ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!
Team Udayavani, Apr 14, 2024, 10:58 AM IST
ಹಿರಿಯರೊಬ್ಬರು ಮುಖದ ತುಂಬ ನೋವು ಹೊತ್ತುಕೊಂಡು ಹೇಳುತ್ತಿದ್ದರು: “ಈ ರಿಸಲ್ಟಾಗಳು ಯಾಕಾದರೂ ಬರುತ್ತವೋ… ರಿಸಲ್ಟಿನ ಮರುದಿನ ಪತ್ರಿಕೆ ನೋಡಲು ಭಯ… ಯಾವ ಹುಡುಗರು ಏನು ಅನಾಹುತ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಓದುವ ಆತಂಕ…’ ಇದು ಅವರದೊಬ್ಬರದೇ ಭಯ ಅಲ್ಲ. ಪ್ರತಿವರ್ಷ ನೂರಾರು ಮಂದಿಯ ಎದೆಯಲ್ಲಿ ಹುಟ್ಟಿಕೊಳ್ಳುವ ನಡುಕ. ಫಲಿತಾಂಶದ ಮರುದಿನ ಏನು, ಪರೀಕ್ಷೆಯ ಮರುದಿನದಿಂದಲೇ ಇದು ಆರಂಭವಾಗುತ್ತದೆ. ಪರೀಕ್ಷೆ ಚೆನ್ನಾಗಿ ಮಾಡಿಲ್ಲ ಎಂದು ನೇಣಿಗೆ ತಲೆಯೊಡ್ಡುವ ಮಕ್ಕಳು, ಮರುದಿನ ಬರುವ ರಿಸಲ್ಟಿಗೆ ಹೆದರಿಯೇ ರೈಲುಹಳಿಗೆ ಬಲಿಯಾಗುವ ಮಕ್ಕಳು… ಇವರಿಗೆ ಫಲಿತಾಂಶದವರೆಗೆ ಕಾಯುವ ತಾಳ್ಮೆಯೇ ಇಲ್ಲ. ಫಲಿತಾಂಶವನ್ನು ಊಹಿಸಿಕೊಂಡೇ ಬದುಕಿಗೆ ಗುಡ್‌ಬೈ ಹೇಳಿಬಿಡುವ ಮಕ್ಕಳಿವರು.
ಜೀವನಕ್ಕಿಂತ ಪರೀಕ್ಷೆಯೇ ದೊಡ್ಡದು ಎಂದು ಭಾವಿಸಿರುವ ಮಕ್ಕಳ ಕತೆಯಿದು. ವಾಸ್ತವವಾಗಿ ಇದು ಮಕ್ಕಳ ಸಮಸ್ಯೆ ಅಲ್ಲ, ಅವರ ಹೆತ್ತವರದು, ಹತ್ತಿರದ ಬಂಧುಗಳದು ಮತ್ತು ಸುತ್ತಲಿನ ಸಮಾಜದ್ದು. ಇವರೆಲ್ಲ ಸೇರಿ ನಿರ್ಮಿಸಿರುವ ದೊಡ್ಡದೊಂದು ವ್ಯೂಹವಿದು- ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಗಳೆಂಬ ಭೂತ-ಭವಿಷ್ಯದ ದೃಷ್ಟಿಯಿಂದ ಇವೆರಡೂ ಹಂತಗಳು ಪ್ರಮುಖ ಎಂಬುದೇನೋ ನಿಜ. ಮುಂದೇನು ಓದಬೇಕು ಎಂಬ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ದೃಷ್ಟಿಯಿಂದ ಇವು ಪ್ರಮುಖವೇ ಹೊರತು ಇಲ್ಲಿ ಒಂದೆರಡು ಪರ್ಸೆಂಟೇಜು ಕಡಿಮೆಯಾದರೆ ಬದುಕೇ ಮುಗಿಯಿತು ಎಂದು ಭಾವಿಸಬೇಕಾಗಿಲ್ಲ.
ಆದರೆ ನಮ್ಮ ಸಮಾಜ ಈ ಎರಡು ಪರೀಕ್ಷೆಗಳನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದೆ ಅಥವಾ ಮಾಡಿಕೊಳ್ಳುವಂತೆ ನೋಡಿಕೊಳ್ಳಲಾಗಿದೆ. ಮೂಲತಃ ಇದರ ಹಿಂದೆ ಇರುವುದು ಹಣದ ಬೆನ್ನುಹತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಷಡ್ಯಂತ್ರವೇ ಹೊರತು ಇನ್ನೇನೂ ಅಲ್ಲ. ಇಂಜಿನಿಯರಿಂಗ್-ಮೆಡಿಕಲ್‌ಗಳಂಥ ಒಂದೆರಡು ವೃತ್ತಿಗಳನ್ನೇ ಭೂಮಿಯ ಮೇಲಿನ ಮಹೋನ್ನತ ಉದ್ಯೋಗಗಳೆಂದು ಬಿಂಬಿಸಿರುವುದರ ಹಿಂದೆಯೂ ಇದೇ ಷಡ್ಯಂತ್ರ ಇದೆ. ಈ ಎರಡು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯುವುದೂ ಭಾರೀ ದೊಡ್ಡ ಸ್ಪರ್ಧೆಯೆಂಬ ಭ್ರಮೆಯನ್ನು ಕೂಡ ಬಹು ವ್ಯವಸ್ಥಿತವಾಗಿ ರೂಪಿಸಲಾಗಿದೆ.
ಅಂಕ ತೆಗೆಯುವ ಯಂತ್ರಗಳು
“ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸುಗಳಿಗೆ ಸೇರಬೇಕೆಂದರೆ ಒಳ್ಳೆಯ ಕಡೆ ಪಿಯುಸಿ ಮಾಡಬೇಕು. ಅಲ್ಲಿ ಉತ್ಕೃಷ್ಟ ಮಟ್ಟದ ಸಿಇಟಿ-ಜೆಇಇ-ನೀಟ್ ಕೋಚಿಂಗ್ ಸಿಗಬೇಕು. ಅಂತಹ ಕಾಲೇಜು ಸಿಗಬೇಕೆಂದರೆ ಎಸ್ಸೆಸ್ಸೆಲ್ಸಿಯಲ್ಲಿ ಒಂದೊಂದು ಅಂಕವೂ ಮುಖ್ಯ’ – ಇದು ಬಹುಪಾಲು ತಂದೆತಾಯಂದಿರ ನಂಬಿಕೆ. ಇದನ್ನೇ ಮಕ್ಕಳ ತಲೆಗೂ ತುಂಬಲಾಗುತ್ತದೆ. ಬೆಳಗೆಂದರೇನು, ಸಂಜೆಯೆಂದರೇನು, ಮಳೆಯೆಂದರೇನು, ಬಿಸಿಲೆಂದರೇನು ಎಂದು ತಿಳಿಯದ ಮಕ್ಕಳು. ಬೆಳಕಾಗುವ ಮುನ್ನವೇ ಬಾಗಿಲು ತೆರೆಯುವ ಕೋಚಿಂಗ್ ಸಂಸ್ಥೆಗಳು, ಮಧ್ಯರಾತ್ರಿ ಕಳೆದರೂ ಮಲಗಲು ಬಿಡದ ಹಾಸ್ಟೆಲುಗಳು. ಓದಲೇಬೇಕು, ಕೋಚಿಂಗ್ ಪಡೆಯಲೇಬೇಕು, ಓದಿದ್ದನ್ನೇ ಓದಬೇಕು, ಉರು ಹೊಡೆಯಲೇಬೇಕು, ಮತ್ತಮತ್ತೆ ಪರೀಕ್ಷೆ ಬರೆಯಬೇಕು, ಪರ್ಸೆಂಟೇಜು ಹೆಚ್ಚಾಗಬೇಕು… ಈ ನಿರೀಕ್ಷೆಗಳ ಭಾರದಲ್ಲಿ ಮಕ್ಕಳ ಮನಸ್ಸಿನ ಪಾಡು ಯಾರಿಗೂ ಬೇಕಾಗಿಲ್ಲ. ಮನಸ್ಸು-ಬುದ್ಧಿಗಳು ಉÇÉಾಸದಿಂದ ವಿಕಸಿತಗೊಳ್ಳಬೇಕಾದ ಬಂಗಾರದ ಕಾಲವದು. ಮನುಷ್ಯನ ಒಟ್ಟಾರೆ ವ್ಯಕ್ತಿತ್ವ ನಿರ್ಮಾಣವಾಗುವುದೇ ಈ ಹದಿಹರೆಯದ ಪರ್ವಕಾಲದಲ್ಲಿ. ಆದರೆ ಈಗ ಅಲ್ಲಿ ನಡೆಯುವುದು ಅಂಕ ಮೊಗೆಯುವ ಯಂತ್ರಗಳನ್ನು ತಯಾರು ಮಾಡುವ ಪ್ರಕ್ರಿಯೆ ಮಾತ್ರ. ಬುದ್ಧಿಭಾವಗಳು ಬಲಿಯಬೇಕಾದ ಕಾಲದಲ್ಲಿ ಇದೇನು ಮಾಡುತ್ತಿದ್ದೇವೆ ಎಂಬ ವಿವೇಕ ಯಾರಿಗೂ ಬೇಕಾಗಿಲ್ಲ. ಯಾವುದೋ ವೇಗೋತ್ಕರ್ಷದ ಬಲದಲ್ಲಿ ಆಸಕ್ತಿಯಿರುವ, ಇಲ್ಲದಿರುವ ಎಲ್ಲ ಮಕ್ಕಳು ಮುಂದಮುಂದಕ್ಕೆ ತೇಲಿಕೊಂಡೇನೋ ಹೋಗುತ್ತವೆ. ಅವರ ನಿಜವಾದ ಭವಿಷ್ಯ ಏನು? ಮುಂದೆ ತಾವು ಜೀವನ ನಡೆಸಬೇಕಾದವರೊಂದಿಗೆ, ಸುತ್ತಲಿನ ಸಮಾಜದೊಂದಿಗೆ ಹೊಂದಿಕೊಂಡು ಸಂತೋಷವಾಗಿ ಬದುಕಬಲ್ಲರೇ ಇವರು?
ಸಂಭ್ರಮದ ಬದುಕಿಗೆ ಸಾವಿರ ದಾರಿ!
ಸಂತೋಷ ಎಂದರೇನು? ಮುಂದೆ ದೊರೆಯಲಿರುವ ಉದ್ಯೋಗ, ಅದರಿಂದ ಸಂಪಾದನೆಯಾಗುವ ಹಣ ಮತ್ತು ಆ ಮೂಲಕ ದೊರೆಯುವ ಸಾಮಾಜಿಕ ಪ್ರತಿಷ್ಠೆ. ಸಮಾಜದ ಕಣ್ಣಿನಲ್ಲಿ ಇದೇ ಸಂತೋಷ. ಇದುವೇ ವೃತ್ತಿಪರ ಕೋರ್ಸುಗಳಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಧಾವಂತದಲ್ಲಿ ದೆಸೆಗೆಟ್ಟು ಓಡುತ್ತಿರುವ ಒಟ್ಟಾರೆ ಸಮಾಜದ ಪರಮ ಉದ್ದೇಶ. ಇದರ ಹಿಂದಿರುವುದು ಶಿಕ್ಷಣ ಸಂಸ್ಥೆಗಳನ್ನು ಹಣದ ಮಳೆಗರೆಯುವ ಕಲ್ಪವೃಕ್ಷ-ಕಾಮಧೇನುಗಳನ್ನಾಗಿ ಮಾಡಿಕೊಂಡಿರುವ ಮಂದಿಯ ಸ್ವಾರ್ಥಬುದ್ಧಿ ಎಂಬುದು ನಮ್ಮ ಸಮಾಜಕ್ಕಿನ್ನೂ ಅರ್ಥವಾಗದಿರುವುದು ದುರಂತ.
ಈ ಕಾಲದಲ್ಲಿ ಒಂದೊಳ್ಳೆಯ ಜೀವನ ಕಟ್ಟಿಕೊಳ್ಳಬೇಕೆಂದರೆ ಹಣಕಾಸಿನ ಸ್ಥಿತಿಗತಿ ಚೆನ್ನಾಗಿರಬೇಕೆಂಬುದು ನಿಜ. ಆದರೆ ಅದು ಎಷ್ಟು ಬೇಕು, ಹೇಗೆ ಬೇಕು ಎಂಬ ಬಗ್ಗೆ ಪ್ರಾಮಾಣಿಕವಾಗಿ ಯಾರೂ ಯೋಚಿಸಿಲ್ಲ. ಸಂಪಾದನೆ ಮಾಡುವುದು ತಪ್ಪಲ್ಲ; ಸಮಾಜದಲ್ಲಿ ನಾಲ್ಕು ಮಂದಿಯ ಗೌರವಕ್ಕೆ ಪಾತ್ರರಾಗಬೇಕು ಎಂಬ ಅಪೇಕ್ಷೆಯಿರುವುದು ತಪ್ಪಲ್ಲ. ಆದರೆ ಅದಕ್ಕೆ ಯಾವುದೋ ಒಂದೆರಡು ದಾರಿಗಳು ಮಾತ್ರ ಇರುವುದು ಎಂಬುದು ಮಾತ್ರ ಶುದ್ಧ ಭ್ರಮೆ. ನೆಮ್ಮದಿಯಿಂದ ಬದುಕುವುದಕ್ಕೆ ಸಾವಿರ ದಾರಿಗಳಿವೆ. ಎಲ್ಲರೂ ಒಂದೇ ರಸ್ತೆಯಲ್ಲಿ ಸಾಗುತ್ತಿದ್ದರೆ ಆಮೇಲೆ ಅವರೆಲ್ಲ ಅದೇ ಟ್ರಾಫಿಕ್ಕಿನಲ್ಲಿ ಬದುಕನ್ನೆಲ್ಲ ಕಳೆಯಬೇಕಾಗುತ್ತದೆ. ವಾಸ್ತವವಾಗಿ ಬೇರೆ ರಸ್ತೆ ಹಿಡಿದವರು ಉಳಿದವರಿಗಿಂತ ಮೊದಲೇ ಗಮ್ಯ ಸೇರಿರುತ್ತಾರೆ.
ಪರ್ಸೆಂಟೇಜಿಗಿಂತ ಬದುಕು ದೊಡ್ಡದು
ರಿಲಯನ್ಸ್ ಎಂಬ ಸಾಮ್ರಾಜ್ಯ ಕಟ್ಟಿದ ಧೀರೂಭಾಯ್ ಅಂಬಾನಿ ಆರಂಭದಲ್ಲಿ ಏನಾಗಿದ್ದರು? ಹ್ಯಾರಿಪಾಟರ್ ಪುಸ್ತಕಗಳಿಂದಲೇ ಲೋಕಪ್ರಸಿದ್ಧಿ ಪಡೆದ ಜೆ.ಕೆ. ರೌಲಿಂಗ್ ಏನಾಗಿದ್ದರು? ಜಗತ್ಪಸಿದ್ಧ ಬ್ಯಾಗುಗಳ ಬ್ರಾಂಡ್ ಕಟ್ಟಿ ಬೆಳೆಸಿದ ಗುಚಿಯೋ ಗುಚಿ ಏನಾಗಿದ್ದರು? ಮಸ್ಯಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಪಡೆದ ಮೊದಲ ಅಂತಾರಾಷ್ಟ್ರೀಯ ಅಂಧವ್ಯಕ್ತಿ ಶ್ರೀಕಾಂತ್ ಬೊಲ್ಲ ಅಲ್ಲಿಯವರೆಗೆ ಎದುರಿಸಿದ ನೋವು-ಅವಮಾನಗಳೇನು? ನಾವು ನಮ್ಮ ಸುತ್ತಲಿನ ಸಮಾಜವನ್ನು ಕಣ್ಣುತೆರೆದು ನೋಡುವುದೇ ಇಲ್ಲ. ಯಾರೋ ಬೆಳೆಸಿದ ಭ್ರಮೆಯಲ್ಲಿ, ನಾವೇ ಹಾಕಿಕೊಂಡ ಕನ್ನಡಕದಲ್ಲಿ ಬಂಧಿಯಾಗಿರುತ್ತೇವೆ.
ಪರ್ಸೆಂಟೇಜಿಗಿಂತ ಬದುಕು ತುಂಬ ದೊಡ್ಡದು. ಬದುಕಿನ ತೃಪ್ತಿಯನ್ನು ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿಯ ಪರ್ಸೆಂಟೇಜಿನಿಂದ ಅಳೆಯಲು ಬರುವುದಿಲ್ಲ. ಮೂಲತಃ ಪರ್ಸೆಂಟೇಜು ಒಬ್ಬ ವ್ಯಕ್ತಿಯ ಒಟ್ಟಾರೆ ವ್ಯಕ್ತಿತ್ವವನ್ನು, ಪ್ರತಿಭೆಯನ್ನು ಅಳೆಯುವ ಮಾನದಂಡವೇ ಅಲ್ಲ. ಅದು ಮಗುವಿನೊಳಗೆ ಸುಪ್ತವಾಗಿಯೇ ಇರುತ್ತದೆ. ಅದನ್ನು ಸಶಕ್ತವಾಗಿ ಹೊರಗೆ ತರುವುದಕ್ಕೆ ಹತ್ತಾರು ಮಾರ್ಗಗಳಿವೆ. ಅದು ಕೋಚಿಂಗ್ ಸೆಂಟರುಗಳಲ್ಲಿ ವಿಕಾಸವಾಗುವುದಿಲ್ಲ. ಹಾರ್ವರ್ಡ್‌ನ ಮನಃಶಾಸ್ತಜ್ಞ ಹೊವಾರ್ಡ್ ಗಾರ್ಡನರ್ ಪ್ರತಿಪಾದಿಸಿರುವ “ಬಹುಬುದ್ಧಿವಂತಿಕೆಯ ಸಿದ್ಧಾಂತ’ವೂ (ಮಲ್ಟಿಪಲ್ ಇಂಟೆಲಿಜೆನ್ಸಸ್ ಥಿಯರಿ) ಇದನ್ನೇ ಪ್ರತಿಪಾದಿಸುತ್ತದೆ. ಬುದ್ಧಿವಂತಿಕೆಗೆ ಏಳೆಂಟು ಆಯಾಮಗಳಿವೆ. ಅವುಗಳಲ್ಲಿ ಯಾವುದಾದರೂ ಒಂದೋ ಎರಡೋ ಮೂರೋ ಮಗುವಿನಲ್ಲಿ ಪ್ರಬಲವಾಗಿರಬಹುದು. ಅವುಗಳನ್ನು ಆರಂಭದಿಂದಲೇ ಗಮನಿಸಿ ಬೆಳೆಸಿದರೆ ಆ ಮಗು ಮುಂದೆ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಅಸಾಧಾರಣವಾದುದನ್ನು ಸಾಧಿಸಬಹುದು ಎಂದಿದ್ದಾರೆ ಗಾರ್ಡನರ್.
ಮಕ್ಕಳ ಮಾತು ಆಲಿಸಿ…
ಕೆಲವರಲ್ಲಿ ದೃಶ್ಶಿಕ (ವಿಶುವಲ್) ಶಕ್ತಿ ಪ್ರಬಲವಾಗಿರುತ್ತದೆ – ಆ ಶಕ್ತಿಯನ್ನು ಬೆಳೆಸಿದರೆ ಮುಂದೆ ಅವರು ಉತ್ತಮ ವಿನ್ಯಾಸಕಾರರಾಗಿ ಬೆಳೆಯಬಹುದು. ಕೆಲವರಲ್ಲಿ ಶಾಬ್ದಿಕ (ವರ್ಬಲ…) ಪ್ರತಿಭೆ ದಟ್ಟವಾಗಿರುತ್ತದೆ- ಮುಂದೆ ಅವರು ಉತ್ತಮ ಬರೆಹಗಾರರಾಗಿ, ಮಾತುಗಾರರಾಗಿ ಬೆಳೆಯಬಹುದು. ಇನ್ನು ಕೆಲವರಲ್ಲಿ ಸಂಗೀತದ (ಮ್ಯೂಸಿಕಲ್) ಕೌಶಲ ಬೇರೂರಿರುತ್ತದೆ- ಅವರು ಮುಂದೆ ಜಗತ್ತು ಮೆಚ್ಚುವ ಸಂಗೀತಗಾರರಾಗಿ ಬೆಳೆಯಬಹುದು. ಮತ್ತೆ ಕೆಲವರಲ್ಲಿ ತಾರ್ಕಿಕ (ಲಾಜಿಕಲ್) ಶಕ್ತಿ ಪ್ರಬಲವಾಗಿರುತ್ತದೆ- ಅವರು ಮುಂದೆ ವಿಜ್ಞಾನಿಯಾಗಿಯೋ, ಇಂಜಿನಿಯರಾಗಿಯೋ ಹೆಸರು ಮಾಡಬಹುದು. ಹಲವರಲ್ಲಿ ದೈಹಿಕ ಕೌಶಲಗಳು ಅಪೂರ್ವವಾಗಿರುತ್ತವೆ- ಅಂಥವರು ಮುಂದೆ ಕ್ರೀಡಾಕ್ಷೇತ್ರದಲ್ಲಿ ಪ್ರಸಿದ್ಧಿಗೇರಬಹುದು. ಹೆತ್ತವರು ಮತ್ತು ಅಧ್ಯಾಪಕರು ಇದನ್ನು ಗುರುತಿಸುವುದನ್ನು ಮರೆತರೆ ತಮ್ಮ ಮಕ್ಕಳಿಗೆ ಬಹುದೊಡ್ಡ ಅನ್ಯಾಯ ಮಾಡಿದಂತೆ. ಇಂಜಿನಿಯರ್ ಆಗಲಾರದ ವ್ಯಕ್ತಿಯೊಬ್ಬ ನಾಳೆ ದೊಡ್ಡ ಹಾಡುಗಾರ ಆಗಬಹುದು, ವೈದ್ಯಕೀಯ ವಿಜ್ಞಾನ ಓದಲಾಗದವನೊಬ್ಬ ನಾಳೆ ಕ್ರೀಡಾಪಟುವಾಗಿ ಹೊರಹೊಮ್ಮಬಹುದು, ಚಿತ್ರಕಾರನೋ, ಸಾಹಿತಿಯೋ, ವಕೀಲನೋ, ಪತ್ರಕರ್ತನೋ, ಸಂಶೋಧಕನೋ, ಲೆಕ್ಕಪರಿಶೋಧಕನೋ, ಅಧಿಕಾರಿಯೋ, ಉದ್ಯಮಿಯೋ ಆಗಬಹುದು. ಈ ಸ್ಥಾನಗಳಲ್ಲಿರುವುದು ಅವಮಾನವೇ? ಇವುಗಳಿಂದ ವ್ಯಕ್ತಿಯೊಬ್ಬ ತನ್ನ ಬದುಕಿನ ತೃಪ್ತಿ ಕಂಡುಕೊಳ್ಳಲು ಸಾಧ್ಯವಿಲ್ಲವೇ?
ಎಲ್ಲರಿಗಿಂತ ಮೊದಲು ಅಪ್ಪ-ಅಮ್ಮಂದಿರು ತಮ್ಮ ಭ್ರಮೆಗಳಿಂದ ಹೊರಬರಬೇಕು. ಮಕ್ಕಳು ನಮ್ಮ ಭ್ರಮೆಗಳನ್ನೆಲ್ಲ ಹೊತ್ತುಕೊಂಡು ಓಡಬೇಕಾದ ಕತ್ತೆಗಳಲ್ಲ. ಅವರಿಗೂ ಅವರದ್ದೇ ಆದ ಮನಸ್ಸು, ಕೌಶಲ, ಪ್ರತಿಭೆ, ಕನಸುಗಳು ಇರುತ್ತವೆ. ಅವು ಹೂವಿನಂತೆ ಸ್ವಾಭಾವಿಕವಾಗಿ ವಿಕಾಸವಾಗಿ, ಹೀಚಾಗಿ, ಕಾಯಿಯಾಗಿ, ಹಣ್ಣಾಗಿ ಸುತ್ತಲಿನ ಸಮಾಜಕ್ಕೆ ಹಿತವಾಗಿ, ಉಪಯುಕ್ತವಾಗಿ ಪರಿಣಮಿಸಲು ಅವಕಾಶ ಮಾಡಿಕೊಡೋಣ. ಇಲ್ಲವಾದರೆ ಭವಿಷ್ಯ ನಮ್ಮನ್ನು ಕ್ಷಮಿಸಲಾರದು.
ಮೊನ್ನೆಯಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವೂ ಬರುತ್ತದೆ. ಹೆಚ್ಚಿನ ಜನರಿಗೆ ತಮ್ಮ ಮಕ್ಕಳ ಪರ್ಸೆಂಟೇಜ್ ಎಷ್ಟಿದೆ/ ಎಷ್ಟು ಬರುತ್ತದೆ ಎಂಬುದರ ಕುರಿತೇ ಯೋಚನೆ. ಮಕ್ಕಳು ಮೆಡಿಕಲ್-ಎಂಜಿನಿಯರಿಂಗ್ ಸೇರಿದರೆ ಮಾತ್ರ ಉದ್ಧಾರವಾಗುತ್ತಾರೆ ಎಂಬ ಭ್ರಮೆ! ಸತ್ಯ ಏನೆಂದರೆ- ಸಂಭ್ರಮದ ಬದುಕಿಗೆ ಸಾವಿರ ದಾರಿಗಳಿವೆ. ಮೆಡಿಕಲ್- ಇಂಜಿನಿಯರಿಂಗ್ ಬಿಟ್ಟು ಬೇರೆ ವಿಷಯ ಓದಿಯೂ ಸಾಧಕರಾಗಲು ಸಾಧ್ಯವಿದೆ. ಈ ಸರಳ ಸಂಗತಿ ಎಲ್ಲರಿಗೂ ಅರ್ಥವಾಗಬೇಕು…
-ಸಿಬಂತಿ ಪದ್ಮನಾಭ ಕೆ. ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.