ಟು ದಿನ ಚಿತ್ರತಂಡ ಬಿಟ್ಟ ಪೋಸ್ಟರ್‌ನಲ್ಲಿ ಶಿವಣ್ಣ, ಸಖತ್ ರಗಡ್ ಆಗಿ, ಆ್ಯಕ್ಷನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈಗ ಬಿಟ್ಟಿರುವ ಲುಕ್ ಮತ್ತಷ್ಟು ವಿಭಿನ್ನವಾಗಿದೆ. ಶಿವಣ್ಣ ಲಾಯರ್ ಗೆಟಪ್‌ನಲ್ಲಿರುವ ಪೋಸ್ಟರ್ ಬಿಡುಗಡೆ ಮಾಡಿದೆ. ಕರಿಕೋಟು ಹಾಕಿ, ಕೈಯಲ್ಲಿ ಬಿಳಿ ಹಾಳೆ ಹಿಡಿದು ಕೋರ್ಟ್‌ನಲ್ಲಿ ವಕಾಲತ್ತು ಮಾಡುವಂತಹ ಪೋಸ್ಟರ್ ಇದಾಗಿದ್ದು, ಸಿನಿಮಾದಲ್ಲೊಂದು ಹೊಸ ಟ್ವಿಸ್ಟ್ ಸಿಗುವುದು ಗ್ಯಾರಂಟಿ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.
ಇನ್ನು “ಮಫ್ತಿ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಭೈರತಿ ರಣಗಲ್ ಎಂಬ ಪಾತ್ರ ಮಾಡಿದ್ದರು. ಈಗ ಅದೇ ಹೆಸರನ್ನು ಸಿನಿಮಾದ ಟೈಟಲ್‌ನ್ನಾಗಿ ಮಾಡಲಾಗಿದೆ. “ಭೈರತಿ ರಣಗಲ್’ ಸಿನಿಮಾವನ್ನು “ಗೀತಾ ಪಿಕ್ಚರ್’ನಡಿ ಗೀತಾ ಶಿವರಾಜ್‌ಕುಮಾರ್ ನಿರ್ಮಿಸುತ್ತಿದ್ದಾರೆ.
ಸಿನಿಮಾದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದು, ನವೀನ್ ಛಾಯಾಗ್ರಹಣವಿದೆ. “ಮಫ್ತಿ’ ಸಿನಿಮಾದ ಬಗ್ಗೆ ಮಾತನಾಡುವ ನಟ ಶಿವರಾಜಕುಮಾರ್, “”ಮಫ್ತಿ’ ಸಿನಿಮಾದ ಭೈರತಿ ರಣಗಲ್ ನನಗೆ ಇಷ್ಟವಾದ ಪಾತ್ರ. ಈ ಸಿನಿಮಾವನ್ನು ನಮ್ಮ ಸಂಸ್ಥೆಯಿಂದ ನಿರ್ಮಾಣ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. “ಮಫ್ತಿ’ ಸಿನಿಮಾ ಬಂದು ಸುಮಾರು ಆರೇಳು ವರ್ಷಗಳಾದರೂ, ಈಗಲೂ ನಾನು ಹಾಗೆ ಇದ್ದೀನಿ. ಹಾಗಾಗಿ ಈ ಪಾತ್ರ ಮಾಡಲು ಅನುಕೂಲವಾಗುತ್ತದೆ. ಪ್ರೀಕ್ವೆಲ್ ಆಗಿರುವುದರಿಂದ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ನರ್ತನ್ ತುಂಬ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ.