Lok Sabha ಚುನಾವಣೆ ಗೌಜಿ ಗದ್ದಲವಿಲ್ಲದೆ ಸಾಗುತ್ತಿದೆ ಜನ ಜೀವನ!
Team Udayavani, Apr 15, 2024, 8:00 AM IST
ಮಂಗಳೂರು: ಜನ ಏನಂತಾರೆ?ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಕ್ಷೇತ್ರಕ್ಕೆ ಹೋಗಿ ಜನರೆದುರು ನಿಂತು “ಏನ್ಸಾರ್, ಹೇಗಿದೆ ಟ್ರೆಂಡ್?’ ಎಂದು ಪ್ರಶ್ನೆ ಕೇಳಿದರೆ ಅವರಿಂದ ಎದುರಾಗುವುದು ಉತ್ತರವಲ್ಲ; ಬದಲಿಗೆ ಮತ್ತೂಂದು ಪ್ರಶ್ನೆ. ಅದು ಯಾವುದು ಗೊತ್ತೇ? ಜನ ಏನಂತಾರೆ?ಅದರರ್ಥ ಉಳಿದವರು ಏನು ಹೇಳುತ್ತಾರೆ ಎಂಬ ಕುತೂಹಲ ಮಿಕ್ಕುಳಿದವರಿಗೆ !
ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇವೆ. ಇನ್ನೆರಡು ವಾರಗಳು ಕಳೆದರೆ ಮತದಾನದ ಹೊಸ್ತಿಲಲ್ಲಿ ಬಂದು ನಿಂತಿರುತ್ತೇವೆ. ಎರಡೂ ಪ್ರಮುಖ ಪಕ್ಷಗಳು ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿವೆ. ಅಭ್ಯರ್ಥಿಗಳೂ ತಮ್ಮದೇ ಆದ ಕಾರ್ಯ ತಂತ್ರದಲ್ಲಿ ತೊಡಗಿದ್ದಾರೆ.ಹೀಗಿರುವಾಗ ಜನ ಏನಂತಾರೆ, ಮತದಾರರ ಮನ ದೊಳಗೆ ಏನಿದೆ ಎಂದು ಉದಯವಾಣಿ ತಂಡ ಮೂಡಬಿದಿರೆ ವಿಧಾನಸಭಾ ಕ್ಷೇತ್ರದತ್ತ ಕಣ್ಣು ಹೊರಳಿಸಿತು.
ಮೂಲ್ಕಿ ಮತ್ತು ಮೂಡುಬಿದಿರೆಗಳನ್ನು ಕೇಂದ್ರವಾಗಿ ಹೊಂದಿರುವ ಇದು, ಪಟ್ಟಣ ಮತ್ತು ಗ್ರಾಮೀಣ ಸೊಗಡನ್ನು ಒಳಗೊಂಡಿರುವ ಕ್ಷೇತ್ರ. ಈ ಕ್ಷೇತ್ರದೊಳಗಿನ ಮೂಡುಶೆಡ್ಡೆ, ಪಡುಶೆಡ್ಡೆ, ಕರಂಬಾರು, ಬಜಪೆ, ಕಟೀಲು, ಕಿನ್ನಿಗೋಳಿ ಮೊದಲಾದ ಸ್ಥಳಗಳಿಗೆ ತಂಡ ಭೇಟಿ ನೀಡಿದಾಗ ಮತದಾರರೂ ಕೇಳಿದ್ದು “ನಿಮಗೆ ಏನನ್ನಿಸುತ್ತದೆ?’ ಎಂದೇ.
ಜನರು ಹೀಗಂದರು…
ಪಡುಶೆಡ್ಡೆ ಕುದ್ರುವಿನಲ್ಲಿ ಸಾಗುತ್ತಿದ್ದಾಗ ರಸ್ತೆಯಲ್ಲಿ ದನ ಮೇಯಿಸಿಕೊಂಡು ಹೋಗುತ್ತಿದ್ದ ಜಯಣ್ಣ ಮಾತಿಗೆ ಸಿಕ್ಕರು. ಮೊದಲಿಗೆ ಚುನಾವಣೆ ಕುರಿತು ಮಾತನಾಡಲು ಹಿಂದೇಟು ಹಾಕಿದರೆನ್ನಿ. ತಂಡ ಬಿಡಲಿಲ್ಲ. ಮತ್ತೆ ಮಾತು ಆರಂಭಿ ಸಿದಾಗ, ನನಗೆ 60 ವರ್ಷ. ಒಂದು ಬಾರಿಯೂ ಮತದಾನ ಮಾಡುವುದರಿಂದ ತಪ್ಪಿಸಿ ಕೊಂಡಿಲ್ಲ. ಈ ಬಾರಿಯೂ ಮತದಾನ ಮಾಡುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಇದೆ ಎನ್ನುವುದೇ ಗೊತ್ತಾಗುತ್ತಿಲ್ಲ. ವೋಟು ಯಾರಿಗೆ ಎಂದು ಮಾತ್ರ ಕೇಳಬಾರದು ಎಂದರು.
ಮರವೂರು ದಾಟಿ ಕರಂಬಾರಿನಲ್ಲಿ ರಾಕೇಶ್ ಅವರನ್ನು ಮಾತನಾಡಿಸಿದಾಗ, ಈ ಬಾರಿ ಎರಡು ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ನಡೆಯುತ್ತಿರುವುದೇ ವಿಶೇಷ. ಯಾರಿಗೆ ಹೆಚ್ಚು ಸೀಟು ಸಿಗುತ್ತೆ ಎನ್ನುವುದು ಕುತೂಹಲದ ಸಂಗತಿ. ಈಗಲೇ ಎಲ್ಲವನ್ನೂ ಹೇಳಲಾಗದು, ನಮ್ಮ ವೋಟು ಬಿಡಿ ಹಾಕೋರಿಗೆ ಹಾಕ್ತೇವೆ ಎಂದರು.
ಬಜಪೆಯಲ್ಲಿ ಸುಲೈಮಾನ್ ಅವರ ಮಾತಿನ ಧಾಟಿಯಲ್ಲಿ ಬೇಸರವಿತ್ತು. ಕೆಲವು ವರ್ಷಗಳಿಂದ ಪ್ರತಿ ವರ್ಷ ಒಂದಲ್ಲ ಒಂದು ಚುನಾವಣೆ ಬರ್ತಾನೇ ಇದೆ. ಪಕ್ಷಗಳಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ನೆನಪಾಗೋದು. ಅದೆಲ್ಲ ಮುಗಿದ ಮೇಲೆ ನಾವ್ಯಾರೋ ಅವರ್ಯಾರೋ ಎಂದರು.
ಬಜಪೆಗೆ “ವಾರದ ಸಂತೆ’ಗೆ ಬಂದಿದ್ದ ಪೆರ್ಮುದೆಯ ಸೆಲ್ವಿಯಾ ಅವರ ಪ್ರಕಾರ, ಯಾರಿಗೆ ಮತ ಹಾಕಬೇಕು ಎಂಬುದು ಇನ್ನೂ ಮನಸ್ಸಿನಲ್ಲಿ ನಿಗದಿಯಾಗಿಲ್ಲ. ಮತದಾನ ಮಾಡುವುದು ನಮ್ಮ ಹಕ್ಕು. ಅದನ್ನು ಪ್ರತಿ ಬಾರಿ ಚಲಾಯಿಸುತ್ತಿದ್ದೇನೆ. ನಮ್ಮ ಕಷ್ಟಗಳಿಗೆ ಯಾರು ಸ್ಪಂದಿಸುವ ಭರವಸೆ ನೀಡುತ್ತಾರೋ ಅವರಿಗೆ ಮತ ನೀಡುತ್ತೇವೆ. ಬರಲಿ, ಅವರು ಭರವಸೆ ಕೊಡಲಿ ಎಂದರು.
ಕಟೀಲು ಕಡೆಗೆ ಹೋದಾಗ, ಮಕ್ಕಳಿಗೆ ರಜೆ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಿತ್ತು. ಬಹುತೇಕ ಹೊರ ಜಿಲ್ಲೆಗಳ ಭಕ್ತರು ಕ್ಷೇತ್ರಕ್ಕೆ ಬಂದಿದ್ದರು. ಶಾಲಾ ಕಾಲೇಜು ದಾಖಲಾತಿ ವಿಚಾರವಾಗಿ ಜಿಲ್ಲೆಗೆ ಬಂದಿದ್ದವರೂ, ಕ್ಷೇತ್ರಕ್ಕೂ ಭೇಟಿ ನೀಡಿದ್ದರು. ಆದರೆ ಇವರ್ಯಾರೂ ಚುನಾವಣೆ, ಪಕ್ಷ, ಮತದಾನ ಯಾವುದರ ಗೋಜಿನಲ್ಲೂ ಇರಲಿಲ್ಲ.
ಮಾತೆಲ್ಲ ಬಿಸಿಲು – ಸೆಕೆಯ ಬಗ್ಗೆ
ಜನರ ಬಾಯಲ್ಲಿ ಚುನಾವಣೆ ವಿಷಯ ಕ್ಕಿಂತ ಹೆಚ್ಚು ಕೇಳಿ ಬರುತ್ತಿರುವ ಮಾತು “ಬಿಸಿಲು-ಸೆಕೆ’. ತಾಪಮಾನ ಅಷ್ಟು ಹೆಚ್ಚಾಗಿದೆ. ಮಳೆ ಬರುತ್ತಿಲ್ಲ. ಸೆಕೆಗೆ ರಾತ್ರಿ ನಿದ್ದೆ ಬರುತ್ತಿಲ್ಲ. ನೀರು ಎಷ್ಟು ಕುಡಿದರೂ ಸಾಕಾಗುತ್ತಿಲ್ಲ, ಮಳೆಗಾಲಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದ್ದು, ಅಲ್ಲಿಯ ವರೆಗೆ ಬಿಸಿಲನ್ನು ಸಹಿಸಿಕೊಳ್ಳುವುದು ಹೇಗೆ ಎನ್ನುವ ಮಾತುಗಳಿಗೇ ಮಹತ್ವ ಸಿಕ್ಕಿದೆ.
ಚುನಾವಣೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಪ್ರಚಾರದ ಭರಾಟೆ ನಿಧಾನವಾಗಿ ಚುರುಕು ಪಡೆಯುತ್ತಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದ ಈ ಕ್ಷೇತ್ರದಲ್ಲಿ ಸದ್ಯ ಯಾವುದೇ ಗೌಜಿ ಗದ್ದಲ ಕಾಣಿಸುತ್ತಿಲ್ಲ. ಬಹಿರಂಗವಾಗಿ ಚುನಾವಣೆ ಎನ್ನುವುದೇ ಗೊತ್ತಾಗುವುದಿಲ್ಲ. ಇದರ ಪರಿಣಾಮ ಜನರ ಮೇಲೂ ಬೀರಿದ್ದು, ಜನರೂ ಸದ್ಯದ ಮಟ್ಟಿಗೆ ಚುನಾವಣೆ ಕುರಿತು ಚಿಂತಿಸದ ರೀತಿ ಇದ್ದಾರೆ. “ಮತದಾನ ಅಲ್ವ .. ಮಾಡಿದರಾಯಿತು ಬಿಡಿ’ ಎನ್ನುವ ಭಾವನೆಯಲ್ಲೇ ಇದ್ದಾರೆ.ಮದುವೆ, ಹಬ್ಬ, ಜಾತ್ರೆ, ನೇಮ ಇತ್ಯಾದಿಗಳಲ್ಲಿ ತಲ್ಲೀನರಾಗಿದ್ದಾರೆ. ಬಸ್ಸು ನಿಲ್ದಾಣ, ಮಾರುಕಟ್ಟೆಗಳು ಜನ ಜಂಗುಳಿ ಯಿಂದ ಕೂಡಿದೆ. ಸದ್ಯದಲ್ಲೇ ಚುನಾವಣೆ ಇದೆ, ಮತ ಚಲಾಯಿಸಬೇಕು ಎನ್ನುವ ಮಾತುಗಳು ಇಲ್ಲಿಯೂ ತುಂಬಿ ಬರುತ್ತಿಲ್ಲ.
- ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.