Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
ಸಾರಿಗೆ ಇಲಾಖೆಗೆ ಪತ್ರ ಬರೆದ ಚುನಾವಣ ಆಯೋಗ
Team Udayavani, Apr 23, 2024, 7:25 AM IST
ಮಂಗಳೂರು/ಕುಂದಾಪುರ: ಲೋಕಸಭಾ ಚುನಾವಣೆಗೆ ಮುನ್ನಾದಿನ ಮತ್ತು ಚುನಾವಣೆಯ ಬಳಿಕ ಮೂರ್‍ನಾಲ್ಕು ದಿನಗಳ ಕಾಲ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ವಿಪರೀತ ಏರಿಕೆ ಮಾಡಿದ್ದು, ಸಾಮಾನ್ಯ ಪ್ರಯಾಣಿಕರು ಮತ ಚಲಾಯಿಸಲು ಅಧಿಕ ದರ ಪಾವತಿಸಿ ಊರಿಗೆ ಬರುವ ಅನಿವಾರ್ಯ ಎದುರಾಗಿದೆ.
ದೂರದ ಬೆಂಗಳೂರು, ಮೈಸೂರು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ನೆಲೆಸಿರುವ ಮಂದಿ ಚುನಾವಣೆಗೆ ತಮ್ಮ ಊರಿಗೆ ಬರುತ್ತಾರೆ. ಅದರಲ್ಲಿಯೂ ಈ ಬಾರಿ ಚುನಾವಣೆ ಸಮಯದಲ್ಲಿ ಸಾಲು ಸಾಲು ರಜೆ ಇದೆ. ಶುಕ್ರವಾರ ಚುನಾವಣೆಯಾದರೆ, ನಾಲ್ಕನೇ ಶನಿವಾರ, ರವಿವಾರದ ರಜೆ ಇದೆ. ಕೆಲವರು ಮತ್ತೆರಡು ದಿನ ರಜಾ ಹಾಕಿ ಮೇ 1 ಕಾರ್ಮಿಕ ದಿನಾಚರಣೆಯ ರಜೆ ಕಳೆದು ಕಾರ್ಯಕ್ಷೇತ್ರಕ್ಕೆ ಮರಳಲು ಯೋಜನೆ ರೂಪಿಸಿದ್ದಾರೆ. ಇದನ್ನೇ ಬಂಡವಾಳವಾಗಿರಿಸಿಕೊಂಡ ಕೆಲವು ಖಾಸಗಿ ಬಸ್ ಮಾಲಕರು ಬಸ್ ಟಿಕೆಟ್ ದರವನ್ನು ಏಕಾಏಕಿ ಏರಿಸಿದ್ದಾರೆ.
ನಾಲ್ಕು ಪಟ್ಟು ಹೆಚ್ಚು
ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿನಿಂದ ಮಂಗಳೂರು, ಉಡುಪಿ, ಕುಂದಾಪುರ ಕಡೆಗೆ ಬರುವವರಿಗೆ ಚುನಾವಣೆ ಮುಗಿಸಿ ಹೋಗುವಾಗ ಟಿಕೆಟ್ ದರ 4 ಪಟ್ಟು ಏರಿದೆ. ಸಾಮಾನ್ಯ ದಿನಗಳಲ್ಲಿ 800 ರೂ. ಇರುವ ದರ ಎ. 28ರ ರವಿವಾರ 2,600 ರೂ. ವರೆಗೆ ಏರಿದೆ. ಚುನಾವಣೆಗೆ ಬರುವ ಎ. 25ರ ಟಿಕೆಟ್‌ನಲ್ಲೂ ಇದೇ ಮಾದರಿಯಲ್ಲಿ ಮೂರರಿಂದ ನಾಲ್ಕು ಪಟ್ಟು ದರ ಏರಿದೆ. ಅಷ್ಟಾಗಿಯೂ ಬಸ್‌ಗಳಿಲ್ಲ. ಬಹುತೇಕ ಬಸ್‌ಗಳ ಟಿಕೆಟ್ ಮುಂಗಡ ಬುಕಿಂಗ್ ಆಗಿ ಭರ್ತಿಯಾಗಿವೆ.
ಸಾಮಾನ್ಯ ದಿನಗಳಲ್ಲಿ ಕುಂದಾಪುರ-ಬೆಂಗಳೂರು ದರ 800 ರೂ. ಇದ್ದರೆ ಎ. 25ರಂದು ಬೆಂಗಳೂರಿನಿಂದ ಕುಂದಾಪುರಕ್ಕೆ ಎಸಿ ಸ್ಲಿàಪರ್‌ನಲ್ಲಿ 2,600 ರೂ., ನಾನ್ ಎಸಿ ಸ್ಲಿàಪರ್‌ನಲ್ಲಿ 2,000 ರೂ., 1,900 ರೂ. (ಕನಿಷ್ಠ ಎಂದರೂ 1,500 ರೂ.) ಇದೆ. ಮರಳಿ ಹೋಗಲು ಎ. 28ರಂದು ಎಸಿ ಸ್ಲಿàಪರ್‌ಗೆ 2,450 ರೂ., ನಾನ್ ಎಸಿ ಸ್ಲಿàಪರ್‌ಗೆ 2,299 ರೂ. (ಕನಿಷ್ಠ 1,250 ರೂ.) ನಿಗದಿಯಾಗಿದೆ.
ಕೆಎಸ್ಸಾರ್ಟಿಸಿ ಯಥಾಸ್ಥಿತಿ
ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುವ ಪ್ರಕಾರ “ಕೆಎಸ್ಸಾರ್ಟಿಸಿ ಬಸ್‌ಗಳ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ. ವಾರಾಂತ್ಯದಲ್ಲಿ ಮತ್ತು ಹೆಚ್ಚುವರಿ ಬಸ್ ಇದ್ದರೆ ಆಗ ಬಸ್‌ಗಳಿಗೆ ಮಾತ್ರ ಶೇ. 20ರಷ್ಟು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ. ವಾರದ ಇತರ ದಿನಗಳಲ್ಲಿ ಸಾಮಾನ್ಯ ದರವೇ ಜಾರಿಯಲ್ಲಿರುತ್ತದೆ’ ಎನ್ನುತ್ತಾರೆ.
ಕೆಎಸ್ಸಾರ್ಟಿಸಿ ಹೆಚ್ಚುವರಿ ಬಸ್
ಕರ್ನಾಟಕ ಸರಕಾರಿ ಸಾರಿಗೆ ನಿಗಮದ ಬಸ್‌ಗಳಲ್ಲೂ ಟಿಕೆಟ್ ಭರ್ತಿಯಾಗಿವೆ. ಕೆಎಸ್ಸಾರ್ಟಿಸಿಯಿಂದ ಚುನಾವಣೆ ಪ್ರಯುಕ್ತ ಹೆಚ್ಚುವರಿ ಓಡಾಟ ಇರುವುದರಿಂದ ಬೆಂಗಳೂರಿನಿಂದ ಕುಂದಾಪುರ, ಉಡುಪಿ, ಮಂಗಳೂರು, ಧರ್ಮಸ್ಥಳಕ್ಕೆ ಹೆಚ್ಚವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಕುಂದಾಪುರದಿಂದ 7 ಬಸ್ ಮುಂಗಡ ಬುಕಿಂಗ್‌ಗೆ ಇಡಲಾಗಿದ್ದು, ಆ ದಿನ ಹಗಲು ಹೋಗುವ ಬಸ್‌ಗಳನ್ನು ರಾತ್ರಿ ಮರಳಿ ಕರೆಸುವುದು ಸೇರಿದಂತೆ 15 ಬಸ್ ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ಉಡುಪಿ, ಮಂಗಳೂರು ಸೇರಿ ಸುಮಾರು 50 ಬಸ್‌ಗಳು ಹೆಚ್ಚುವರಿಯಾಗಿ ದೊರೆಯಲಿವೆ.
ಪಕ್ಷಗಳಿಂದಲೂ ಬಸ್
ಎರಡು ಪ್ರಮುಖ ರಾಜಕೀಯ ಪಕ್ಷಗಳು ಬೆಂಗಳೂರಿನಿಂದ ಕರಾವಳಿಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಬರುವ ಮತದಾರರಿಗೆ ಬಸ್‌ಗಳ ವ್ಯವಸ್ಥೆ ಮಾಡಿವೆ.
ಆಯೋಗದಿಂದ ಪತ್ರ
ಚುನಾವಣ ಆಯೋಗಕ್ಕೆ ಖಾಸಗಿ ಬಸ್‌ಗಳ ದರ ಏರಿಕೆ ಕುರಿತು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಮಾಹಿತಿ ನೀಡಿದ್ದು, ಆಯೋಗದಿಂದ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ ಸಾರಿಗೆ ಇಲಾಖೆ ಈ ನಿಟ್ಟಿನಲ್ಲಿ ಯಾವುದೇ ಕಠಿನ ಕ್ರಮ ಕೈಗೊಂಡದ್ದು ಗೊತ್ತಾಗಿಲ್ಲ. ಕೆಎಸ್ಸಾರ್ಟಿಸಿ ಮೂಲಕ ಹೆಚ್ಚುವರಿ ಬಸ್‌ಗೆ ಪ್ರಯತ್ನಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದ್ದಾರೆ.
ಚುನಾವಣೆ ಸಮಯ ದಲ್ಲಿ ಬಸ್ ಟಿಕೆಟ್ ದರ ವಿಪರೀತ ಏರಿಕೆ ಬಗ್ಗೆ ಸಾರಿಗೆ ಇಲಾಖೆ ಗಮನಿಸಿದೆ. ಈ ಕುರಿತು ಸದ್ಯದಲ್ಲೇ ಇಲಾಖಾ ಮಟ್ಟದಲ್ಲಿ ವಿಶೇಷ ಸಭೆ ಕರೆದು, ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬ ಚರ್ಚೆ ಮಾಡಿ ಅನುಷ್ಠಾನಕ್ಕೆ ತರುತ್ತೇವೆ.
– ಯೋಗೀಶ್ ಎ.ಎಂ., ಸಾರಿಗೆ ಇಲಾಖೆ ಆಯುಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.