Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Team Udayavani, Apr 25, 2024, 6:26 PM IST
ಗದಗ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಕನಿಷ್ಠ 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು. ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಮನವಿ ಮಾಡಿದರು.
ಗಜೇಂದ್ರಗಡ ಪಟ್ಟಣದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಮೇ 7ರಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣಾ ನಡೆಯುತ್ತಿದ್ದು ಆ ಚುನಾವಣೆಯಲ್ಲಿ ಆನಂದಸ್ವಾಮಿ ಗಡ್ಡದೇವರಮಠ ಅವರು ನಮ್ಮ ಅಭ್ಯರ್ಥಿಯಾಗಿದ್ದು, ಬಿಜೆಪಿ ಜೆಡಿಎಸ್ ಹೊಂದಾಣಿಕೆ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಇದನ್ನು ಪ್ರತಿಷ್ಠೆ ಕಣವಾಗಿ ತೆಗೆದುಕೊಂಡಿದ್ದಾರೆ. ಅವರನ್ನು ಸೋಲಿಸುವ ಕೆಲಸ ನಿಮ್ಮಿಂದಾಗಬೇಕು ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಲಿಲ್ಲ. ಏನು ಕೆಲಸ ಮಾಡದ ಸಿಎಂ ಅಭ್ಯರ್ಥಿಯಾಗಿದ್ದು, ಅವರನ್ನು ಸೊಲೀಸಬೇಕಿದೆ. ರೋಣ ವಿಧಾಸಭಾ ಕ್ಷೇತ್ರದಿಂದ ಕನಿಷ್ಠ 25 ಸಾವಿರ ಮತಗಳ ಅಂತರ ನೀಡುವುದಾಗಿ ಶಾಸಕ ಜಿ. ಎಸ್. ಪಾಟೀಲ ಅವರು ಹೇಳಿದ್ದಾರೆ. ಅವರ ಮಾತನ್ನು ನೀವೆಲ್ಲರೂ ಉಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ. ಅವರಿಗೆ ಮತ ಕೇಳುವ ಹಕ್ಕಿಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತಂದು ಪ್ರತಿಯೊಬ್ಬರಿಗೂ ತಲಾ 15 ಲಕ್ಷ ನೀಡುವುದಾಗಿ ತಿಳಿಸಿದ್ದರು. ನಿರುದ್ಯೋಗ ಯುವಕ-ಯುವತಿಯರಿಗೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ತಿಳಿಸಿದ್ದರು. ಆದರೆ, 20 ಲಕ್ಷ ಉದ್ಯೋಗ ಸೃಷ್ಟಿಸಲಿಲ್ಲ. ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ತಿಳಿಸಿದ್ದರು. ಅದನ್ನು ಮಾಡಲಿಲ್ಲ. ರೈತರಿಗೆ ಖರ್ಚು ದ್ವಿಗುಣ ಆಯಿತು ಹೊರತು ಆದಾಯ ಬರಲಿಲ್ಲ. ಬೆಲೆ ಏರಿಕೆ ಪೆಟ್ರೋಲಿಯಂ ಉತ್ಪನ್ನಗಳು ಎರಿಕೆ, ದವಸ ಧಾನ್ಯಗಳ ಬೆಲೆ ಏರಿಕೆ, ಗ್ಯಾಸ ಏರಿಕೆ ಅಚ್ಚೇ ದಿನದ ಬದಲಾಗಿ ಸಂಕಷ್ಟಕ್ಕೆ ತಳ್ಳಿದರು. ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣರಾದರು. ನರೇಂದ್ರ ಮೋದಿ ಅವರಿಗೆ ಮತ ನೀಡಬಾರದು ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರು. ಪಾರ್ಲಿಮೆಂಟ್ ನಲ್ಲಿ ರಾಜ್ಯಕ್ಕಾದ ಅನ್ಯಾಯವನ್ನು ಯಾರೊಬ್ಬರೂ ಕೇಳಲಿಲ್ಲ. ಹೇಳಿದಂತೆ ನಡೆದುಕೊಳ್ಳಲಿಲ್ಲ. ತೆರಿಗೆ ಹಂಚಿಕೆ ತಾರತಮ್ಯ, ಬರಗಾಲದ ಪರಿಹಾರ ನೀಡಲಿಲ್ಲ. ಪಾರ್ಲಿಮೆಂಟ್ ಚುನಾವಣೆ ಬಂದಾಗ ಮಾತ್ರ ಕರ್ನಾಟಕ ನೆನಪಾಗುತ್ತದೆ. ಪ್ರವಾಹ ಬಂದಂತಹ ಸಂದರ್ಭದಲ್ಲಿ ಸಂತ್ರಸ್ತರ ಕಷ್ಟ ಸುಖ ಕೇಳಲು ಆಗಮಿಸಲಿಲ್ಲ. ಬರಗಾಲದ ದಿನಗಳಲ್ಲಿ ರಾಜ್ಯಕ್ಕೆ ಬರಲಿಲ್ಲ ಎಂದು ಪ್ರಧಾನಿ ವಿರುದ್ಧ ಆರೋಪಗಳ ಸುರಿಮಳೆಗೈದರು.
ಬರಗಾಲ ಒರಿಹಾರ ನೀಡದ ಕಾರಣ ಸುಪ್ರೀಂ ಕೋರ್ಟ್ ಕದ ತಟ್ಟಬೇಕಾಯಿತು. ರಾಜ್ಯ ಸರಕಾರ ಕುಡಿಯುವ ನೀರು, ಮೇವು, ಉದ್ಯೋಗ ನೀಡುವ ಕೆಲಸ ಮಾಡಿದ್ದೇವೆ. 24 ಲಕ್ಷ ರೈತರಿಗೆ 650 ಕೋಟಿ ರೂ. ಕೊಟ್ಟಿದ್ದೇವೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ತೋರಿಸಿದೆ. ನಮ್ಮ ಸಂಪನ್ಮೂಲದಿಂದ ಮೂಲಸೌಕರ್ಯ ಒದಗಿಸುವ ಕಾರ್ಯ ಮಾಡುತ್ತಿದ್ದೇವೆ. ಆದ್ದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಬಾರದು ಎಂದು ಮನವಿ ಮಾಡಿದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ನರೇಂದ್ರ ಮೋದಿ ಅವರು ನಿಂತಿರುವ ನೆಲ ಅಲಗಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳನ್ನು ಕಾಪಿ ಮಾಡಿಕೊಂಡು ಮೋದಿ ಗ್ಯಾರಂಟಿ ಎಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಗದಗ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿಗಳು ಶೇ. 97ರಷ್ಟು ಫಲಾನುಭವಿಗಳಿಗೆ ತಲುಪಿವೆ. ಕನಿಷ್ಠ 30 ಸಾವಿರ ಅಂತರದ ಮತಗಳನ್ನು ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ನೀಡಬೇಕು. ಮಹಿಳೆಯರ ಜೊತೆಗೆ ಪುರುಷ ಮತದಾರರು ನಮ್ಮ ಅಭ್ಯರ್ಥಿಗೆ ಅಧಿಕ ಮತಗಳನ್ನು ನೀಡಿ ಕಾಂಗ್ರೆಸ್ ಗೆ ಅಧಿಕಾರಕ್ಕೆ ತಂದಿದ್ದೇ ಆದಲ್ಲಿ ರೈತರ ಸಾಲವನ್ನು ಮನ್ನಾ ಮಾಡಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬಲ ತುಂಬಿರಿ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಸ್ವಾಗತಿಸಿ ಮಾತನಾಡಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ಮತಗಳ ಮುಂದಿದ್ದೇವೆ. ಇನ್ನೂ ಅಧಿಕ ಮತಗಳ ಅಂತರದಿಂದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಈಗ ಬಿಜೆಪಿ ಅಭ್ಯರ್ಥಿಯಾದ ನಂತರ ದಮ್ಮು, ತಾಕತ್ತು ಬಗ್ಗೆ ಮಾತನಾಡುತ್ತಿದ್ದಾರೆ. ದಮ್ಮು, ತಾಕತ್ತಿನ ಬಗ್ಗೆ ಪ್ರಶ್ನಿಸಿದವರನ್ನು ಮತದಾರರು ಮನೆಗೆ ಕಳಿಸಲಿದ್ದಾರೆ ಎಂದು ಹೇಳಿದರು.
ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸರಕಾರದ ಮುಖ್ಯಸಚೇತಕರು ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ್ ಮಾನೆ, ಬಸವರಾಜ ಶಿವಣ್ಣನವರ, ಮಾಜಿ ಸಂಸದ ಆರ್.ಎಸ್. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಆರ್. ಶಂಕರ, ಸೇರಿ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.